‘ಕೋರ್ಟಲ್ಲಿ ಸಿ.ಡಿ ಸಾಕ್ಷಿ ಆಗಲ್ಲ ಎಂಬ ಜ್ಞಾನ ಇಲ್ಲ’

By Kannadaprabha NewsFirst Published Nov 5, 2019, 8:15 AM IST
Highlights

ಅನರ್ಹಗೊಂಡಿರುವ ಶಾಸಕರ ಕುರಿತ ಹೇಳಿಕೆಯ ‘ಸಿ.ಡಿ’ ಸುಪ್ರೀಂಕೋರ್ಟ್‌ನಲ್ಲಿ ಸಾಕ್ಷಿಯಾಗಿ ಪರಿಗಣಿಸಲು ಬರುವುದಿಲ್ಲ ಎಂಬ ಸಾಮಾನ್ಯ ಜ್ಞಾನವೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇಲ್ಲವೆಂದು ಬಿಜೆಪಿ ಮುಖಂಡ ಎನ್ ರವಿಕುಮಾರ್ ಹೇಳಿದ್ದಾರೆ. 

ಬೆಂಗಳೂರು [ನ.05]: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅನರ್ಹಗೊಂಡಿರುವ ಶಾಸಕರ ಕುರಿತ ಹೇಳಿಕೆಯ ‘ಸಿ.ಡಿ’ ಸುಪ್ರೀಂಕೋರ್ಟ್‌ನಲ್ಲಿ ಸಾಕ್ಷಿಯಾಗಿ ಪರಿಗಣಿಸಲು ಬರುವುದಿಲ್ಲ ಎಂಬ ಸಾಮಾನ್ಯ ಜ್ಞಾನವೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇಲ್ಲದಿರುವುದು ದುರದೃಷ್ಟಕರ ಸಂಗತಿ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ವಾಗ್ದಾಳಿ ನಡೆಸಿದ್ದಾರೆ.

ಸಿ.ಡಿಯನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರು ನ್ಯಾಯಾಲಯಕ್ಕೆ ಹೋಗಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಯಡಿಯೂರಪ್ಪ ಅವರು ಅನರ್ಹಗೊಂಡಿರುವ ಶಾಸಕರ ಕುರಿತ ಹೇಳಿಕೆಯ ವಿಡಿಯೋವನ್ನು ಸಾಕ್ಷಿಯನ್ನಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಒಬ್ಬ ವಕೀಲರಾಗಿ ಮತ್ತು ಕಾನೂನು ಬಗ್ಗೆ ತಿಳಿವಳಿಕೆ ಉಳ್ಳವರಾದ ಸಿದ್ದರಾಮಯ್ಯ ಅವರಿಗೆ ಯಾವುದೇ ಅನಾಥ ಸಿ.ಡಿ ಅಥವಾ ಸ್ಟಿಂಗ್‌ ಆಪರೇಷನ್‌ ಮೂಲಕ ಮಾಡಿದ ಸಿ.ಡಿಗಳನ್ನು ಸಾಕ್ಷ್ಯಗಳನ್ನಾಗಿ ಪರಿಗಣಿಸಲು ಬರುವುದಿಲ್ಲ ಎಂಬ ಜ್ಞಾನ ಇಲ್ಲದಿರುವುದು ದುರುಷ್ಟಕರ ಸಂಗತಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

ಯಡಿಯೂರಪ್ಪ ಆಡಿಯೋ ಲೀಕ್: ಬಹಿರಂಗಪಡಿಸಿದವರ ಕ್ಲೂ ಕೊಟ್ಟ ಸಿದ್ದರಾಮಯ್ಯ...

ಸಂವಿಧಾನದ ಮಾನ್ಯತೆ ಇರುವ ಯಾವುದೇ ಸಂಸ್ಥೆಗಳು ಚಿತ್ರೀಕರಿಸಿದ ಸಿ.ಡಿಗಳು ಮಾತ್ರ ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಪರಿಗಣಿಸಬಹುದೇ ವಿನಃ ಯಾವುದೇ ಖಾಸಗಿ ಸಭೆಗಳಲ್ಲಿ ಚಿತ್ರೀಕರಿಸಿದ ವಿಡಿಯೋಗಳನ್ನು ಪರಿಗಣಿಸಲು ಸಾಧ್ಯವಿಲ್ಲ. ಈ ಬಗ್ಗೆ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಅರಿವು ಇಲ್ಲದಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಟೀಕಿಸಿದರು.

click me!