
ಬೆಂಗಳೂರು (ಡಿ.16) : ನಗರದಲ್ಲಿನ ರಸ್ತೆ ಗುಂಡಿಗಳಿಂದ ಅಪಘಾತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡವರು ಮತ್ತು ಸಾವನ್ನಪ್ಪಿದ ಪ್ರಕರಣಗಳಲ್ಲಿ ದೂರು ದಾಖಲಿಸಲು ಬರುವ ಸಾರ್ವಜನಿಕರಿಗೆ ತಾಂತ್ರಿಕ ಕಾರಣಗಳನ್ನು ನೀಡದೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಗೃಹ ಇಲಾಖೆಗೆ ಹೈಕೋರ್ಟ್ ಸೂಚಿಸಿದೆ.
ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
Bengaluru: ರಸ್ತೆ ಗುಂಡಿ ಮುಚ್ಚಲು ಸೇನೆ ಕರೆಸಲಾ: ಬಿಬಿಎಂಪಿಗೆ ಹೈಕೋರ್ಟ್ ಖಡಕ್ ಎಚ್ಚರಿಕೆ
ರಸ್ತೆ ಗುಂಡಿಯಿಂದ ಅಪಘಾತಕ್ಕೆ ಒಳಗಾಗುವವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಬಂದಾಗ ಪೊಲೀಸ್ ಅಧಿಕಾರಿಗಳು ತಾಂತ್ರಿಕ ಕಾರಣಗಳನ್ನು ನೀಡಿ ವಾಪಸ್ ಕಳುಹಿಸಬಾರದು. ಘಟನೆ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತು.
ಮುಚ್ಚಿದ ರಸ್ತೆಗುಂಡಿಗಳ ಗುಣಮಟ್ಟಪರಿಶೀಲನೆ:
ಜತೆಗೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು(ಎನ್‌ಎಚ್‌ಎಐ) ಮುಂದಿನ ಎಂಟು ವಾರಗಳಲ್ಲಿ ಮುಚ್ಚಿದ ರಸ್ತೆಗುಂಡಿಗಳ ಗುಣಮಟ್ಟಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸಬೇಕು. ಈ ಸಂಬಂಧದ ಎಲ್ಲ ದಾಖಲೆಗಳ ಪ್ರತಿಗಳನ್ನು ಬಿಬಿಎಂಪಿ ವಕೀಲರು ಎನ್‌ಎಚ್‌ಎಐನ ಪರಿಶೀಲನಾ ಸಮಿತಿಗೆ ಲಭ್ಯವಾಗುವಂತೆ ಮಾಡಬೇಕು. ಪರಿಶೀಲನೆ ನಡೆಸಿದ ವರದಿಯನ್ನು ಎನ್‌ಎಚ್‌ಎಐ ಅಧಿಕಾರಿಗಳು 2023ರ ಫೆಬ್ರವರಿ 3ರಂದು ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿತು. ಹಾಗೆಯೇ ಅರ್ಜಿಗೆ ಸಂಬಂಧಿಸಿದಂತೆ ಗೃಹ ಇಲಾಖೆಯನ್ನು ಪ್ರತಿವಾದಿಯನ್ನಾಗಿಸಲು ಅರ್ಜಿದಾರರಿಗೆ ಸೂಚನೆ ನೀಡಿತು.
BBMP: ನ್ಯಾಯಾಂಗ ನಿಂದನೆ: ಜೈಲಿಗೆ ಹೋಗಲು ಬ್ಯಾಗ್ ಸಮೇತ ಸಿದ್ಧರಾಗಿ ಬನ್ನಿ: ಹೈಕೋರ್ಟ್
ಅರ್ಜಿ ಹಿಂಪಡೆದ ಕಂಪನಿ:
ಇದೇ ವೇಳೆ, ಯಂತ್ರದ ಮೂಲಕ ರಸ್ತೆ ಗುಂಡಿ ಮುಚ್ಚಲು ನೀಡಿದ್ದ ಗುತ್ತಿಗೆಯನ್ನು ಏಕಾಏಕಿ ವಜಾ ಮಾಡಿರುವುದನ್ನು ಪ್ರಶ್ನಿಸಿ ಅಮೆರಿಕನ್ ರೋಡ್ ಟ್ರಾನ್ಸ್‌ಪೋರ್ಟರ್ ಸವೀರ್‍ಸ್ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ನ್ಯಾಯಪೀಠ ಅನುಮತಿ ನೀಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ