
ಸಂಪತ್ ತರೀಕೆರೆ
ಬೆಂಗಳೂರು (ಡಿ.15) : ಡಿಜಿಟಲೀಕರಣಕ್ಕಾಗಿ 65 ವರ್ಷ ವಯೋಮಿತಿ ದಾಟಿರುವ ಮಾಲಿಕರ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಗೊಳಿಸುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಮರುಜೀವ ನೀಡಿದ್ದು, ಈ ಬಗ್ಗೆ ಗಂಭೀರ ಪ್ರಯತ್ನ ಆರಂಭವಾಗಿದೆ ಎಂದು ಆಹಾರ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಆಹಾರ ಇಲಾಖೆಯಲ್ಲಿ ಪಡಿತರ ವಿತರಣೆ ಡಿಜಿಟಲೀಕರಣವಾಗಿದ್ದು, ನ್ಯಾಯಬೆಲೆ ಅಂಗಡಿ ಮಾಲಿಕರು ಫಲಾನುಭವಿಗಳ ಬಯೋಮೆಟ್ರಿಕ್ (ಬೆರಳಚ್ಚು) ಪಡೆಯಲು ಲ್ಯಾಪ್‌ಟಾಪ್ ಬಳಸುವುದನ್ನು ಕಡ್ಡಾಯ ಮಾಡಲಾಗಿದೆ. ಬಹುತೇಕ ಮಾಲಿಕರಿಗೆ 60ರ ವಯೋಮಿತಿ ದಾಟಿದ್ದರಿಂದ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ 65 ವರ್ಷ ವಯೋಮಿತಿ ಮೀರಿದ ಮಾಲಿಕರ ಪರವಾನಗಿ ರದ್ದುಪಡಿಸಿ, ಅರ್ಹರಿಗೆ ಆದ್ಯತೆ ಮೇಲೆ ನೀಡುವ ಚಿಂತನೆ ಸರ್ಕಾರದ್ದು.
ಬಡ ಕುಟುಂಬಗಳಿಗೆ ಕೊನೆಗೂ ಸಿಕ್ಕ ಬಿಪಿಎಲ್ ಭಾಗ್ಯ..!
ಈ ಹಿಂದೆ ಒಮ್ಮೆ ಪರವಾನಗಿ ಪಡೆದ ನ್ಯಾಯಬೆಲೆ ಅಂಗಡಿ ಮಾಲಿಕರು ಪ್ರತಿ 3 ವರ್ಷಗಳಿಗೆ ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬೇಕಿತ್ತು. ಇದಕ್ಕೆ ಯಾವುದೇ ವಯೋಮಿತಿ ಇರಲಿಲ್ಲ. ಪರವಾನಗಿ ಪಡೆದವರ ಮರಣಾನಂತರ ಕುಟುಂಬದ ಅರ್ಹ ಸದಸ್ಯರ ಹೆಸರಿಗೆ ಪರವಾನಗಿ ವರ್ಗಾಯಿಸುವ ಪರಿಪಾಠ ಇದುವರೆಗೂ ನಡೆದುಬಂದಿದೆ. ಆ ಮೂಲಕ ಪಡಿತರ ವಿತರಣೆಯ ಕಾಯಕವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಗಳಿಗೆ ಸರ್ಕಾರ ಜೀವನ ಭದ್ರತೆ ಒದಗಿಸಿತ್ತು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದ್ದು, ಆ ಕುಟುಂಬಗಳು ಸಹ 2016ರ ರಾಜ್ಯ ಸರ್ಕಾರದ ಪರಿಷ್ಕೃತ ಆದೇಶದ ನಿಬಂಧನೆಗಳನ್ನು ಅನುಸರಿಸುವುದು ಕಡ್ಡಾಯವಾಗಲಿದೆ.
ಇಲಾಖೆ ಮಾಹಿತಿ ಪ್ರಕಾರ ಶೇ.40ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿ ಮಾಲಿಕರು 65 ವರ್ಷ ಮೀರಿದವರೇ ಇದ್ದಾರೆ. ಇವರ ಲೈಸೆನ್ಸ್ ರದ್ದಾದರೆ ಕುಟುಂಬದಲ್ಲಿನ ಅರ್ಹರು ಅಥವಾ ಆ ಕುಟುಂಬಕ್ಕೆ ಹೊರತಾದ ಊರಿನ ಅನ್ಯ ವ್ಯಕ್ತಿಗೆ ರದ್ದಾದ ಅಂಗಡಿಯ ಲೈಸೆನ್ಸ್ ಲಭಿಸಲಿದೆ ಎನ್ನಲಾಗಿದೆ.
ಏನಿದು 2016 ನಿಬಂಧನೆ?:
ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣೆ ವ್ಯವಸ್ಥೆ (ನಿಯಂತ್ರಣ) ಸಂಬಂಧಿಸಿದಂತೆ 2016ರಲ್ಲಿ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿತ್ತು. ಅದರ ಅನ್ವಯ ನ್ಯಾಯಬೆಲೆ ಅಂಗಡಿ ಪರವಾನಗಿ ಪಡೆದ ವ್ಯಕ್ತಿ (ಡೀಲರ್) 65 ವರ್ಷದೊಳಗೆ ಸಾವನ್ನಪ್ಪಿದರೆ ಅನುಕಂಪದ ಆಧಾರದ ಮೇಲೆ ಅವರ ನಿರುದ್ಯೋಗಿ ಪುತ್ರ ಅಥವಾ ಅವಿವಾಹಿತ ಮಗಳಿಗೆ ಪರವಾನಿಗೆ ನೀಡಬಹುದು. ಆದರೆ, ಆ ಪುತ್ರ ಅಥವಾ ಪುತ್ರಿ ನೀಡುವಾಗ ಎಸ್‌ಎಸ್‌ಎಲ್‌ಸಿ ಉತ್ತೀರ್ಣವಾಗಿರಬೇಕು. ಅವರು 18ರಿಂದ 40 ವರ್ಷದೊಳಗಿನವರಾಗಿರಬೇಕು ಎಂದು ಷರತ್ತು ವಿಧಿಸಿತ್ತು. ಒಂದು ವೇಳೆ ಡೀಲರ್‌ಗೆ 65 ದಾಟಿದರೆ ಆತನಿಗೇ ಡೀಲರ್‌ಶಿಪ್ ಮುಂದುವರಿಯುತ್ತಿತ್ತು.
ಅಂದು ಸರ್ಕಾರ ಈ ನಿರ್ಧಾರದ ವಿರುದ್ಧ ರಾಜ್ಯ ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘ ಕೋರ್ಚ್‌ನಿಂದ ತಡೆಯಾಜ್ಞೆ ತಂದಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ತಡೆಯಾಜ್ಞೆ ತೆರವುಗೊಳಿಸಿ ಸರ್ಕಾರದ ತಿದ್ದುಪಡಿ ಆದೇಶವನ್ನು ಪುರಸ್ಕರಿಸಿ ಕಳೆದ ಜನವರಿಯಲ್ಲಿ ಆದೇಶ ಹೊರಡಿಸಿತ್ತು.
Business Ideas : ರೇಷನ್ ಅಂಗಡಿ ಶುರು ಮಾಡೋದು ಹೇಗೆ ಗೊತ್ತಾ?
ರದ್ದತಿ ಮುನ್ನೆಲೆಗೆ:
ಈ ಬೆನ್ನಲ್ಲೇ 65 ವಯೋಮಿತಿಯ ನ್ಯಾಯಬೆಲೆ ಅಂಗಡಿ ಮಾಲೀಕರ ವಿವರ ಸಂಗ್ರಹಿಸಲು ಸರ್ಕಾರ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿತ್ತು. ವಿಪರಾರಯಸವೆಂದರೆ ಆಹಾರ ಇಲಾಖೆ ಸಚಿವರಾಗಿದ್ದ ಉಮೇಶ್ ಕತ್ತಿಯವರ ನಿಧನದೊಂದಿಗೆ ಈ ವಿಚಾರ ನೇಪಥ್ಯಕ್ಕೆ ಸರಿದಿತ್ತು. ಇದೀಗ 65 ವಯೋಮಿತಿ ಮೀರಿದ ನ್ಯಾಯಬೆಲೆ ಅಂಗಡಿ ಮಾಲೀಕರ ಪರವಾನಗಿ ರದ್ದುಪಡಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬೆಳಗಾವಿ ವಿಧಾನಮಂಡಲದ ಅಧಿವೇಶನದ ನಂತರ ಈ ದಿಸೆಯಲ್ಲಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ