1 ಲಕ್ಷ ನೀಡಿದರೆ ಸ್ಲಂ ವಾಸಿಗಳಿಗೆ ಮನೆ: ಸಚಿವ ಜಮೀರ್‌ ಅಹಮದ್‌ ಖಾನ್‌

By Kannadaprabha NewsFirst Published Dec 22, 2023, 11:05 AM IST
Highlights

ಹಲವಾರು ವರ್ಷಗಳಿಂದ ಸೂರು ಹೊಂದಲು ಕಾಯುತ್ತಿದ್ದ ಕೊಳಗೇರಿ ನಿವಾಸಿಗಳಿಗೆ ಕೇವಲ ಒಂದು ಲಕ್ಷ ರು.ಗಳಿಗೆ ಮನೆ ನೀಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ.
 

ಬೆಂಗಳೂರು (ಡಿ.22): ಹಲವಾರು ವರ್ಷಗಳಿಂದ ಸೂರು ಹೊಂದಲು ಕಾಯುತ್ತಿದ್ದ ಕೊಳಗೇರಿ ನಿವಾಸಿಗಳಿಗೆ ಕೇವಲ ಒಂದು ಲಕ್ಷ ರು.ಗಳಿಗೆ ಮನೆ ನೀಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ (ನಗರ) ಸರ್ವರಿಗೂ ಸೂರು ಅಭಿಯಾನದಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಅನುಷ್ಠಾನಗೊಳಿಸುತ್ತಿರುವ 1.80 ಲಕ್ಷ ಮನೆಗಳಿಗೆ ಫಲಾನುಭವಿಗಳು ಪಾವತಿಸಬೇಕಿದ್ದ 4.5 ಲಕ್ಷ ರು.ಗಳಲ್ಲಿ ಕೇವಲ ಒಂದು ಲಕ್ಷ ರು. ನೀಡಿದರೆ ಉಳಿದ 3.5 ಲಕ್ಷ ರು.ಗಳನ್ನೂ ರಾಜ್ಯ ಸರ್ಕಾರ ಭರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಈ ಯೋಜನೆಯಡಿ ಮೊದಲ ಹಂತದಲ್ಲಿ 48,796 ಮನೆಗಳನ್ನು ಪೂರ್ಣಗೊಳಿಸಲು 500 ಕೋಟಿ ರು. ಬಿಡುಗಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ. ಉಳಿದ 1.3 ಲಕ್ಷ ಮನೆಗಳನ್ನು ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಪೂರ್ಣಗೊಳಿಸಲು ಸಂಪುಟ ಸಭೆ ಸಮ್ಮತಿ ನೀಡಿದೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ತಿಳಿಸಿದ್ದಾರೆ. ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ 2018ರಿಂದ 2023ರವರೆಗೆ ರಾಜ್ಯಕ್ಕೆ 1,80,253 ಮನೆಗಳು ಮಂಜೂರಾಗಿದ್ದರೂ ಫಲಾನುಭವಿಗಳಿಗೆ ನಿಗದಿಪಡಿಸಿದ್ದ 4.5 ಲಕ್ಷ ರು. ಹಣವನ್ನು ಪಾವತಿಸಲು ಬಹುತೇಕರಿಗೆ ಸಾಧ್ಯವಾಗದೆ ಪೂರ್ಣಗೊಳಿಸಲಾಗಿರಲಿಲ್ಲ. 

ಎಚ್.ಡಿ.ಕುಮಾರಸ್ವಾಮಿ ಮೈತ್ರಿಧರ್ಮ ಪಾಲಕರು: ಸಚಿವ ಚಲುವರಾಯಸ್ವಾಮಿ

ಈ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲು ಕೊಳಗೇರಿಗಳಲ್ಲಿನ ಶೆಡ್‌-ಗುಡಿಸಲುಗಳನ್ನು ತೆರವುಗೊಳಿಸಿರುವುದರಿಂದ ಅಲ್ಲಿನ ನಿವಾಸಿಗಳು ಮನೆಗಳಿಲ್ಲದೆ ತೊಂದರೆಯಲ್ಲಿದ್ದಾರೆ. ಹಾಗಾಗಿ ಸರ್ವರಿಗೂ ಸೂರು ಕಲ್ಪಿಸುವ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದರು. ಈ ಯೋಜನೆಗೆ ಒಟ್ಟು 6,170 ಕೋಟಿ ರು. ಬೇಕಾಗಲಿದೆ. ಪ್ರತಿ ಮನೆ ನಿರ್ಮಾಣಕ್ಕೆ 7.5 ಲಕ್ಷ ರು. ವೆಚ್ಚವಾಗಲಿದೆ. 

ಇದರಲ್ಲಿ ರಾಜ್ಯ ಸರ್ಕಾರದಿಂದ ಸಾಮಾನ್ಯ ವರ್ಗದವರಿಗೆ 1.20, ಎಸ್ಟಿ ಎಸ್ಟಿಗಳಿಗೆ 2 ಲಕ್ಷ ರು. ಸಹಾಯಧನ ಹಾಗೂ ಕೇಂದ್ರ ಸರ್ಕಾರದಿಂದ ಉಳಿದ ಸಹಾಯಧನ ಸೇರಿ ಒಟ್ಟು 3 ಲಕ್ಷ ರು. ಭರಿಸುವುದು. ಉಳಿದ 4.5 ಲಕ್ಷ ರು. ಹಣವನ್ನು ಫಲಾನುಭವಿಗಳು ಭರಿಸಬೇಕೆಂಬ ನಿಯಮ ಇತ್ತು. ಆದರೆ, ಈ ಹಣವನ್ನು ಬಹುತೇಕ ಅರ್ಜಿದಾರರು ನೀಡಿರಲಿಲ್ಲ. ಹಾಗಾಗಿ ಇದೀಗ ಸರ್ಕಾರ ಫಲಾನುಭವಿಗಳು ತಲಾ ಕೇವಲ 1 ಲಕ್ಷ ರು. ಪಾವತಿಸಿದರೆ ಸಾಕು ಎಂದು ತೀರ್ಮಾನಿಸಿದೆ. ಇದರಿಂದ ಫಲಾನುಭವಿಗಳಿಂದ 480 ಕೋಟಿ ರು. ಬರಲಿದೆ. ಉಳಿದ 4932 ಕೋಟಿ ರು.ಗಳನ್ನು ಸರ್ಕಾರವೇ ಭರಿಸಲಿದೆ ಎಂದರು.

ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ಸ್ಪೋಟವಾಗುವ ಭಯ: ಕಂಟಕವಾಗುತ್ತಾ ಕ್ರಿಸ್ಮಸ್, ನ್ಯೂ ಇಯರ್ ಎಂಡ್ ರಜೆ?

ಜಮೀರ್‌ ಮನವಿಗೆ ಸಿಎಂ ಸಹಕಾರ: ಕೊಳಗೇರಿ ನಿವಾಸಿಗಳಿಗೆ ಪ್ರತಿಯೊಬ್ಬರಿಗೂ ಸೂರು ಒದಗಿಸಿಕೊಡಲು ಇರುವ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯು ಫಲಾನುಭವಿಗಳು ತಮ್ಮ ಪಾಲಿನ ಹಣ ಪಾವತಿಸಲು ಶಕ್ತರಾಗದ್ದಕ್ಕೆ ಕಳೆದ ಎಂಟು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಬಡಜನರ ಪರವಾದ ಈ ಯೋಜನೆ ಬಗ್ಗೆ ವಿಶೇಷ ಕಾಳಜಿ ವಹಿಸಿದ ವಸತಿ ಸಚಿವ ಜಮೀರ್‌ ಅಹಮದ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಈ ಯೋಜನೆಯನ್ನು ರಾಜ್ಯ ಸರ್ಕಾರದಿಂದಲೇ ಹೆಚ್ಚಿನ ಅನುದಾನ ನೀಡಿ ಪೂರ್ಣಗೊಳಿಸಲು ಮನವಿ ಮಾಡಿದ್ದರು. ಅವರು ಮಾಡಿದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದರಿಂದ ಯೋಜನೆ ಸಾಕಾರಗೊಳ್ಳಲು ದಾರಿಯಾಗಿದೆ.

click me!