
ರಾಯಚೂರು (ಡಿ.22): ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ರಾಮಮಂದಿರದ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಕೋಟಿ ಕೋಟಿ ಭಕ್ತರು ಶ್ರೀರಾಮನ ಜನ್ಮಭೂಮಿಗೆ ತೆರಳಲು ಸನ್ನದ್ಧರಾಗಿರುವ ಸಮಯದಲ್ಲೇ, ರಾಯಚೂರಿನ ಶ್ರೀರಾಮಭಕ್ತನೊಬ್ಬ ಕಾಲ್ನಡಿಗೆಯಲ್ಲೇ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ್ದಾನೆ.
ನಗರದ ಮಡ್ಡಿಪೇಟೆ ಬಡಾವಣೆ ಯುವಕ ವಿನೋದ್ ರೆಡ್ಡಿ ರಾಯಚೂರಿನಿಂದ ಅಯೋಧ್ಯೆಗೆ ಒಬ್ಬಂಟಿಯಾಗಿ ಪಾದಯಾತ್ರೆ ಕೈಗೊಂಡಿದ್ದಾನೆ. 8ನೇ ತರಗತಿ ಓದಿರುವ ವಿನೋದ್ ರೆಡ್ಡಿಯದು ಬಡ ಕುಟುಂಬ. ಸಣ್ಣ ವಯಸ್ಸಿನಿಂದಲೇ ಹಿಂದೂ ಧರ್ಮ, ಅಧ್ಯಾತ್ಮದತ್ತ ಆಸಕ್ತಿ ಬೆಳೆಸಿಕೊಂಡಿದ್ದು, ಈತ ಶ್ರೀರಾಮನ ಪರಮ ಭಕ್ತ. ವಿನೋದ್ ರೆಡ್ಡಿ ಶ್ರೀರಾಮಮಂದಿರ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಜೀವನ ಸಾರ್ಥಕತೆ ಕ್ಷಣ ಎನ್ನುವ ಮನೋಭಾವ ಹೊಂದಿದ್ದಾನೆ.
ಏಕಾಂಗಿ ಸಂಕಲ್ಪ: ಯಾವುದೇ ಯೋಜನೆ ಇಲ್ಲದೆ ವಿನೋದ್ ರೆಡ್ಡಿ ಏಕಾಂಗಿಯಾಗಿ 1,500 ಕಿ.ಮೀ. ಪಾದಯಾತ್ರೆಯನ್ನು ಡಿ.13ರಿಂದ ಆರಂಭಿಸಿ, ಈಗಾಗಲೇ ಸುಮಾರು 400 ಕಿ.ಮೀ. ಕ್ರಮಿಸಿದ್ದಾನೆ. ಸದ್ಯ ತೆಲಂಗಾಣದ ಕಾಮರೆಡ್ಡಿ ಜಿಲ್ಲೆ ಬಿಟ್ಟು ಪಾದಯಾತ್ರೆ ಮುಂದುವರಿಸಿದ್ದಾನೆ. ನಿತ್ಯ 40 ರಿಂದ 50 ಕಿ.ಮೀ. ದೂರ ಕ್ರಮಿಸಿ 40 ದಿನಗಳಲ್ಲಿ ಅಯೋಧ್ಯೆ ಸೇರಬೇಕೆನ್ನುವ ಸಂಕಲ್ಪದಡಿ ಕಾಲ್ನಡಿಗೆ ನಡೆಸುತ್ತಿದ್ದಾನೆ. ಬೆಳಗಿನ ಜಾವ ಪಾದಯಾತ್ರೆ ಆರಂಭಿಸಿ ದಾರಿಯಲ್ಲಿ ಕಂಡ ಜನರ ಬಳಿ ನೀರು, ಊಟ ಇತರೆ ಸೇವೆ ಪಡೆದು ರಾತ್ರಿ ವೇಳೆಗೆ ದೇವಸ್ಥಾನ, ಮಂದಿರ-ಮಠಗಳಲ್ಲಿ ವಾಸ್ತವ್ಯ ಹೂಡಿ ಮರುದಿನ ಬೆಳಗ್ಗೆ ಮತ್ತೆ ನಡಿಗೆ ಆರಂಭಿಸುತ್ತಿದ್ದಾನೆ.
ಟ್ರಾಫಿಕ್ ಸಮಸ್ಯೆಗೆ ಶಾಲಾ ಸಮಯ ಬದಲಿಸಲಾಗದು: ಸರ್ಕಾರದ ವರದಿಯಲ್ಲೇನಿದೆ?
ಮಾರ್ಗದಲ್ಲಿ ಶ್ರೀರಾಮನ ಭಕ್ತರು ಭಕ್ತಿ-ಭಾವದಿಂದ ಬರಮಾಡಿಕೊಳ್ಳುತ್ತಿದ್ದಾರಂತೆ. ಕೆಲವೆಡೆ ಜನ ಪಾದಗಳಿಗೆ ಕ್ಷೀರಾಭಿಷೇಕ ಮಾಡಿ ಪೂಜಿಸಿ, ಸನ್ಮಾನಿಸಿ ಬೀಳ್ಕೊಡುಗೆ ನೀಡುತ್ತಿದ್ದಾರೆ ಎಂದು ವಿನೋದ್ ರೆಡ್ಡಿ ಕನ್ನಡಪ್ರಭದ ಜೊತೆಗೆ ಪಾದಯಾತ್ರೆಯ ಅನುಭವ ಹಂಚಿಕೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ