Cancer Day ಬಾಯಿ ಕ್ಯಾನ್ಸರ್ ಗೆ ಕಾರಣವಾಗುವ 114 ವಂಶವಾಹಿನಿ ರೂಪಾಂತರಗಳ ಪತ್ತೆ

Published : Feb 04, 2022, 06:37 PM IST
Cancer Day ಬಾಯಿ ಕ್ಯಾನ್ಸರ್ ಗೆ ಕಾರಣವಾಗುವ 114 ವಂಶವಾಹಿನಿ ರೂಪಾಂತರಗಳ ಪತ್ತೆ

ಸಾರಾಂಶ

* ಬಾಯಿ ಕ್ಯಾನ್ಸರ್ ಗೆ ಕಾರಣವಾಗುವ 114 ವಂಶವಾಹಿನಿ ರೂಪಾಂತರಗಳ ಪತ್ತೆ * ಸರ್ಕಾರದ ಐಬ್ಯಾಬ್ ಸಂಸ್ಥೆಯು ಎಚ್.ಸಿ.ಜಿ. ವೈದ್ಯತಜ್ಞರ ಸಹಯೋಗದಲ್ಲಿ ಮಹತ್ವದ ಸಂಶೋಧನೆ * ಹೊಸ ಆಶಾಕಿರಣಗಳನ್ನು ಮೂಡಿಸಿದ ಕ್ಯಾನ್ಸರ್ ಚಿಕಿತ್ಸೆ

ಬೆಂಗಳೂರು, (ಫೆ.04): ನಗರದಲ್ಲಿರುವ ಸರ್ಕಾರದ ಐಬ್ಯಾಬ್ (IBAB) ಸಂಸ್ಥೆಯು ಎಚ್.ಸಿ.ಜಿ. ವೈದ್ಯತಜ್ಞರ ಸಹಯೋಗದಲ್ಲಿ ಮಹತ್ವದ ಸಂಶೋಧನೆ ನಡೆಸಿ ಬಾಯಿಯ ಕ್ಯಾನ್ಸರ್ (Cancer) ಗೆ ಕಾರಣವಾಗುವ 114 ವಂಶವಾಹಿನಿ ರೂಪಾಂತರಗಳನ್ನು ಪತ್ತೆಹಚ್ಚಿದ್ದಾರೆ. ಇದರಿಂದ ಬಾಧಿತರು ಬದುಕುಳಿಯುವ ಸಾಧ್ಯತೆಯನ್ನು ಶೇ 90ರಷ್ಟು ನಿಖರತೆಯೊಂದಿಗೆ ಊಹಿಸುವ ಜೊತೆಗೆ ಪರಿಣಾಮಕಾರಿ ನಿರ್ದಿಷ್ಟ ಜೀವಕೋಶ ಕೇಂದ್ರಿತ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗಲಿದೆ.

ವಿಶ್ವ ಕ್ಯಾನ್ಸರ್ ಜಾಗೃತಿ ದಿನವಾದ ಶುಕ್ರವಾರ ವಿಧಾನಸೌಧದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ (Dr CN Ashwath Narayan) ಅವರು, ಜಿನೋಮಿಕ್ಸ್ (ವಂಶವಾಹಿನಿ ಅನುಕ್ರಮಣಿಕೆ ವಿಶ್ಲೇಷಣೆ) ಆಧಾರಿತವಾಗಿ ನಡೆದಿರುವ ಈ ಸಂಶೋಧನೆಯು ಬಾಯಿ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಪಟ್ಟಂತೆ ಹೊಸ ಆಶಾಕಿರಣಗಳನ್ನು ಮೂಡಿಸಿದೆ ಎಂದರು.

World Cancer Day: ಆರಂಭದಲ್ಲೇ ಕ್ಯಾನ್ಸರ್‌ ಪತ್ತೆಗೆ ಪರೀಕ್ಷೆ ಮಾಡಿಸಿ: ಡಾ.ತೌಸಿಫ್‌

ಐಟಿ/ಬಿಟಿ ಇಲಾಖೆಯಿಂದ ಸ್ಥಾಪಿತವಾಗಿರುವ ‘ಐಬ್ಯಾಬ್’ನಲ್ಲಿರುವ (IBAB-ಇನ್ಸ್ ಟಿಟ್ಯೂಟ್ ಆಫ್ ಬಯೋಇನ್ಫರ್ಮ್ಯಾಟಿಕ್ಸ್ ಅಂಡ್ ಅಪ್ಲೈಡ್ ಬಯೋಟೆಕ್ನಾಲಜಿ- ಜೈವಿಕ ಚಹರೆಗಳು ಮತ್ತು ಆನ್ವಯಿಕ ಜೈವಿತ ತಂತ್ರಜ್ಞಾನ ಸಂಸ್ಥೆ) ಅತ್ಯಾಧುನಿಕ ಜೀನೋಮಿಕ್ಸ್ ವ್ಯವಸ್ಥೆ ಬಳಸಿ ನಡೆಸಿದ ಸಂಶೋಧನೆ ಇದಾಗಿದೆ. ಇದರ ಜೊತೆಗೆ ಸುಧಾರಿತ ಮಷೀನ್ ಲರ್ನಿಂಗ್ ಮತ್ತು ಬಯೋಇನ್ಫರ್ಮ್ಯಾಟಿಕ್ಸ್ ಉಪಯೋಗಿಸಿಕೊಂಡು ಈ ಅಧ್ಯಯನ ನಡೆದಿದೆ ಎಂದು ಸಚಿವರು ವಿವರಿಸಿದರು.

ನಮ್ಮ ದೇಶದಲ್ಲಿ ಬಾಯಿಯ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾಗಿದ್ದರೂ ( ಒಟ್ಟಾರೆ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 40ರಷ್ಟು) ಭಾರತದ ರೋಗಿಗಳನ್ನೇ ಆಯ್ಕೆ ಮಾಡಿಕೊಂಡು ನಡೆಸಲಾಗಿರುವ ಮೊತ್ತಮೊದಲ ವಿಸ್ತೃತ ಅಧ್ಯಯನ ಇದಾಗಿದೆ. ಇದೇ ವೇಳೆ, ಈ ಅಧ್ಯಯನದ  ದತ್ತಾಂಶಗಳನ್ನು ಪಾಶ್ಚಿಮಾತ್ಯ ವಂಶವಾಹಿ ಅಧ್ಯಯನಗಳ ಜೊತೆ ತುಲನೆ ಮಾಡಿ ವಿಶ್ಲೇಷಿಸಲಾಗಿದೆ. ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು ಈ ಸಂಶೋಧನೆಯ ಬಗ್ಗೆ ಒಳ್ಳೆಯ ಮಾತುಗಳನ್ನಾಡಿವೆ. ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕೆಯಲ್ಲಿ ಈ ಕುರಿತು ಅಧ್ಯಯನ ವರದಿ ಪ್ರಕಟಗೊಂಡಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಬಾಯಿಯ ಕ್ಯಾನ್ಸರ್ ಗೆ ಕಾರಣವಾಗುವ 114 ವಂಶವಾಹಿನಿ ರೂಪಾಂತರಗಳ ಪೈಕಿ 35 ರೂಪಾಂತರಗಳು ಆಂಕೋಜೀನ್ ಗಳಾದರೆ, 11 ಟ್ಯೂಮರ್ ಸಪ್ರೆಸರ್ ಗಳಾಗಿದ್ದು, 2 ಡಿಎನ್ಎ ದುರಸ್ತಿ ವಂಶವಾಹಿನಿಗಳಾಗಿವೆ ಎಂಬುದನ್ನು ಗುರುತಿಸಲಾಗಿದೆ. ಈ ಅಧ್ಯಯನದಲ್ಲಿ ಕ್ಯಾನ್ಸರ್ ಬಾಧೆಯಿಂದ ಬದುಕುಳಿಯುವ ಸಾಧ್ಯತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಮುಖ ವಂಶವಾಹಿನಿಗಳನ್ನು ಕೂಡ ಗುರುತಿಸಲಾಗಿದೆ ಎಂದರು.

ಈ ಸಂಶೋಧನೆಯಲ್ಲಿ IRAK1 ವಂಶವಾಹಿನಿಯ ಹೊಸ ರೂಪಾಂತರವನ್ನು ಪತ್ತೆಹಚ್ಚಲಾಗಿದೆ. ಇದು ಪರಿಣಾಮಕಾರಿಯಾದ ನಿರ್ದಿಷ್ಟ ಜೀವಕೋಶ ಕೇಂದ್ರಿತ ಚಿಕಿತ್ಸೆಗೆ ಅನುವು ಮಾಡಿಕೊಡಲಿದೆ. ಇದಕ್ಕಾಗಿ ಔಷಧ ಕಂಪನಿಗಳೊಂದಿಗೆ ಸಹಭಾಗಿತ್ವ ಸಾಧಿಸುವ ಆಲೋಚನೆಗಳು ನಡೆದಿವೆ. ಇದು ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಕರ್ನಾಟಕ ರಾಜ್ಯದ ಮಹತ್ವದ ಕೊಡುಗೆಗೆ ಕಾರಣವಾಗುವ ಸಾಧ್ಯತೆಗಳಿವೆ. ಕ್ಯಾನ್ಸರ್ ವಂಶವಾಹಿನಿ ಅನುಕ್ರಮಣಿಕೆಗೆ ಕುರಿತಾದ ರಹಸ್ಯವನ್ನು ಬೇಧಿಸುವ ಮೂಲಕ ಜನರ ಜೀವ ಉಳಿಸಲು ಸಹಕಾರಿಯಾಗಲಿದೆ ಎಂದರು.

ಎಚ್.ಸಿ.ಜಿ. ಕ್ಯಾನ್ಸರ್ ಕೇಂದ್ರದ ಡೀನ್ ಡಾ.ವಿಶಾಲ್ ರಾವ್ ಅವರು ಮಾತನಾಡಿ, ಸರ್ಕಾರದ ನೆರವು ಇಲ್ಲದೆ ಕೇವಲ ಖಾಸಗಿ ಆಸ್ಪತ್ರೆಗಳು ಮಾತ್ರವೇ ಇಂತಹ ದೊಡ್ಡಮಟ್ಟದ ಸಂಶೋಧನೆಯನ್ನು ನಡೆಸಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರವು ಐಬ್ಯಾಬ್ ಮೂಲಕ ಚಿಕಿತ್ಸಕರು ಹಾಗೂ ಸಂಶೋಧಕರು ಒಂದೆಡೆ ಸೇರಿ ಅಧ್ಯಯನದಲ್ಲಿ ಪಾಲ್ಗೊಳ್ಳಲು ಅನುಕೂಲ ಮಾಡಿಕೊಟ್ಟಿದ್ದರಿಂದ ಈ ಮಹತ್ವದ ಸಂಶೋಧನೆ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಇದುವರೆಗೆ ಬಾಯಿ ಕ್ಯಾನ್ಸರ್ ಗೆ ಎಷ್ಟೇ ಉತ್ತಮ ಚಿಕಿತ್ಸೆ ಕೊಟ್ಟರೂ ಶೇ 50ರಷ್ಟು ಪ್ರಕರಣಗಳಲ್ಲಿ ರೋಗ ಮರುಕಳಿಸುತ್ತಿತ್ತು. ಆದರೆ ಈ ಸಂಶೋಧನೆಯು ರೋಗ ಮರುಕಳಿಸಿದಂತೆ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಐಬ್ಯಾಬ್ ನ ಪ್ರೊಫೆಸರ್ ವಿಭಾ ಚೌಧರಿ ಹೇಳಿದರು.

ಎಚ್.ಸಿ.ಜಿ.ಯ ಡಾ.ಆನಂದ್ ಸುಭಾಷ್, ವಂಶವಾಹಿನಿ ಅಧ್ಯಯನ ತಜ್ಞ ಡಾ.ಸತೀಶ್ ಕುಣಿಗಲ್, ಸಮಾಲೋಚಕ ಬಾಲಸುಬ್ರಮಣ್ಯಂ, ಡಾ.ಸಾಗರ್ , ಐಟಿ/ಬಿಟಿ ಇಲಾಖೆಯ ಪ್ರಧಾನ ವ್ಯವಸ್ಥಾಪಕಿ ಡಾ.ಕೃಪಾಲಿನಿ ಮತ್ತಿತರರು ಹಾಜರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!
CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ