ಧಾರ್ಮಿಕ ಕಾರ್ಯಕ್ರಮ ಹೆಚ್ಚಿಸಿ ಜಾಗೃತಿ ಮೂಡಿಸಿ: ನ್ಯಾ. ಸಂತೋಷ ಹೆಗ್ಡೆ

By Kannadaprabha News  |  First Published Feb 4, 2022, 10:04 AM IST

*ಶ್ರೀ ರಾಘವೇಂದ್ರ ಸಂಸ್ಮರಣೆ, ವಾರ್ಷಿಕೋತ್ಸವ, ಸಂಗೀತ-ನೃತ್ಯೋತ್ಸವ
*ಆಧ್ಯಾತ್ಮಿಕ, ಧಾರ್ಮಿಕ, ಗುರು ಸಂಸ್ಮರಣೆಯಂತಹ ಅರ್ಥಪೂರ್ಣ ಕಾರ್ಯಕ್ರಮ
*ಸಮಾಜದ ಅವ್ಯವಸ್ಥೆ ಬಗ್ಗೆ ವಿದ್ಯಾವಂತ ಯುವಕರು ಅರಿಯಬೇಕು


ಬೆಂಗಳೂರು (ಫೆ. 04): ಸಮಾಜದೆಲ್ಲೆಡೆ ಆಧ್ಯಾತ್ಮಿಕ, ಧಾರ್ಮಿಕ, ಸಾಹಿತ್ಯಿಕ ಕಾರ್ಯಕ್ರಮ ಹೆಚ್ಚೆಚ್ಚು ನಡೆಸಿ ಜನರು, ಯುವ ಸಮೂಹವನ್ನು ಜಾಗೃತಗೊಳಿಸಬೇಕಿದೆ ಎಂದು ಮಾಜಿ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಹೇಳಿದ್ದಾರೆ. ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದಿಂದ ಕೆಂಗೇರಿ ಉಪನಗರದಲ್ಲಿ ಏರ್ಪಡಿಸಿದ್ದ ‘ಶ್ರೀ ಗುರುರಾಘವೇಂದ್ರ ಸಂಸ್ಮರಣೆ, ವಾರ್ಷಿಕೋತ್ಸವ, ಅಂತಾರಾಷ್ಟ್ರೀಯ ಮಟ್ಟದ ಸಂಗೀತ-ನೃತ್ಯೋತ್ಸವ’ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲೆಡೆ ಜನ ಸಾಮಾನ್ಯರಿಗೆ, ಬಡವರಿಗೆ ಅನ್ಯಾಯವಾಗುತ್ತಿದೆ. ಅದರ ವಿರುದ್ಧ ಜನರನ್ನು ಜಾಗೃತಗೊಳಿಸಲು ಪ್ರತಿಷ್ಠಾನ ನಡೆಸುತ್ತಿರುವ ಈ ಆಧ್ಯಾತ್ಮಿಕ, ಧಾರ್ಮಿಕ, ಗುರು ಸಂಸ್ಮರಣೆಯಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದರು.

ಅಧಿಕಾರ ಹಿಡಿದವರೇ ಅನ್ಯಾಯ ಎಸಗುತ್ತಿದ್ದರೆ, ಇತ್ತ ತಪ್ಪು ಮಾಡಿ ಜೈಲಿನಿಂದ ಮರಳಿದವರನ್ನು ಸನ್ಮಾನಿಸುವ ಪರಿಪಾಠ ಬೆಳೆಯುತ್ತಿದೆ. ಇದರಿಂದ ಸಮಾಜಕ್ಕೆ ಎಂತಹ ಸಂದೇಶ ರವಾನಿಸುತ್ತಿದ್ದೇವೆ ಎಂದು ಮನಗಾಣಬೇಕು. ಸಮಾಜದ ಅವ್ಯವಸ್ಥೆ ಬಗ್ಗೆ ವಿದ್ಯಾವಂತ ಯುವಕರು ಅರಿಯಬೇಕು. ಧ್ವನಿ ಇಲ್ಲದವರ ಧ್ವನಿಯಾಗಿ, ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವವರಾಗಬೇಕು. ಈ ನಿಟ್ಟಿನಲ್ಲಿ ಕೈಲಾದಷ್ಟುಯುವಕರನ್ನು ಒಂದುಗೂಡಿಸುತ್ತಿದ್ದೇನೆ ಎಂದು ತಿಳಿಸಿದರು.

Tap to resize

Latest Videos

ಇದನ್ನೂ ಓದಿ: Mantra Benefits: ಹರೇ ಕೃಷ್ಣ ಮಂತ್ರದಲ್ಲಿದೆ ಸಂತೋಷದ ಕೀಲಿಕೈ

ಸಂಗೀತ ವಿದ್ವಾನ್‌ ಡಾ. ಆರ್‌.ಕೆ.ಪದ್ಮನಾಭ ಮಾತನಾಡಿ, ಆಧ್ಯಾತ್ಮ, ಸಾಹಿತ್ಯ, ಕಲಾ ಕ್ಷೇತ್ರದಲ್ಲಿ ಸಾಧನೆಗೈದ ಅರ್ಹರನ್ನು ಗುರುತಿಸಿ ಗೌರವಿಸುವುದರಿಂದ ಆ ಪ್ರಶಸ್ತಿಗೆ ಮೌಲ್ಯ ದೊರೆಯುತ್ತದೆ. ಪುರಸ್ಕಾರಕ್ಕೆ ಅರ್ಹರನ್ನು ಗುರುತಿಸಿ ಸನ್ಮಾನಿಸುವುದು ವ್ಯವಹಾರವಲ್ಲ. ಕೊರೋನಾದಿಂದ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಕಡಿಮೆಯಾಗಿವೆ. ಈ ಸಂದರ್ಭದಲ್ಲಿ ಪ್ರತಿಷ್ಠಾನ ಹಲವು ಕಾರ್ಯಕ್ರಮ ನಡೆಸುತ್ತಿದ್ದು, ವಿವಿಧ ಸಾಧಕರ ಜತೆ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಂತಾಗಲಿ ಎಂದು ಆಶಿಸಿದರು.

ಪ್ರತಿಷ್ಠಾನ ನೀಡುವ ‘ಗುರುರಾಘವೇಂದ್ರ ಸಂಸ್ಮರಣ ಪ್ರಶಸ್ತಿ’ಯನ್ನು ಪುರಸ್ಕೃತ ಸಂಸ್ಕೃತ ವಿದ್ವಾನ್‌ ರಾಮವಿಠಲಚಾರ್ಯರ ಪರ, ಅವರ ಶಿಷ್ಯ ಸಂಸ್ಕೃತ ವಿದ್ವಾನ್‌ ನಾಗರಾಜ್‌ ಆಚಾರ್ಯರು ಸ್ವೀಕರಿಸಿದರು. ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಡಾ. ವಿಜಯೇಂದ್ರ ಅವಧೂತ, ಪ್ರತಿಷ್ಠಾನ ಅಧ್ಯಕ್ಷೆ ಬೆಳಗೆರೆ ಗೌರಿ ನಾಗರಾಜು, ಉಪಾಧ್ಯಕ್ಷೆ ವೀಣಾ ಸುರೇಶ್‌, ಕಾರ್ಯದರ್ಶಿ ನಾಗರಾಜ್‌ ಮತ್ತಿತರರು ಉಪಸ್ಥಿತರಿದ್ದರು.

click me!