ಬಿಜೆಪಿಗರು ಪ್ರಾಮಾಣಿಕರಾಗಿದ್ದರೆ ನ್ಯಾಯಾಂಗ ತನಿಖೆ ನಡೆಸಲಿ, ತನಿಖೆ ಮಾಡಲು ಇರುವ ಸಮಸ್ಯೆ ಏನು?: ವಿಪಕ್ಷ ನಾಯಕ ಸಿದ್ದರಾಮಯ್ಯ
ಪಾಂಡವಪುರ/ಮೈಸೂರು(ಆ.27): ರಾಜ್ಯ ಸರ್ಕಾರದ ಮೇಲಿನ ಶೇ.40ರಷ್ಟುಕಮಿಷನ್ ವಿಚಾರವಾಗಿ ನಾನು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿ ಯಾವ ಗುತ್ತಿಗೆದಾರರ ಪರವೂ ನಿಲ್ಲುತ್ತಿಲ್ಲ, ನಾನೇನಿದ್ದರೂ ಕಾನೂನಿನ ಪರ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಜತೆಗೆ, ಬಿಜೆಪಿಯವರು ಪ್ರಾಮಾಣಿಕರೇ ಆಗಿದ್ದರೆ ಕಮಿಷನ್ ಆರೋಪವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿ ಎಂದು ಪುನರುಚ್ಚರಿಸಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಕ್ರಮ ಕೈಗೊಳ್ಳುವ ಮುಖ್ಯಮಂತ್ರಿ ಹೇಳಿಕೆ ಕುರಿತು ಮಂಡ್ಯ ಜಿಲ್ಲೆಯ ಪಾಂಡವಪುರ ಹಾಗೂ ಮೈಸೂರಲ್ಲಿ ಶುಕ್ರವಾರ ಮಾತನಾಡಿದ ಅವರು, ನ್ಯಾಯಾಂಗ ತನಿಖೆ ಮಾಡಿದರೆ ದಾಖಲೆ ಕೊಡುವುದಾಗಿ ಕೆಂಪಣ್ಣ ಹೇಳಿದ್ದಾರೆ. ಸರ್ಕಾರದ ಕೆಳಗೆ ಗುತ್ತಿಗೆದಾರರು ಕೆಲಸ ಮಾಡಬೇಕು. ಇದೇ ಕಾರಣಕ್ಕೆ ಅವರು ಹೆದರಿದ್ದು, ತನಿಖೆ ವೇಳೆ ದಾಖಲೆ ಕೊಡುತ್ತೇನೆ ಎಂದು ಹೇಳುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಪ್ರಕರಣ, ತನಿಖೆಗೆ ಆದೇಶಿಸಿದ ಸಿಎಂ ಬೊಮ್ಮಾಯಿ!
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಂಭೀರ ಆರೋಪಗಳು ಬಂದಾಗ ಸರ್ಕಾರ ನೆಪ ಹೇಳುವ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಭಂಡತನ ಪ್ರದರ್ಶಿಸಬಾರದು. ಬದಲಿಗೆ ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ಒಳಪಡಿಸಬೇಕು. ಹೈಕೋರ್ಚ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕಿರುವ ಸಮಸ್ಯೆಯಾದರೂ ಏನು ಎಂದು ಪ್ರಶ್ನಿಸಿದರು.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಆರೋಪಕ್ಕೆ ಮುಖ್ಯಮಂತ್ರಿಗಳು ದಾಖಲೆ ಕೇಳುತ್ತಿದ್ದಾರೆ. ಗುತ್ತಿಗೆದಾರರು ತಮಗೆ ಕಿರುಕುಳ ನೀಡಬಹುದು, ಮತ್ತೆ ಕಾಮಗಾರಿ ನೀಡದಿರಬಹುದು ಎಂಬ ಕಾರಣಕ್ಕೆ ಸುಮ್ಮನಿದ್ದರು. ಆದರೆ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಿದರೆ ದಾಖಲೆ ಕೊಡಲು ಸಿದ್ಧರಿದ್ದಾರೆ. ಅದು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಶಿಕ್ಷೆಗೆ ಗುರಿಯಾಗಲು ಸಿದ್ಧ ಎಂದೂ ತಿಳಿಸಿರುವುದಾಗಿ ಸಿದ್ದರಾಮಯ್ಯ ಹೇಳಿದರು.