ಕೆಂಪಣ್ಣ ಕಾಂಗ್ರೆಸ್ಸಿನ ಕೈಗೊಂಬೆ, ನಮ್ಮ ಬಳಿಯೂ ಬತ್ತಳಿಕೆಯಿದೆ, ಎಚ್ಚರವಿರಲಿ: ಕಾರಜೋಳ

Published : Aug 27, 2022, 02:00 AM IST
ಕೆಂಪಣ್ಣ ಕಾಂಗ್ರೆಸ್ಸಿನ ಕೈಗೊಂಬೆ, ನಮ್ಮ ಬಳಿಯೂ ಬತ್ತಳಿಕೆಯಿದೆ, ಎಚ್ಚರವಿರಲಿ: ಕಾರಜೋಳ

ಸಾರಾಂಶ

ಗುತ್ತಿಗೆದಾರರ ಸಂಘಕ್ಕೆ ಕುಮ್ಮಕ್ಕು ನೀಡುತ್ತಿರುವ ಕಾಂಗ್ರೆಸ್‌ ಕೂಡಲೇ ತನ್ನ ಧೋರಣೆ ಬದಲಿಸಬೇಕು. ಕಾಂಗ್ರೆಸ್‌ ಇದೇ ಧೋರಣೆ ಮುಂದುವರೆಸಿದರೆ ಮುಂದೆ ಚುನಾವಣೆ ಮಾಡುವುದು ಬಿಟ್ಟು ಕೋರ್ಟ್‌, ಕಚೇರಿ ಸುತ್ತಾಡುವ ಸ್ಥಿತಿ ನಿರ್ಮಾಣವಾಗಬಹುದು: ಕಾರಜೋಳ 

ಬೆಂಗಳೂರು(ಆ.27):  ‘ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರ ಆರೋಪಗಳು ಆಧಾರರಹಿತ ಹಾಗೂ ರಾಜಕೀಯ ಪ್ರಾಯೋಜಿತ. ಅವರಿಗೆ ತಾಕತ್ತಿದ್ದರೆ ಆರೋಪಕ್ಕೆ ಸೂಕ್ತ ಪುರಾವೆ ನೀಡಲಿ ಅಥವಾ ಲೋಕಾಯುಕ್ತ, ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಿ. ಸುಳ್ಳು ಆರೋಪ ಮಾಡಿದರೆ, ನಮ್ಮ ಬಳಿಯೂ ಬತ್ತಳಿಕೆಯಿದೆ ಎಂಬುದರ ಬಗ್ಗೆ ಎಚ್ಚರವಿರಲಿ’ ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ, ‘ಗುತ್ತಿಗೆದಾರರ ಸಂಘಕ್ಕೆ ಕುಮ್ಮಕ್ಕು ನೀಡುತ್ತಿರುವ ಕಾಂಗ್ರೆಸ್‌ ಕೂಡಲೇ ತನ್ನ ಧೋರಣೆ ಬದಲಿಸಬೇಕು. ಕಾಂಗ್ರೆಸ್‌ ಇದೇ ಧೋರಣೆ ಮುಂದುವರೆಸಿದರೆ ಮುಂದೆ ಚುನಾವಣೆ ಮಾಡುವುದು ಬಿಟ್ಟು ಕೋರ್ಟ್‌, ಕಚೇರಿ ಸುತ್ತಾಡುವ ಸ್ಥಿತಿ ನಿರ್ಮಾಣವಾಗಬಹುದು’ ಎಂದು ಹೇಳಿದ್ದಾರೆ.

ಕಮಿಷನ್‌ ಆರೋಪ: ಕೆಂಪಣ್ಣ ಮೇಲೆ 50 ಕೋಟಿ ಮಾನನಷ್ಟ ಕೇಸ್‌ ಹಾಕುವೆ, ಮುನಿರತ್ನ

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಕೆಂಪಣ್ಣ ಅವರು ಕಳೆದ 14 ತಿಂಗಳಿನಿಂದ ಕಾಂಗ್ರೆಸ್‌ನ ಕುಮ್ಮಕ್ಕಿನಿಂದ ಅವರ ಕೈಗೊಂಬೆಯಾಗಿ ರಾಜ್ಯ ಸರಕಾರದ ವಿರುದ್ಧ ಆರೋಪಿಸುತ್ತಿದ್ದಾರೆ. ನಾವು ಸುಮಾರು 25,000 ಬಿಲ್‌ಗಳನ್ನು ಪಾವತಿಸಿದ್ದೇವೆ. ಇವುಗಳಲ್ಲಿ ಒಂದು ರು. ಲಂಚ ಕೊಡದೆ ಕೆಲಸ ಮಾಡಿರುವುದಾಗಿ ಹೇಳುವ ಒಬ್ಬ ಗುತ್ತಿಗೆದಾರರಿಲ್ಲವೇ?’ ಎಂದು ಪ್ರಶ್ನಿಸಿದರು.

‘ಲಂಚ ತೆಗೆದುಕೊಳ್ಳುವುದು ಎಷ್ಟುಅಪರಾಧವೋ ಕೊಡುವುದು ಸಹ ಅಷ್ಟೇ ಅಪರಾಧ. ತಾಕತ್ತಿದ್ದರೆ ಮಾಹಿತಿ ನೀಡಲಿ. ಸುಳ್ಳು ಆರೋಪ ಮಾಡಿದ ಕಾರಣಕ್ಕೆ ನ್ಯಾಯಾಂಗ ತನಿಖೆಗೆ ವಹಿಸಲಾಗದು. ನಿರ್ದಿಷ್ಟದಾಖಲೆ ಇದ್ದರೆ ನೀಡಲಿ. ಹೊಸದಿಲ್ಲಿಯಿಂದ ಏಜೆನ್ಸಿಯವರು ಬಂದಿದ್ದರು ಎಂದು ಹೇಳುವ ಕೆಂಪಣ್ಣ, ಅವರಿಗೆ ಏಕೆ ದಾಖಲೆ ನೀಡಲಿಲ್ಲ? ನಾನೇ ಕೇಂದ್ರ ಸರ್ಕಾರದ ಸಂಬಂಧಪಟ್ಟಸಂಸ್ಥೆಗಳಿಗೆ ತಲುಪಿಸುತ್ತೇನೆ’ ಎಂದು ಹೇಳಿದರು.

‘ಅಧಿಕಾರಿಗಳು, ಸಚಿವರು, ಶಾಸಕರೆಲ್ಲಾ ಭ್ರಷ್ಟರೆಂದು ಕೆಂಪಣ್ಣ ಆರೋಪಿಸುತ್ತಿದ್ದಾರೆ. ಹಾಗಾದರೆ ಗುತ್ತಿಗೆದಾರರೆಲ್ಲರೂ ಪ್ರತಿ ಕೆಲಸಕ್ಕೂ ಲಂಚ ಕೊಟ್ಟಿದ್ದಾರೆಂದು ಅರ್ಥವೇ? ಒಬ್ಬರೂ ಪ್ರಾಮಾಣಿಕರೇ ಇಲ್ಲವೇ? ಆರೋಪ ಮಾಡುವವರಿಗೆ ಕನಿಷ್ಠ ಜ್ಞಾನ ಇರಬೇಕು. ರಾಜಕಾರಣಿಗಳಂತೆ ಮಾತನಾಡುವುದನ್ನು ಬಿಟ್ಟು ಯಾವ ಇಲಾಖೆ, ಯಾವ ಕೆಲಸ, ಯಾವ ಶಾಸಕರು ಹಾಗೂ ಸಚಿವರು ಎಂಬುದನ್ನು ದಾಖಲೆ ಇಟ್ಟು ಮಾತನಾಡಬೇಕು. ಕೆಂಪಣ್ಣ ಅವರು ಮಾಧ್ಯಮಗಳ ಮುಂದೆ ದಾಖಲೆಗಳನ್ನು ಇಡಲಿ, ನಾನೂ ಮಾಧ್ಯಮಗಳ ಬಳಿ ಬಂದು ಮಾತನಾಡುತ್ತೇನೆ. ನಮ್ಮ ಬಳಿಯೂ ಬತ್ತಳಿಕೆಯಿದೆ, ಆ ಬಗ್ಗೆ ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ಕಮಿಷನ್‌ ಆರೋಪ ಕಾಂಗ್ರೆಸ್‌ ಟೂಲ್‌ಕಿಟ್‌ ಭಾಗ: ಸಿ.ಟಿ.ರವಿ

ಕಾಂಗ್ರೆಸ್‌ 85 ಪರ್ಸೆಂಟ್‌ ಒಪ್ಪಿಕೊಳ್ಳುವುದೇ?:

‘ಹಿಂದೆ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರು 1 ರೂ. ಬಿಡುಗಡೆಯಾದರೆ 15 ಪೈಸೆಯಷ್ಟೇ ಖರ್ಚಾಗುತ್ತಿದೆ ಎಂದಿದ್ದರು. ಅಂದರೆ ಉಳಿದ 85 ಪೈಸೆ ಗುಳುಂ ಆಗುತ್ತಿತ್ತು. ಆಗ ಕೇಂದ್ರ ಹಾಗೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಸರ್ಕಾರಗಳೇ ಇದ್ದ ಕಾರಣ ಆ ಕಾಲದಲ್ಲಿ ಶೇ.85ರಷ್ಟುಭ್ರಷ್ಟಾಚಾರವಿತ್ತು. ಹೀಗಾಗಿ ತಮ್ಮದು 85 ಪರ್ಸೆಂಟ್‌ ಎಂದು ಕಾಂಗ್ರೆಸ್‌ ಒಪ್ಪಿಕೊಳ್ಳುವುದೇ?’ ಎಂದು ಪ್ರಶ್ನಿಸಿದರು.

ವಿವಿಧ ಸರ್ಕಾರಗಳಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ಬಾಕಿ ಇರುವ ಬಿಲ್‌ ಮೊತ್ತದ ಬಗ್ಗೆ ಮಾಹಿತಿ ನೀಡಿದ ಅವರು, ಕಾಂಗ್ರೆಸ್‌ ಅವಧಿ ಮುಕ್ತಾಯವಾದ 2018ರ ಮೇ ವೇಳೆಗೆ 2,467 ಕೋಟಿ ರು. ಬಿಲ್‌ ಬಾಕಿ ಇತ್ತು. ಮೈತ್ರಿ ಸರಕಾರದಲ್ಲಿ 2019ರ ಜುಲೈ ಮಾಸಾಂತ್ಯಕ್ಕಿದ್ದ ಬಾಕಿ ಮೊತ್ತ 3733 ಕೋಟಿ ರು,. 2022ರ ಕಳೆದ ಮಾಚ್‌ರ್‍ ಅಂತ್ಯಕ್ಕೆ 7,128 ಕೋಟಿ ಬಾಕಿ ಉಳಿದಿತ್ತು ಎಂದು ವಿವರಿಸಿದರು. ಇದೀಗ ನಮ್ಮ ಸರ್ಕಾರದಲ್ಲಿ 12,752 ಕೋಟಿ ರು. ಪಾವತಿಯಾಗಿದ್ದು, ಒಟ್ಟು 25011 ಬಿಲ್‌ಗಳು ಇತ್ಯರ್ಥವಾಗಿವೆ ಎಂದು ಹೇಳಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ