
ಹುಬ್ಬಳ್ಳಿ (ಡಿ.23): ಪಾಲಕರ ವಿರೋಧದ ನಡುವೆಯೂ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿ ಗರ್ಭಿಣಿಯಾಗಿದ್ದ ಮಗಳನ್ನು ತಂದೆ ಹಾಗೂ ಕುಟುಂಬಸ್ಥರು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದ ಮರ್ಯಾದೆಗೇಡು ಕೃತ್ಯಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 18 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಈ ಘಟನೆಯನ್ನು ಖಂಡಿಸಿ ಸೋಮವಾರ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಭಾನುವಾರ ನಡೆದ ಮಾನ್ಯಾ ಪಾಟೀಲ (19) ಕೊಲೆಗೆ ಸಂಬಂಧಿಸಿದಂತೆ ಮೃತಳ ಪತಿ ವಿವೇಕಾನಂದ ದೊಡ್ಡಮನಿ ಅವರು ಮಾನ್ಯಾ ಅವರ ತಂದೆ ಪ್ರಕಾಶಗೌಡ ಪಾಟೀಲ, ಕುಟುಂಬದವರ ವಿರುದ್ಧ ದೂರು ನೀಡಿದ್ದಾರೆ. ಘಟನೆಯಲ್ಲಿ 10 ಮಂದಿ ಗಾಯಗೊಂಡಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.
ದೂರಿನಲ್ಲಿ ಏನಿದೆ?: ಮಾನ್ಯಾ ಅವರನ್ನು ಅದೇ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ವಿವೇಕಾನಂದ ಪ್ರೀತಿಸಿ ಮದುವೆಯಾಗಿದ್ದು, ಮಾನ್ಯಾ ಕುಟುಂಬದವರು ಕೋಪಗೊಂಡಿದ್ದರು. ಹಾಗಾಗಿ ಅವರು ಭಾನುವಾರ ಸಂಜೆ 5 ಗಂಟೆಗೆ ಇನಾಂವೀರಾಪುರದಲ್ಲಿ ವಿವೇಕಾನಂದನ ತಂದೆ ಮರಿಯಪ್ಪ, ಮಾವ ಸುನೀಲ ಅವರು ಬೈಕ್‌ನಲ್ಲಿ ತೆರಳುತ್ತಿದ್ದಾಗ ಟ್ರ್ಯಾಕ್ಟರ್ ಡಿಕ್ಕಿ ಹೊಡಿಸಿ ಕೊಲೆಗೆ ಯತ್ನಿಸಿದ್ದಾರೆ. ಬಳಿಕ ಗುಂಪುಗೂಡಿ, ವಿವೇಕಾನಂದರ ಮನೆಗೆ ಹೋಗಿ ಜಾತಿ ನಿಂದನೆ ಮಾಡಿದ್ದು, ವಿವೇಕಾನಂದರ ತಾಯಿ ರೇಣುಕಾ ಹಾಗೂ ಪತ್ನಿ ಮಾನ್ಯಾ ಸೇರಿದಂತೆ ಮನೆಯಲ್ಲಿದ್ದವರ ಮೇಲೆ ಕೊಡಲಿ, ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಾನ್ಯಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮೃತಪಟ್ಟ ಮಾನ್ಯಾಳ ಮರಣೋತ್ತರ ಪರೀಕ್ಷೆಯನ್ನು ಕೆಎಂಸಿಆರ್‌ಐನಲ್ಲಿ ನಡೆಸಿ ಶವವನ್ನು ಸೋಮವಾರ ಪತಿಯ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ವೇಳೆ ಹುಬ್ಬಳ್ಳಿಯಲ್ಲಿ ವಿವಿಧ ದಲಿತ ಸಂಘಟನೆಗಳು ಪಾರ್ಥೀವ ಶರೀರದ ಮೆರವಣಿಗೆ ನಡೆಸಿದವು. ಬಳಿಕ ಸ್ವಗ್ರಾಮ ಇನಾಂವೀರಾಪುರಕ್ಕೆ ತೆಗೆದುಕೊಂಡು ಹೋಗಿ ಗಂಡನ ಮನೆಯವರು ಪೊಲೀಸ್ ಸರ್ಪಗಾವಲಿನಲ್ಲಿ ಅಂತ್ಯಸಂಸ್ಕಾರ ನಡೆಸಿದರು. ಆದರೆ, ಕೂಗಳತೆಯ ದೂರದಲ್ಲಿದ್ದ ಯುವತಿ ತವರು ಮನೆಯ ಯಾರೊಬ್ಬರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ.
ಹೊಂಚು ಹಾಕಿ ಕೊಂದರು ನಾನು, ಮಾನ್ಯ 2 ವರ್ಷದಿಂದ ಪ್ರೀತಿಸುತ್ತಿದ್ದೆವು. ಆಕೆಯ ಕುಟುಂಬದವರಿಗೆ ಇಷ್ಟವಿಲ್ಲದಿದ್ದರೂ ನಾವು ಓಡಿಹೋಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದೆವು. ಇತ್ತೀಚಿಗಷ್ಟೇ ಊರಿಗೆ ವಾಪಸ್ ಬಂದಿದ್ದೆವು. ಈಗ ಹೊಂಚುಹಾಕಿ ನನ್ನ ಪತ್ನಿಯನ್ನು ಕೊಲೆ ಮಾಡಿದ್ದಾರೆ.
- ವಿವೇಕಾನಂದ, ಮೃತ ಮಾನ್ಯಾಳ ಪತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ