
ಹುಬ್ಬಳ್ಳಿ/ಧಾರವಾಡ (ಜ.09): ಇತ್ತೀಚೆಗೆ ವಿವಸ್ತ್ರ ಪ್ರಕರಣದಲ್ಲಿ ಸುದ್ದಿಯಾಗಿದ್ದ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯ ಅಸಲಿ ಮುಖ ಇದೀಗ ಸಾರ್ವಜನಿಕವಾಗಿ ಅನಾವರಣಗೊಂಡಿದೆ. ಸುಜಾತಾ ಕೇವಲ ಕಾರ್ಯಕರ್ತೆಯಲ್ಲ, ಹಣಕ್ಕಾಗಿ ಹನಿಟ್ರ್ಯಾಪ್ ಮಾಡುವ ಮತ್ತು ಮೃಗೀಯವಾಗಿ ವರ್ತಿಸುವ 'ಹೆಮ್ಮಾರಿ' ಎನ್ನುವುದಕ್ಕೆ ಸಾಕ್ಷಿಯಾಗಿ ಆಕೆಯ ಹಳೆಯ ಪೈಶಾಚಿಕ ಕೃತ್ಯದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಬೆಚ್ಚಿಬೀಳಿಸುತ್ತಿವೆ.
ಕಳೆದ ನವೆಂಬರ್ 12, 2023 ರಂದು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಸುಜಾತಾ ಮತ್ತು ಆಕೆಯ ಸಹಚರರ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿತ್ತು. ಧಾರವಾಡ ತಾಲ್ಲೂಕಿನ ತುಕಾರಾಮ್ ಎಂಬ ವ್ಯಕ್ತಿಯನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದ ಸುಜಾತಾ ತಂಡ, ಆತನನ್ನು ಅಪಹರಿಸಿ ನಾಲ್ಕು ದಿನಗಳ ಕಾಲ ಅಕ್ರಮವಾಗಿ ಕೂಡಿಹಾಕಿತ್ತು. ಈ ವೇಳೆ ತುಕಾರಾಮ್‌ನನ್ನು ವಿವಸ್ತ್ರಗೊಳಿಸಿ, ನೈಲಾನ್ ಹಗ್ಗ ಹಾಗೂ ಲಾಂಗ್‌ನಿಂದ ಅಮಾನುಷವಾಗಿ ಹಲ್ಲೆ ನಡೆಸಲಾಗಿತ್ತು.
ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಬಿಡುಗಡೆ ಮಾಡಿರುವ ಈ ವಿಡಿಯೋದಲ್ಲಿ ಸುಜಾತಾಳ ರಾಕ್ಷಸೀ ಪ್ರವೃತ್ತಿ ಎದ್ದುಕಾಣುತ್ತಿದೆ. 'ಅಮ್ಮಾ, ತಾಯಿ ಬಿಟ್ಟುಬಿಡು' ಎಂದು ಕಾಲಿಗೆ ಬಿದ್ದು ಗೋಳಾಡಿದರೂ ಕಿಂಚಿತ್ತೂ ಕರುಣೆ ತೋರದ ಸುಜಾತಾ, ಆತನ ಬಟ್ಟೆ ಬಿಚ್ಚಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಕೈಯಲ್ಲಿ ಲಾಂಗ್ ಹಿಡಿದು ಬೆದರಿಕೆ ಹಾಕುತ್ತಾ, ಆತನಿಂದ ಬರೋಬ್ಬರಿ 1.84 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಈ ಪೈಶಾಚಿಕ ಕೃತ್ಯದ ಸಂಬಂಧ ಈ ಹಿಂದೆ ಪೊಲೀಸರು ಸುಜಾತಾ ಮತ್ತು ಆಕೆಯ ಸಹಚರರನ್ನು ಬಂಧಿಸಿದ್ದರು. ಆದರೆ ಸದ್ಯ ಈಕೆ ಜಾಮೀನಿನ ಮೇಲೆ ಹೊರಗಿದ್ದು, ಈಗ ಅದೇ ಹಲ್ಲೆಯ ವಿಡಿಯೋದ ಮುಂದುವರಿದ ಭಾಗ ಲಭ್ಯವಾಗಿದೆ. ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಅಟ್ಟಹಾಸ ಮೆರೆದಿರುವ ಸುಜಾತಾಳ ಅಸಲಿ ಮುಖ ಕಂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜಕೀಯ ಪಕ್ಷದ ಹಿನ್ನೆಲೆ ಇಟ್ಟುಕೊಂಡು ಇಂತಹ ಮೃಗೀಯ ಕೃತ್ಯ ಎಸಗುತ್ತಿರುವ ಈಕೆಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ