
ಕೊಪ್ಪಳ (ಜ.09): 'ಅಜ್ಜನ ಜಾತ್ರೆ' ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು ಭಕ್ತಿ ಮತ್ತು ಸೇವೆಯ ಸಂಗಮವಾಗಿ ಮಾರ್ಪಟ್ಟಿದೆ. ಲಕ್ಷಾಂತರ ಭಕ್ತರು ಹರಿದು ಬರುತ್ತಿರುವ ಈ ಸಂದರ್ಭದಲ್ಲಿ, ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ತೋರಿದ ಸರಳತೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಎರಡನೇ ದಿನವಾದ ಮಂಗಳವಾರ (ಜ.7) ದಾಸೋಹ ಬಂದ್ ಮಾಡಿದ್ದೇ ತಡರಾತ್ರಿ. ಕಾರ್ಯಕ್ರಮದ ನಂತರವೂ ಮಹಾದಾಸೋಹ ರಾತ್ರಿ 1 ಗಂಟೆಯವರೆಗೂ ನಡೆಯಿತು. ಕಾರ್ಯಕ್ರಮದ ಬಳಿಕ ಮಹಾದಾಸೋಹದಲ್ಲಿ 12.20 ವರೆಗೂ ಶ್ರೀಗಳು ಸುತ್ತಾಡಿ ನಂತರ ತೆರಳಿದರು. ಜಾತ್ರೆಯ ಅಂಗವಾಗಿ ಹಗಲಿರುಳು ನಡೆಯುತ್ತಿರುವ ದಾಸೋಹ ಭವನಕ್ಕೆ ಭಕ್ತರ ಸಾಗರವೇ ಹರಿದುಬರುತ್ತಿತ್ತು. ನಸುಕಿನ ಜಾವದವರೆಗೂ ಭಕ್ತರು ಪ್ರಸಾದ ಸ್ವೀಕರಿಸಿದ್ದು, ಈ ವೇಳೆ ಟೇಬಲ್ ಮೇಲೆ ಎಲೆಗಳು ಮತ್ತು ಅನ್ನ ಚೆಲ್ಲಿ ಅಶುಚಿಯಾಗಿತ್ತು. ಈ ವೇಳೆ ಮಠದ ವಿದ್ಯಾರ್ಥಿ ಬಳಗವು ಈ ಟೇಬಲ್ ಅನ್ನು ಶುಚಿಗೊಳಿಸುವ ಕಾಯಕ ಮಾಡುತ್ತಿತ್ತು. ಆಗ ಅಲ್ಲಿಗೆ ಬಂದ ಶ್ರೀಗಳು, ಅದನ್ನು ಗಮನಿಸಿ ಸ್ವಚ್ಛ ಮಾಡುವ ವಿಧಾನವನ್ನು ಅವರೇ ಸ್ವತಃ ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟರು.
ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರು ಶಿಕ್ಷಣಾರ್ಥಿಗಳ ಕೈಯಲಲಿದ್ದ ಒದ್ದೆ ಬಟ್ಟೆಯನ್ನು ತೆಗೆದುಕೊಂಡು, ತಾವೇ ಸ್ವತಃ ಬಟ್ಟೆ ಹಿಂಡಿದ ಟೇಬಲ್‌ಗಳನ್ನು ಸ್ವಚ್ಛಗೊಳಿಸಲು ಮುಂದಾದರು. ಶ್ರೀಗಳ ಈ ಕಾಯಕ ಯೋಗದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, 'ಗುರುಗಳೇ ಸ್ವತಃ ಸೇವೆಯಲ್ಲಿ ತೊಡಗಿಕೊಂಡಿರುವುದು ನಮ್ಮ ಭಾಗ್ಯ' ಎಂದು ಭಕ್ತರು ಅಪಾರ ಭಕ್ತಿಯನ್ನು ಪ್ರದರ್ಶನ ಮಾಡಿದ್ದಾರೆ. ಇನ್ನು ಶ್ರೀಗಳು ಕೂಡ ಮಠದ ಪ್ರಶಿಕ್ಷಣಾರ್ಥಿಯೇ ಆಗಿದ್ದು, ಮಠದಲ್ಲಿಯೇ ಬಾಲ್ಯದಿಂದಲೇ ಶಿಕ್ಷಣ ಪಡೆದಿದ್ದಾರೆ. ಹೀಗಾಗಿ, ಮಠದ ಎಲ್ಲ ಕಾರ್ಯವೈಖರಿಗಳನ್ನೂ ಅವರು ಮಾಡಿಕೊಂಡೇ ಬಂದಿರುವ ಅವರು, ತಮ್ಮ ಸ್ವಾಮಿನಿಷ್ಠೆಯಿಂದ ಇದೀಗ ಮಠದ ಮುಖ್ಯಸ್ಥರಾಗಿದ್ದಾರೆ. ಆದರೂ, ತಾವಿನ್ನೂ ಮಠದ ಸೇವಕನೆಂದೇ ಭಾವಿಸಿಕೊಂಡು ಸಣ್ಣ ವಿದ್ಯಾರ್ಥಿಗಳೊಂದಿಗೆ ಸಮನಾಗಿ ಕೆಲಸ ಮಾಡುವ ಪ್ರವೃತ್ತಿಯನ್ನು ಆಗಾಗ ಪ್ರದರ್ಶನ ಮಾಡುತ್ತಾರೆ. ಇದೆಲ್ಲದಕ್ಕೂ ಕಾರಣ ಅವರು ಸ್ವತಃ ಇಲ್ಲಿ ವಿದ್ಯಾರ್ಥಿಯಾಗಿ ಬೆಳದು ಮಠದ ಮುಖ್ಯಸ್ಥರಾಗಿರುವುದೇ ಅವರ ಸರಳತೆ ಹಿಂದಿನ ಅಸಲಿ ಕಥೆಯಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿರುವ ಈ ಕೊಪ್ಪಳ ಗವಿಮಠದ ಶ್ರೀಗಳು ಈವರೆಗೆ ಯಾವುದೇ ರಾಜಕೀಯ ವೇದಿಕೆಯಲ್ಲಿ, ರಾಜಕಾರಣ ವಿಚಾರದಲ್ಲಿ ಭಾಗಿಯಾಗಿಲ್ಲ. ರಾಜಕಾರಣದಿಂದ ಅಂತರ ಕಾಯ್ದುಕೊಂಡಿರುವ ಅವರು, ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನಸಾಮಾನ್ಯರೊಂದಿಗೆ ಸೇರಿ ಪ್ರತಿಭಟನೆಗಳನ್ನು ಮಾಡಿ ಸರ್ಕಾರಕ್ಕೆ ವಿಚಾರಗಳನ್ನು ಮುಟ್ಟಿಸುವ ಕಾರ್ಯದಲ್ಲಿಯೂ ತೊಡಗಿದ್ದಾರೆ. ಜನರ ಅಭ್ಯುದಯಕ್ಕೆ ಸದಾ ಮುಂದಿರುವ ಗವಿಮಠ ಶ್ರೀಗಳ ಆಶೀರ್ವಚನ ವಿಡಿಯೋಗಳಲ್ಲಿನ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರೊಂದಿಗೆ ಮಧ್ಯರಾತ್ರಿ ವೇಳೆ ಮಠದ ಅನ್ನದಾಸೋಹದ ಟೇಬಲ್ ಸ್ವಚ್ಛ ಮಾಡಿದ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಇನ್ನೊಂದೆಡೆ, ಜಾತ್ರೆಯ ದಿನ ದಾಸೋಹ ಭವನದ ಮುಂದೆ ಭಕ್ತರ ಸಂಖ್ಯೆ ಅತಿಯಾದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ರಾಮ್ ಎಲ್. ಅರಸಿದ್ದಿ ಅವರು ಸ್ವತಃ ಕಣಕ್ಕಿಳಿದರು. ಜನದಟ್ಟಣೆಯನ್ನು ನಿಯಂತ್ರಿಸಲು ಅವರು ಚೇರ್ ಮೇಲೆ ನಿಂತು ಭಕ್ತರಿಗೆ ಮಾರ್ಗದರ್ಶನ ನೀಡಿದರು. ವಿಶೇಷವೆಂದರೆ, ಗಂಟೆಗಳ ಕಾಲ ಚೇರ್ ಮೇಲೆ ನಿಂತೇ ಕರ್ತವ್ಯ ನಿರ್ವಹಿಸಿದ ಅವರು, ತುರ್ತು ಕಡತಗಳಿಗೆ (Files) ಅಲ್ಲಿಯೇ ಸಹಿ ಹಾಕುವ ಮೂಲಕ ತಮ್ಮ ವೃತ್ತಿಪರತೆಯನ್ನು ಮೆರೆದರು. ಪೊಲೀಸ್ ಇಲಾಖೆಯು ತಕ್ಷಣವೇ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸುವ್ಯವಸ್ಥಿತವಾಗಿ ಭಕ್ತರು ದರ್ಶನ ಹಾಗೂ ಪ್ರಸಾದ ಪಡೆಯಲು ಅನುವು ಮಾಡಿಕೊಟ್ಟಿತು. ಶ್ರೀಗಳ ಸರಳತೆ ಮತ್ತು ಎಸ್ಪಿಯವರ ಸಮಯಪ್ರಜ್ಞೆ ಈ ಬಾರಿಯ ಗವಿಸಿದ್ದೇಶ್ವರ ಜಾತ್ರೆಯ ವಿಶೇಷ ಆಕರ್ಷಣೆಯಾಗಿ ಮೂಡಿಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ