
ತುಮಕೂರು (ಜ.09): ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಮುಗಿಸಿ ಸುಖಕರವಾಗಿ ನಾಡಿಗೆ ಮರಳುತ್ತಿದ್ದ ಮಾಲಾಧಾರಿಗಳ ಬದುಕಿನಲ್ಲಿ ವಿಧಿ ವಿಲಕ್ಷಣವಾಗಿ ಆಟವಾಡಿದೆ. ಶಬರಿಮಲೆಯಿಂದ ವಾಪಸ್ ಕೊಪ್ಪಳಕ್ಕೆ ತೆರಳುತ್ತಿದ್ದ ಕ್ರೂಸರ್ ವಾಹನವು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ, 7 ವರ್ಷದ ಬಾಲಕಿ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತುಮಕೂರು ಜಿಲ್ಲೆಯ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾವಿ ಕ್ರಾಸ್ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದೆ.
ಕೊಪ್ಪಳ ಜಿಲ್ಲೆಯ ಕುಕ್ಕನೂರು ಹಾಗೂ ಗದ್ದಿಗೆರೆ ತಾಂಡಾದ ಒಟ್ಟು 10 ಮಾಲಾಧಾರಿಗಳು ಜನವರಿ 5 ರಂದು ಶಬರಿಮಲೆಗೆ ತೆರಳಿದ್ದರು. ಬುಧವಾರವಷ್ಟೇ ಅಯ್ಯಪ್ಪ ಸ್ವಾಮಿಯ ದರ್ಶನ ಮುಗಿಸಿ, ಗುರುವಾರ ಮಧ್ಯಾಹ್ನ ತಮಿಳುನಾಡಿನ ಪಳನಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ಬೆಂಗಳೂರು ಮಾರ್ಗವಾಗಿ ಕೊಪ್ಪಳಕ್ಕೆ ತೆರಳುತ್ತಿದ್ದಾಗ, ಇಂದು ಬೆಳಗಿನ ಜಾವ ಸುಮಾರು 5.30ಕ್ಕೆ ಬೆಳ್ಳಾವಿ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಇವರಿದ್ದ ಕ್ರೂಸರ್ ವಾಹನ ಹಿಂಬದಿಯಿಂದ ವೇಗವಾಗಿ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಸಾಕ್ಷಿ (7 ವರ್ಷ), ಮಾರುತಪ್ಪ (45 ವರ್ಷ), ವೆಂಕಟೇಶ್ (30 ವರ್ಷ) ಮತ್ತು ಗವಿಸಿದ್ದಪ್ಪ (28 ವರ್ಷ) ಎಂಬುವವರು ಮೃತಪಟ್ಟಿದ್ದಾರೆ. ಇವರೆಲ್ಲರೂ ಕೊಪ್ಪಳ ಜಿಲ್ಲೆಯ ಮೂಲದವರು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಇನ್ನು ಅಪಘಾತದ ಸ್ಥಳದಲ್ಲಿ ಕ್ರೂಸರ್ ಮುಂಭಾಗ ನಜ್ಜುಗುಜ್ಜಾಗಿದ್ದು, ಇದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ನಾಲ್ವರು ಮೃತರಾದ ಬೆನ್ನಲ್ಲಿಯೇ ಆಸ್ಪತ್ರೆಗಳಲ್ಲಿರುವ ಅವರ ಸಂಬಂಧಿಕರು ದೇವರ ದರ್ಶನಕ್ಕೆ ಹೋಗಿ ಕುಟುಂಬಸ್ಥರನ್ನು ಕಳೆದುಕೊಂಡಿದ್ದಕ್ಕೆ ಕಣ್ಣೀರಿಡುತ್ತಿದ್ದಾರೆ.
ಅಪಘಾತದಲ್ಲಿ ಏಳು ವರ್ಷದ ಪುತ್ರಿ ಸಾಕ್ಷಿಯನ್ನು ಕಳೆದುಕೊಂಡ ತಂದೆ ಹುಲಿಗಪ್ಪ ಅವರ ಆರ್ತನಾದ ಮುಗಿಲು ಮುಟ್ಟಿತ್ತು. 'ಮಗಳು ನನ್ನ ಪಕ್ಕದಲ್ಲೇ ಮಲಗಿದ್ದಳು, ಅಪಘಾತ ಹೇಗಾಯಿತು ಎಂದು ಗೊತ್ತಾಗಲಿಲ್ಲ. ಒಂದನೇ ತರಗತಿ ಓದುತ್ತಿದ್ದ ಮಗಳಿಗೆ ಒಳ್ಳೆಯದಾಗಲಿ ಎಂದು ಎರಡನೇ ಬಾರಿ ಶಬರಿಮಲೆಗೆ ಕರೆದೊಯ್ದಿದ್ದೆ. ಆದರೆ ದೇವರು ಇಂತಹ ಶಿಕ್ಷೆ ನೀಡಬಾರದಿತ್ತು' ಎಂದು ಕಣ್ಣೀರಿಟ್ಟಿದ್ದಾರೆ.
ಗಾಯಾಳುಗಳ ಸ್ಥಿತಿ: ವಾಹನದಲ್ಲಿದ್ದ ಚಾಲಕ ಸೇರಿದಂತೆ ಶ್ರೀನಾಥ್, ಪ್ರದೀಪ್ ಕುಮಾರ್, ರಾಜಪ್ಪ, ಹುಲಿಗಪ್ಪ, ರಾಕೇಶ್, ತಿರುಪತಿ, ಶ್ರೀನಿವಾಸ್ ಮತ್ತು ಪ್ರವೀಣ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜಪ್ಪ ಎಂಬುವವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಕೋರಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ