ಗರ್ಭಿಣಿಯರ ಮನೆಗೇ ಊಟ ಕೊಡಿ: ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ

By Kannadaprabha NewsFirst Published Mar 26, 2022, 3:30 AM IST
Highlights

ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರು ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರಕ್ಕೆ ತೆರಳಿ ಪೌಷ್ಟಿಕ ಆಹಾರ ಪಡೆದುಕೊಳ್ಳುವ ಆದೇಶಕ್ಕೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆಗಿದ್ದು, ನಿಯಮವನ್ನು ಸರಿಪಡಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಸೂಚಿಸಿದ್ದಾರೆ.

ವಿಧಾನಸಭೆ (ಮಾ.26): ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರು (Pregnant) ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರಕ್ಕೆ ತೆರಳಿ ಪೌಷ್ಟಿಕ ಆಹಾರ ಪಡೆದುಕೊಳ್ಳುವ ಆದೇಶಕ್ಕೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಗರಂ ಆಗಿದ್ದು, ನಿಯಮವನ್ನು ಸರಿಪಡಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಸೂಚಿಸಿದ್ದಾರೆ.

ಶುಕ್ರವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ (Congress) ಸದಸ್ಯ ರಾಜೇಗೌಡ (Rajegowda), ಸರ್ಕಾರದ ನಿಯಮದಿಂದ ಮಲೆನಾಡು ಭಾಗದಲ್ಲಿ ಗರ್ಭಿಣಿಯರು, ಬಾಣಂತಿಯರು ಊಟಕ್ಕಾಗಿ 2-3 ಕಿ.ಮೀ. ದೂರ ಹೋಗಬೇಕಾಗಿದೆ. ಕಚ್ಚಾರಸ್ತೆಯಲ್ಲಿ ಪ್ರತಿನಿತ್ಯ ಬರಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್‌, ಈ ಮೊದಲು ಗರ್ಭಿಣಿಯರ, ಬಾಣಂತಿಯರ ಮನೆಗೆ ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು. ಆದರೆ, ಮನೆಯಲ್ಲಿ ಇತರೆ ಸದಸ್ಯರು ಅದನ್ನು ಸೇವಿಸುತ್ತಾರೆ ಎಂಬ ಕಾರಣಕ್ಕಾಗಿ 2017ರಲ್ಲಿ ನಿಯಮ ಬದಲಾವಣೆ ಮಾಡಲಾಯಿತು. ಅಧಿಕಾರಿಗಳ ವರದಿ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪಠ್ಯದಲ್ಲಿ ಭಗವದ್ಗೀತೆ ಪರ-ವಿರೋಧದ ಮಧ್ಯೆ ವಿಶ್ವೇಶ್ವರ ಹೆಗಡೆ ಕಾಗೇರಿ ಎಂಟ್ರಿ, ಏನು ಹೇಳಿದ್ರು?

ಆಗ ಸಭಾಧ್ಯಕ್ಷರು ಮಧ್ಯಪ್ರವೇಶಿಸಿ, ಗರ್ಭಿಣಿಯರು, ಬಾಣಂತಿಯರು ಅಂಗನವಾಡಿಗೆ ಹೋಗಿ ಊಟ ಮಾಡಿಕೊಂಡು ಬರಬೇಕು ಎಂದರೆ ಹೇಗೆ? ಅದು ಸಾಧ್ಯವಾಗುತ್ತಾ ಇಲ್ಲವೋ ಎಂಬುದು ಸಾಮಾನ್ಯ ಜ್ಞಾನ ಇಲ್ಲವೇ? ಕಾಮನ್‌ಸೆನ್ಸ್‌ ಇರುವವರು ಯಾರೂ ಇಂತಹ ಆದೇಶ ಹೊರಡಿಸುವುದಿಲ್ಲ. ಬಾಣಂತಿಯರು ಹಾಸಿಗೆಯಿಂದ ಏಳಲು ಎಷ್ಟುಸಮಯ ಬೇಕು ಎಂಬುದು ನಮಗೆಲ್ಲಾ ಗೊತ್ತಿದೆ. ವರದಿಯಲ್ಲಿ ಸ್ವಾರ್ಥ ಇರಬಹುದು. ಒಂದು ವೇಳೆ ಕೇಂದ್ರದ ಮಾರ್ಗಸೂಚಿ ಇದ್ದರೆ ಕೇಂದ್ರಕ್ಕೆ ಪತ್ರ ಬರೆಯಿರಿ. ಕೇಂದ್ರದಲ್ಲಿ ಕುಳಿತುಕೊಂಡವರಿಗೆ ವ್ಯವಹಾರಿಕ ಜ್ಞಾನ ಇರುವುದಿಲ್ಲವೇ? ತಕ್ಷಣ ಆದೇಶವನ್ನು ಬದಲಿಸಬೇಕು ಎಂದು ಸೂಚಿಸಿದರು.

ಕಾಂಗ್ರೆಸ್‌ ಸದಸ್ಯ ರಮೇಶ್‌ ಕುಮಾರ್‌ ಮಾತನಾಡಿ, ನಿಮ್ಮ ನಿಲುವಿಗೆ ಅಭಿನಂದಿಸುತ್ತೇನೆ. ಮಾನವೀಯತೆಯಿಂದ ಅನುಕೂಲ ಮಾಡಿಕೊಡಬೇಕು. ಅಧಿಕಾರಿಗಳು ಕಸಾಯಿಖಾನೆಯಲ್ಲೂ ಇರಲು ನಾಲಾಯಕ್‌. ಇವರಿಗಿಂತ ಕಸಾಯಿಖಾನೆಯಲ್ಲಿರುವವರೇ ಉತ್ತಮ. ಅವರಿಗೆ ಮಾನವೀಯತೆ ಇರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಶಾಸಕಿಯರಾದ ಅಂಜಲಿ ನಿಂಬಾಳ್ಕರ್‌, ರೂಪಕಲಾ ಅವರು ಗರ್ಭಿಣಿಯರು, ಬಾಣಂತಿಯರಿಗೆ ನೀಡುವ ಪೌಷ್ಟಿಕ ಆಹಾರದ ನ್ಯೂನತೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು. ಸಭಾಧ್ಯಕ್ಷರ ಮತ್ತು ಶಾಸಕರ ಒತ್ತಾಯಕ್ಕೆ ಮಣಿದ ಸಚಿವರು, ಈ ವ್ಯವಸ್ಥೆಯನ್ನು ಕೊನೆಗಾಣಿಸಿ, ಬದಲಾವಣೆ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.

Karnataka Assembly Session: ಸದನದಲ್ಲಿ RSS ಬಗ್ಗೆ ಘೋಷಣೆ: ಸ್ಪೀಕರ್‌ ಗರಂ

ಸರ್ಕಾರದ ವಿರುದ್ಧ ಕಾಗೇರಿ ಅಸಮಾಧಾನ: ವಿವಿಧ ವಸತಿ ಯೋಜನೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ನಿಗದಿಗೊಳಿಸಿರುವ ಆದಾಯ ಮಿತಿಯ ಪ್ರಮಾಣವನ್ನು ಹೆಚ್ಚಿಸುವ ಕುರಿತು ಶೀಘ್ರದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದು ವಸತಿ ಸಚಿವ. ವಿ.ಸೋಮಣ್ಣ ಅಶ್ವಾಸನೆ ನೀಡಿದ್ದಾರೆ. ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರಶ್ನೆಗೆ ಉತ್ತರ ನೀಡಿದ ಅವರು, ವಸತಿ ಯೋಜನೆಯಡಿ ಆಯ್ಕೆ ಮಾಡಲು ಗ್ರಾಮೀಣ ಭಾಗದಲ್ಲಿ ಆದಾಯ ಮಿತಿಯನ್ನು 32 ಸಾವಿರ ರು. ಮತ್ತು ನಗರ ಪ್ರದೇಶದಲ್ಲಿ 87 ಸಾವಿರ ರು.ನಿಗದಿಗೊಳಿಸಲಾಗಿದೆ. 

ಸರ್ಕಾರದ ಆದೇಶದಲ್ಲಿ 42 ಸಾವಿರ ರು.ಗಿಂತ ಕಡಿಮೆ ಮಾಡುವಂತಿಲ್ಲ ಎಂಬ ಕಾರಣಕ್ಕಾಗಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಗ್ರಾಮೀಣ ಭಾಗದ ಆದಾಯ ಮಿತಿಯನ್ನು 1.20 ಲಕ್ಷ ರು.ಗೆ ಮತ್ತು ನಗರ ಪ್ರದೇಶದ ಆದಾಯ ಮಿತಿಯನ್ನು 3 ಲಕ್ಷ ರು.ಗೆ ಹೆಚ್ಚಳ ಮಾಡಲಾಗುವುದು. ಶೀಘ್ರದಲ್ಲಿಯೇ ಈ ಕುರಿತು ಆದೇಶ ಹೊರಡಿಸಲಾಗುವುದು ಎಂದರು. ಈ ವೇಳೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸುಳ್ಳು ಪ್ರಮಾಣ ಪತ್ರಗಳನ್ನು ಕೊಟ್ಟರಾಯಿತು. ಈಗ ನಡೆಯುತ್ತಿರುವುದು ಅದೇ ತಾನೆ. ಸುಳ್ಳು ದಾಖಲೆ ನೀಡಿದರೆ ಫಲಾನುಭವಿಗಳು ಹೇಗೋ ಆಯ್ಕೆಯಾಗುತ್ತಾರೆ ಎಂದು ಸರ್ಕಾರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

click me!