
ಬೆಂಗಳೂರು (ಮಾ.26): ಬೆಂಗಳೂರು ಉತ್ತರ ತಾಲೂಕಿನ ಉಪ ವಿಭಾಧಿಕಾರಿ ಆಗಿದ್ದಾಗ 37 ಎಕರೆ ಸರ್ಕಾರಿ ಗೋಮಾಳವನ್ನು ಖಾಸಗಿಯವರಿಗೆ ಅಕ್ರಮವಾಗಿ ಪರಭಾರೆ ಮಾಡಿದ ಆರೋಪ ಹೊತ್ತಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ರಂಗನಾಥ್ ವಿರುದ್ಧ ಎಸಿಬಿ ತನಿಖೆ ಶುರು ಮಾಡಿದೆ. ಶುಕ್ರವಾರ ಅಧಿಕಾರಿಯ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ, ಬೇನಾಮಿ ಹೆಸರಿನಲ್ಲಿ ಸಹಕಾರಿ ಬ್ಯಾಂಕ್‌ವೊಂದರಲ್ಲಿ ಅವರು ಕೋಟ್ಯಂತರ ರು. ಹಣ ವರ್ಗಾವಣೆ ಮಾಡಿರುವ ಸಂಗತಿಯನ್ನು ಎಸಿಬಿ ಪತ್ತೆ ಹಚ್ಚಿದೆ.
ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ಪ್ರಧಾನ ವ್ಯವಸ್ಥಾಪಕ ರಂಗನಾಥ್ ಅವರಿಗೆ ಸೇರಿದ ನ್ಯಾಯಾಂಗ ಬಡಾವಣೆಯ ಮನೆ, ದೊಡ್ಡಬಳ್ಳಾಪುರದ ದತ್ತಾತ್ರೇಯ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಮನೆ, ದೊಡ್ಡಬಳ್ಳಾಪುರ ಟೌನ್ ಕನಕಶ್ರೀ ಟ್ರಸ್ಟ್ ಕಚೇರಿ, ಅಕ್ಷರ ಪಬ್ಲಿಕ್ ಶಾಲೆ, ನಾಗರಬಾವಿಯಲ್ಲಿ ಅವರ ಸಂಬಂಧಿಕರ ಮನೆ ಹಾಗೂ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಬೆಂಗಳೂರು ಉತ್ತರ ತಾಲೂಕಿನ ಉಪ ವಿಭಾಗಾಧಿಕಾರಿ ಕಚೇರಿ ಸೇರಿದಂತೆ 6 ಸ್ಥಳಗಳಲ್ಲಿ ಎಸಿಬಿ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ACB Raids: ನನ್ನ ಮೇಲಿನ ದಾಳಿಗೆ ವಿಶ್ವನಾಥೇ ಕಾರಣ: ಮೋಹನ್
ಈ ವೇಳೆ ಅರುಣಾ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಮೂರು ವರ್ಷಗಳಲ್ಲಿ ರಂಗನಾಥ್ ಬೇನಾಮಿ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ವರ್ಗಾವಣೆ ಮಾಡಿರುವುದು ಕಂಡುಬಂದಿದೆ. ಅಲ್ಲದೆ ಬೆಂಗಳೂರು ಉತ್ತರ ತಾಲೂಕಿನ ಎಸಿ ಕಚೇರಿ ತಪಾಸಣೆ ವೇಳೆ ಭೂ ಮಾಫಿಯಾದೊಂದಿಗೆ ಶಾಮೀಲಾಗಿ ಖಾಸಗಿ ವ್ಯಕ್ತಿಗಳಿಗೆ ಜಮೀನು ಪರಭಾರೆಯನ್ನು ಮಾಡಿರುವ ಕುರಿತಂತೆ 16 ಕಡತಗಳನ್ನು ಜಪ್ತಿ ಮಾಡಲಾಗಿದೆ. ರಂಗನಾಥ್ ಅಕ್ರಮ ಸಂಪತ್ತಿನ ಕುರಿತು ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ರಂಗನಾಥ್ ಮನೆಯಲ್ಲಿ ಹಣ, ಚಿನ್ನ ಮತ್ತು ಬೆಳ್ಳಿ ವಸ್ತುಗಳು ಸಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಏನಿದು ಆರೋಪ?: ಬೆಂಗಳೂರು ಉತ್ತರ ತಾಲೂಕಿನ ಎಸಿ ಆಗಿದ್ದ ರಂಗನಾಥ, 2020ರ ಮಾ.26ರಿಂದ ಜೂನ್ ವರೆಗೆ ಬೆಂಗಳೂರು ಉತ್ತರ ತಾಲೂಕಿನ ಕೆಲ ಹಳ್ಳಿಗಳಲ್ಲಿ 37 ಎಕರೆ 10 ಗುಂಟೆ ಸರ್ಕಾರಿ ಗೋಮಾಳವನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿದ್ದರು. ಈ ಭೂಮಿ ಪರಭಾರೆಗೂ ಮುನ್ನ ಸಂಬಂಧಪಟ್ಟತಹಶೀಲ್ದಾರ್ ಅವರಿಂದ ರಂಗನಾಥ್ ವರದಿ ಸಹ ಪಡೆಯದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದರು. ಅದರಲ್ಲೂ ಭೂಮಿ ಮಂಜೂರು ಪ್ರಕ್ರಿಯೆಯನ್ನು ಕೇವಲ ಮೂರು ದಿನದಲ್ಲೇ ಅವರು ಮುಗಿಸಿದ್ದು, ಅನುಮಾನಕ್ಕೆ ಕಾರಣವಾಗಿತ್ತು. ಈ ಅಕ್ರಮದ ಹಿಂದೆ ಭೂ ಮಾಫಿಯಾದ ಕೈವಾಡವಿದೆ ಎಂದು ಆರೋಪ ಕೇಳಿ ಬಂದಿತ್ತು. ಈ ಆರೋಪ ಹಿನ್ನೆಲೆಯಲ್ಲಿ ರಂಗನಾಥ್ ಅವರನ್ನು ಅಮಾನತುಗೊಳಿಸಿದ ಸರ್ಕಾರವು, ಭ್ರಷ್ಟಾಚಾರದ ಬಗ್ಗೆ ಎಸಿಬಿ ತನಿಖೆದೆ ಆದೇಶಿಸಿತ್ತು. ಅಂತೆಯೇ ಈಗ ಎಸಿಪಿ ತನಿಖೆ ಶುರು ಮಾಡಿದೆ.
ACB Raids: ಲಂಚಬಾಕರ ಬಳಿ ಇನ್ನೂ ಇದೆ ಬೆಟ್ಟದಷ್ಟು ಆಸ್ತಿ..!
ಬಿಡಿಎ ಬ್ರೋಕರ್‌ಗಳಿಗೆ ಮತ್ತೊಂದು ಸಂಕಷ್ಟ: ಭೂ ಹಗರಣದ ಸುಳಿಗೆ ಸಿಲುಕಿ ಎಸಿಬಿ ಗಾಳಕ್ಕೆ ಬಿದ್ದಿರುವ ಒಂಭತ್ತು ಮಂದಿ ಬಿಡಿಎ ದಲ್ಲಾಳಿಗಳಿಗೆ ಈಗ ಆದಾಯ ತೆರಿಗೆ(ಐಟಿ) ಹಾಗೂ ಜಾರಿ ನಿರ್ದೇಶನಾಲಯದ(ಇಡಿ) ತನಿಖೆಯ ಉರುಳು ಸುತ್ತಿಕೊಳ್ಳುವ ಸಾಧ್ಯತೆಯಿದೆ. ದಲ್ಲಾಳಿಗಳ ಮನೆಗಳ ಮೇಲೆ ನಡೆದ ದಾಳಿ ವೇಳೆ ಪತ್ತೆಯಾಗಿರುವ ಚಿನ್ನಾಭರಣ ಹಾಗೂ ಹಣದ ಸಂಬಂಧ ಕೇಂದ್ರ ತನಿಖಾ ಸಂಸ್ಥೆಗಳಿಗೆ ಎಸಿಬಿ ವರದಿ ಸಲ್ಲಿಸಲಿದೆ. ಈ ಮಾಹಿತಿ ಆಧರಿಸಿ ಕೇಂದ್ರ ತನಿಖಾ ಸಂಸ್ಥೆಗಳು ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಾವು ಬಿಡಿಎ ಅವ್ಯವಹಾರಕ್ಕೆ ಸಂಬಂಧಪಟ್ಟದಾಖಲೆಗಳನ್ನು ಮಾತ್ರ ಬಿಡಿಎ ದಲ್ಲಾಳಿಗಳ ಮನೆಯಲ್ಲಿ ಜಪ್ತಿ ಮಾಡಿದ್ದೇವೆ. ನಮ್ಮ ಕಾರ್ಯಾಚರಣೆ ವೇಳೆ ಸಿಕ್ಕಿದ ಚಿನ್ನ, ಬೆಳ್ಳಿ ಹಾಗೂ ಹಣದ ಕುರಿತು ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲಾಗುತ್ತದೆ. ಮುಂದಿನ ಕಾನೂನು ಕ್ರಮವನ್ನು ಆ ಇಲಾಖೆಗಳು ಜರುಗಿಸಲಿವೆ ಎಂದು ಎಸಿಬಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ