Weekend Curfew: ರಾಜ್ಯಾದ್ಯಂತ ಉತ್ತಮ ಬೆಂಬಲ: ವ್ಯಾಪಾರವಿಲ್ಲದೆ ಕಂಗಾಲಾದ ಹೋಟೆಲ್‌ ಮಾಲೀಕರು..!

By Suvarna NewsFirst Published Jan 8, 2022, 1:09 PM IST
Highlights

*   ಬಸ್ ನಿಲ್ದಾಣಕ್ಕೂ ತಟ್ಟಿದ ವೀಕೆಂಡ್ ಕರ್ಫ್ಯೂ ಬಿಸಿ 
*  ವೀಕೆಂಡ್‌ ಕರ್ಫ್ಯೂಗೆ ತಲೆಕೆಡಿಸಿಕೊಳ್ಳದ ಪೊಲೀಸರು
*  ಸುಬ್ರಹ್ಮಣ್ಯ ಸಂಪೂರ್ಣ ಬಂದ್ 
 

ಬೆಂಗಳೂರು(ಜ.08): ಕೊರೋನಾ(Coronavirus) ಮತ್ತು ‌ಒಮಿಕ್ರಾನ್(Omicron) ಹೆಚ್ಚಳವಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವೀಕೆಂಡ್‌ ಕರ್ಫ್ಯೂ(Weekend Curfew) ಜಾರಿಯಲ್ಲಿದೆ. ರಾಜ್ಯದ ಹಲವೆಡೆ ವೀಕೆಂಡ್ ಕರ್ಫ್ಯೂಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಆದರೆ, ವೀಕೆಂಡ್‌ ಕರ್ಫ್ಯೂ ನಡುವೆಯೂ ರಾಯಚೂರಿನಲ್ಲಿ(Raichur) ಜನರು ಓಡಾಟ ನಡೆಸಿದ್ದಾರೆ. 

ನಗರದ ರೈಲ್ವೆ ‌ನಿಲ್ದಾಣದ ಬಳಿ ನೂರಾರು ಕೂಲಿ ಕಾರ್ಮಿಕರು ಕೆಲಸವಿಲ್ಲದೆ ನಿಂತಿದ್ದಾರೆ. ಆಂಧ್ರದ ಗಡಿಯಿಂದ ಬಂದ ನೂರಾರು ಕೂಲಿ ಕಾರ್ಮಿಕರು ಗುಂಪು- ಗುಂಪಾಗಿ ಓಡಾಟ ನಡೆಸಿದ್ದಾರೆ. ಪೊಲೀಸರು ಸೂಚನೆ ‌ನೀಡಿದ್ರೂ ಕೂಲಿ ‌ಕಾರ್ಮಿಕರು ಮಾತ್ರ ಓಡಾಟ ನಿಲ್ಲಿಸಿಲ್ಲ ಎಂದು ತಿಳಿದು ಬಂದಿದೆ.

Weekend Curfew in Shivamogga: ಆಡಳಿತ ಪಕ್ಷದ ಶಾಸಕರ ಕಾಲೇಜಲ್ಲೇ ಕೋವಿಡ್‌ ರೂಲ್ಸ್‌ ಬ್ರೇಕ್‌

ವ್ಯಾಪಾರವಿಲ್ಲದೆ ಕಂಗಲಾದ ಹೋಟೆಲ್ ಮಾಲೀಕರು

ತುಮಕೂರು(Tumakuru): ವೀಕೆಂಡ್‌ ಕರ್ಫ್ಯೂ ಮಧ್ಯೆ ಸಾರಿಗೆ ಬಸ್‌ಗಳಿಗೆ ಅವಕಾಶ ನೀಡಲಾಗಿಲದೆ. ಆದರೆ, ಬಸ್‌ ನಿಲ್ದಾಣದಲ್ಲಿ ಬಸ್‌ಗಳಿವೆ ಆದರೆ ಪ್ರಯಾಣಿಕರಿಲ್ಲ(Passengers). ಹೋಟೆಲ್ ತೆರೆದರೂ ಕೂಡ ವ್ಯಾಪಾರವಾಗುತ್ತಿಲ್ಲ. ಊಟ ಪಾರ್ಸೆಲ್ ತೆಗೆದುಕೊಂಡು ಅವಕಾಶ ಇದ್ದರೂ ಕೂಡ ಜನರು ಮಾತ್ರ ಹೋಟೆಲ್‌ಗಳತ್ತ ಮುಖ ಮಾಡುತ್ತಿಲ್ಲ. ವ್ಯಾಪಾರವಿಲ್ಲದೆ ಹೋಟೆಲ್ ಮಾಲೀಕರು ಕಂಗಲಾಗಿದ್ದಾರೆ. ಊಟ ಪಾರ್ಸೆಲ್ ಕೊಡಲು ಸಿದ್ಧತೆ ಮಾಡಿಕೊಂಡಿದ್ದೇವೆ, ಪಾರ್ಸೆಲ್ ತೆಗೆದುಕೊಂಡು‌ ಹೋಗಲು ಗ್ರಾಹಕರು ಬರುತ್ತಿಲ್ಲ. ಹೀಗಾಗಿ ನಾಳೆ ಹೋಟೆಲ್ ಬಂದ್ ಮಾಡಲು ಚಿಂತನೆ ಮಾಡಿದ್ದೇವೆ.‌ ಹೀಗಾದರೆ ಸಪ್ಲೈಯರ್ಸ್‌ಗೆ ಸಂಬಂಳ ಕೊಡಲೂ ಆಗುತ್ತಿಲ್ಲ. ಈ ರೀತಿ ಪದೇ ಪದೇ ಲಾಕ್‌ಡೌನ್, ಕರ್ಫ್ಯೂ ಆದ್ರೆ ಏನ್ಮಾಡೋದು? ಊಟ ಎಲ್ಲಾ ಹಾಗೇ ಉಳಿದಿದೆ ಅಂತ ಅಶೋಕ ಹೋಟೆಲ್ ಮಾಲೀಕ ಪ್ರಸಾದ್ ಹೇಳಿದ್ದಾರೆ.

ತುಮಕೂರಿನ ಮಾರುಕಟ್ಟೆ ಹೊರತು ಪಡಿಸಿ ಬೇರೆಲ್ಲಡೆ ಜನ ಓಡಾಟ ವಿರಳವಾಗಿದೆ. ಜನರ ಓಡಾಟವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ. 

ಮಂಡ್ಯ(Mandya):  ವೀಕೆಂಡ್‌ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ನಗರದಲ್ಲಿ  ನಗರಸಭೆ ಅಧಿಕಾರಿಗಳು ಫೀಲ್ಡ್‌ಗಿಳಿದಿದ್ದಾರೆ. ನಗರದ ಹೋಟೇಲ್‌ಗಳಿಗೆ ಎಂಟ್ರಿ ಕೊಟ್ಟು ಲಸಿಕೆ(Vaccine) ಪಡೆದಿರುವ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ವೇಳೆ ರಾಘವೇಂದ್ರ ಕ್ಯಾಂಟೀನ್ ಮಾಲೀಕ ಮೂರು ಲಸಿಕೆ ಹಾಕಿಸಿಕೊಂಡಿರುವುದಾಗಿ ಸುಳ್ಳು ಹೇಳಿದ ಪ್ರಸಂಗ ನಡೆದಿದೆ. ಮೊಬೈಲ್ ಹಾಗೂ ಆಧಾರ್ ಸಂಖ್ಯೆ ಆಧಾರಿಸಿ ಪರಿಶೀಲನೆ ಮಾಡಲಾಗಿದ್ದು ಪರಿಶೀಲನೆ ವೇಳೆ ಲಸಿಕೆ ಹಾಕಿಸಿಕೊಳ್ಳದಿರುವುದು ಪತ್ತೆಯಾಗಿದೆ. ಕೊನೆಗೆ ಲಸಿಕೆ ಹಾಕಿಸಲು ನಗರಸಭೆ ಆಯುಕ್ತರ ವಾಹನದಲ್ಲೇ ರಾಘವೇಂದ್ರ ಕ್ಯಾಂಟೀನ್ ಮಾಲೀಕರನ್ನ ಕರೆದೊಯ್ಯಲಾಗಿದೆ.

ಕೊಪ್ಪಳ:  ಕೊಪ್ಪಳದಲ್ಲಿ(Koppal) ಬಸ್ ಸಂಚಾರ ಎಂದಿನಂತೆ ಇದೆ. ಬಸ್ ಸಂಚಾರ ಇದ್ದರೂ ಕೂಡ ಪ್ರಯಾಣಿಕರ ಕೊರತೆ ಕಾಡುತ್ತಿದೆ. ವೀಕೆಂಡ್ ಕರ್ಫ್ಯೂ ಹಿನ್ನಲೆಯಲ್ಲಿ ಪ್ರಯಾಣಿಕರ ಕೊರತೆ ಉಂಟಾಗಿದೆ ಎಂದು ತಿಳಿದು ಬಂದಿದೆ. ಪ್ರಯಾಣಿಕರಿಲ್ಲದೆ ಬಸ್‌ಗಳು ಬಸ್ ಸ್ಟ್ಯಾಂಡ್‌ನಲ್ಲಿಯೇ ನಿಂತಿವೆ. 

ಕೋಲಾರದಲ್ಲಿ ವೀಕೆಂಡ್ ಕರ್ಫ್ಯೂ ಸಕ್ಸಸ್ 

ಕೋಲಾರ: ಕೋಲಾರದಲ್ಲಿ(Kolar) ವೀಕೆಂಡ್ ಕರ್ಫ್ಯೂ ಸಕ್ಸಸ್ ಆಗಿದೆ. ನಗರದ ರಸ್ತೆಗಳಲ್ಲೇ ಖಾಲಿ ಖಾಲಿಯಾಗಿದ್ದು ಪೊಲೀಸರು ಗಸ್ತು ತಿರುಗುತ್ತಿದ್ದಾರೆ.  ಆದ್ರೆ ಹೋಟೆಲ್ ಮಾಲೀಕರ ಗೋಳು ಮಾತ್ರ ಯಾರೂ ಕೇಳೋರಿಲ್ಲದಾಗಿದೆ. ಮಾಡಿರುವ ಅಡಿಗೆ ವ್ಯಾಪಾರ ಆಗದೆ ಹೋಟೆಲ್‌ ಮಾಲೀಕರು ಪರದಾಟ ನಡೆಸುತ್ತಿದ್ದಾರೆ. ವ್ಯಾಪಾರದಲ್ಲಿ ಶೇ.60 % ಆದಾಯ ಇಳಿಮುಖವಾಗಿದೆ. ಮಾಡಿರುವ ಅಡಿಗೆ ಏನೂ ಮಾಡೋದು ಅಂತ ಹೋಟೆಲ್‌ ಮಾಲೀಕರಿಗೆ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ.  ಪಾರ್ಸಲ್ ಬೇಡ, ಇಲ್ಲೇ ತಿಂದು ಹೋಗುತ್ತೇವೆ ಎಂದು ಗ್ರಾಹಕರು(Customers) ಡಿಮ್ಯಾಂಡ್ ಮಾಡುತ್ತಿದ್ದಾರೆ. ಪಾರ್ಸಲ್ ಮಾತ್ರ ಇದೆ ಅಂದ್ರೆ ಗ್ರಾಹಕರು ವಾಪಸ್ಸು ಹೋಗುತ್ತಿದ್ದಾರೆ. 

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಲ್ಲದೆ ಎಲ್ಲವೂ ಖಾಲಿ ಖಾಲಿ ಹೊಡೆಯುತ್ತಿವೆ.  ಕಳೆದ ವಾರ ಮುಳ್ಳಯ್ಯನಗಿರಿಯಲ್ಲಿ ಜನ ಜಾತ್ರೆಯಾಗಿತ್ತು. ಈ ವಾರ ವೀಕೆಂಡ್‌ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳೆಲ್ಲ ಖಾಲಿ ಖಾಲಿ ಹೊಡೆಯುತ್ತಿವೆ.  ಪ್ರವಾಸಿಗರಿಲ್ಲದೇ ಮುಳ್ಳಯ್ಯನಗಿರಿ ಬಣಗುಡುತ್ತಿದೆ.

Weekend Curfew: ತರಕಾರಿ ಖರೀದಿಗೆ ಮುಗಿಬಿದ್ದ ಜನ: ಬೆಳ್ಳಂಬೆಳಿಗ್ಗೆ ಲಾಠಿ ರುಚಿ ತೋರಿಸಿದ ಪೊಲೀಸರು..!

ಸುಬ್ರಹ್ಮಣ್ಯ ಸಂಪೂರ್ಣ ಬಂದ್ 

ದಕ್ಷಿಣ ಕನ್ನಡ: ಜಿಲ್ಲೆಯ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸಂಪೂರ್ಣ ಬಂದ್ ಆಗಿದೆ. ಜಿಲ್ಲೆಯ ಕಡಬ ತಾಲೂಕಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದ ಮುಖ್ಯದ್ವಾರ ಬಂದ್ ಮಾಡಿ ಭಕ್ತರಿಗೆ ದೇವಸ್ಥಾನ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ದೇವರ ದರ್ಶನ ಬಂದ್ ಇದ್ದರೂ ಕೂಡ ಬೆರಳೆಣಿಕೆಯಷ್ಟು ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ವೀಕೆಂಡ್‌ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ದೇವಸ್ಥಾನದ ಮುಖ್ಯದ್ವಾರದ ಬಳಿಯೇ ಭಕ್ತರು ಪ್ರಾರ್ಥಿಸಿ ವಾಪಾಸ್ ಹೋಗುತ್ತಿದ್ದಾರೆ. ಇಂದು ಮತ್ತು ನಾಳೆ ಕುಕ್ಕೆ ಸುಬ್ರಹ್ಮಣ್ಯ ಸಂಪೂರ್ಣ ಬಂದ್ ಇರಲಿದೆ. ಸೋಮವಾರದಿಂದ ಮತ್ತೆ ದೇವರ ದರ್ಶನಕ್ಕೆ  ಅವಕಾಶ ಇರಲಿದೆ. 

ವೀಕೆಂಡ್‌ ಕರ್ಫ್ಯೂಗೆ ತಲೆಕೆಡಿಸಿಕೊಳ್ಳದ ಪೊಲೀಸರು

ದಾವಣಗೆರೆ: ನಗರದ ಕೆಲವು ದೇವಸ್ಥಾನಗಳು ಬಂದ್ ಆದರೆ, ಇನ್ನು ಕೆಲವು ದೇವಾಲಯಗಳು ಓಪನ್ ಆಗಿವೆ. ಶಾಮನೂರು ಆಂಜನೇಯ ದೇವಸ್ಥಾನದಲ್ಲಿ ಎಂದಿನಂತೆ ಭಕ್ತರು ದೇವರ ದರ್ಶನ ಪಡೆದಿದ್ದಾರೆ. ದಾವಣಗೆರೆ ಕೆಲವು ವಾರ್ಡ್‌ಗಳಲ್ಲಿ ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಕಡೆ ಕಠಿಣ ಕರ್ಫ್ಯೂ, ಕೆಲವು ಕಡೆ ಜನರು ಫುಲ್ ಬಿಂದಾಸ್ ಆಗಿ ಓಡಾಟ ನಡೆಸಿದ್ದಾರೆ. ಆದರೆ, ಪೊಲೀಸರು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲವೇನೋ ಎಂಬಂತೆ ಇದ್ದಾರೆ. 

ಬಸ್ ನಿಲ್ದಾಣಕ್ಕೂ ತಟ್ಟಿದ ವೀಕೆಂಡ್ ಕರ್ಫ್ಯೂ ಬಿಸಿ 

ಮಂಗಳೂರು(Mangaluru): ನಗರದ ಕೆಎಸ್‌ಆರ್‌ಟಿಸಿ(KSRTC) ಬಸ್ ನಿಲ್ದಾಣಕ್ಕೂ ವೀಕೆಂಡ್ ಕರ್ಫ್ಯೂ ಬಿಸಿ ತಟ್ಟಿದೆ. ಬಸ್‌ಗಳಿದ್ದರೂ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ ಬಸ್ ನಿಲ್ದಾಣ. ಸದ್ಯ ಮಂಗಳೂರಿನಿಂದ 50% ಬಸ್‌ಗಳಷ್ಟೇ ಆಪರೇಟ್ ಮಾಡಲಾಗುತ್ತಿದೆ.  ಹೊರ ಜಿಲ್ಲೆ ‌ಮತ್ತು ದ.ಕ ಜಿಲ್ಲೆಯ ಒಳಗೆ ಬೆರಳೆಣಿಕೆಯಷ್ಟೇ ಬಸ್‌ಗಳು ಸಂಚಾರ ನಡೆಸುತ್ತಿವೆ. ಪ್ರತಿದಿನ ಬೆಂಗಳೂರಿಗೆ(Bengaluru) 18 ಬಸ್‌ಗಳು ಸಂಚರಿಸಿತ್ತಿದ್ದವು, ಇಂದು 9 ಬಸ್‌ಗಳನ್ನ ಮಾತ್ರ ಆಪರೇಟ್ ಮಾಡಲಾಗುವುದು.  ಎಲ್ಲಾ ಜಿಲ್ಲೆಗಳಿಗೂ ಬಸ್ ಇದ್ದರೂ ಪ್ರಯಾಣಿಕರಿಲ್ಲ. ಬೆಂಗಳೂರು ಸೇರಿ ಹಲವೆಡೆ ಬುಕ್ಕಿಂಗ್ ಆಗಿದ್ದ ಟಿಕೆಟ್ ಕ್ಯಾನ್ಸಲ್ ಆಗಿದೆ. ತಮಿಳುನಾಡಿಗೂ(Tamil Nadu) ನಾವು ಬಸ್ ಸಂಚಾರ ಬಂದ್ ಮಾಡಿದ್ದೇವೆ.  ಕೇರಳದ(Kerala) ಕಾಸರಗೋಡಿಗೆ 50% ಬಸ್ ಓಡಿದ್ರೂ ಪ್ರಯಾಣಿಕರು ಮಾತ್ರ ಇಲ್ಲ ಅಂತ ಕೆಎಸ್‌ಆರ್‌ಟಿಸಿ ಡಿಸಿ ಅರುಣ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹೇಳಿದ್ದಾರೆ. 
 

click me!