
ಬೆಂಗಳೂರು (ಮೇ.7): ಎಚ್‌ಐವಿ/ಏಡ್ಸ್‌ನಿಂದ ನಾನು ಬಳಲುತ್ತಿದ್ದೇನೆ ಎಂದು ಪತ್ನಿ ಮತ್ತು ಆಕೆಯ ಕುಟುಂಬದವರು ನಿಂದಿಸಿದ್ದಾರೆ ಎಂಬ ಆಧಾರದಲ್ಲಿ ಪತಿಗೆ ವಿಚ್ಛೇದನ ಮಂಜೂರು ಮಾಡಿ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ ವಿಭಾಗೀಯ ಪೀಠ, ದಾಖಲೆಯಿಲ್ಲದೇ ಪತಿ ಮಾಡಿರುವ ಇಂತಹ ಗಂಭೀರ ಆರೋಪವನ್ನು ಒಪ್ಪಲಾಗದು. ಹಾಗಾಗಿ, ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಲಾಗಿದೆ. ಆ ನ್ಯಾಯಾಲಯ ಹೊಸದಾಗಿ ಪ್ರಕರಣವನ್ನು ಪರಿಗಣಿಸಿ ಕಾನೂನು ಪ್ರಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶಿಸಿದೆ.
ಪತ್ನಿ ಮತ್ತು ಆಕೆಯ ಕುಟುಂಬದವರು ವಿನಾ ಕಾರಣ ತಾನು ಎಚ್‌ಐವಿ/ ಏಡ್ಸ್‌ನಿಂದ ಬಳಲುತ್ತಿದ್ದೇನೆ ಎಂದು ಕೆಟ್ಟದಾಗಿ ನಿಂದಿಸಿದ್ದಾರೆ. ಹೀಗಾಗಿ, ಹಿಂದೂ ವಿವಾಹ ಕಾಯ್ದೆ- 1955ರ ಅಡಿ ತಮ್ಮ ವಿವಾಹ ಅಸಿಂಧುಗೊಳಿಸಿ ವಿಚ್ಛೇದನ ಮಂಜೂರು ಮಾಡುವಂತೆ ಕೋರಿ ಪತಿ ಬೀದರ್‌ನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪತ್ನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪತಿ ಎಚ್‌ಐವಿ/ ಏಡ್ಸ್‌ನಿಂದ ಬಳಲುತ್ತಿರುವುದಾಗಿ ಪತ್ನಿ ಹಾಗೂ ಅವರ ಕುಟುಂಬದ ಸದಸ್ಯರು ನಿಂದಿಸಿದ ಆರೋಪ ಸಾಬೀತಾದರೆ ಅದು ನಿಸ್ಸಂಶಯವಾಗಿ ಮಾನಸಿಕ ಕ್ರೌರ್ಯವಾಗುತ್ತದೆ. ಆದರೆ, ಪ್ರಕರಣದಲ್ಲಿನ ಆರೋಪಕ್ಕೆ ಪೂರಕವಾಗಿ ಯಾವುದೇ ದಾಖಲೆಗಳು ಇಲ್ಲ. ಕ್ರೌರ್ಯ ಸಾಬೀತುಪಡಿಸಲು ಸೂಕ್ತ ಮತ್ತು ಆಸಕ್ತಿದಾಯಕ ದಾಖಲೆಗಳನ್ನು ಪತಿ ಒದಗಿಸಿಲ್ಲ. ಕೌಟುಂಬಿಕ ನ್ಯಾಯಾಲಯವು ಪತಿಯ ಹೇಳಿಕೆಗಳನ್ನು ಸ್ವೀಕರಿಸುವ ಮೂಲಕ ಪುರಾವೆಯಿಲ್ಲದೇ ಕೇವಲ ಆರೋಪವನ್ನು ಪರಿಣಾಮಕಾರಿಯಾಗಿ ಬದಲಾಯಿಸಿದೆ. ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಹೇಳಿದೆ.
ದಂಪತಿ 2002ರ ಜೂ. 16ರಂದು ವಿವಾಹವಾಗಿದ್ದರು. ಪತ್ನಿಯು ಖಾಸಗಿ ಶಾಲೆಯಲ್ಲಿ ಪ್ರಿನ್ಸಿಪಾಲ್ ಆಗಿದ್ದು, ಪತಿ ಸಾಂಖ್ಯಿಕ ಇನ್‌ಸ್ಪೆಕ್ಟರ್ ಆಗಿದ್ದಾರೆ. ಇಬ್ಬರು ಮಕ್ಕಳು ದಂಪತಿಗೆ ಜನಿಸಿದ್ದರು. ಮದುವೆಯಾದ ಆರಂಭದಲ್ಲಿ ಜೀವನ ಚೆನ್ನಾಗಿ ನಡೆದಿತ್ತು. ನಂತರ ಇಬ್ಬರು ಪುತ್ರರೊಂದಿಗೆ ಪತ್ನಿ ತವರು ಮನೆಗೆ ಸೇರಿದ್ದರು. ಸಾಕಷ್ಟು ಬಾರಿ ಕರೆದರೂ ತನ್ನ ಜೊತೆ ಬಂದಿಲ್ಲ. ಬಳಿಕ ತನ್ನನ್ನು ಕೆಟ್ಟದಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ಪತಿ ವಿಚ್ಛೇದನ ಕೋರಿದ್ದರು.
ಇದಕ್ಕೆ ಪ್ರತಿಯಾಗಿ ಪತ್ನಿ, ಅನೈತಿಕ ಸಂಬಂಧ ಹೊಂದಿರುವ ಪತಿಗೆ ಆ ಸಂಬಂಧಿಂದಲೂ ಎರಡು ಮಕ್ಕಳಾಗಿದ್ದು, ಈ ಕಾರಣಕ್ಕಾಗಿ ಅವರನ್ನು ತೊರೆದಿರುವುದಾಗಿ ವಾದಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ