
ಟಿ.ವಿ. ರಾಮಚಂದ್ರ, ಹಿರಿಯ ಪರಿಸರ ವಿಜ್ಞಾನಿ, ಐಐಎಸ್ಸಿ
ಶ್ರೀಕಾಂತ್ ಎನ್. ಗೌಡಸಂದ್ರ
ಅತಿಯಾದ ಬಿಸಿಲು, ಬಿಸಿ ಗಾಳಿಯಿಂದಾಗಿ ರಾಜ್ಯದ ಸ್ಥಿತಿ ಕಾದ ಹೆಂಚಿನಂತಾಗಿದೆ. ಹವಾಮಾನ ವೈಪರೀತ್ಯ, ಜಲಮೂಲ ಹಾಗೂ ಹಸಿರು ಹೊದಿಕೆ ನಾಶದ ಕ್ರಮಕ್ಕೆ ಶಿಕ್ಷೆ ಎಂಬಂತೆ ತಾಪಮಾನ ವಿಪರೀತ ಹೆಚ್ಚಾಗುತ್ತಿದೆ. ಇದಕ್ಕೆ ಈ ವರ್ಷ ಎಲ್‌ನಿನೋ ದುಷ್ಪರಿಣಾಮವೂ ಜೊತೆಯಾಗಿದೆ. ಪೆಸಿಫಿಸಿಕ್ ಮಹಾಸಾಗರದ ತಾಪಮಾನ ಏರಿಕೆಯಿಂದ ಉಂಟಾಗುವ ಎಲ್‌ನಿನೋ ಪರಿಣಾಮದಿಂದಾಗಿ ಬಿಸಿಲು ಹೆಚ್ಚಾಗಿದೆ. ಭಾರತ ವಿಶೇಷವಾಗಿ ಕರ್ನಾಟಕದಲ್ಲಿ ಮಾನ್ಸೂನ್‌ನಲ್ಲಿ ಮಳೆ ಕೊರತೆ ಉಂಟು ಮಾಡಲಿದೆ. ಇದೆಲ್ಲವೂ ರಾಜ್ಯದಲ್ಲಿ ಮಳೆ, ತಾಪಮಾನ ಮತ್ತು ನೀರಿನ ಲಭ್ಯತೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಮಾನ್ಸೂನ್ ಮಳೆಯ ಅಸ್ಥಿರತೆ ಕೃಷಿ ಹಾಗೂ ಆಹಾರ ಉತ್ಪಾದನೆಗೆ ಹೇಗೆ ಸವಾಲು ಒಡ್ಡಲಿವೆ? ಇದರ ಪರಿಣಾಮದಿಂದ ರಾಜ್ಯದ ಜನತೆ ಏನೆಲ್ಲಾ ಸಂಕಷ್ಟ ಎದುರಿಸಬೇಕು? ಇಂತಹ ಕ್ಷಾಮ ಮೆಟ್ಟಿ ನಿಲ್ಲಲು ನೀರು ಹಾಗೂ ಪರಿಸರ ಸಂರಕ್ಷಣೆಗೆ ಮಾಡಬೇಕಾದ ಕ್ರಮಗಳೇನು? ಎಲ್‌ನಿನೋದಿಂದ ಉಂಟಾಗುವ ಬರ, ತಾಪಮಾನ ಹೆಚ್ಚಳ, ಆಹಾರದ ಕ್ಷಾಮದಿಂದ ಪಾರಾಗಲು ಕೈಗೊಳ್ಳಬೇಕಾದ ತಕ್ಷಣದ ಹಾಗೂ ಸುದೀರ್ಘ ಅವಧಿಯ ಕ್ರಮಗಳೇನು? ಎಂಬಿತ್ಯಾದಿ ವಿಷಯಗಳ ಬಗ್ಗೆ ಐಐಎಸ್ಸಿಯ ಹಿರಿಯ ಪರಿಸರ ವಿಜ್ಞಾನಿ ಟಿ.ವಿ.ರಾಮಚಂದ್ರ ‘ಕನ್ನಡಪ್ರಭ’ ಜತೆ ಮುಖಾಮುಖಿ ಮಾತನಾಡಿದ್ದಾರೆ.
ಇದು ಎಚ್ಚರಿಕೆ ಗಂಟೆ. ತಾಪಮಾನ ಏರಿಕೆ ನಮಗೆ ಎರಡು ವಿಷಯಗಳನ್ನು ತೋರಿಸುತ್ತದೆ. ಹವಾಮಾನ ವೈಪರೀತ್ಯ ಹಾಗೂ ಜಲ ನಗರೀಕರಣದ(ವಾಟರ್ ಅರ್ಬನೈಸೇಷನ್) ಅನುಪಸ್ಥಿತಿ. ಮುಖ್ಯವಾಗಿ ಅರಣ್ಯನಾಶ, ಕೆರೆಗಳ ನಾಶದಿಂದಾಗಿ ರಾಜ್ಯದಲ್ಲಿ ನಾವು ಆಪತ್ತಿಗೆ ಆಹ್ವಾನ ನೀಡುತ್ತಿದ್ದೇವೆ.
ರಾಯಚೂರು, ಬಾಗಲಕೋಟೆ, ಯಾದಗಿರಿ ಈ ಮೂರು ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಿರುವುದಾಗಿ ಪಟ್ಟಿ ಹೇಳಿದೆ. ಇದು ಈ ಮೂರು ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಬಹುತೇಕ ರಾಜ್ಯದೆಲ್ಲೆಡೆ ಬಿಸಿಲು ಹೆಚ್ಚಾಗಿದೆ. ಜಲ ಮೂಲಗಳ ನಾಶ, ಇರುವ ಕೆರೆಗಳ ಪುನಶ್ಚೇತನ ಮಾಡದಿರುವುದು, ಜಲಾನಯನ ಪ್ರದೇಶಗಳ ಸಂರಕ್ಷಣೆ ಮಾಡದಿರುವುದು ಇದಕ್ಕೆ ಕಾರಣ. ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಭವಿಷ್ಯದ ಜನಾಂಗಕ್ಕೆ ಉತ್ತಮ ಗಾಳಿ, ಕುಡಿಯುವ ನೀರು ಹಾಗೂ ಆಹಾರ ನೀಡಲಾಗದ ಅಸಹಾಯಕ ಸ್ಥಿತಿಗೆ ತಲುಪಲಿದ್ದೇವೆ.
ಹವಾನಿಯಂತ್ರಿತ ನಗರ ಎಂದು ಹೆಸರಾಗಿದ್ದ ಬೆಂಗಳೂರು ಕೂಡ ಕಾದ ಹೆಂಚಿನಂತಾಗಲು ಕಾರಣವೇನು?
ಬೆಂಗಳೂರು ಹವಾನಿಯಂತ್ರಿತ ನಗರ ಎಂದೇ ಹಿಂದೆ ಪ್ರಸಿದ್ಧಿ ಪಡೆದಿತ್ತು. ವಾಸಕ್ಕೆ ಅತಿ ಯೋಗ್ಯ ಎಂಬ ಹಣೆಪಟ್ಟಿ ಕೂಡ ಇತ್ತು. ಇಲ್ಲಿ ಏಪ್ರಿಲ್‌ನಲ್ಲಿ 14 ರಿಂದ 16 ಡಿಗ್ರಿ ಸೆಲ್ಸಿಯಸ್, ಡಿಸೆಂಬರ್‌ನಲ್ಲಿ 0 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿ, ಪ್ಯಾಲೇಸ್‌ನಲ್ಲಿ ಸೇಬು ಬೆಳೆಯುತ್ತಿದ್ದರು.
ಆ ರೀತಿಯಿದ್ದ ನಗರ ಈಗ ವರ್ಷದಿಂದ ವರ್ಷಕ್ಕೆ ಗರಿಷ್ಠ ತಾಪಮಾನದಲ್ಲೇ ದಾಖಲೆ ಬರೆಯುತ್ತಿದೆಯಲ್ವಾ?
ಅರ್ಥಹೀನ ನಗರೀಕರಣದಿಂದ ಆದ ಕೆರೆ, ಹಸಿರು ನಾಶ ಹಾಗೂ ಕಾಂಕ್ರೀಟೀಕರಣವೇ ಕಾರಣ. ಕಾಂಕ್ರೀಟ್ ರೇಡಿಯೇಷನ್‌ನಿಂದ ಬಿಸಿ ಹೆಚ್ಚಾಗುತ್ತಿದೆ. ಈಗ ಬೆಂಗಳೂರು ವಾಸಯೋಗ್ಯವಲ್ಲದ ನಗರವಾಗಿ ಬದಲಾಗುತ್ತಿದೆ. ನಮ್ಮ ಮಕ್ಕಳಿಗೆ ಶುದ್ಧ ನೀರು, ಶುದ್ಧ ಗಾಳಿ ಹಾಗೂ ಉತ್ತಮ ವಾತಾವರಣ ನೀಡಲು ವಿಫಲರಾಗುತ್ತಿದ್ದೇವೆ. 1973ರಲ್ಲಿ ಬೆಂಗಳೂರಿನಲ್ಲಿ ಶೇ.68.2 ರಷ್ಟು ಹಸಿರು ಹಾಗೂ ಶೇ.7.97 ರಷ್ಟು ಮಾತ್ರ ಕಾಂಕ್ರೀಟ್ ನಿರ್ಮಾಣ ಇತ್ತು. 1992ರಲ್ಲಿ ಶೇ.46.2 ರಷ್ಟು ಹಸಿರು ಹಾಗೂ ಶೇ.27.3 ರಷ್ಟು ಕಾಂಕ್ರೀಟ್ ಕಟ್ಟಡ ಆವರಿಸಿತು. 2025ರ ವೇಳೆಗಂತೂ ಶೇ.87.6 ರಷ್ಟು ಕಾಂಕ್ರೀಟ್ ಆವರಿಸಿ ಹಸಿರು ಶೇ.3 ಕ್ಕಿಂತ ಕಡಿಮೆಯಾಗಿ ಕಣ್ಮರೆಯಾಗುವ ಮಟ್ಟ ತಲುಪಿದೆ. 70ರ ದಶಕದಲ್ಲಿ 700ಕ್ಕೂ ಹೆಚ್ಚಿದ್ದ ಕೆರೆಗಳು 216ಕ್ಕೆ ಕುಸಿದಿವೆ. ಇದರ ಪರಿಣಾಮವಾಗಿ ಬೆಂಗಳೂರಿನ ತಾಪಮಾನ ಬದಲಾಗಿದೆ. ಉಷ್ಣ ಪ್ರದೇಶಗಳು ಹೆಚ್ಚಾಗಿವೆ. ಮುಖ್ಯವಾಗಿ ಪೂರ್ವ ಹಾಗೂ ಉತ್ತರ ಭಾಗದಲ್ಲಿ ತೀವ್ರ ಉಷ್ಣತೆಯಿಂದ ಕೂಡಿದ ಪ್ರದೇಶ ಹೆಚ್ಚಾಗಿದ್ದು, ತಾಪಮಾನ ಹತೋಟಿ ತಪ್ಪಿದೆ. ದಾಖಲೆ ಪ್ರಮಾಣದ ತಾಪಮಾನ ಹೆಚ್ಚಳ ಆಗುತ್ತಿದೆ.
ಇದಕ್ಕೆ ಪರಿಹಾರವೇನು?
ನಗರದಲ್ಲಿ ಅಂತರ್ಜಲದ ಮೇಲೆ ಅವಲಂಬನೆ ಹೆಚ್ಚಾಗಿ ಅಂತರ್ಜಲದ ಶೋಷಣೆಯಾಗುತ್ತಿದೆ. ಅತಿಯಾದ ಕಾಂಕ್ರೀಟ್ ನಿರ್ಮಾಣಗಳಿಂದಾಗಿ ನೀರು ಇಂಗುತ್ತಿಲ್ಲ. ಕೆರೆಗಳ ಪುನಶ್ಚೇತನ, ಅಂತರ್ಜಲ ಮರುಪೂರಣ, ಮಳೆಕಾಡುಗಳ ನಿರ್ಮಾಣ ಮಾಡಿದರಷ್ಟೇ ಬೆಂಗಳೂರಿಗೆ ಉಳಿಗಾಲ.
ಈ ರೀತಿ ಮಾಡಿ ಯಶಸ್ವಿಯಾದ ಉದಾಹರಣೆ ಇದೆಯೇ?
ಸಾರಕ್ಕಿ ಕೆರೆಯೇ ಉತ್ತಮ ಉದಾಹರಣೆ. ಸಾರಕ್ಕಿ ಕರೆ ಪುನಶ್ಚೇತನ ಮಾಡಿ ಶುದ್ಧೀಕರಿಸಿದ ನೀರು ತುಂಬಿದ ಪರಿಣಾಮ ಅಲ್ಲಿನ ಅಂತರ್ಜಲ 320 ಅಡಿಯಷ್ಟು ವೃದ್ಧಿಸಿತು. 2024ರಲ್ಲಿ ತೀವ್ರ ನೀರಿನ ಹಾಹಾಕಾರ ಸೃಷ್ಟಿಯಾದರೂ ಈ ಭಾಗದಲ್ಲಿ ನೀರಿನ ಕೊರತೆ ಆಗಲಿಲ್ಲ. ಅಂತಹ ಸ್ಥಿತಿಯಲ್ಲೂ ಕೆರೆ ಹಾಗೂ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿತು. ನಗರದ ತಾಪಮಾನಕ್ಕಿಂತ ಇಲ್ಲಿನ ತಾಪಮಾಣ 2 ಡಿಗ್ರಿ ಸೆಲ್ಷಿಯಸ್‌ನಷ್ಟು ಕಡಿಮೆ ನಮೂದಾಗಿತ್ತು. ಈ ರೀತಿ ಪ್ರತಿ ಕೆರೆಯನ್ನು ಪುನಶ್ಚೇತನ ಮಾಡಬೇಕು. ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿಸಬೇಕು.
ಹಸಿರು ಹೊದಿಕೆ ಇರುವ ಕಡೆ ಕಡಿಮೆ ತಾಪಮಾನ ದಾಖಲಾಗಿದೆಯಂತೆ?
ಅದಕ್ಕೆ ನಮ್ಮ ಕ್ಯಾಂಪಸ್ ಉತ್ತಮ ಉದಾಹರಣೆ. ಐಐಎಸ್ಸಿಯ 2 ಹೆಕ್ಟೇರ್‌ನಲ್ಲಿ 49 ತಳಿಯ 500 ಸ್ಥಳೀಯ ಸಸಿ ನೆಡಲಾಗಿತ್ತು. ಇದೀಗ ಅದು ಮಳೆ ಕಾಡಾಗಿದೆ. ಇಲ್ಲಿ ನಗರದ ತಾಪಮಾಣಕ್ಕಿಂತ 2-3 ಡಿಗ್ರಿ ಕಡಿಮೆ ತಾಪಮಾನ ಇರುತ್ತದೆ. 150 ಅಡಿಯಲ್ಲಿ ಸಿಗುತ್ತಿದ್ದ ಅಂತರ್ಜಲ 15 ಅಡಿಯಲ್ಲೇ ಸಿಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಪ್ರತಿ ವಾರ್ಡ್‌ನಲ್ಲೂ 2 ಹೆಕ್ಟೇರ್ ವ್ಯಾಪ್ತಿಯ ಮಳೆಕಾಡು ಮಾಡಬೇಕು.
ಪ್ರತಿ ವಾರ್ಡ್‌ಗಳಲ್ಲೂ ಉದ್ಯಾನವನ ಮಾಡಿದ್ದಾರೆ. ಅದರಿಂದ ಪ್ರಯೋಜನವಿಲ್ಲವೇ?
ಎಲ್ಲಾ ಉದ್ಯಾನವನಗಳಲ್ಲೂ ಹಸಿರು ಹೊದಿಕೆಗಿಂತ ಕಾಂಕ್ರೀಟ್ ನಿರ್ಮಾಣಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಹಾಪ್‌ಕಾಮ್ಸ್, ಕಾಂಪೋಸ್ಟ್ ಘಟಕ, ಕ್ಲಿನಿಕ್ ಎಲ್ಲ ಕಟ್ಟಡವೂ ನಿರ್ಮಿಸುತ್ತಾರೆ. ಇದು ಮೂರ್ಖರ ಲಕ್ಷಣ. ಉದ್ಯಾನವನದ ಉದ್ದೇಶ ಸುತ್ತಮುತ್ತಲಿನ ಜನರಿಗೆ ಶುದ್ಧ ಗಾಳಿ ಹಾಗೂ ಪರಿಸರ ನೀಡುವುದಾಗಿರಬೇಕು. ಮುಖ್ಯವಾಗಿ ಮಳೆಕಾಡು ನಿರ್ಮಾಣ ಇದಕ್ಕೆ ಪರಿಹಾರ.
ಜಿಬಿಎ ವ್ಯಾಪ್ತಿಯಲ್ಲಿ ಕೆರೆಗಳ ಪುನಶ್ಚೇತನ ಕಾಮಗಾರಿಗಳು ನಡೆಯುತ್ತಿವೆಯಲ್ಲಾ?
ಕೆರೆಗಳನ್ನು ಕಾಂಕ್ರೀಟ್ ಬೌಲ್ ಮಾಡುವುದು ಕೆರೆ ಪುನಶ್ಚೇತನ ಅಲ್ಲ. ಸ್ಯಾಂಕಿ ಕೆರೆಯಲ್ಲಿ ನೀರು ಬಹಳ ಕಡಿಮೆಯಾಗಿದೆ. ಜಾಗಿಂಗ್ ಟ್ರಾಕ್, ಜಿಮ್, ಕಟ್ಟಡಗಳನ್ನು ಕಟ್ಟಿಕೊಳ್ಳಲು ಕೆರೆಗಳನ್ನು ಬಳಸುತ್ತಿದ್ದಾರೆ. ಜತೆಗೆ ಕೆರೆಗಳನ್ನು ಕಾಂಕ್ರೀಟ್ ಬೌಲ್ ರೀತಿ ಮಾಡಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹಾಗೂ ನೀರು ಇಂಗುವ ಗುಣ ಕಳೆಯುತ್ತಿದ್ದಾರೆ. ಸಿಮೆಂಟ್ ರಸ್ತೆಗಳಿಂದಲೇ ನಗರ ಹಾಳಾಗಿದೆ ಎಂದರೆ ಸಿಮೆಂಟ್ ಕೆರೆಗಳನ್ನು ನಿರ್ಮಿಸುತ್ತಿದ್ದಾರೆ. ಜತೆಗೆ ನಗರಾದ್ಯಂತ ಹವಾಮಾನಕ್ಕೆ ಸೂಕ್ತವಲ್ಲದ ವಿನ್ಯಾಸದ ಕಟ್ಟಡ ನಿರ್ಮಾಣ ಹೆಚ್ಚಾಗಿದೆ. ಗಾಜಿನ ಹೊದಿಕೆ ಕಟ್ಟಡಗಳಿಂದ 3 ರಿಂದ 4 ಡಿಗ್ರಿ ಹೆಚ್ಚು ತಾಪಮಾನ ಉಂಟಾಗುತ್ತಿದೆ. ಗಾಜಿನ ಹೊದಿಕೆ ಇರುವ ಕಟ್ಟಡಗಳಲ್ಲಿ 10 ಪಟ್ಟು ಹೆಚ್ಚು ವಿದ್ಯುತ್ ವ್ಯರ್ಥವಾಗುತ್ತದೆ.
ಪರಿಸರ ಹಾಗೂ ನೀರಿನ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರವಿಲ್ಲವೇ?
ಖಂಡಿತ ಇದೆ. ತಮ್ಮ ನಿವೇಶನಗಳಲ್ಲಿ ಸೆಟ್‌ಬ್ಯಾಕ್ ನಿಯಮ ಪಾಲಿಸಿ ಶೇ.30 ರಷ್ಟು ನಿವೇಶನವನ್ನು ಖಾಲಿ ಬಿಟ್ಟು ಮನೆ ಕಟ್ಟಿದರೆ ಎ.ಸಿ, ಫ್ಯಾನ್ ಅಗತ್ಯವೇ ಬರುವುದಿಲ್ಲ. ಆದರೆ, ಅತಿ ಆಸೆಗೆ ಬಿದ್ದು ಜನರೂ ತಪ್ಪು ಮಾಡುತ್ತಿದ್ದಾರೆ. ಅಂತರ್ಜಲದ ಅತಿಯಾದ ಬಳಕೆ, ಮಳೆ ನೀರು ಕೊಯ್ಲು ಅಳವಡಿಸದಿರುವುದು ನಮ್ಮ ಜನರ ತಪ್ಪು. ಹಿರಿಯರು ಸೂಕ್ತವಾಗಿ ಯೋಜನೆ ರೂಪಿಸಿ ಸೆಟ್‌ಬ್ಯಾಕ್ ನಿಯಮ ಮಾಡಿದರೆ ಈ ಸರ್ಕಾರ ಅದನ್ನೂ ಕಡಿಮೆ ಮಾಡಿರುವುದು ದುರಂತ.
ರಾಜ್ಯದಲ್ಲಿ ಬಿಸಿ ಹೆಚ್ಚಾಗಲು ಎಲ್‌ನಿನೋ ಪರಿಣಾಮವೇ ಕಾರಣ ಎನ್ನುತ್ತಾರಲ್ಲ?
ಎಲ್‌ನಿನೋ ಪರಿಣಾಮದಿಂದಾಗಿ ವಾತಾವರಣದಲ್ಲಿ ತೇವಾಂಶ ಕಡಿಮೆ ಆಗುತ್ತದೆ. ಅದರಿಂದ ತಾಪಮಾನ ಹೆಚ್ಚಳದ ಅನುಭವ ಆಗುತ್ತದೆ. ಆದರೆ, ಈ ವರ್ಷದ ತಾಪಮಾನ ಹೆಚ್ಚಳಕ್ಕೆ ಎಲ್‌ನಿನೋ ಒಂದನ್ನೇ ಹೊಣೆ ಮಾಡಬಾರದು. ಏಕೆಂದರೆ 2024ರಲ್ಲಿ ಬೆಂಗಳೂರಿನಲ್ಲಿ ಇದಕ್ಕಿಂತ ಹೆಚ್ಚು ತಾಪಮಾನ ದಾಖಲಾಗಿತ್ತು. ಜತೆಗೆ ಹಸಿರು ಬರ ಉಂಟಾಗಿತ್ತು. ಸಸಿಗಳು ಹಸಿರಿದ್ದರೂ ಅವುಗಳಿಂದ ಆಹಾರ ಉತ್ಪಾದನೆ ಆಗಿರಲಿಲ್ಲ. ಆಗ ಎಲ್‌ನಿನೋ ಇರಲಿಲ್ಲ. ಹೀಗಾಗಿ ಈಗ ತಾಪಮಾನ ಹೆಚ್ಚಳಕ್ಕೆ ಅಧಿಕಾರಿಗಳು, ರಾಜಕಾರಣಿಗಳು ಹೊಣೆ. ಅವರು ಎಲ್‌ನಿನೋ ನೆಪ ನೀಡಿ ತಪ್ಪಿಸಿಕೊಳ್ಳಬಾರದು.
ಏನಿದು ಎಲ್‌ನಿನೊ? ಅದರ ಪರಿಣಾಮವೇನು?
ಪೆಸಿಫಿಕ್ ಮಹಾಸಾಗರದಲ್ಲಿ ತಾಪಮಾನ ಏರಿಕೆಯಿಂದ ಉಂಟಾಗುವ ಎಲ್‌ನಿನೋದಿಂದ ರಾಜ್ಯದಲ್ಲಿ ಮಳೆ ಏರುಪೇರಾಗಲಿದೆ. ಮಳೆ ಅಭಾವದ ಮುನ್ಸೂಚನೆ ದೊರೆತಿದ್ದು, ಇದರಿಂದ ನೀರಿನ ಹಾಹಾಕಾರ ಉಂಟಾಗಬಹುದು. ಮುಖ್ಯವಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಉಂಟಾಗಿ ಬೆಂಗಳೂರಿನಲ್ಲಿ ನೀರು ಸಿಗದ ಸ್ಥಿತಿ ನಿರ್ಮಾಣವಾಗಲಿದೆ. ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಲಿದೆ. ಹೀಗಾಗಿ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.
- ರಾಜ್ಯದ ಮೇಲೆ ಎಲ್‌ನಿನೋ ಪರಿಣಾಮವೇನು?
ಐಪಿಸಿಸಿ ಪ್ರಕಾರ ರಾಜ್ಯದ ಮೇಲೆ ಎಲ್‌ನಿನೋ ಕೆಲ ತಿಂಗಳ ಸುದೀರ್ಘ ಪ್ರಭಾವ ಬೀರಲಿದೆ. ಇದರಿಂದ ಮಳೆ ಅಭಾವ ಉಂಟಾಗಲಿದೆ. ಆದರೂ ಕೆರೆಗಳ ಪುನಶ್ಚೇತನ, ಸ್ಥಳೀಯ ಪ್ರಬೇಧದ ಸಸಿಗಳ ಅರಣ್ಯಗಳು ಇರುವ ಕಡೆ ಇದರ ಪ್ರಭಾವ ತೀವ್ರವಾಗಿರುವುದಿಲ್ಲ. ಉದಾ: ಮೂಡುಬಿದಿರೆಯಲ್ಲಿ 32 ಕೆರೆಗಳ ಹೂಳೆತ್ತಿದ್ದರು. 2024ರಲ್ಲಿ ಬರ ಉಂಟಾದಾಗ ಅಲ್ಲಿ ಯಾವುದೇ ಸಮಸ್ಯೆಯಾಗಲಿಲ್ಲ.
- ಮಳೆ ಕೊರತೆಯಿಂದಾಗಿ ಈ ವರ್ಷ ಯಾವ ರೀತಿಯ ಬೆಳೆಗಳನ್ನು ಬೆಳೆಯಬೇಕು?
ರೈತರು ಈಗಲೇ ಎಚ್ಚೆತ್ತುಕೊಳ್ಳಬೇಕು. ಹವಾಮಾನಕ್ಕೆ ಪೂರಕ ಬೆಳೆಗಳನ್ನು (ಕ್ಲೈಮೇಟ್ ರೆಸಿಲಿಯೆಂಟ್ ಕ್ರಾಪ್) ಬೆಳೆಯಬೇಕು. ಕಬ್ಬು, ಭತ್ತದಂತಹ ಹೆಚ್ಚು ನೀರು ಬಯಸುವ ಬೆಳೆಗಳ ಬದಲು ರಾಗಿಯಂತಹ ಸಿರಿ ಧಾನ್ಯಗಳಿಗೆ ಹೆಚ್ಚು ಒತ್ತು ಕೊಡಬೇಕು. ಇದನ್ನು ಐಪಿಸಿಸಿ ವರದಿಯಲ್ಲೂ ಉಲ್ಲೇಖ ಮಾಡಲಾಗಿದೆ.
- ರಾಜ್ಯದಲ್ಲಿ ಎಲ್‌ನಿನೋದಿಂದ ಆಹಾರ ಉತ್ಪಾದನೆ ಕಡಿಮೆಯಾಗಿ ಆಹಾರದ ಕೊರತೆ ಉಂಟಾಗಲಿದೆಯೇ?
ಹೌದು, ಮಳೆ ಅಭಾವದಿಂದ ಆಹಾರ ಉತ್ಪಾದನೆ ಕುಸಿಯಲಿದೆ. ಇದರಿಂದ ಆಹಾರದ ಕೊರತೆ ಉಂಟಾಗಬಹುದು. ಸಹಜವಾಗಿಯೇ ಇದು ಆಹಾರ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಬಹುದು.
- ದೀರ್ಘಾವಧಿಯಲ್ಲಿ ಇಂತಹವುಗಳನ್ನು ಎದುರಿಸುವುದು ಹೇಗೆ?
ಯಾವ ಜಲಾನಯನ ಪ್ರದೇಶದಲ್ಲಿ ಸ್ಥಳೀಯ ಸಸ್ಯ ಪ್ರಬೇಧಗಳು ಇವೆಯೋ ಅಲ್ಲಿ 12 ತಿಂಗಳೂ ನೀರು ಇರುತ್ತದೆ. ಹಸಿರು ಶೇ.30ಕ್ಕಿಂತ ಕಡಿಮೆ ಇರುತ್ತದೆಯೋ ಅಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ಇರುತ್ತದೆ. 12 ತಿಂಗಳೂ ನೀರು ಸಿಗುವ ಕಡೆ ಕಬ್ಬು, ಭತ್ತ ಬೆಳೆದು 1.50 ಲಕ್ಷ ಪ್ರತಿ ಎಕರೆಗೆ ಆದಾಯ ಸಿಗುತ್ತದೆ. ಮಳೆ ಆಧಾರಿತ ಪ್ರದೇಶಗಳಲ್ಲಿ ವರ್ಷಕ್ಕೆ ಎಕರೆಗೆ 32,000 ರು. ಮಾತ್ರ ದುಡಿಯಬಹುದು. ಜತೆಗೆ ಹಸಿರು ಹೆಚ್ಚಿರುವ ಕಡೆ ಪರಾಗಸ್ಪರ್ಶ ಕ್ರಿಮಿಗಳು ಹೆಚ್ಚಿರುವುದರಿಂದ ಇಳುವರಿ ಹೆಚ್ಚಾಗಿರುತ್ತದೆ. ಹವಾಮಾನ ವೈಪರೀತ್ಯ ಇದ್ದರೂ ಜಲಾನಯನ ಪ್ರದೇಶ ನಿರ್ವಹಣೆ, ಹಸಿರು ಹೊದಿಕೆ ಹೆಚ್ಚಳ, ಜಲಮೂಲಗಳ ಸಂರಕ್ಷಣೆ ಮಾಡಿದರೆ ಸಮಸ್ಯೆಯಿಲ್ಲ.
- ಜಲಮೂಲಗಳ ಸಂರಕ್ಷಣೆ ಮಾಡಿದರೆ ಬರ ಬಂದರೂ ನಿರ್ವಹಣೆ ಮಾಡಬಹುದೇ?
ಹೌದು, ರಾಜ್ಯದಲ್ಲಿ 39,000 ಕೆರೆಗಳಿವೆ. ಎಲ್ಲೆಲ್ಲಿ ಬರ, ನೀರಿನ ಅಭಾವ ಉಂಟಾಗುತ್ತಿತ್ತೋ ಅಲ್ಲಿ ನಮ್ಮ ಪೂರ್ವಿಕರು ಹೆಚ್ಚು ಕೆರೆಗಳನ್ನು ಕಟ್ಟಿದ್ದಾರೆ. ಅವಿಭಜಿತ ಕೋಲಾರ ಒಂದರಲ್ಲೇ 4,800 ಕೆರೆಗಳು ಇವೆ. ಅದು ದೂರದೃಷ್ಟಿ ಇರುವವರ ಕೆಲಸ. ಆದರೆ, ಈಗ ಕೆರೆಗಳನ್ನು ಹಾಳು ಮಾಡಿ, ಪುನರುಜ್ಜೀವನ ಮಾಡದೆ ದೂರದಿಂದ ನೀರು ತರುವ ಹುನ್ನಾರ ಮಾಡುತ್ತಾರೆ. ಇಂತಹ ಅವೈಜ್ಞಾನಿಕ ಯೋಜನೆಗಳಿಗೆ ನಾವು ಬೆಲೆ ತೆರಬೇಕಿದೆ. ನಾಯಕರು, ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲ. ಅವರ ಹಣದ ದಾಹದಿಂದ ಜನ ಪರದಾಡುವಂತಾಗಿದೆ.
* ಸರ್ಕಾರ ಈಗ ಏನು ಮಾಡಬೇಕು?
ಪರಿಸರ ಹಾಳು ಮಾಡುವುದನ್ನು ನಿಲ್ಲಿಸಬೇಕು. ಬಫರ್ ಜೋನ್ ಕಡಿಮೆ ಮಾಡುವುದು, ಅರಣ್ಯ ನಾಶ ಮಾಡುವುದು, ಮರ ಕಡಿದು ಟನಲ್ ರಸ್ತೆ ಮಾಡುವುದು. ಎಲ್ಲದರಲ್ಲೂ ಹಣ ಮಾಡಲು ಹೊರಡುವುದನ್ನು ನಿಲ್ಲಿಸಬೇಕು. ಜನ ಅಂತಹವರನ್ನು ಮನೆಗೆ ಕಳುಹಿಸಬೇಕು.
- ಅರಣ್ಯ ನಾಶಕ್ಕೂ ಸರ್ಕಾರಕ್ಕೂ ಏನು ಸಂಬಂಧ?
ಕಳೆದ ಕೆಲ ದಶಕದಲ್ಲೇ ಶೇ.35ರಷ್ಟು ಅರಣ್ಯ ನಾಶ ಆಗಿದೆ. ಅರಣ್ಯ ಉತ್ಪಾದನೆ ಹಾಗೂ ರಾಜ್ಯದ ಅರಣ್ಯ ಮೌಲ್ಯ ಕುಸಿದಿದೆ. ನಾವು ಕಳೆದುಕೊಂಡ ಅರಣ್ಯ ಹಾಗೂ ಅರಣ್ಯ ಸಂಪತ್ತಿಗೆ ಸರ್ಕಾರದ ಅಧಿಕಾರಿಗಳು ಹೊಣೆ ಅಲ್ಲವೇ? ಕಾಡು ಲೂಟಿ ಮಾಡಲು ಬಿಟ್ಟವರಿಂದಲೇ ಪರಿಹಾರವನ್ನು ಸಂಗ್ರಹಿಸಬೇಕಲ್ಲವೇ?
- ಹಾಗಾದರೆ ನಮ್ಮ ರಾಜ್ಯದ ಸ್ಥಿತಿ ಬದಲಾಗುವುದೇ ಇಲ್ಲವೇ?
ನ್ಯಾಯಾಂಗ ಒಂದೇ ನಮಗಿರುವ ಭರವಸೆ. ಪ್ರಬುದ್ಧವಾದ, ಪರಿಸರ ಜ್ಞಾನ ಇರುವ ನ್ಯಾಯಾಧೀಶರು ಬೇಕಾಗಿದ್ದಾರೆ. ಬೆಳ್ಳಂದೂರು ಕೆರೆ ಒತ್ತುವರಿ ಆಗಿದೆ. ಅದನ್ನು ತೆರವು ಮಾಡಲು 10 ವರ್ಷ ಆದರೂ ನ್ಯಾಯಾಂಗ ಆದೇಶ ಮಾಡುತ್ತಿಲ್ಲ. ಪ್ರಪ್ರಭುತ್ವದ ಆಧಾರ ಸ್ಥಂಭಗಳೇ ಕೆಲಸ ಮಾಡದಿದ್ದರೆ ದೇಶದ ಭವಿಷ್ಯವೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ