
ಬಿ.ಎಸ್.ಯಡಿಯೂರಪ್ಪ 2007ರಿಂದ 2021ರವರೆಗೆ ಒಟ್ಟು ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡರು. ಹಾಗಂತ ಅವರು ಈ ರಾಜ್ಯದ ಆಡಳಿತ ನಡೆಸಿದ್ದು ಅಬ್ಬಬ್ಬಾ ಅಂದರೆ ಐದು ವರ್ಷ. ಆದರೆ ಮೂಡಿಸಿದ ಛಾಪು ಅಗಾಧ. ಆರೆಸ್ಸೆಸ್ ಸ್ವಯಂಸೇವಕನಾಗಿ, ಧ್ಯೇಯ ಸಾಧನೆಯ ಹಾದಿಯಲ್ಲಿ ಪೂರ್ಣವಾದಿ ಕಾರ್ಯಕರ್ತನಾಗಿ, ಶಿಕಾರಿಪುರ ಪುರಸಭೆ ಅಧ್ಯಕ್ಷರಾಗಿ, ಕರ್ನಾಟಕ ವಿಧಾನಸಭೆ ಶಾಸಕರಾಗಿ, ವಿಪಕ್ಷ ನಾಯಕರಾಗಿ, ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿ ಅವರು ಮೂಡಿಸಿದ ಹೆಜ್ಜೆ ಗುರುತುಗಳು ಅವರಿಗೆ ಅವರೇ ಸಾಠಿ!
ಯಡಿಯೂರಪ್ಪ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ, ಉನ್ನತ ಶಿಕ್ಷಣಕ್ಕೂ ತಮ್ಮನ್ನು ತಾವು ತೆರೆದುಕೊಂಡವರಲ್ಲ. ಆದರೂ ಅವರ ಆಡಳಿತ ಶೈಲಿ ಬೇರೆ ಎಲ್ಲ ಮಂತ್ರಿ ಮುಖ್ಯಮಂತ್ರಿಗಳಿಗೂ ಮಿಗಿಲು. ಕಾರಣ ಜನರ ಬದುಕು ಹಸನಾಗಿಸಲು ಬಲು ಸುಧೀರ್ಘ ಕಾಲ ಅವರ ಅಹರ್ನಿಶಿ ತುಡಿತ ಮತ್ತು ದುಡಿತದ ಅನುಭವ ಮಾತ್ರ ಕಾರಣ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ.
ಅಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎಲ್ಲ ಇಲಾಖೆಗಳ ಮುಖ್ಯಸ್ಥರ ಸಭೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಭೆಯ ಅಧ್ಯಕ್ಷತೆ ವಹಿಸಿ ಅತ್ಯಂತ ಗಂಭೀರ ವಾದನರಾಗಿ ಮಾತು ಆರಂಭಿಸಿದರು.
ಅವರ ಮೊದಲ ಮಾತು, ‘ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು’ ಎನ್ನುವುದೇ ನಮ್ಮ ಸರಕಾರದ ಆದ್ಯತೆ. ನಾವೆಲ್ಲರೂ ಬದ್ಧತೆ, ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಈ ಗುರಿ ಸಾಧನೆ ಕಷ್ಟವೇನಲ್ಲ ಎಂಬುದಾಗಿತ್ತು.
ಹಾಗೆಯೇ ಖಡಕ್ ಐಎಎಸ್ ಅಧಿಕಾರಿಯೊಬ್ಬರನ್ನು ಉದ್ದೇಶಿಸಿ, ‘ಏನ್ ಸ್ವಾಮೀ, ನಾನು ಹೇಳಿದ್ದಕ್ಕೆ ನೀವು ಸಹಮತ ವ್ಯಕ್ತಪಡಿಸುತ್ತೀರಾ’ ಎಂದು ಪ್ರಶ್ನಿಸಿದವರೇ ‘ಸರಕಾರ ಮಾನವೀಯ ಅಂತಃಕರಣದಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಎಲ್ಲದಕ್ಕೂ ಕಾನೂನು ಕಟ್ಟಳೆ ಎಂದುಕೊಂಡು ವಿಳಂಬಿಸಿದರೆ ಬಡವರ, ಜನ ಸಾಮಾನ್ಯರ ಬದುಕನ್ನು ಹಸನುಗೊಳಿಸಲು ಸಾಧ್ಯವಾಗುವುದಿಲ್ಲ. ಬಡವರ ಅಭಿವೃದ್ಧಿ ವಿಚಾರ ಬಂದಾಗ ನಿಯಮಗಳನ್ನು ಸ್ವಲ್ಪ ಸಡಿಲಿಸಬೇಕು. ನಾವು ಅವರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸಬೇಕು. ನಮಗೊಂದು ದೇವದುರ್ಲಭ ಅವಕಾಶ ಸಿಕ್ಕಿದೆ. ಅದು ವ್ಯರ್ಥವಾಗಬಾರದು’ ಎಂದು ಅಷ್ಟೇ ಖಡಕ್ಕಾಗಿ ಹೇಳಿದರು. ಅದಕ್ಕೆ ಆ ಐಎಎಸ್ ಅಧಿಕಾರಿ ನಗುತ್ತಲೇ ಸ್ಪಂದಿಸಬೇಕಾಯಿತು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಂತಹ ಉನ್ನತ ಸ್ಥಾನದಲ್ಲಿದ್ದ ಆ ಅಧಿಕಾರಿ ಸ್ವಲ್ಪ ಜಿಗುಟಿನ ಸ್ವಭಾವದವರಾಗಿದ್ದರು. ಹಾಗಾಗಿ ಉನ್ನತಾಧಿಕಾರಿಗಳು ಸ್ಪಂದನಶೀಲರಾಗಿ ಕೆಲಸ ಮಾಡಿದರೆ ಮಾತ್ರ ಆಡಳಿತ ಯಂತ್ರಕ್ಕೆ ನಿರೀಕ್ಷಿತ ವೇಗ ಸಿಗಲು ಸಾಧ್ಯ. ಹಿರಿಯ ಅಧಿಕಾರಿಗೆ ನಯವಾಗಿ ಚಾಟಿ ಬೀಸುವ ಮೂಲಕ ಈ ಸಂದೇಶವನ್ನು ಯಡಿಯೂರಪ್ಪನವರು ರವಾನಿಸಿದ್ದರು. ತನ್ಮೂಲಕ ತಮ್ಮ ನೇತೃತ್ವದ ಸರಕಾರದ ಆದ್ಯತಾ ಸೂಚಿಯನ್ನು ಪ್ರಾರಂಭದಲ್ಲೆ ಸ್ಪಷ್ಟಗೊಳಿಸಿದ್ದರು.
ಆಡಳಿತದ ಉದ್ದಕ್ಕೂ ಪ್ರತಿಕ್ಷಣವೂ ಯಡಿಯೂರಪ್ಪ ನುಡಿದಂತೆ ನಡೆದರು. ಅವರ ಈ ಜನಪರ ಹಠವಾದಿ ನಿಲುವಿನಿಂದಾಗಿ ಹಲವರ ವಿರೋಧವನ್ನೂ ಎದುರಿಸಬೇಕಾಯಿತು, ರಾಜಕೀಯ ಸವಾಲುಗಳಿಗೂ ಸಿಲುಕಬೇಕಾಗಿ ಬಂತು ಆ ವಿಚಾರ ಬೇರೆ.
ಯಡಿಯೂರಪ್ಪ ಎಂದರೆ ಹೋರಾಟ:
ರಾಜಕೀಯದಲ್ಲಿ ಆರಂಭದಿಂದ ಕೊನೆವರೆಗೆ ಯಡಿಯೂರಪ್ಪ ಸವೆಸಿದ ಹಾದಿ ಹೂವಿನ ಹಾಸಿಗೆ ಆಗಿರಲಿಲ್ಲ. ಅದು ಕಲ್ಲುಮುಳ್ಳಿನ ಹಾದಿಯಾಗಿತ್ತು. ಯಡಿಯೂರಪ್ಪ ಎಂದರೆ ಅಕ್ಷರಶಃ ಕಾದ ಕುಲುಮೆಯಲ್ಲಿ ಸೋಸಿ ಪರಿಪಕ್ವವಾದ ವ್ಯಕ್ತಿತ್ವ. ಶಿಕಾರಿಪುರದಿಂದ ಆರಂಭವಾಗಿ ವಿಧಾನ ಸೌಧದ ಮೂರನೇ ಮಹಡಿವರೆಗೆ ಪ್ರತಿದಿನ ಪ್ರತಿ ಕ್ಷಣ ಹೋರಾಟ ಹೋರಾಟ ಹೋರಾಟ.
ಅಧಿಕಾರದ ಕುರ್ಚಿಯ ಮೇಲೆ ಕುಳಿತಾಗಲೂ ಕಾರಣ ಆಕರಣಗಳಿಗೆ ಹೋರಾಡಿದ ಯಾವುದಾದರೂ ಓರ್ವ ನಾಯಕ ಇದ್ದರೆ ಅದು ಯಡಿಯೂರಪ್ಪ ಮಾತ್ರ ಎಂದರೆ ಅತಿಶಯೋಕ್ತಿ ಆಗಲಾರದು.
ಒಟ್ಟಿನಲ್ಲಿ ಹೋರಾಟದಿಂದಲೇ ರಾಜಕೀಯ ಬದುಕು ರೂಪಿಸಿಕೊಂಡ ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಅವರಿಗೊಂದು ಒಂದು ಅನ್ವರ್ಥಕ ಬಿರುದು ಪ್ರಾಪ್ತವಾಯಿತು.
ಪ್ರಖರ ಹೋರಾಟಕ್ಕೆ ಹೆಸರುವಾಸಿಯಾದ ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧವೇ ನಡುಗುವುದು’ ಎಂಬುದು ಆ ಬಿರುದು. ಈ ಮಾತು ಆಗಲೂ ಈಗಲೂ ಸತ್ಯ ಎಂಬುದು ಸಿಂಹ ಯಾವತ್ತಿದ್ದರೂ ಸಿಂಹವೇ ಎಂಬ ಮಾತನ್ನು ಸಾಕ್ಷೇಕರಿಸುವಂತಿದೆ.
ಯಡಿಯೂರಪ್ಪ ಎಂದರೆ ವೇಗ!:
ಯಡಿಯೂರಪ್ಪ ಇಂದಿನ ಕೆಲಸ ನಾಳೆ ಮಾಡು ಎಂಬ ಜಾಯಮಾನದವರಲ್ಲ. ಇಂದಿನ ಕೆಲಸವನ್ನು ಈ ಕ್ಷಣದಲ್ಲೇ ಮಾಡು ಎನ್ನುವವರು. ಅವರ ಪದಕೋಶದಲ್ಲಿ ಆಯಿತು, ಹೋಯಿತು, ನೋಡೋಣ ಎಂಬ ಪದಗಳೇ ಇರಲಿಲ್ಲ. ಅದರ ಪರಿಣಾಮ ಅಧಿಕಾರದುದ್ದಕ್ಕೂ ಯಡಿಯೂರಪ್ಪ ನಡೆದು ಸಾಗಿದರೆ ಸಹವರ್ತಿ ಮಂತ್ರಿಗಳು ಮತ್ತು ಅಧಿಕಾರಿಗಳು ಇಡುಸಿರುಬಿಡುತ್ತಾ ಓಡಲೇಬೇಕಾಗಿತ್ತು. ಬೆಳಗಿನ ಜಾವ ನಾಲ್ಕೂವರೆಯಿಂದ ರಾತ್ರಿ 12ರ ನಡುರಾತ್ರಿಯವರೆಗೆ ಯಡಿಯೂರಪ್ಪ ಕಾರ್ಯ ತತ್ಪರ, ಬಿಡುವಿಲ್ಲದ ಕೆಲಸವೇ ಅವರ ವಿಶ್ರಾಂತಿ, ವಿರಾಮ.
ಯಡಿಯೂರಪ್ಪ ಎಂದರೆ ಶುದ್ಧ ಅಂತಃಕರಣ!:
ಹೋರಾಟ, ಗುಡುಗು ಸಿಡಿಲು, ಘರ್ಜನೆಗಳಿಂದಲೇ ರೂಪಿತವಾದ ಯಡಿಯೂರಪ್ಪನವರೇ ಸ್ವತಃ ಆಡಳಿತದ ಸೂತ್ರ ಹಿಡಿದಾಗ ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲಿತ್ತು.
ಏಕೆಂದರೆ, ಸಣ್ಣ ವ್ಯತ್ಯಾಸ ಕಂಡರೂ ಸಿಡಿಮಿಡಿಗೊಳ್ಳುವ, ಕೋಪಗೊಳ್ಳುವ ಪ್ರವೃತ್ತಿ ಯಡಿಯೂರಪ್ಪ ಅವರದ್ದಾಗಿತ್ತು. ಆದರೆ, ಅವರು ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಕಟ್ಟ ಕಡೆಯ ಜನರಿಗೂ ಸರಕಾರದ ಯೋಜನೆಗಳನ್ನು ತಲುಪಿಸುವ ದೃಷ್ಟಿಯಿಂದ ಆಡಳಿತ ಯಂತ್ರವನ್ನು ವಿಶ್ವಾಸಕ್ಕೆ ತೆಗೆದುಕೊಂಡರು.
ಅದಕ್ಕೆ ಅಪಾರವಾದ ಸಹನೆ, ತಮ್ಮ ಸುದೀರ್ಘ ರಾಜಕೀಯ ಅನುಭವವನ್ನು ಬಂಡವಾಳವಾಗಿ ತೊಡಗಿಸಿದರು. ಅಂದರೆ ಜನರ ಕೆಲಸವಾಗಬೇಕು, ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಬೇಕು ಎಂಬ ಕಾಳಜಿಯಿಂದ ಸಿಟ್ಟನ್ನು ನಿಯಂತ್ರಿಸಿಕೊಂಡರು. ಅರ್ಥಾತ್ ಅಗತ್ಯ ಬಂದಾಗ ಕುಸುಮದಷ್ಟು ಮೃದುವಾದರು. ಅಧಿಕಾರಿಗಳು ನಿಷ್ಕಾಳಜಿ ತೋರಿದಾಗ, ಬೇಜವಾಬ್ದಾರಿಯಾಗಿ ನಡೆದುಕೊಂಡಾಗ ಬೈದು ಬಿಗಿ ಮಾಡಲು ಹಿಂದೇಟು ಹಾಕಲಿಲ್ಲ. ‘ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ’ ಎಂದು ಸಂಸ್ಕೃತೋಕ್ತಿಯೊಂದಿದೆ. ಹಾಗೆಯೇ ಯಡಿಯೂರಪ್ಪನವರು ತಮ್ಮ ಆಡಳಿತ ಯಂತ್ರಕ್ಕೆ ತಿಳಿ ಹೇಳುವ ಸಂದರ್ಭ ಬಂದಾಗ ತಿಳಿ ಹೇಳಿದರು. ಕಿವಿ ಹಿಂಡುವ ಅನಿವಾರ್ಯತೆ ಸೃಷ್ಟಿಯಾದಾಗ ಅದನ್ನೂ ಮಾಡಿದರು. ಯಡಿಯೂರಪ್ಪನವರ ಈ ಆಡಳಿತದ ಶೈಲಿಯಿಂದಾಗಿ ಅಧಿಕಾರಿ ವರ್ಗ ಸದಾ ಜಾಗ್ರತಾವಸ್ಥೆಯಲ್ಲಿ ಇರುವಂತಾಯಿತು. ಕೆಳಹಂತದ ನೌಕರರವರೆಗೂ ಇದು ವಿಸ್ತರಣೆಯಾಯಿತು.
ಆಡಳಿತದ ಛಾಪು:-ಯಡಿಯೂರಪ್ಪಗೆ ಸರಿಸಾಟಿ ಬೇರಿಲ್ಲ;
ಯಡಿಯೂರಪ್ಪನವರ ಅಧಿಕಾರ ಪರ್ವ ಆರಂಭವಾದದ್ದು ಸಮ್ಮಿಶ್ರ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗುವ ಮೂಲಕ.
ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಹಣಕಾಸು ಖಾತೆಯನ್ನೂ ನಿರ್ವಹಿಸುತ್ತಿದ್ದ ಅವರು ತಮ್ಮ ಮೊದಲ ಮುಂಗಡ ಪತ್ರದಲ್ಲೇ ಛಾಪು ಮೂಡಿಸಿದ್ದರು. ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ರುಜುವಾಗಿಸಿದರು.
ಪರಿಣಾಮ ಬಡ ರೈತರ ಸಾಲ ಮನ್ನಾದಂತಹ ಅಸಾಧ್ಯ ನಿಲುವು ತಾಳಿದರು. ಕುಟುಂಬದ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯನ್ನು ಘೋಷಿಸಿ ಜಾರಿಗೊಳಿಸಿದರು. ಕೃಷಿ ಹೊಂಡ ನಿರ್ಮಾಣ ಸೇರಿದಂತೆ ರೈತ ಪರವಾದ ಹತ್ತು ಹಲವು ಕಾರ್ಯಕ್ರಮ ಘೋಷಿಸಿದರು. ಗ್ರಾಮಗಳ ಹಳ್ಳಿಹಳ್ಳಿಗೆ ರಸ್ತೆ, ವಿದ್ಯುತ್, ಕುಡಿಯುವ ನೀರು, ತಲೆ ಮೇಲೊಂದು ಸೂರು ಕಲ್ಪಿಸಿದರು. ಶಾಲಾ ಮಕ್ಕಳಿಗೆ ಬೈಸಿಕಲ್ ಯಡಿಯೂರಪ್ಪ ಜನಪ್ರಿಯ ಯೋಜನೆಗಳಲ್ಲಿ ಹೊಸ ಮೈಲಿಗಲ್ಲು.
ಬಹಳ ಮುಖ್ಯವಾಗಿ ಪ್ರಾದೇಶಿಕ ಅಸಮತೋಲನ ನಿವಾರಣೆ ಸಂಬಂಧ ಡಾ। ಡಿ.ಎಂ.ನಂಜುಂಡಪ್ಪ ಅವರು ನೀಡಿದ್ದ ವರದಿಯ ಶಿಫಾರಸುಗಳ ಅನುಷ್ಠಾನ ಸಂಬಂಧ ಅನುದಾನ ಹಂಚಿಕೆ ಮಾಡಿ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸಂಕಲ್ಪ ತೊಟ್ಟು ಜಾರಿಗೊಳಿಸಿದರು. ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ ಯೋಜನೆಯಂತಹ ವಿನೂತನ ಯೋಜನೆ ರೂಪಿಸಿದರು. ಸಾರಾಯಿ ಮಾರಾಟ ನಿಷೇಧ ಕೂಡ ಯಡಿಯೂರಪ್ಪ ಅವರದ್ದೇ ಇಚ್ಛಾಸಕ್ತಿಯ ಪರಿಣಾಮ. ಎಲ್ಲ ಬಗೆಯ ಲಾಟರಿಗಳನ್ನು ನಿಷೇಧಿಸಿ 2007ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಕರ್ನಾಟಕವನ್ನು ಲಾಟರಿ ಮುಕ್ತ ರಾಜ್ಯವೆಂದು ಘೋಷಿಸಿದ್ದು ಐತಿಹಾಸಿಕ ಕ್ರಮ ಎನ್ನಲು ಅಡ್ಡಿಯಿಲ್ಲ.
ತಮಗೆ ತಾವೇ ಮೇಲ್ಪಂಕ್ತಿ ಹಾಕಿದರು:
2008ರಲ್ಲಿ ಬಿಜೆಪಿ ಸರಕಾರ ರಚಿಸಿ ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪನವರು ಜಾರಿಗೊಳಿಸಿದ ಸುಧಾರಣಾ ಕ್ರಮಗಳು, ಜನಪರ ಯೋಜನೆಗಳು ಬಗ್ಗೆ ಹೇಳುತ್ತ ಹೋದರೆ ಬೃಹತ್ ಸಂಪುಟವನ್ನೇ ಬರೆಯಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ಆಡಳಿತದ ಮುಖ್ಯಸ್ಥರೊಬ್ಬರ ನಡವಳಿಕೆ ಅವರ ಕೆಳಗಿನವರ ಮೇಲೆ ಪ್ರಭಾವ ಬೀರುತ್ತದೆ. ಸರಕಾರಿ ವ್ಯವಸ್ಥೆಯೆಂದರೆ ಜಡ ಭರತನ ಸ್ಥಿತಿಯಲ್ಲಿರುತ್ತದೆ. ಜಿಡ್ಡು ಗಟ್ಟಿದಂತಹ ಇಂತಹ ವ್ಯವಸ್ಥೆಯನ್ನು ಸರಿದಾರಿಗೆ ತರಲು ಸಾಧ್ಯವೇ ಇಲ್ಲ ಎಂಬ ಅಸಹನೆಯ ಮಾತು ಎಲ್ಲೆಡೆ ಕೇಳಿ ಬರುತ್ತದೆ. ಹಾಗಾಗಿ ಆಡಳಿತ ಯಂತ್ರವನ್ನು ಸರಿ ದಿಕ್ಕಿನಲ್ಲಿ ಸಾಗಿಸುವ ದೃಷ್ಟಿಯಿಂದ ತಾವೇ ಮುಂದಾಗಿ ಮೇಲ್ಪಂಕ್ತಿ ಹಾಕಿಕೊಟ್ಟವರು ಯಡಿಯೂರಪ್ಪನವರು. ಅವರು ಯಾವುದೇ ಇಲಾಖೆಯ ಸಭೆ ನಡೆಸುವುದಿದ್ದರೂ ಪೂರ್ಣ ಮಾಹಿತಿಯೊಂದಿಗೆ ಬಂದು ಕುಳಿತುಕೊಳ್ಳುತ್ತಿದ್ದರು. ಅಧಿಕಾರಿಗಳು ನೀಡುವ ಫೀಡ್‌ಬ್ಯಾಕ್ ಒಂದನ್ನೇ ನೆಚ್ಚಿಕೊಂಡರೆ ಜನಕಲ್ಯಾಣದ ವಿಷಯದಲ್ಲಿ ಪೂರ್ಣ ನ್ಯಾಯ ಕೊಡಲು ಆಗುವುದಿಲ್ಲ. ರಾಜಕಾರಣಿಯಾದವರಿಗೆ ಸ್ವತಃ ದೂರದೃಷ್ಟಿ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪನವರು ಸ್ಪಷ್ಟತೆ ಹೊಂದಿದ್ದರು. ಹಾಗಾಗಿ ಅವರು ನಡೆಸುವ ಸಭೆಗಳು ಫಲಿತಾಂಶ ಆಧಾರಿತವಾಗಿರುತ್ತಿದ್ದವು.
ಶಿಸ್ತು ಸಮಯಪಾಲನೆಗೆ ಅಗ್ರ ಸ್ಥಾನ;
ವಿವಿಧ ಇಲಾಖಾ ಮುಖ್ಯಸ್ಥರ ಸಭೆಗಳಿರಲಿ, ಜಿಲ್ಲಾಡಳಿತದೊಂದಿಗಿನ ಸಭೆ ಅಥವಾ ಸಚಿವ ಸಂಪುಟ ಸಭೆಯಿರಬಹುದು.
ಈ ಎಲ್ಲ ಸಭೆಗಳಲ್ಲೂ ಯಡಿಯೂರಪ್ಪನವರು ನಿಗದಿತ ಸಮಯಕ್ಕಿಂತ 5 ನಿಮಿಷ ಮುಂಚೆಯೇ ಹಾಜರಿರುತ್ತಿದ್ದರು. ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದಿಂದ ಹಿಡಿದು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ನಡೆಸುವ ಯಾವುದೇ ಸಭೆಗಳಿಗೆ ಅವರು ತಡವಾಗಿ ಹೋದ ನಿದರ್ಶನವೇ ಇಲ್ಲ ಎನ್ನಬಹುದು. ಸಮಯ ಪಾಲನೆಯಲ್ಲಿ ಅವರು ಅಷ್ಟು ಕಟ್ಟುನಿಟ್ಟು. ಸಭೆಗಳನ್ನು ಅನಗತ್ಯವಾಗಿ ವಿಳಂಬಿಸದೆ, ಚರ್ಚೆಯೂ ಹಳಿ ತಪ್ಪದಂತೆ ತ್ವರಿತಗತಿಯಲ್ಲಿ ನಿರ್ಣಯ ಕೈಗೊಳ್ಳುವ ಮಾದರಿಯನ್ನು ಅವರು ಅನುಸರಿಸಿದ್ದರು. ಹಾಗಾಗಿ ಯಡಿಯೂರಪ್ಪನವರ ಅಧಿಕಾರ ಅವಧಿಯಲ್ಲಿ ಆಡಳಿತ ಯಂತ್ರ ಚುರುಕಾಗಿತ್ತು. ಭಗವಾನ್ ಭಾಸ್ಕರ ದೇವ ರಥಾರೂಢನಾಗಿ ಅವಿಶ್ರಾಂತವಾಗಿ ಸಂಚರಿಸುವಂತೆ ಆಡಳಿತ ಯಂತ್ರವೂ ನಿರಂತರತೆ ಕಾಯ್ದುಕೊಳ್ಳುವಂತೆ ಯಡಿಯೂರಪ್ಪನವರು ನೋಡಿಕೊಂಡಿದ್ದರು. ಮಂತ್ರಿಮಂಡಲದ ಸದಸ್ಯರಿಗೂ ಯಡಿಯೂರಪ್ಪನವರು ಸ್ವಾತಂತ್ರ್ಯ ನೀಡಿದ್ದರು.
ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ, ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಪ್ರಯೋಗ, ನಗರ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಸಮತೋಲನದ ಹೆಜ್ಜೆ, ಐಟಿ ಸಿಟಿ ಖ್ಯಾತಿಯ ಬೆಂಗಳೂರಿನ ಮೂಲಸೌಕರ್ಯಕ್ಕೆ ಮೊದಲ ಬಾರಿಗೆ ಹೆಚ್ಚು ನೆರವು ಕಲ್ಪಿಸಿದ್ದು ಸೇರಿದಂತೆ ಅಭಿವೃದ್ಧಿಯ ಹೊಸ ಅಧ್ಯಾಯವನ್ನೇ ಯಡಿಯೂರಪ್ಪನವರು ಪ್ರಾರಂಭಿಸಿದ್ದರು.
ಯಡಿಯೂರಪ್ಪ ಒಂದೊಮ್ಮೆ ಇನ್ನೂ ಸುದೀರ್ಘ ಅವಧಿಗೆ ಅಧಿಕಾರದಲ್ಲಿರುತ್ತಿದ್ದರೆ ಕರ್ನಾಟಕದ ಚಿತ್ರಣ ವಿಶ್ವ ಭೂಪಟದಲ್ಲಿ ಇನ್ನೂ ಮಹೋನ್ನತ ಸ್ಥಾನ ಪಡೆಯುತ್ತಿದ್ದುದರಲ್ಲಿ ಸಂಶಯವಿಲ್ಲ.
ಮಾತು ಕೃತಿ ಬದ್ಧತೆ:
ಇಂದು ಯಡಿಯೂರಪ್ಪ ಅವರ ಬಳಿ ಅಧಿಕಾರವಿಲ್ಲ. ಆದರೆ ಈಗಲೂ ಜನಪ್ರಿಯತೆಯಲ್ಲಿ ಅವರನ್ನು ಮೀರಿಸಿವವರಿಲ್ಲ. ಅದಕ್ಕೆ ಕಾರಣ ಜನಸಾಮಾನ್ಯರು, ಕೆಳಹಂತದ ಕಾರ್ಯಕರ್ತರನ್ನು ಪ್ರೀತಿಯಿಂದ ಅವರು ನೋಡುವ ಪರಿ ಕಾರಣ. ಬಾರಣ್ಣ, ಏನಣ್ಣ ಎಂದು ಯಡಿಯೂರಪ್ಪ ಅವರು ಬಾಚಿ ತಬ್ಬಿದರೆ ಮನಸೋಲದವರೇ ಇಲ್ಲ.
ಮಾಧ್ಯಮ ಬಂಧು:
ಸಾರ್ವಜನಿಕ ಜೀವನದಲ್ಲಿ ಮಾಧ್ಯಮಗಳ ಮಹತ್ವವನ್ನು ಯಡಿಯೂರಪ್ಪ ಅವರಷ್ಟು ಅರಿತವರು ಬೇರೊಬ್ಬರಿಲ್ಲ ಎಂದರೆ ತಪ್ಪಲ್ಲ. ಮಾಧ್ಯಮದವರು ಹಿರಿಯರು ಮತ್ತು ಕಿರಿಯರು ಎಂಬ ಭೇದ ಮಾಡದೆ ಎಲ್ಲರನ್ನೂ ಅಕ್ಕರೆಯಿಂದ ನೋಡುವ ಅವರ ಹೃದಯ ವೈಶಾಲ್ಯ ಇಡೀ ಮಾಧ್ಯಮ ಜಗತ್ತು ಯಡಿಯೂರಪ್ಪ ಅವರನ್ನು ಆದರಿಸುವಂತೆ ಮಾಡಿದ ಮೋಡಿ.
ಸರ್ವ ಜನಪ್ರಿಯ ನಾಯಕ:
ಯಡಿಯೂರಪ್ಪ ಅವರನ್ನು ರೈತ ನಾಯಕ, ವೀರಶೈವ ಲಿಂಗಾಯತ ನಾಯಕ ಎಂದು ಕರೆಯುತ್ತಾರೆ ನಿಜ, ಆದರೆ ವಾಸ್ತವದಲ್ಲಿ ಅವರು ಇಡೀ ರಾಜ್ಯದಲ್ಲಿ ಸರ್ವಜನಪ್ರಿಯ ಅಗ್ರಗಣ್ಯ ನಾಯಕ. ಅದಕ್ಕೆ ಕಾರಣ ಅಧಿಕಾರ ಇಲ್ಲದಾಗ ಜಾತಿ ಮತ ನೋಡದೆ ಎಲ್ಲ ಜನಜಾತಿಗಳ ಪರ ಹೋರಾಟ ರೂಪಿಸಿದ್ದು, ಅಧಿಕಾರ ಬಂದಾಗ ಆಡಳಿತ ಮತ್ತು ಸರಕಾರದ ಯೋಜನೆಗಳನ್ನು ಎಲ್ಲ ಜನರ ಮನೆ ಬಾಗಿಲಿಗೆ ತಲುಪಿಸಿದ್ದು, ಪಕ್ಷದಲ್ಲಿ ಎಲ್ಲ ಭಾಗಗಳ ಎಲ್ಲ ಜಾತಿಗಳ ಎರಡು ಮತ್ತು ಮೂರನೇ ತಲೆಮಾರಿನ ನಾಯಕತ್ವವನ್ನು ಪ್ರೀತಿಸಿದ್ದು ಮತ್ತು ಬೆಳೆಸಿದ್ದು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಂತಹ ಉನ್ನತ ಸ್ಥಾನದಲ್ಲಿದ್ದ ಆ ಅಧಿಕಾರಿ ಸ್ವಲ್ಪ ಜಿಗುಟಿನ ಸ್ವಭಾವದವರಾಗಿದ್ದರು. ಹಾಗಾಗಿ ಉನ್ನತಾಧಿಕಾರಿಗಳು ಸ್ಪಂದನಶೀಲರಾಗಿ ಕೆಲಸ ಮಾಡಿದರೆ ಮಾತ್ರ ಆಡಳಿತ ಯಂತ್ರಕ್ಕೆ ನಿರೀಕ್ಷಿತ ವೇಗ ಸಿಗಲು ಸಾಧ್ಯ. ಹಿರಿಯ ಅಧಿಕಾರಿಗೆ ನಯವಾಗಿ ಚಾಟಿ ಬೀಸುವ ಮೂಲಕ ಈ ಸಂದೇಶವನ್ನು ಯಡಿಯೂರಪ್ಪನವರು ರವಾನಿಸಿದ್ದರು. ತನ್ಮೂಲಕ ತಮ್ಮ ನೇತೃತ್ವದ ಸರಕಾರದ ಆದ್ಯತಾ ಸೂಚಿಯನ್ನು ಪ್ರಾರಂಭದಲ್ಲೆ ಸ್ಪಷ್ಟಗೊಳಿಸಿದ್ದರು.
-ಲೆಹರ್ ಸಿಂಗ್, ರಾಜ್ಯಸಭಾ ಸದಸ್ಯರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ