ಹಿಂದು ಹೇಳಿಕೆ: ಸತೀಶ್‌ ಜಾರಕಿಹೊಳಿ ವಿರುದ್ಧ ಕೋರ್ಟ್‌ಗೆ ದೂರು

By Govindaraj SFirst Published Nov 10, 2022, 10:03 AM IST
Highlights

ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ವಿರುದ್ಧ ವಕೀಲರೊಬ್ಬರು ವಿಚಾರಣಾ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದಾರೆ.

ಬೆಂಗಳೂರು (ನ.10): ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ವಿರುದ್ಧ ವಕೀಲರೊಬ್ಬರು ವಿಚಾರಣಾ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದಾರೆ. ನಗರದ ವಕೀಲ ಕೆ. ದಿಲೀಪ್‌ ಕುಮಾರ್‌ ಅವರು ಬುಧವಾರ ನಗರದ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದು, ಗಲಭೆ ಮತ್ತು ಮಾನಹಾನಿ ಪರಿಚ್ಛೇದ ಅಡಿ ಅಪರಾಧ ಕೃತ್ಯ ಎಸಗಿದ ಸಂಬಂಧ ಸತೀಶ್‌ ಜಾರಕಿಹೊಳಿ ವಿರುದ್ಧ ಕಾಗ್ನಿಜೆನ್ಸ್‌ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ನ್ಯಾಯಾಲಯವು ದೂರಿನ ವಿಚಾರಣೆಯನ್ನು ನ.18ಕ್ಕೆ ಮುಂದೂಡಿದೆ.

ಹಿಂದೂ ನಮ್ಮ ಪದವೇ ಅಲ್ಲ. ಇದು ಪರ್ಷಿಯನ್‌ನಿಂದ ಬಂದಿರುವ ಪದ. ಹಿಂದೂ ಪದದ ಅರ್ಥ ಅಶ್ಲೀಲವಾಗಿದೆ. ಆ ಪದದ ಅರ್ಥ ತಿಳಿದರೆ ನಾಚಿಕೆಯಾಗುತ್ತದೆ ಎಂದು ಸತೀಶ್‌ ಜಾರಕಿಹೊಳಿಯವರು ಹೇಳಿರುವ ಸುದ್ದಿಯನ್ನು ಓದಿದ ತಮಗೆ ಅವಮಾನವಾಗಿದ್ದು, ಮಾನಸಿಕವಾಗಿ ಬಹಳ ಖಿನ್ನತೆಗೆ ಒಳಗಾಗಿದ್ದೇನೆ. ನನಗೆ ಸಾಕಷ್ಟುಇತರೆ ಧರ್ಮದ ಸಾಕಷ್ಟುಕಕ್ಷಿದಾರರು ಹಾಗೂ ಸ್ನೇಹಿತರಿದ್ದಾರೆ. ಅವರು ತಮ್ಮನ್ನು ಅವಮಾನ ಮತ್ತು ನಿರ್ಲಕ್ಷದ ನೋಡಿ, ನಕ್ಕಿದ್ದಾರೆ, ಹಿಂದೂ ಧರ್ಮದ ಕೆಲ ಸ್ನೇಹಿತರು ಸಹ ಸತೀಶ್‌ ಜಾರಕಿಹೊಳಿ ಹೇಳಿಕೆಯಿಂದ ಅವಮಾನ ಮತ್ತು ಮಾನಹಾನಿಗೆ ಗುರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಿಜೆಪಿ ಹಿಂದು ಆಕ್ರೋಶ: ಕಾಂಗ್ರೆಸ್‌ ಪ್ರತಿಕೃತಿ ದಹನ

ತಮ್ಮ ಹಾಗೂ ಹಿಂದು ಧರ್ಮದ ಅಪಾರ ಜನರ ಭಾವನೆಗಳನ್ನು ಅವಮಾನಿಸಿದ್ದಾರೆ. ಮಾನಹಾನಿ ಉಂಟು ಮಾಡಿದ್ದಲ್ಲದೆ, ಗೌರವಕ್ಕೆ ಧಕ್ಕೆ ತಂದಿದ್ದಾರೆ. ಅವರು ಹೇಳಿಕೆ ನೀಡಿದ ನಂತರ ರಾಜ್ಯದ ಹಲವು ಭಾಗಗಳಲ್ಲಿ ಜನರು ಗಲಭೆ ನಡೆಸಿದ್ದಾರೆ. ಆ ಮೂಲಕ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 500 (ಮಾನಹಾನಿ) ಮತ್ತು 159 ಅಡಿಯಲ್ಲಿ (ಗಲಭೆ ಕಾರಣವಾಗುವಂತೆ ಪ್ರಚೋದನೆ ಹೇಳಿಕೆ ನೀಡಿದ) ಅಪರಾಧ ಕೃತ್ಯ ಎಸಗಿದ್ದಾರೆ. ಆದ್ದರಿಂದ ಆರೋಪಿ ವಿರುದ್ಧ ಕಾಗ್ನಿಜೆನ್ಸ್‌ ತೆಗೆದುಕೊಳ್ಳಬೇಕು ಎಂದು ದೂರುದಾರರು ಕೋರಿದ್ದಾರೆ.

ದೂರಿನ ವಿವರ: ಬೆಳಗಾವಿಯ ನಿಪ್ಪಾಣಿ ಪಟ್ಟಣದಲ್ಲಿ ಭಾನುವಾರ (ನ.6) ನಡೆದ ‘ಮಾನವ ಬಂಧುತ್ವ ವೇದಿಕೆ’ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸತೀಶ್‌ ಜಾರಕಿಹೊಳಿ ಅವರು ಮಾತನಾಡುತ್ತಾ ಹಿಂದೂ ನಮ್ಮ ಪದವೇ ಅಲ್ಲ. ಇದು ಪರ್ಷಿಯನ್‌ನಿಂದ ಬಂದಿರುವ ಪದ. ಹಿಂದೂ ಪದದ ಅರ್ಥ ಅಶ್ಲೀಲವಾಗಿದೆ. ಆ ಪದದ ಅರ್ಥ ತಿಳಿದರೆ ನಾಚಿಕೆಯಾಗುತ್ತದೆ. ಪರ್ಷಿಯನ್‌ ಪದವಾದ ಹಿಂದೂ ನಮ್ಮ ಪದ ಹೇಗಾಯಿತು. ಈ ವಿಷಯದಲ್ಲಿ ಚರ್ಚೆಯಾಗಬೇಕು. ಎಲ್ಲಿಂದಲೋ ತಂದ ಪದವನ್ನು ನಮ್ಮ ಮೇಲೆ ಹೇರಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. 

ಬಿಜೆಪಿ ಕೈಗೆ ಮತ್ತೆ ಹಿಂದು ಅಸ್ತ್ರ: ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್‌ಗೆ ತಲೆಬೇನೆ

ಹಾಗಾದರೆ, ಆ ಪದದ ಅರ್ಥವೇನು ಎಂದು ಅಲ್ಲಿದ್ದವರು ಪ್ರಶ್ನಿಸಿದಾಗ, ವಾಟ್ಸಾಪ್‌, ವಿಕಿಪೀಡಿಯಾ ನೋಡಿದರೆ ನಿಮಗೆ ತಿಳಿಯುತ್ತದೆ ಎಂದು ಶಾಸಕರು ತಿಳಿಸಿದ್ದಾರೆ. ಸತೀಶ್‌ ಜಾರಕಿಹೊಳಿ ಅವರ ಈ ಹೇಳಿಕೆಯ ವಿಡಿಯೋ ಸೋಮವಾರ ವೈರಲ್‌ ಆಗಿದೆ. ಅಲ್ಲದೆ, ತಮ್ಮ ಹೇಳಿಕೆ ವೈಯಕ್ತವಾದುದ್ದಲ್ಲ. ವಿಕಿಪೀಡಿಯಾ ಮತ್ತು ಹಲವು ಲೇಖಕರು ಬರೆದಿರುವ ಲೇಖನಗಳನ್ನು ಆಧರಿಸಿ ನಾನು ಹೇಳಿಕೆ ನೀಡಿದ್ದೇನೆ ಎಂದು ಸತೀಶ್‌ ಜಾರಕಿಹೊಳಿ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದರು. ಈ ಕುರಿತ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

click me!