
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಅ.13): ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸಂವಿಧಾನಬದ್ಧ ಹಕ್ಕುಗಳನ್ನು ಎತ್ತಿ ಹಿಡಿದಿದೆ. ನ್ಯಾಯಮೂರ್ತಿ ದುಲಿಯ ಅವರ ಅಭಿಪ್ರಾಯ ನಮಗೆ ಸಂತೋಷ ಕೊಟ್ಟಿದೆ, ವ್ಯಕ್ತಿಯೊಬ್ಬನಿಗೆ ಇರುವ ಸ್ವತಂತ್ರವಾಗಿ ಬದುಕುವ, ವ್ಯಾಪಾರ ಮಾಡುವ, ತಿನ್ನುವ ಹಕ್ಕುಗಳಂತೆ ಶಿಕ್ಷಣ ಪಡೆಯುವ ಹಕ್ಕು ಕೂಡ ಇದೆ ಎಂದು ಸಾಬೀತಾಗಿದೆ ಎಂದು ಎ.ಪಿ.ಸಿ.ಆರ್ ಸಂಚಾಲಕ ಹುಸೇನ್ ಕೋಡಿಬೆಂಗ್ರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಗುರುವಾರ ಉಡುಪಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ ನ್ಯಾಯಮೂರ್ತಿ ದುಲಿಯ ಅವರು ಬಹಳ ಸ್ಪಷ್ಟವಾಗಿ ಈ ಬಗ್ಗೆ ಹೇಳಿದ್ದಾರೆ. ಸಂವಿಧಾನದ ಅನುಚ್ಛೇದ 14 ಮತ್ತು 19ನ್ನು ಉಲ್ಲೇಖ ಮಾಡಿದ್ದಾರೆ. ಇದೇ ಆಶಯ ಉಳ್ಳ ತೀರ್ಪು ಮುಂದಿನ ದಿನಗಳಲ್ಲಿ ಬರುವ ನಿರೀಕ್ಷೆ ಇದ್ದು, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಿಂದಲೂ ಇದೆ ನಿರೀಕ್ಷೆ ನಾವು ಹೊಂದಿದ್ದೇವೆ ಎಂದರು. ನಾವು ಯಾವುದೇ ಸಮುದಾಯದ ವಿರುದ್ಧವಾಗಿ ಹೋಗಿಲ್ಲ, ಸಮಾಜದಲ್ಲಿ ಶಾಂತಿ ಕಾದಡುವ ಉದ್ದೇಶ ಇಟ್ಟುಕೊಂಡಿಲ್ಲ. ಸಮಾಜದಲ್ಲಿ ಶಾಂತಿ ಕಾಪಾಡುತ್ತಾ ವಿದ್ಯಾರ್ಥಿನಿಯರ ಹಕ್ಕಿಗಾಗಿ ಹೋರಾಟ ಮಾಡಿದ್ದೇವೆ, ಮುಂದಿನ ದಿನಗಳಲ್ಲಿ ಶಾಂತಿ ಸೌಹಾರ್ದತೆಯ ಜೊತೆಗೆ ಹೋರಾಟ ಮುಂದುವರಿಸುತ್ತೇವೆ, ಮುಖ್ಯ ನ್ಯಾಯಾಧೀಶರಿಂದ ಉತ್ತಮ ತೀರ್ಪು ನಿರೀಕ್ಷೆ ಮಾಡುತ್ತೇವೆ ಎಂದರು.
ಹೇಮಂತ್ ಗುಪ್ತ ಅವರ ನಿರ್ಣಯವನ್ನು ಕೂಡ ನಾವು ಗೌರವಿಸುತ್ತೇವೆ, ಅವರು ಕೂಡ ಉನ್ನತ ಹುದ್ದೆಯಲ್ಲಿರುವ ನ್ಯಾಯಮೂರ್ತಿ. ಮುಂದಿನ ದಿನಗಳಲ್ಲಿ ಅವರು ತಮ್ಮ ಅಭಿಪ್ರಾಯವನ್ನು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಗಮನಿಸಬೇಕು ಎಂದು ಕೇಳುತ್ತೇವೆ, ಸಾವಿರಾರು ಮುಸ್ಲಿಂ ವಿದ್ಯಾರ್ಥಿನಿಯರು ನೇರ ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕರು ಶಿಕ್ಷಣ ವಂಚಿತರಾಗಿದ್ದಾರೆ, ಹೈಸ್ಕೂಲ್ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗಿದೆ, ಪಿಯುಸಿ ಡಿಗ್ರಿ ಕಾಲೇಜುಗಳಿಗೂ ಸಮಸ್ಯೆಯಾಗಿದೆ ಎಂದರು.
ಕೆಲ ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಸಮಸ್ಯೆ ಆಗಿತ್ತು. ರೂಲ್ ಬುಕ್ ನಲ್ಲಿ ಹಿಜಾಬ್ ಹಾಕಲು ಅವಕಾಶವಿದ್ದರೂ ತಡೆಯಲಾಗಿತ್ತು, ಆದರೆ ಸ್ವಾರ್ಥ ಹಿತಾಸಕ್ತಿ ಸಂಘ ಪರಿವಾರದ ಒತ್ತಡದಿಂದ ವಿದ್ಯಾರ್ಥಿನಿಯರಿಗೆ ಅನ್ಯಾಯವಾಗಿದೆ.ವಿದ್ಯಾರ್ಥಿನಿಯರಿಗೆ ಶಿಕ್ಷಣ ವಂಚನೆ ಆಗಬಾರದು ಎಂದು ನ್ಯಾಯ ನಿರೀಕ್ಷೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಉನ್ನತ ಬೆಂಚಿಗೆ ಹೋಗುತ್ತಿದೆ, ನಮ್ಮ ವಕೀಲರ ಜೊತೆ ಮುಂದಿನ ಹೋರಾಟ ಮುಂದುವರಿಸಲು ಮಾತುಕತೆ ನಡೆಸಿದ್ದೇವೆ ಎಂದವರು ಹೇಳಿದರು.
ತೀರ್ಪು ನಮ್ಮ ಪರವಾಗಿ ಬರುತ್ತೆ: ಶ್ರೀ ರಾಮ ಸೇನೆ
ಶಾಲಾ - ಕಾಲೇಜಿನ ತರಗತಿಯೊಳಗೆ ಹಿಜಾಬ್ ಧರಿಸುವುದರ ಕುರಿತು ಸುಪ್ರೀಂ ಕೋರ್ಟ್ ನ ದ್ವಿಸದಸ್ಯ ಪೀಠ ಪ್ರಕಟಿಸಿರುವ ತೀರ್ಪಿಗೆ ನಾವು ತಲೆ ಬಾಗುತ್ತೇವೆ. ನೂತನ ಸಿಜೆಐ ಅವರ ನೇತೃತ್ವದಲ್ಲಿ ರಚಿಸಲ್ಪಡುವ ತ್ರಿಸದಸ್ಯ ಪೀಠವು ಹೈಕೋರ್ಟ್ ನ ತೀರ್ಪನ್ನು ಎತ್ತಿ ಹಿಡಿಯುತ್ತದೆ ಎಂಬ ನಂಬಿಕೆ ಇದೆ ಎಂದು ಶ್ರೀರಾಮ್ ಸೇನೆ ಮಂಗಳೂರು - ಉಡುಪಿ ವಿಭಾಗಧ್ಯಕ್ಷ ಮೋಹನ್ ಭಟ್ ಹೇಳಿದರು. ಅವರು ಗುರುವಾರ ಉಡುಪಿಯಲ್ಲಿ ಸುಪ್ರೀಂ ಕೋರ್ಟ್ ನ ದ್ವಿಸದಸ್ಯ ಪೀಠ ಪ್ರಕಟಿಸಿರುವ ತೀರ್ಪಿನ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
Hijab Case: ಹಿಜಾಬ್ ವಿದ್ಯಾರ್ಥಿನಿಯರಿಗೆ ಟೆರರ್ ಲಿಂಕ್ ಇದೆ: ಈಶ್ವರಪ್ಪ
ಶಾಲಾ - ಕಾಲೇಜಿನಲ್ಲಿ ಸಮವಸ್ತ್ರ ನಿಯಮವನ್ನು ಜಾರಿಗೆ ತಂದಿರುವುದು ಮಾಜಿ ಪ್ರಧಾನಿ ದಿ| ಇಂದಿರಾ ಗಾಂಧಿಯವರು. ಸಮಾನತೆಯ ದೃಷ್ಟಿಯಿಂದ ಈ ನಿಯಮವನ್ನು ಜಾರಿಗೊಳಿಸಿದ್ದರು ಎಂದರು. ಜಗತ್ತಿಗೆ ಮೊದಲ ವಿಶ್ವವಿದ್ಯಾನಿಲಯ ನೀಡಿದ ದೇಶ ಭಾರತ. ಶಿಸ್ತುಬದ್ಧ ಶೈಕ್ಷಣಿಕ ವ್ಯವಸ್ಥೆಯನ್ನು ಭಾರತ ಹೊಂದಿದೆ. ಈ ವ್ಯವಸ್ಥೆಯಲ್ಲಿ ಕೋಮು ವಿಷ ಬೀಜವನ್ನು ಬಿತ್ತಿ, ವಿದ್ಯಾರ್ಥಿಗಳಿಗೆ ವೈಷ್ಯಮ್ಯ ಬೆಳೆಸುವ ಹುನ್ನಾರವಾಗಿದೆ ಎಂದರು.
Hijab Case: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹೇಳಿದ್ದೇನು?
ಹಿಜಾಬ್ ನ ವಿವಾದವನ್ನು ಸೃಷ್ಟಿಸಿದ ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಬಹಳ ವರ್ಷಗಳಿಂದ ಹಿಂದೂ, ಮುಸ್ಲಿಂ ವಿದ್ಯಾರ್ಥಿಗಳು ಯಾವುದೇ ಸಮಸ್ಯೆ ಇಲ್ಲದೇ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಆದರೆ ಈ ದೇಶದ ಶಾಂತಿಯನ್ನು ಕದಡಲು ಕೆಲವೊಂದು ಸಂಘಟನೆಗಳು ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ