
ಸಂಪತ್ ತರೀಕೆರೆ
ಬೆಂಗಳೂರು (ಅ.13) : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಮಹತ್ವಾಕಾಂಕ್ಷೆಯ ಪೆರಿಫೆರಲ್ ರಿಂಗ್ ರಸ್ತೆ(ಪಿಆರ್‌ಆರ್) ಯೋಜನೆಗೆ ಅಗತ್ಯವಿರುವ ಭೂ ಸ್ವಾಧೀನಕ್ಕೆ ನೋಟಿಫಿಕೇಷನ್ ಆಗಿ ಐದಾರು ವರ್ಷ ಕಳೆದಿವೆ, ಈವರೆಗೂ ಪರಿಹಾರದ ಮೊತ್ತ ನಿಗದಿಯಾಗಿಲ್ಲ. ಹಾಗಾಗಿ ರೈತರು ಅತಂತ್ರ ಸ್ಥಿತಿಯಲ್ಲಿದ್ದರೆ, ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುವಂತ ಪರಿಸ್ಥಿತಿಯಿದೆ.
Bengaluru: ಪೆರಿಫೆರಲ್ ರಿಂಗ್ ರಸ್ತೆಗೆ ಟೆಂಡರ್ ಆಹ್ವಾನ
ಪೆರಿಫೆರಲ್ ರಿಂಗ್ ರಸ್ತೆಯನ್ನು 2,560 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡು 73.04 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಈ ಪೈಕಿ 2017ರಲ್ಲಿ 1810 ಎಕರೆ ನೋಟಿಫಿಕೇಷನ್ ಆಗಿದ್ದು, ಜಮೀನುದಾರರಿಗೆ ಈವರೆಗೂ ಬಿಡಿಗಾಸನ್ನೂ ಕೊಟ್ಟಿಲ್ಲ. ಜೊತೆಗೆ ಹೆಚ್ಚುವರಿಯಾಗಿ ಬೇಕಾಗಿರುವ 750 ಎಕರೆ ಭೂಸ್ವಾಧೀನಕ್ಕೆ ಪ್ರಾಥಮಿಕ ನೋಟಿಫಿಕೇಷನ್ ಆಗಬೇಕಿದೆ. ಈಗಾಗಲೇ ಸ್ವಾಧೀನ ಪಡಿಸಿಕೊಳ್ಳಬೇಕಿರುವ ಭೂಮಿ ಗುರುತಿಸಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಕೊಡಲಾಗಿದೆ. ಈ ಯೋಜನೆಗೆ 232 ಎಕರೆ ಸರ್ಕಾರಿ ಭೂಮಿ ಬಳಕೆಯಾಗಲಿದ್ದು, ಉಳಿದಿದೆಲ್ಲವೂ ಖಾಸಗಿ ಭೂಮಿಯಾಗಿದೆ.
ವಿಪರಾರಯಸವೆಂದರೆ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಳ್ಳಲು ನೋಟಿಫಿಕೇಷನ್ ಆಗಿ ಐದಾರು ವರ್ಷಗಳೇ ಕಳೆದಿವೆ. ಆದರೆ ಇದುವರೆಗೂ ಭೂ ಮಾಲಿಕರಿಗೆ ನೀಡಬೇಕಿರುವ ಪರಿಹಾರದ ಮೊತ್ತ ನಿಗದಿಯಾಗಿಲ್ಲ. ಈ ಹಿಂದೆ ಸುಪ್ರೀಂಕೋರ್ಚ್ ನೀಡಿದ್ದ ಆದೇಶದಂತೆ ಭೂ ಪರಿಹಾರ ಹಂಚಿಕೆ ಮತ್ತು ಯೋಜನೆ ಪೂರ್ಣಗೊಳಿಸಲು ಒಟ್ಟು .3500 ಕೋಟಿ ಸಾಕಾಗುತ್ತಿತ್ತು. ಇತ್ತೀಚಿನ ಅಂದಾಜಿನ ಪ್ರಕಾರ ಬಿಡಿಎ ಭೂಸ್ವಾಧೀನ ಕಾಯ್ದೆ ಅನ್ವಯ ಮತ್ತು ಈಗಿನ ಮಾರುಕಟ್ಟೆದರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭೂಸ್ವಾಧೀನಕ್ಕೆ ಅಂದಾಜು .9 ಸಾವಿರ ಕೋಟಿ ವೆಚ್ಚವಾಗಲಿದೆ. ಜೊತೆಗೆ ಯೋಜನೆ ನಿರ್ಮಾಣ ವೆಚ್ಚ .5616 ಕೋಟಿಗೂ ಅಧಿಕವಾಗಲಿದ್ದು, ಯೋಜನೆ ಪೂರ್ಣಗೊಳ್ಳಲು ಅಂದಾಜು .15 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.
ಸರ್ಕಾರಕ್ಕೇ ಬಗೆಹರಿಯದ ಗೊಂದಲ
ರೈತರಿಂದ ಪಡೆಯುವ ಭೂಮಿಗೆ ಪ್ರತಿ ಎಕರೆಗೆ ಎಷ್ಟುಹಣ ಕೊಡಬೇಕು ಎಂಬುದರ ಬಗ್ಗೆ ಸರ್ಕಾರದಲ್ಲೇ ಗೊಂದಲವಿದೆ. ಈ ಹಿಂದೆ ಇದ್ದ ಕಾಯ್ದೆಯಂತೆ ರೈತರಿಗೆ ಪರಿಹಾರ ಕೊಡಬೇಕೋ ಅಥವಾ ಹೊಸ ಭೂ ಸುಧಾರಣೆ ಕಾಯ್ದೆ ಪ್ರಕಾರ ಮಾರುಕಟ್ಟೆದರಕ್ಕಿಂತ ನಾಲ್ಕರಷ್ಟುಮೊತ್ತವನ್ನು ಪರಿಹಾರವಾಗಿ ಕೊಡಬೇಕೇ ಎಂಬುದು ನಿರ್ಧಾರವಾಗಿಲ್ಲ. ಪಿಆರ್‌ಆರ್ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಸರ್ಕಾರ ಯೋಜಿಸಿದೆ. ಹೀಗಾಗಿ ಭೂಮಿ ಪರಿಹಾರ ಮತ್ತು ನಿರ್ಮಾಣದ ವೆಚ್ಚವನ್ನು ಗುತ್ತಿಗೆ ಪಡೆದ ಖಾಸಗಿ ಕಂಪನಿಯೇ ಭರಿಸಬೇಕಾಗುತ್ತದೆ. ಅದಕ್ಕೆ ಬದಲಾಗಿ ಬಿಡ್‌ದಾರ ಕಂಪನಿಗೆ 50 ವರ್ಷ ಭೋಗ್ಯ ಆಧಾರದಲ್ಲಿ ರಸ್ತೆ ಹಾಗೂ ಟೋಲ್ ಗುತ್ತಿಗೆ ನೀಡುವುದಾಗಿ ಈಗಾಗಲೇ ರಾಜ್ಯ ಸರ್ಕಾರ ಘೋಷಿಸಿದೆ.
ಭೂ ಪರಿಹಾರದ ಮೊತ್ತ ನಿಗದಿಯಾಗದ ಹಿನ್ನೆಲೆಯಲ್ಲಿ ಟೆಂಡರ್ ಪಡೆಯಲು ಯಾವುದೇ ಕಂಪನಿಗಳು ಮುಂದಕ್ಕೆ ಬರುತ್ತಿಲ್ಲ. ಕಳೆದ ಮೇ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದ್ದರೂ ಯಾವುದೇ ಟೆಂಡರ್‌ದಾರರು ಬಿಡ್ ಸಲ್ಲಿಸಲು ಮುಂದಾಗದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಟೆಂಡರ್ ರದ್ದುಪಡಿಸಲಾಗಿತ್ತು. ಮೊದಲು ಭೂ ಪರಿಹಾರದ ಮೊತ್ತ ನಿಗದಿ ಮಾಡಿ, ಆ ನಂತರ ಟೆಂಡರ್ ಪ್ರಕ್ರಿಯೆ ಆರಂಭಿಸಿ ಎಂಬ ಸಲಹೆಯನ್ನೂ ಕೂಡ ಕೆಲ ಕಂಪನಿಗಳು ಕೊಟ್ಟಿವೆ ಎಂದು ಮೂಲಗಳು ತಿಳಿಸಿವೆ.
ವಿಳಂಬದಿಂದ ಹೆಚ್ಚುತ್ತಿದೆ ಇದೆ ಯೋಜನಾ ವೆಚ್ಚ
15 ವರ್ಷಗಳ ಹಿಂದೆಯೇ ಯೋಜನೆಗೆ ಸುಮಾರು .3,500 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ, ನಿರ್ಮಾಣದಲ್ಲಿನ ದೀರ್ಘ ವಿಳಂಬದಿಂದ ಭಾರೀ ವೆಚ್ಚ ಮಾಡಬೇಕಿದೆ. 2008ರಲ್ಲಿ ಬಿಡಿಎ ಪಿಆರ್‌ಆರ್ ರಸ್ತೆ ಯೋಜನೆಗೆ 1,810 ಎಕರೆ ಭೂಸ್ವಾಧೀನಕ್ಕೆ ಸೂಚಿಸಿತ್ತು. ಆದರೆ, ನಂತರದ ವಿನ್ಯಾಸದಲ್ಲಿನ ಬದಲಾವಣೆಗಳಿಂದಾಗಿ 750 ಎಕರೆಗಳಷ್ಟುಭೂಮಿ ಹೆಚ್ಚುವರಿಯಾಗಿ ಬೇಕಾಗಿದ್ದು, ನೋಟಿಫಿಕೇಷನ್ ಆಗಬೇಕಿದೆ.
ಈ ರಸ್ತೆಯ ನಿರ್ಮಾಣದಿಂದ ನಗರದಲ್ಲಿ ವಾಹನ ದಟ್ಟಣೆ ನಿವಾರಿಸುವ ಉದ್ದೇಶ ಹೊಂದಲಾಗಿದೆ. ಎಂಟು ಪಥದ ಈ ರಸ್ತೆಯು 100 ಮೀಟರ್ ಅಗಲ ನಿರ್ಮಾಣಗೊಳ್ಳಲಿದ್ದು, ತುಮಕೂರು ರಸ್ತೆಯಿಂದ ಸರ್ಜಾಪುರ ರಸ್ತೆ, ಹಳೆ ಮದ್ರಾಸ್ ರಸ್ತೆ, ಬಳ್ಳಾರಿ ರಸ್ತೆ ಮೂಲಕ ಹೊಸೂರು ರಸ್ತೆಗೆ ಸೇರಿಸುವ ಯೋಜನೆ ಇದಾಗಿದೆ.
ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಗೆ ಪೆರಿಫೆರಲ್ ರಸ್ತೆ
ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಉನ್ನತ ಮಟ್ಟದ ಸಮಿತಿ ಸಭೆ ನಡೆಯಬೇಕಿದೆ. ಸಭೆಯಲ್ಲಿ ಪರಿಹಾರದ ಮೊತ್ತ, ಯೋಜನೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ನಿರ್ಧಾರ ಕೈಗೊಂಡ ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಪ್ರಸ್ತುತ ಯೋಜನೆಗೆ .14 ಸಾವಿರ ಕೋಟಿಗೂ ಅಧಿಕ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
-ಶಾಂತರಾಜಣ್ಣ, ಅಭಿಯಂತರ ಸದಸ್ಯ, ಬಿಡಿಎ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ