Hijab Row: ಹಿಜಾಬ್‌ಗೆ ಸಿಎಫ್‌ಐ ಕುಮ್ಮಕ್ಕು, ಅವಕಾಶ ಬೇಡ: ಕಾಲೇಜು

Kannadaprabha News   | Asianet News
Published : Feb 24, 2022, 03:59 AM IST
Hijab Row: ಹಿಜಾಬ್‌ಗೆ ಸಿಎಫ್‌ಐ ಕುಮ್ಮಕ್ಕು, ಅವಕಾಶ ಬೇಡ: ಕಾಲೇಜು

ಸಾರಾಂಶ

ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2004ರಿಂದ ಸಮವಸ್ತ್ರ ಸಂಹಿತೆ ಜಾರಿಯಲ್ಲಿದೆ, ಆದರೆ, ಮೂಲಭೂತವಾದಿ ಸಂಘಟನೆಯಾದ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ (ಸಿಎಫ್‌ಐ) ಪ್ರೇರಣೆಯಿಂದ ಕೆಲ ವಿದ್ಯಾರ್ಥಿಗಳು ಹಿಜಾಬ್‌ಗಾಗಿ ಪಟ್ಟು ಹಿಡಿದಿದ್ದಾರೆ.

ಬೆಂಗಳೂರು (ಫೆ.24): ಉಡುಪಿಯ (Udupi) ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2004ರಿಂದ ಸಮವಸ್ತ್ರ ಸಂಹಿತೆ ಜಾರಿಯಲ್ಲಿದೆ, ಆದರೆ, ಮೂಲಭೂತವಾದಿ ಸಂಘಟನೆಯಾದ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ (ಸಿಎಫ್‌ಐ) ಪ್ರೇರಣೆಯಿಂದ ಕೆಲ ವಿದ್ಯಾರ್ಥಿಗಳು ಹಿಜಾಬ್‌ಗಾಗಿ (Hijab) ಪಟ್ಟು ಹಿಡಿದಿದ್ದಾರೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಸರ್ವ ಧರ್ಮ ಸಮನ್ವಯ ವ್ಯವಸ್ಥೆ ಕಾಪಾಡಬೇಕು ಎಂದು ಕಾಲೇಜು ಆಡಳಿತ ಮಂಡಳಿ ಹೈಕೋರ್ಟ್‌ಗೆ (High Court) ಮನವಿ ಮಾಡಿದೆ. ಹಿಜಾಬ್‌ ಧರಿಸಿ ಕಾಲೇಜು ಪ್ರವೇಶಿಸುವುದನ್ನು ನಿರ್ಬಂಧಿಸಿದ್ದ ಕ್ರಮ ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್‌ ಅವರಿದ್ದ ವಿಸ್ತೃತ ಪೀಠದ ಮುಂದೆ ಕಾಲೇಜು ಆಡಳಿತ ಮಂಡಳಿಯ ಪರವಾಗಿ ಹಿರಿಯ ವಕೀಲ ಎಸ್‌ ಎಸ್‌.ನಾಗಾನಂದ ವಾದ ಮಂಡಿಸಿದರು.

ಇಸ್ಲಾಂ ಧರ್ಮದ ಎಲ್ಲ ಹೆಣ್ಣು ಮಕ್ಕಳು ಸಾರ್ವಜನಿಕವಾಗಿ ಹಿಜಾಬ್‌ ಧರಿಸುವುದು ಕಡ್ಡಾಯ ಎಂದು ಅರ್ಜಿದಾರರು ತಿಳಿಸಿದ್ದಾರೆ. ಆದರೆ, ಆಧಾರ್‌ ಕಾರ್ಡ್‌ ಮತ್ತು ಹಲವು ಭಾವ ಚಿತ್ರಗಳಲ್ಲಿ ಹಿಜಾಬ್‌ ಇಲ್ಲದೆ ಗುರುತಿಸಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ವಿನಾ ಕಾರಣ ವಿವಾದ ಸೃಷ್ಟಿಸಿದ್ದಾರೆ ಎಂದರು. ಹಿಜಾಬ್‌ ಧರಿಸಿದ್ದ ಪರಿಣಾಮ ಕಾಲೇಜು ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಇದೇ ಕಾರಣದಿಂದ ನೋಂದಣಿ ಪುಸ್ತಕದಲ್ಲಿ ಗೈರು ಹಾಜರಿ ಮತ್ತು ಆಂತರಿಕ ಮೌಲ್ಯಮಾಪನ ಅಂಕಗಳು (ಇಂಟರ್ನಲ್ಸ್‌) ನೀಡಿಲ್ಲ ಎಂಬ ಕಾರಣದಿಂದ ಪಿಎಫ್‌ಐ ಸಂಘಟನೆ ಸದಸ್ಯರೊಂದಿಗೆ ಸೇರಿ ವಿದ್ಯಾರ್ಥಿಗಳು ಶಿಕ್ಷಕರ ವಿರುದ್ಧ ದೌರ್ಜನ್ಯ ಮಾಡಿದ್ದಾರೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.

Hijab Row: 'ಜನರ ಧಾರ್ಮಿಕ ಭಾವನೆಗಳ ಜೊತೆ ಬಿಜೆಪಿ ಚೆಲ್ಲಾಟ'

ಸುಳ್ಳು ಆರೋಪ: ಅರ್ಜಿದಾರ ವಿದ್ಯಾರ್ಥಿನಿಯರು ತಮ್ಮನ್ನು ಶಿಕ್ಷಕರು ನಿಂದಿಸಿದರು, ಗದರಿಸಿದರು ಎಂಬ ಆರೋಪ ಮಾಡಿದ್ದಾರೆ. ಇವೆಲ್ಲವೂ ಸುಳ್ಳು. ಹೆತ್ತವರು ತಮ್ಮ ಮಕ್ಕಳು ಸರಿಯಾದ ದಾರಿಯಲ್ಲಿ ನಡೆಯಲಿ ಎಂಬ ಕಾರಣಕ್ಕೆ ಗದರುತ್ತಾರೆ, ಕೆಲವೊಮ್ಮೆ ಶಿಕ್ಷಿಸುತ್ತಾರೆ. ಅದನ್ನು ಅಪರಾಧ ಎಂದು ಪರಿಗಣಿಸಲಾಗದು. ಇದೇ ರೀತಿಯಲ್ಲಿ ಶಿಕ್ಷಕರು ಅಶಿಸ್ತು ತೋರಿಸುವ ವಿದ್ಯಾರ್ಥಿಗಳನ್ನು ಗದರಿದರೆ ಅದು ಹೇಗೆ ತಪ್ಪಾಗುತ್ತದೆ ಎಂದರು. ಬ್ರಾಹ್ಮಣ ಸಮುದಾಯದಲ್ಲಿ ಕೆಲವು ಕಟ್ಟಾಸಂಪ್ರದಾಯಸ್ಥರು ಹೊಲಿಗೆ ಹಾಕಿದ ವಸ್ತ್ರಗಳನ್ನು ಧರಿಸುವುದಿಲ್ಲ. ಅಂಗವಸ್ತ್ರ ಹಾಗೂ ಧೋತಿ ಧರಿಸುತ್ತಾರೆ. ಇಂತಹ ಪೋಷಕರ ಮಕ್ಕಳು ಧಾರ್ಮಿಕ ಆಚರಣೆ ಹೆಸರಲ್ಲಿ ಶಾಲೆಗೆ ಅಂಗವಸ್ತ್ರ-ಧೋತಿ ಧರಿಸಿ ಬಂದರೆ ಹೇಗಿರುತ್ತದೆ? ಎಲ್ಲ ಮಕ್ಕಳೂ ಧರ್ಮದ ಹೆಸರಲ್ಲಿ ಅವರಿಷ್ಟದ ಉಡುಪು ಧರಿಸಿ ಬರಲು ಮುಂದಾದರೆ ಸಮವಸ್ತ್ರ ಎಂಬುದಕ್ಕೆ ಅರ್ಥ ಎಲ್ಲಿದೆ? ಆದ್ದರಿಂದ ಈ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಪರ ವಾದ: ಕಾಲೇಜು ಅಭಿವೃದ್ಧಿ ಸಮಿತಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಜ್ಜನ್‌ ಪೂವಯ್ಯ, ಸ್ಥಳೀಯ ಶಾಸಕರು ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿರುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಆದರೆ, ಕಾಲೇಜು ಅಭಿವೃದ್ಧಿ ಸಮಿತಿಗೆ ಪ್ರತ್ಯೇಕ ಬೈಲಾ ಇರಲಿದೆ. ಅದರಂತೆ ಸಮಿತಿಗೆ ಉಪಾಧ್ಯಕ್ಷರು, ಪ್ರಾಂಶುಪಾಲರು ವಿವಿಧ ಸಮುದಾಯಗಳ ವಿದ್ಯಾರ್ಥಿಗಳನ್ನು ನೇಮಕವಾಗುತ್ತಾರೆ. ಕಾಲೇಜಿನ ಪ್ರಾಂಶುಪಾಲರು ಸಮಿತಿಯ ಕಾರ್ಯಾಧ್ಯಕ್ಷರಾಗಿರುತ್ತಾರೆ ಎಂದು ವಿವರಿಸಿದರು. ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ 100 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಇವರ ಪೈಕಿ ಕೆಲ ವಿದ್ಯಾರ್ಥಿನಿಯರು ಹಿಜಾಬ್‌ಗೆ ಒತ್ತಾಯಿಸುತ್ತಿದ್ದಾರೆ. ಶಾಲೆ ಕಾಲೇಜುಗಳಲ್ಲಿ ಶಿಸ್ತು, ಸುವ್ಯವಸ್ಥೆ ತರಲು ಸಮವಸ್ತ್ರ ನಿಗದಿ ಮಾಡಲಾಗಿದೆ. ಸಮವಸ್ತ್ರವನ್ನು ಪ್ರಶ್ನಿಸಿರುವ ಅರ್ಜಿದಾರರ ಕ್ರಮವೇ ಸರಿಯಿಲ್ಲ. ಜಾತ್ಯಾತೀತ ಶಿಕ್ಷಣ ನೀಡಬೇಕು ಎಂದಾದರೆ ಸಮವಸ್ತ್ರ ಬೇಕಾಗುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಹಿಜಾಬ್‌ ನಿರ್ಬಂಧ ಶಿಕ್ಷಕರಿಗೆ ಅನ್ವಯವಿಲ್ಲ: ಪ್ರಕರಣ ಇತ್ಯರ್ಥವಾಗುವವರೆಗೂ ಹಿಜಾಬ್‌ ಸೇರಿದಂತೆ ಧಾರ್ಮಿಕ ಸೂಚಕ ವಸ್ತ್ರಗಳನ್ನು ಧರಿಸಿ ಹೋಗದಂತೆ ನೀಡಿರುವ ಮಧ್ಯಂತರ ಆದೇಶ ಶಿಕ್ಷಕರಿಗೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಹಿಜಾಬ್‌ ಪ್ರಕರಣದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ, ಮಧ್ಯಂತರ ಆದೇಶ ಕೇವಲ ಸಮವಸ್ತ್ರ ನಿಗದಿ ಮಾಡಿರುವ ಶಾಲಾ ಕಾಲೇಜುಗಳಿಗೆ ಸೀಮಿತ ಎಂದು ತಿಳಿಸಲಾಗಿದೆ. ಆದರೆ, ಈ ಆದೇಶವನ್ನು ಎಲ್ಲ ಶಿಕ್ಷಣ ಸಂಸ್ಥೆಗ ಅನುಸರಿಸುತ್ತಿದ್ದು, ಸಮವಸ್ತ್ರ ನಿಗದಿ ಮಾಡದ ಶಿಕ್ಷಣ ಸಂಸ್ಥೆಗಳು ಜಾರಿಗೆ ಮುಂದಾಗಿವೆ. ಶಿಕ್ಷಕಿಯರಿಗೂ ಈ ನಿರ್ಬಂಧ ಹೇರಲಾಗಿದೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸಮವಸ್ತ್ರ ನಿಗದಿ ಮಾಡಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಧಾರ್ಮಿಕ ವಸ್ತ್ರಗಳನ್ನು ಧರಿಸದಂತೆ ಹೇಳಲಾಗಿದೆ. ಈ ಆದೇಶ ಶಿಕ್ಷಕಿಯರಿಗೆ ಅನ್ವಯಿಸದು ಎಂದು ಮೌಖಿಕವಾಗಿ ತಿಳಿಸಿ, ಮಧ್ಯಂತರ ಆದೇಶವನ್ನು ಬದಲಾಯಿಸಲಾಗದು ಎಂದು ಪೀಠ ಹೇಳಿತು.

Hijab Row: ಪರೀಕ್ಷೆಗೆ ಗೈರಾದರೆ ಮರುಪರೀಕ್ಷೆ ಇಲ್ಲ: ಸಚಿವ ನಾಗೇಶ್‌

ಸಿಎಫ್‌ಐ ಸಂಘಟನೆ ಯಾವುದು?: ವಿಚಾರಣೆ ವೇಳೆ ಸಿಎಫ್‌ಐ ಸಂಘಟನೆ ಯಾವುದು, ಇದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಸರ್ಕಾರದ ಬಳಿ ಮಾಹಿತಿ ಇದೆ. ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಲಾಗುವುದು ಎಂದರು. ಇದೇ ವೇಳೆ ವಿದ್ಯಾರ್ಥಿನಿಯರ ಪರ ವಕೀಲ ತಾಹಿರ್‌ ವಾದಿಸಿ, ಸಿಎಫ್‌ಐ ಒಂದು ವಿದ್ಯಾರ್ಥಿ ಸಂಘಟನೆ ಎಂದು ವಿವರಿಸಿದರು. ಅಲ್ಲದೆ, ಹಿಜಾಬ್‌ ವಿರುದ್ಧ ಕೆಲ ಶಾಸಕರು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಿರುವ ಆರೋಪವಿದೆ ಎಂದು ತಿಳಿಸಿದರು. ಈ ಅಂಶಗಳನ್ನು ಪರಿಶೀಲಿಸುವುದಾಗಿ ಪೀಠ ತಿಳಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!