Covid Vaccine: ರಾಜ್ಯದಲ್ಲಿ 10 ಕೋಟಿ ಡೋಸ್‌ ಲಸಿಕೆ ಮೈಲಿಗಲ್ಲು!

By Kannadaprabha News  |  First Published Feb 24, 2022, 3:23 AM IST

ರಾಜ್ಯದಲ್ಲಿ ಲಸಿಕೆ ಅಭಿಯಾನ ಆರಂಭಗೊಂಡು 404 ದಿನಗಳ ಬಳಿಕ ಒಟ್ಟು 10 ಕೋಟಿ ಡೋಸ್‌ ಲಸಿಕೆ ನೀಡಿದ ಮಹತ್ವದ ಸಾಧನೆಯನ್ನು ಕರ್ನಾಟಕ ಮಾಡಿದೆ. ದೇಶದಲ್ಲಿ 10 ಕೋಟಿ ಲಸಿಕೆ ನೀಡಿದ ಆರನೇ ರಾಜ್ಯವಾಗಿ ಕರುನಾಡು ಹೊರಹೊಮ್ಮಿದೆ. 


ಬೆಂಗಳೂರು (ಫೆ.24): ರಾಜ್ಯದಲ್ಲಿ ಲಸಿಕೆ ಅಭಿಯಾನ (Covid Vaccination) ಆರಂಭಗೊಂಡು 404 ದಿನಗಳ ಬಳಿಕ ಒಟ್ಟು 10 ಕೋಟಿ ಡೋಸ್‌ ಲಸಿಕೆ ನೀಡಿದ ಮಹತ್ವದ ಸಾಧನೆಯನ್ನು ಕರ್ನಾಟಕ (Karnataka) ಮಾಡಿದೆ. ದೇಶದಲ್ಲಿ 10 ಕೋಟಿ ಲಸಿಕೆ ನೀಡಿದ ಆರನೇ ರಾಜ್ಯವಾಗಿ ಕರುನಾಡು ಹೊರಹೊಮ್ಮಿದೆ. ಅದರಲ್ಲೂ ದಕ್ಷಿಣ ಭಾರತದ ಮೊದಲ ರಾಜ್ಯ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮೊದಲ, ಎರಡನೇ ಮತ್ತು ಮುನ್ನೆಚ್ಚರಿಕೆ ಡೋಸ್‌ (Booster Dose) ಸೇರಿ ರಾಜ್ಯದಲ್ಲಿ ಈವರೆಗೆ ಒಟ್ಟು 10.01 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ ರಾಜ್ಯ ಕರ್ನಾಟಕಕ್ಕಿಂತ ಹೆಚ್ಚು ಲಸಿಕೆ ವಿತರಣೆ ಮಾಡಿದೆ. ಆದರೆ ದಕ್ಷಿಣ ಭಾರತದಲ್ಲಿ ಈ ಸಾಧನೆ ಮಾಡಿದ ಏಕೈಕ ರಾಜ್ಯ ಕರ್ನಾಟಕ.

ಮೊದಲ ಡೋಸ್‌ ಗುರಿ ಮೀರಿದ ಸಾಧನೆ: 15 ವರ್ಷ ಮೇಲ್ಪಟ್ಟವರೆಲ್ಲರೂ ಕೋವಿಡ್‌ ಲಸಿಕೆ ಪಡೆಯಲು ಅರ್ಹರಾಗಿದ್ದು ಒಟ್ಟು 5.20 ಕೋಟಿ ಮಂದಿಗೆ ಎರಡು ಡೋಸ್‌ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹಾಕಿಕೊಂಡಿತ್ತು. ಆದರೆ ಮೊದಲ ಡೋಸ್‌ನಲ್ಲಿ ಈಗಾಗಲೇ 5.21 ಕೋಟಿ ಮಂದಿಗೆ ಲಸಿಕೆ ನೀಡಿ ಗುರಿ ಮೀರಿದ ಸಾಧನೆ ಮಾಡಿದೆ. ಆದರೆ ಎರಡನೇ ಡೋಸ್‌ ಲಸಿಕೆಯಲ್ಲಿ ಶೇ. 93 (4.69 ಕೋಟಿ ಡೋಸ್‌) ಸಾಧನೆ ಮಾತ್ರ ಆಗಿದೆ.  ಆದರೂ ಇತ್ತಿಚಿನ ದಿನಗಳಲ್ಲಿ ಮೊದಲ ಡೋಸ್‌ ಪಡೆಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು ಎರಡನೇ ಡೋಸ್‌ ಹೆಚ್ಚು ಮಂದಿ ಪಡೆಯುತ್ತಿದ್ದಾರೆ. 18 ವರ್ಷ ಮೇಲ್ಪಟ್ಟವರಲ್ಲಿ ಶೇ. 100 ರಷ್ಟುಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಆದರೆ 15 ರಿಂದ 18 ವರ್ಷ ವಯಸ್ಸಿನವರ ಲಸಕೀಕರಣ ಪ್ರಾರಂಭಗೊಂಡು 50 ದಿನ ಆಗಿದ್ದು ಇನ್ನೂ ಸುಮಾರು 6 ಲಕ್ಷ ಮಂದಿ ಲಸಿಕೆ ಪಡೆಯಲು ಬಾಕಿ ಇದ್ದಾರೆ.

Tap to resize

Latest Videos

undefined

ಲಸಿಕೆಯ ಕೊರತೆ, ಲಸಿಕೆ ಪಡೆಯಲು ಹಿಂಜರಿಕೆಯ ಜೊತೆಗೆ ಸೀಮಿತ ವರ್ಗಕ್ಕೆ ಮಾತ್ರ ಲಸಿಕೆ ಪಡೆಯಲು ಅವಕಾಶ ಇದ್ದ ಹಿನ್ನೆಲೆಯಲ್ಲಿ ಮೊದಲ ಒಂದು ಕೋಟಿ ಲಸಿಕೆ ನೀಡಲು 109 ದಿನ ಬೇಕಾಯಿತು. ಆದರೆ ಆ ಬಳಿಕ ಲಸಿಕೆ ಅಭಿಯಾನ ಚುರುಕು ಪಡೆದುಕೊಂಡಿತ್ತು. ಆ ಬಳಿಕದ 295 ದಿನದಲ್ಲಿ ಉಳಿದ 9 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. ಎರಡು ಬಾರಿ 21 ದಿನದೊಳಗೆ ಒಂದು ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. ಈವರೆಗೂ 8.39 ಕೋಟಿ ಡೋಸ್‌ ಕೋವಿಶೀಲ್ಡ್‌, 1.61 ಕೋಟಿ ಕೋವಾಕ್ಸಿನ್‌, 1.2 ಲಕ್ಷ ಡೋಸ್‌ ಸ್ಪುಟಿಕ್‌ ಲಸಿಕೆ ವಿತರಿಸಲಾಗಿದೆ. 

Vaccination Drive ದೇಶದ ಶೇ.80 ಮಂದಿಗೆ ಲಸಿಕೆಯ ಎರಡೂ ಡೋಸ್‌!

ಒಟ್ಟು 5.21 ಕೋಟಿ ಮಂದಿ ಮೊದಲ ಡೋಸ್‌, 4.69 ಕೋಟಿ ಮಂದಿ ಎರಡೂ ಡೋಸ್‌, 11.64 ಲಕ್ಷ ಮಂದಿ ಮುನ್ನೆಚ್ಚರಿಕಾ ಡೋಸ್‌ ಪಡೆದಿದ್ದಾರೆ. 5 ಕೋಟಿ ಪುರುಷರು, 4.89 ಕೋಟಿ ಮಹಿಳೆಯರು ಲಸಿಕೆ ಪಡೆದಿದ್ದಾರೆ. ಮೊದಲ ಡೋಸ್‌ ಲಸಿಕೆಯಲ್ಲಿ ಶೇ.100 ಸಾಧನೆಯಾಗಿದ್ದು ಶೇ. 93 ಮಂದಿ ಎರಡನೇ ಡೋಸ್‌ ಪಡೆದ್ದಾರೆ. ಆದರೆ ಮುನ್ನೆಚ್ಚರಿಕೆ ಡೋಸ್‌ ಪಡೆಯಲು ಅರ್ಹರಾದವರಲ್ಲಿ ಶೇ. 60 ಮಂದಿ ಮಾತ್ರ ಮುನ್ನೆಚ್ಚರಿಕೆ ಡೋಸ್‌ ಲಸಿಕೆ ಪಡೆದಿದ್ದಾರೆ. ಅತಿ ಹೆಚ್ಚು ಲಸಿಕೆಯನ್ನು ಬೆಂಗಳೂರಿನಲ್ಲಿ (ಬಿಬಿಎಂಪಿ ಒಳಗೊಂಡು) 2.02 ಕೋಟಿ, ಬೆಳಗಾವಿ 74 ಲಕ್ಷ, ಮೈಸೂರು 50 ಲಕ್ಷ, ಬಳ್ಳಾರಿ 41 ಲಕ್ಷ, ತುಮಕೂರು 40 ಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ.

ಸುಧಾಕರ್‌ ಅಭಿನಂದನೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್‌ (Dr K Sudhakar), ಇದೊಂದು ಸಾಧನೆ ಎಂದು ಬಣ್ಣಿಸಿದ್ದು, ಈ ಸಾಧನೆಗೆ ಕಾರಣರಾದ ಎಲ್ಲ ಆರೋಗ್ಯ ಕಾರ್ಯಕರ್ತರನ್ನು ಮತ್ತು ಜಿಲ್ಲಾಡಳಿತಗಳನ್ನು ಅಭಿನಂದಿಸಿದ್ದಾರೆ.

667 ಮಂದಿಗೆ ಸೋಂಕು: ಈ ವರ್ಷದ ಕನಿಷ್ಠ ರಾಜ್ಯದಲ್ಲಿ ಈ ವರ್ಷದ ಅತ್ಯಂತ ಕಡಿಮೆ ಪ್ರಕರಣ ಬುಧವಾರ ದಾಖಲಾಗಿದೆ. 667 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 21 ಮಂದಿ ಮೃತರಾಗಿದ್ದಾರೆ. 1,674 ಮಂದಿ ಚೇತರಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 10 ಸಾವಿರದ ಗಡಿಯೊಳಕ್ಕೆ ಬಂದಿದೆ. ಕಳೆದ ಮೂರು ದಿನಗಳಿಂದ ಸಾವಿರದೊಳಗೆ ದೈನಂದಿನ ಕೋವಿಡ್‌ ಪ್ರಕರಣ ವರದಿಯಾಗುತ್ತಿದೆ. ಈ ಮಧ್ಯೆ ಜನವರಿ ಒಂದರ ಬಳಿಕ ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇ. 1 ಕ್ಕಿಂತ ಕಡಿಮೆಯಾಗಿದೆ. 72,915 ಮಂದಿಯ ಕೋವಿಡ್‌ ಪರೀಕ್ಷೆ ಫಲಿತಾಂಶ ಬಂದಿದ್ದು ಶೇ. 0.91ರ ಪಾಸಿವಿಟಿವಿ ದಾಖಲಾಗಿದೆ.

ಜನವರಿ ಕೊನೆಯ ವಾರ ಮೂರುವರೆ ಲಕ್ಷದಷ್ಟಿದ್ದ ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ ಫೆಬ್ರವರಿ ಕೊನೆಯ ವಾರದ ಹೊತ್ತಿಗೆ ಹತ್ತು ಸಾವಿರದ ಗಡಿಯೊಳಗೆ ಬಂದಿದೆ. ಸದ್ಯ 9,378 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಗರದಲ್ಲಿ 368 ಹೊಸ ಪ್ರಕರಣ ಪತ್ತೆಯಾಗಿದೆ. ಬೆಳಗಾವಿಯಲ್ಲಿ 32, ಶಿವಮೊಗ್ಗ ಮತ್ತು ಮೈಸೂರು ತಲಾ 28, ಬಳ್ಳಾರಿ 24, ತುಮಕೂರು 20, ಹಾಸನ 17, ಕೊಡಗು 16, ಉಡುಪಿ 15, ಚಿಕ್ಕಮಗಳೂರು 11, ಉತ್ತರ ಕನ್ನಡ ಮತ್ತು ಕಲಬುರಗಿ ತಲಾ 10 ಹೊಸ ಪ್ರಕರಣಗಳು ವರದಿಯಾಗಿದೆ. ಬಾಗಲಕೋಟೆ ಮತ್ತು ಬೀದರ್‌ ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ. ಉಳಿದ ಜಿಲ್ಲೆಗಳಲ್ಲಿ ಒಂದಂಕಿಯಲ್ಲಿ ಪ್ರಕರಣಗಳಿವೆ.

Covid Vaccine: ಸರ್ಕಾರದ ಮಾನದಂಡ ಗೊಂದಲ: ಅನೇಕ ಮಕ್ಕಳಿಗೆ ಲಸಿಕೆಯೇ ಸಿಗ್ತಿಲ್ಲ

ಬುಧವಾರದ ಕೋವಿಡ್‌ ವರದಿಯಲ್ಲಿ ಬೆಂಗಳೂರು ನಗರದಲ್ಲಿ 15 ಕೋವಿಡ್‌ ಸಾವು ಉಲ್ಲೇಖಿಸಲಾಗಿದ್ದು, ಈ ಪೈಕಿ 13 ಸಾವು ಜನವರಿ ತಿಂಗಳಲ್ಲಿ ಘಟಿಸಿದೆ. ಚಿತ್ರದುರ್ಗದಲ್ಲಿ ಎರಡು, ಬಳ್ಳಾರಿ, ದಕ್ಷಿಣ ಕನ್ನಡ, ಕೋಲಾರ ಮತ್ತು ಉಡುಪಿ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 39.38 ಲಕ್ಷ ಮಂದಿ ಕೋವಿಡ್‌ ನಿಂದ ಬಳಲಿದ್ದು ಈ ಪೈಕಿ 38.89 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 39,866 ಮಂದಿ ಮರಣವನ್ನಪ್ಪಿದ್ದಾರೆ.

click me!