
ಶ್ರೀಕಾಂತ್.ಎನ್.ಗೌಡಸಂದ್ರ
ಬೆಂಗಳೂರು(ಜು. 10): ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೊರೋನಾ ಅಟ್ಟಹಾಸ ಮಿತಿ ಮೀರಿರುವ ಪರಿಣಾಮ ಮುಂದಿನ 5 ದಿನಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸಾವುಗಳು ವರದಿಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
"
ರಾಜ್ಯದಲ್ಲಿ ಗುಣ ಮುಖ ಹೊಂದಿರುವ ಸೋಂಕಿತರು ಸರಾಸರಿ 12.3 ದಿನ ಹಾಗೂ ಸಾವನ್ನಪ್ಪಿರುವ ಸೋಂಕಿತರು ಸರಾಸರಿ 5 ದಿನ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ರಾಜ್ಯದಲ್ಲಿ ಜು.8ರ ವರೆಗೆ 28,877 ಸೋಂಕು ವರದಿಯಾಗಿದ್ದು 11,876 ಮಂದಿ ಗುಣಮುಖ ಹೊಂದಿದ್ದಾರೆ. ಜು.2 ರಿಂದ ಕಳೆದ 7 ದಿನಗಳಲ್ಲೇ 10,862 ಸೋಂಕು ವರದಿಯಾಗಿದ್ದು, 3542 ಮಂದಿ ಈ ಅವಧಿಯಲ್ಲಿ ಗುಣಮುಖವಾಗಿದ್ದಾರೆ.
ಬೆಂಗಳೂರಿಗೆ ಅಷ್ಟದಿಕ್ಪಾಲಕರು: 8 ಸಚಿವರು, 8 ಐಎಎಸ್‌ಗಳಿಗೆ ಸೋಂಕು ನಿಯಂತ್ರಣ ಹೊಣೆ!
ಕಳೆದ ಒಂದು ವಾರದಿಂದ ಅತಿ ಹೆಚ್ಚು ಸೋಂಕು ವರದಿಯಾಗಿರುವ ಬೆಂಗಳೂರಿನಲ್ಲಿ 12509 ಮಂದಿ ಸೋಂಕು ದೃಢಪಟ್ಟಿದ್ದು ಶೇ.17.81 ರಷ್ಟುಮಂದಿ ಮಾತ್ರ ಚೇತರಿಸಿಕೊಂಡಿದ್ದಾರೆ. ಉಳಿದ ಶೇ. 83 ರಷ್ಟುಮಂದಿ ಆಸ್ಪತ್ರೆ ಆಸ್ಪತ್ರೆಯಲ್ಲೇ ಉಳಿದಿದ್ದಾರೆ. ಸಕ್ರಿಯ ಸೋಂಕಿತರಲ್ಲಿ 2977 ಹೈ ರಿಸ್ಕ್ ಪ್ರಕರಣಗಳಿದ್ದು, 452 ಮಂದಿ ಐಸಿಯುನಲ್ಲಿದ್ದಾರೆ.
ಜತೆಗೆ ರಾಜ್ಯದಲ್ಲಿ ಸಾವಿನ ಹೆಚ್ಚಾಗಿ ವರದಿಯಾಗುತ್ತಿರುವ 60 ವರ್ಷ ಮೇಲ್ಪಟ್ಟವಯಸ್ಸಿನ (ಜು. 6ರ ವೇಳೆಗೆ 60 ವರ್ಷ ಮೇಲ್ಪಟ್ಟ212 ಸಾವು) 2774 ಸಕ್ರಿಯ ಸೋಂಕಿತರು ಜು.7ರ ವೇಳೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 50ರಿಂದ 60 ವರ್ಷದೊಳಗಿನ 3212 ಮಂದಿ, 5 ವರ್ಷದೊಳಗಿನ 549 ಪುಟ್ಟಕಂದಮ್ಮಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚೇತರಿಕೆ ಫಲಿತಾಂಶ ಮುಂದಿನ 5ರಿಂದ 7 ದಿನದಲ್ಲಿ ತಿಳಿಯಲಿದ್ದು, ಹೀಗಾಗಿ ಸಹಜವಾಗಿಯೇ ಸಾವಿನ ಸಂಖ್ಯೆ ಹಾಲಿ ಪ್ರಮಾಣಕ್ಕಿಂತ ಹೆಚ್ಚಾಗಲಿದೆ ಎಂದು ಕೊರೋನಾ ಕಾರ್ಯಪಡೆಯ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಜು. 2ರಿಂದ ಜು.8ರ ವರೆಗೆ ಒಂದು ವಾರದಲ್ಲಿ ನಿತ್ಯ ಸರಾಸರಿ 1,551 ಪ್ರಕರಣಗಳಂತೆ 10,861 ಪ್ರಕರಣ ಹೊಸದಾಗಿ ವರದಿಯಾಗಿದೆ. ಸೋಂಕು ಹೆಚ್ಚಾಗಿ ಸಾವಿನ ಸಂಖ್ಯೆ ಕಡಿಮೆಯಾಗಿರುವುದರಿಂದ ಜು.2ರಲ್ಲಿ ಶೇ.1.61ರಷ್ಟಿದ್ದ ಸಾವಿನ ದರ ಶೇ.1.41ಕ್ಕೆ ಇಳಿಕೆಯಾಗಿದೆ. ಇನ್ನು ಜೂನ್ 25ರಂದು 1,935 ಪ್ರಕರಣಗಳಲ್ಲೇ 81 ಸಾವು ದೃಢಪಡುವ ಮೂಲಕ ಶೇ.4.2ರಷ್ಟುಸಾವಿನ ದರ ಹೊಂದಿದ್ದ ಬೆಂಗಳೂರಿನಲ್ಲಿ ಕಳೆದ ಒಂದು ವಾರದಲ್ಲಿ 6330 ಪ್ರಕರಣ ವರದಿಯಾಗಿದೆ. ಸಾವಿನ ಸಂಖ್ಯೆ 177ಕ್ಕೆ ಮಾತ್ರ ಮುಟ್ಟಿರುವುದರಿಂದ ಸಾವಿನ ದರ ಕಡಿಮೆಯಾಗಿದೆ. ಸಾವಿನ ದರ ಕಡಿಮೆಯಾಗಿರುವುದು ಉತ್ತಮ ಬೆಳವಣಿಗೆ ಎಂದು ಸಚಿವರು ಹೇಳುತ್ತಿದ್ದಾರಾದರೂ ಅದರ ನಿಖರ ಫಲಿತಾಂಶಕ್ಕೆ ಇನ್ನೂ ಐದು ದಿನ ಕಾಯಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಿಶ್ವದ ಅತಿದೊಡ್ಡ ಆರೈಕೆ ಕೇಂದ್ರ ವಾರದಲ್ಲಿ ಶುರು: ಬೆಂಗಳೂರಲ್ಲಿ ಸಜ್ಜಾಗಿದೆ 10100 ಹಾಸಿಗೆಗಳ ಘಟಕ!
ತಜ್ಞರ ಅಂದಾಜು ಏಕೆ?:
ರಾಜ್ಯದಲ್ಲಿ ಗುಣಮುಖ ಹೊಂದುತ್ತಿರುವ ರೋಗಿ ಸರಾಸರಿ 12.3 ದಿನ ಆಸ್ಪತ್ರೆಯಲ್ಲಿದ್ದರೆ, ಸಾವನ್ನಪ್ಪುತ್ತಿರುವವರು ಸರಾಸರಿ 5 ದಿನ ಆಸ್ಪತ್ರೆಯಲ್ಲಿ ಕಳೆಯುತ್ತಿದ್ದಾರೆ. ಕಳೆದ 5 ದಿನದಿಂದ ವರದಿಯಾಗುತ್ತಿರುವ ಸಾವು ಪ್ರಕರಣದಲ್ಲಿ ಮನೆಯಲ್ಲಿ, ಆಸ್ಪತ್ರೆಯ ಮಾರ್ಗಮಧ್ಯೆ ಹಾಗೂ ಆಸ್ಪತ್ರೆಗೆ ಬಂದ ಕೂಡಲೇ ಸತ್ತವರೇ ಹೆಚ್ಚು. ಚಿಕಿತ್ಸೆಗೆ ಫಲಕಾರಿಯಾಗದೆ ಸಾವನ್ನಪ್ಪುವ ಸಕ್ರಿಯ ಸೋಂಕಿನ ವರದಿಗೆ ಇನ್ನೂ 5 ದಿನ ಕಾಯಬೇಕು. ಜತೆಗೆ, ಹಲವು ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಗಳ ಲೋಪದಿಂದ ಪರೀಕ್ಷೆ ವಿಳಂಬವಾಗುವುದು ಮತ್ತಿತರ ಕಾರಣಗಳಿಂದಾಗಿ ಕೊರೋನಾ ಸಾವು ದೃಢೀಕರಿಸಲು 3ರಿಂದ 5 ದಿನ ವಿಳಂಬವಾಗುತ್ತಿದೆ. ಇದರಿಂದ ಮುಂದಿನ 5ರಿಂದ 7 ದಿನಗಳಲ್ಲಿ ಕಳೆದ ಒಂದು ವಾರದಲ್ಲಿ ವರದಿಯಾಗಿರುವ ಪ್ರಕರಣಗಳ ಸಾವಿನ ದರ ನಿಖರವಾಗಿ ತಿಳಿಯಲಿದೆ. ಪ್ರಸ್ತುತ ಸಾವಿನ ದರ ಇಳಿಕೆಯಾಗಿದೆ ಎಂದು ಹೆಮ್ಮೆ ಪಡುವುದು ಆತುರದ ಕ್ರಮವಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದರು.
ರಾಜ್ಯದಲ್ಲಿ ಗುಣಮುಖ ಆದವರಿಗೆ ಮತ್ತೆ ಕೊರೋನಾ: ಆತಂಕ!
ಸಾವು ಕಡಿಮೆಯಾದರೆ ರಾಜ್ಯ ನಿರಾಳ
ಸಾವಿನ ದರ ಹೆಚ್ಚಾಗದಿದ್ದರೆ ರಾಜ್ಯಕ್ಕೆ ಮತ್ತಷ್ಟುಆಶಾದಾಯಕ ವಾತಾವರಣ ಸೃಷ್ಟಿಯಾಗಲಿದೆ. ಬೆಂಗಳೂರಿನಲ್ಲಿ ಶೇ.5.8ರಷ್ಟಿದ್ದ ಸಾವಿನ ದರ ಶೇ.1.5ಕ್ಕೆ ಇಳಿದಿದೆ. ಇದು ಸೋಂಕಿನ ಸಂಖ್ಯೆ ಹೆಚ್ಚಾದ್ದರಿಂದ ಇಳಿದಿದೆಯೇ ಹೊರತು ಸಾವು ನಿಯಂತ್ರಣಕ್ಕೆ ಬಂದು ಅಲ್ಲ. 5 ದಿನದ ಬಳಿಕವೂ ಶೇ.1.5 ರಷ್ಟೇ ಇದ್ದರೆ ರಾಜ್ಯ ನಿರಾಳ ಎನ್ನುತ್ತಾರೆ ತಜ್ಞರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ