42 ಕ್ಯಾನ್ಸರ್‌ ಔಷಧಕ್ಕೆ ಬೆಲೆ ಮಿತಿ: ಕೇಂದ್ರದ ಕ್ರಮಕ್ಕೆ ಹೈಕೋರ್ಟ್‌ ಅಸ್ತು

By Kannadaprabha NewsFirst Published Dec 4, 2022, 10:28 AM IST
Highlights

ಕ್ಯಾನ್ಸರ್‌ ಔಷಧಗಳ ಬೆಲೆಗೆ ಲಗಾಮು ಹಾಕುವ ಅಧಿಕಾರ ಸರ್ಕಾರಕ್ಕಿದೆ ಎಂದು ಹೇಳಿ 42 ಔಷಧಗಳ ಬೆಲೆಗೆ ಮಿತಿ ಹೇರಿದ ಕೇಂದ್ರ ಸರ್ಕಾರದ ತೀರ್ಮಾನವನ್ನು ಎತ್ತಿಹಿಡಿದ ಹೈಕೋರ್ಟ್‌ 

ಬೆಂಗಳೂರು(ಡಿ.04):  ಕ್ಯಾನ್ಸರ್‌ ಔಷಧಗಳ ಬೆಲೆಗೆ ಲಗಾಮು ಹಾಕುವ ಅಧಿಕಾರ ಸರ್ಕಾರಕ್ಕಿದೆ ಎಂದು ಹೇಳಿ 42 ಔಷಧಗಳ ಬೆಲೆಗೆ ಮಿತಿ ಹೇರಿದ ಕೇಂದ್ರ ಸರ್ಕಾರದ ತೀರ್ಮಾನವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಹೆಲ್ತ್‌ಕೇರ್‌ ಗ್ಲೋಬಲ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ದರ ಮಿತಿ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ಕೇಂದ್ರದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಕ್ಯಾನ್ಸರ್‌ ಔಷಧಗಳ ದರಕ್ಕೆ ಮಿತಿ ಹಾಕುವ ಅಗತ್ಯವಿದೆ. ಇದರಿಂದ ರೋಗ ಆರಂಭಿಕ ಹಂತದಲ್ಲಿದ್ದಾಗಲೇ ಬಡವರು ಸಹ ಚಿಕಿತ್ಸೆ ಪಡೆಯಲು ಸಾಧ್ಯ. ಆದ್ದರಿಂದ, ಔಷಧ ವ್ಯಾಪಾರಿಗಳು ಸರಕಾರದ ಆದೇಶವನ್ನು ಲಾಭ-ನಷ್ಟದ ದೃಷ್ಟಿಯಿಂದ ನೋಡಬಾರದು ಎಂದು ನ್ಯಾಯಾಲಯ ಹೇಳಿದೆ.

ಕೆಲವು ಕ್ಯಾನ್ಸರ್‌ ಔಷಧ ತಯಾರಕರು ಸಾಮಾನ್ಯ ಬೆಲೆಗಿಂತ ಸುಮಾರು ಶೇ.900ಕ್ಕಿಂತ ಹೆಚ್ಚು ದರದಲ್ಲಿ ಔಷಧಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಕ್ಯಾನ್ಸರ್‌ ಔಷಧಿಗಳಿಗೆ ಜನಸಾಮಾನ್ಯರ ಕೈಗೆಟುಕುವ ರೀತಿಯಲ್ಲಿ ದರಕ್ಕೆ ಮಿತಿ ಹಾಕಿರುವುದು ಸರಿಯಾಗಿಯೇ ಇದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.

World Cancer Day: ಅಗ್ಗದ ದರಲ್ಲಿ ಕ್ಯಾನ್ಸರ್‌ ಔಷಧಿಗೆ ಚಿಂತನೆ: ಸಿಎಂ ಬೊಮ್ಮಾಯಿ

‘ಅರ್ಜಿದಾರರು ಕೇಂದ್ರದ ನಿರ್ಧಾರದಿಂದ ಚಿಲ್ಲರೆ ವ್ಯಾಪಾರಿಗಳಿಗೆ ಸಿಗುತ್ತಿರುವ ಲಾಭದ ಪ್ರಮಾಣವು ಕಡಿಮೆಯಾಗುತ್ತದೆ. ಇದು ಭಾರತದ ಸಂವಿಧಾನದ 19(1)(ಜಿ) ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಈ ಕಾರಣಕ್ಕೆ ನೀತಿ ನಿರೂಪಣೆಯ ವಿಷಯದಲ್ಲಿ ನ್ಯಾಯಾಂಗ ಪರಿಶೀಲನೆಗೆ ನಡೆಸಲಾಗದು’ ಎಂದು ನ್ಯಾ. ನಾಗಪ್ರಸನ್ನ ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ:

2019ರ ಫೆ.27ರಂದು ಕೇಂದ್ರ ಸರ್ಕಾರವು ಕ್ಯಾನ್ಸರ್‌ ಚಿಕಿತ್ಸೆಗೆ ಅತ್ಯಗತ್ಯವೆಂದು ಪರಿಗಣಿಸಲಾದ ಆಯ್ದ 42 ಔಷಧಿಗಳ ತಯಾರಕರ ಮೇಲೆ ಶೇ.30% ರಷ್ಟುವ್ಯಾಪಾರ ಲಾಭಾಂಶವನ್ನು ಮಿತಿಗೊಳಿಸಿ ಆದೇಶ ಹೊರಡಿಸಿತ್ತು. ಇದನ್ನು ಅರ್ಜಿದಾರರು, ಔಷಧಗಳ (ಬೆಲೆ ನಿಯಂತ್ರಣ) ಆದೇಶದ ನಿಬಂಧನೆಗಳ ಅಡಿಯಲ್ಲಿ ತಯಾರಕರ ಮೇಲೆ ಬೆಲೆ ಮಿತಿಯನ್ನು ವಿಧಿಸುವಂತಿಲ್ಲ, ಹಾಗೆಯೇ ಅದು ಚಿಲ್ಲರೆ ವ್ಯಾಪಾರಿಗಳ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಕೇಂದ್ರದ ಆದೇಶವನ್ನು ಅನೂರ್ಜಿತಗೊಳಿಸಬೇಕು ಎಂದು ಹೆಲ್ತ್‌ಕೇರ್‌ ಗ್ಲೋಬಲ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ನ್ಯಾಯಾಲಯವನ್ನು ಕೋರಿತ್ತು.
 

click me!