ಚಿರತೆ ದಾಳಿಗೆ ಡೀಮ್ಡ್‌ ಅರಣ್ಯ ಪ್ರದೇಶಕ್ಕೆ ಜನರ ಲಗ್ಗೆ ಕಾರಣ..!

By Kannadaprabha NewsFirst Published Dec 4, 2022, 6:31 AM IST
Highlights

ಡೀಮ್ಡ್‌ ಕಾಡಲ್ಲೂ ಚಿರತೆ ವಾಸ ಆ ಜಾಗವೇ ರಾಜ್ಯದಲ್ಲಿ ಒತ್ತುವರಿ, ಜನತೆ, ಸರ್ಕಾರದ ನಿರ್ಲಕ್ಷ್ಯ: ತಜ್ಞರು, ಅರಣ್ಯಾಧಿಕಾರಿಗಳ ಬೇಸರ

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ಡಿ.04):  ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರ ಪ್ರದೇಶಗಳ ಸಮೀಪ ಇತ್ತೀಚೆಗೆ ಚಿರತೆ ಹಾವಳಿ ಹೆಚ್ಚುತ್ತಿದೆ. ಈ ಹಿಂದೆಯೂ ನಗರಗಳ ಸಮೀಪ ಚಿರತೆಗಳು ಕಾಣಿಸುತ್ತಿದ್ದವಾದರೂ ಇತ್ತೀಚಿನ ದಿನಗಳಲ್ಲಿ ಇದು ಸಮಸ್ಯೆ ಎನಿಸುವಷ್ಟು ಹೆಚ್ಚಿದೆ. ಹೀಗ್ಯಾಕೆ? ಇಂತಹದೊಂದು ಪ್ರಶ್ನೆಗೆ ವನ್ಯಜೀವಿ ತಜ್ಞರು ಹಾಗೂ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನೀಡುವ ಕಾರಣ ‘ವನ್ಯಜೀವಿಗಳ ಆವಾಸ ಸ್ಥಳ ಕುರಿತು ಸ್ವತಃ ಸಾರ್ವಜನಿಕರು ಮತ್ತು ಸರ್ಕಾರದ ನಿರ್ಲಕ್ಷ್ಯ. ಜತೆಗೆ, ಡೀಮ್ಡ್‌ ಫಾರೆಸ್ಟ್‌ ಬಗೆಗಿನ ನೀತಿ.’

ಇಷ್ಟಕ್ಕೂ ಯಾವ ನೀತಿ ಎಂದು ಪ್ರಶ್ನಿಸಿದರೆ, ಡೀಮ್ಡ್‌ ಫಾರೆಸ್ಟ್‌ಗಳಿಗೆ ತಗಲಿರುವ ಅರಣ್ಯ ಎಂಬ ಅಭಿದಾನ ತೆಗೆದು ಅದನ್ನು ಅಕ್ರಮವಾಗಿ ಉಳುಮೆ ಮಾಡುತ್ತಿರುವವರಿಗೆ ಹಸ್ತಾಂತರಿಸುವ ಬಗ್ಗೆ ನಡೆದಿರುವ ಬೆಳವಣಿಗೆಗಳು ಎನ್ನುತ್ತಾರೆ ತಜ್ಞರು. ಏಕೆಂದರೆ, ಚಿರತೆ ಎಂಬುದು ಕೇವಲ ಸಂರಕ್ಷಿತ ಅರಣ್ಯಗಳಲ್ಲಿ ಮಾತ್ರ ವಾಸ ಮಾಡುವ ಪ್ರಾಣಿಯಲ್ಲ. ಕುರುಚಲು ಕಾಡು, ಸಣ್ಣ ಪುಟ್ಟಗುಡ್ಡಗಾಡು, ಅರಣ್ಯದ ಬದಿಯ ವನಗಳು ಹೀಗೆ ಸಣ್ಣ ಪುಟ್ಟಮರಗಳ ದಟ್ಟಣೆಯಿರುವ ಪ್ರದೇಶಗಳಲ್ಲೂ ನಿರಾತಂಕವಾಗಿ ವಾಸಿಸುವ ಅಭ್ಯಾಸ ಹೊಂದಿದೆ.

Mysuru : ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ

ಇಂತಹ ಜೀವಿಗೆ ಮೀಸಲು ಅರಣ್ಯ ಹಾಗೂ ಡೀಮ್ಡ್‌ ಫಾರೆಸ್ಟ್‌ ಅತ್ಯಂತ ಪ್ರಮುಖ ಆವಾಸ ತಾಣ. ಆದರೆ, ಈ ಡೀಮ್ಡ್‌ ಫಾರೆಸ್ಟ್‌ ಒತ್ತುವರಿದಾರರ ಪಾಲಾಗುತ್ತಿರುವುದು ಹಾಗೂ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳದಂತೆ ನೀತಿ ರೂಪಿಸಿರುವುದು ಸಮಸ್ಯೆಯಾಗಿದೆ. ಇದರಿಂದಾಗಿ ಒತ್ತುವರಿ ದೊಡ್ಡ ಪ್ರಮಾಣದಲ್ಲಿ ನಡೆದಿದ್ದು, ಚಿರತೆಯ ನೈಸರ್ಗಿಕ ವಾಸತಾಣ ನಶಿಸತೊಡಗಿದೆ. ಹೀಗಾಗಿ ಚಿರತೆ ಸುರಕ್ಷಿತ ತಾಣದ ಅಲೆದಾಟದಲ್ಲಿ ನಗರ ಪ್ರದೇಶಗಳ ಸುತ್ತ ಕಾಣಿಸಿಕೊಳ್ಳತೊಡಗಿದೆ ಎಂದು ತಜ್ಞರು ವಿವರಿಸುತ್ತಾರೆ.

ಹೀಗಾಗಿಯೇ ಕಳೆದ ಮೂರು ವರ್ಷದಿಂದ ರಾಜ್ಯದಲ್ಲಿ ವಾರ್ಷಿಕ 100ಕ್ಕೂ ಅಧಿಕ ಮಂದಿ ಮಾನವ-ಪ್ರಾಣಿ ಸಂಘರ್ಷದಲ್ಲಿ ಸಾವಿಗೀಡಾಗುತ್ತಿದ್ದಾರೆ. 200ಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ದಾಳಿಗೆ ಕಾರಣವಾಗುವ ಪ್ರಾಣಿಗಳ ಪೈಕಿ ಕ್ರಮವಾಗಿ ಆನೆ, ಚಿರತೆ ಹಾಗೂ ಹುಲಿ ಮುಂಚೂಣಿಯಲ್ಲಿವೆ. ಹುಲಿ ಹೊರತುಪಡಿಸಿ ಆನೆ ಮತ್ತು ಚಿರತೆಗಳು ಆಹಾರಕ್ಕೆ ಮೀಸಲು ಅರಣ್ಯ, ಡೀಮ್ಡ್‌ ಫಾರೆಸ್ಟ್‌ಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ.

ಡೀಮ್ಡ್‌ ಫಾರೆಸ್ಟ್‌ ಬಹುತೇಕ ಒತ್ತುವರಿ:

ರಾಜ್ಯದಲ್ಲಿ ಒಟ್ಟು 10.3 ಲಕ್ಷ ಹೆಕ್ಟೇರ್‌ ಡೀಮ್ಡ್‌ ಫಾರೆಸ್ಟ್‌ (ಪರಿಭಾವಿತ ಅರಣ್ಯ) ಇದೆ. ಇದರಲ್ಲಿ ಬಹುತೇಕ ಭಾಗ ಒತ್ತುವರಿಯಾಗಿದೆ. ಈ ಪೈಕಿ 6.64 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ಸರ್ಕಾರ ವಶಕ್ಕೆ ಪಡೆದು ಜನರಿಗೆ ಹಂಚುವ ನೀತಿ ರೂಪಿಸಲಾಗುತ್ತಿದೆ. ಅರಣ್ಯ ಭೂಮಿಯನ್ನು ಜನರಿಗೆ ನೀಡಲು ಸರ್ಕಾರ ಮುಂದಾಗುತ್ತಿರುವುದು ಸಮಸ್ಯೆಯ ಮೂಲ ಎಂದು ಯುನೈಟೆಡ್‌ ಕನ್ಸರ್ವೇಷನ್‌ ಮೂವ್‌ಮೆಂಟ್‌ ಅಧ್ಯಕ್ಷ ಜೋಸೆಫ್‌ ಹೂವರ್‌ ಬೇಸರ ವ್ಯಕ್ತಪಡಿಸುತ್ತಾರೆ.

45 ಸಾವಿರ ಒತ್ತುವರಿ ಕೇಸ್‌ ಬಾಕಿ:

ಸದ್ಯ ಅರಣ್ಯ ಇಲಾಖೆಯಲ್ಲಿ 45 ಸಾವಿರಕ್ಕೂ ಅಧಿಕ ಮಂದಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡ ಪ್ರಕರಣಗಳು ದಾಖಲಾಗಿವೆ. ವಾರ್ಷಿಕ 2500 ಪ್ರಕರಣಗಳು ಹೆಚ್ಚಳವಾಗುತ್ತಿವೆ. ಕಾನೂನು ಹೋರಾಟದ ಮೂಲಕ 100 ರಿಂದ 200 ಪ್ರಕರಣಗಳು ಮಾತ್ರ ಬಗೆಹರಿಯುತ್ತಿವೆ ಎನ್ನುತ್ತಾರೆ ಹಿರಿಯ ಅರಣ್ಯ ಅಧಿಕಾರಿಗಳು.

ನಾಲ್ಕೈದು ತಿಂಗಳ ಹಿಂದೆ ರಾಜ್ಯ ಸರ್ಕಾರ ಜಾರಿಗೆ ತಂದ ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ) ಮಸೂದೆ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಜಾಗವನ್ನು ಅತಿಕ್ರಮಿಸಿದ ರೈತರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹಾಕುವಂತಿಲ್ಲ. ಇದು ಕೂಡ ಅರಣ್ಯ ಭೂಮಿ ಒತ್ತುವರಿ ಹೆಚ್ಚಳಕ್ಕೆ ಕಾರಣವಾಗಿದ್ದು, ಗ್ರಾಮೀಣ ಭಾಗದಲ್ಲಿ ಜನರು ಡೀಮ್ಡ್‌ ಫಾರೆಸ್ಟ್‌, ಮೀಸಲು ಅರಣ್ಯದಲ್ಲಿ ಈಗಾಗಲೇ ಒತ್ತುವರಿ ಮಾಡಿರುವ ಭೂಮಿಯನ್ನು ಮೀರಿ ಮತ್ತಷ್ಟುಭೂಮಿ ಒತ್ತುವರಿಗೆ ಮುಂದಾಗುತ್ತಿದ್ದಾರೆ. ಮನೆ ಕಟ್ಟಿದವರಿಗೆ ಹಕ್ಕುಪತ್ರ ನೀಡಲಾಗುವುದು ಎಂದಿದ್ದಾರೆ. ಇದರಿಂದ ಅರಣ್ಯ ಭೂಮಿಯಲ್ಲಿ ಮನೆ ಕಟ್ಟುವವರ ಸಂಖ್ಯೆಯು ಹೆಚ್ಚಳವಾಗಿದೆ. ಇದು ಕೂಡ ವನ್ಯಪ್ರಾಣಿ ಆವಾಸ ಸ್ಥಳ ತಗ್ಗಿಸುವ ಚಟುವಟಿಕೆಯಾಗಿದೆ ಎನ್ನುತ್ತಾರೆ ವನ್ಯಜೀವಿ ತಜ್ಞರು.

ಕೆ.ಆರ್‌.ಎಸ್‌ನಲ್ಲಿ ಚಿರತೆಯ ಕಣ್ಣಾಮುಚ್ಚಾಲೆ: ಬೃಂದಾವನ ಬಂದ್‌

ಅರಣ್ಯ ರಕ್ಷಣೆಗೆ ಎಚ್ಚರಿಕೆ ಗಂಟೆ

ವನ್ಯಪ್ರದೇಶ ಕುಗ್ಗಿದ ಪರಿಣಾಮ ಆಹಾರ ಹುಡುಕುತ್ತಾ ಚಿರತೆ, ಆನೆಗಳು ನಾಡಿಗೆ ಆಗಮಿಸುತ್ತಿವೆ. ಇದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ. ವನ್ಯಜೀವಿ ಪ್ರದೇಶ ಹೆಚ್ಚಿಸಬೇಕು. ಅದಕ್ಕೆ ಸಂಬಂಧಿಸಿದಂತೆ ಅಗತ್ಯ ಕಾನೂನು ರಚಿಸಬೇಕು, ಯೋಜನೆಗಳನ್ನು ಜಾರಿಗೆ ತರಬೇಕಾಗಿದೆ ಎಂದು ವನ್ಯಜೀವಿ ತಜ್ಞರು, ಪರಿಸರವಾದಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಒತ್ತುವರಿ ಹೆಚ್ಚಿರುವ ಕಡೆಯೇ ದಾಳಿ ಹೆಚ್ಚು

ರಾಜ್ಯದಲ್ಲಿ ಒತ್ತುವರಿ ಹೆಚ್ಚಿರುವ ಅರಣ್ಯ ವಿಭಾಗಗಳಲ್ಲಿ ವನ್ಯಜೀವಿಗಳ ದಾಳಿ ಹೆಚ್ಚು ಕಂಡುಬರುತ್ತಿದೆ. ಬೆಂಗಳೂರು (4479 ಒತ್ತುವರಿ ಪ್ರಕರಣಗಳು), ಚಿಕ್ಕಮಗಳೂರು (7647), ಶಿವಮೊಗ್ಗ (3900), ಚಾಮರಾಜನಗರ (1036), ಉಡುಪಿ-ಮಂಗಳೂರು (2892), ಹಾಸನ (1062), ಮೈಸೂರು (1250), ಕೊಡಗು (750) ಒತ್ತುವರಿ ಪ್ರಕರಣಗಳು ಹೆಚ್ಚಿದ್ದು, ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
 

click me!