ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಇತರರ ವಿರುದ್ಧ ದಾಖಲಾಗಿರುವ ಖಾಸಗಿ ದೂರಿಗೆ ಸಂಬಂಧಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಬೆಂಗಳೂರು (ಜು.06): ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಕಟಪಾಡಿಯ ಖಾಸಗಿ ಕಾಲೇಜೊಂದರ ಆವರಣದಲ್ಲಿ ರಾಜಕೀಯ ಭಾಷಣ ಮಾಡಿದ ಆರೋಪದ ಮೇಲೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಇತರರ ವಿರುದ್ಧ ದಾಖಲಾಗಿರುವ ಖಾಸಗಿ ದೂರಿಗೆ ಸಂಬಂಧಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ಖಾಸಗಿ ದೂರು ಮತ್ತು ಆ ಕುರಿತ ಬೆಂಗಳೂರಿನ 42ನೇ ಎಸಿಎಂಎಂ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ) ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಶ್ರೀನಿವಾಸ್ ಪೂಜಾರಿ, ಕಾಪು ಶಾಸಕ ಗುರುಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್ ಹಾಗೂ ತ್ರಿಶಾ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಸ್. ಗೋಪಾಲಕೃಷ್ಣ ಸಲ್ಲಿಸಿದ ಅರ್ಜಿಯು, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಮುಡಾದಲ್ಲಿ ಹಗರಣವೇ ಆಗಿಲ್ಲ: ಎಚ್‌ಡಿಕೆಗೆ ಸಚಿವ ಬೈರತಿ ಸುರೇಶ್ ತಿರುಗೇಟು
ಕೆಲ ಕಾಲ ಅರ್ಜಿದಾರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಿತು. ಅಲ್ಲದೆ, ಪ್ರಕರಣದಲ್ಲಿ ದೂರುದಾರರಾಗಿರುವ ಕಾಪು ವಿಧಾನಸಭಾ ಕ್ಷೇತ್ರದ ಚುನಾವಣಾ ಸಂಚಾರ ವಿಚಕ್ಷಣಾ ಅಧಿಕಾರಿಯಾಗಿದ್ದ ವಿಶ್ವನಾಥ್ ಶೆಟ್ಟಿ ಅವರಿಗೆ (ಸರ್ಕಾರಕ್ಕೆ) ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ಹಾಜರಾಗಿ, ಪ್ರಕರಣ ಸಂಬಂಧ ಚುನಾವಣಾ ಸಂಚಾರ ವಿಚಕ್ಷಣಾ ಅಧಿಕಾರಿಯು ಅರ್ಜಿದಾರರ ವಿರುದ್ಧ ಭಾರತ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 188 ದೂರು ದಾಖಲಿಸಿದ್ದಾರೆ. ಈ ವಿಚಾರವಾಗಿ ದೂರು ದಾಖಲಿಸುವ ಅಧಿಕಾರ ವ್ಯಾಪ್ತಿಯನ್ನು ವಿಚಕ್ಷಣಾ ಅಧಿಕಾರಿ ಹೊಂದಿಲ್ಲ. ದೂರು ದಾಖಲಿಸುವಲ್ಲಿ ಕಾನೂನು ಉಲ್ಲಂಘನೆಯಾಗಿದ್ದು, ಖಾಸಗಿ ದೂರನ್ನು ರದ್ದುಪಡಿಸಬೇಕು ಎಂದು ಕೋರಿದರು. ಈ ವಾದ ಮಾನ್ಯ ಮಾಡಿದ ನ್ಯಾಯಪೀಠ ಈ ಮೇಲಿನಂತೆ ಆದೇಶಿಸಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸ್ಪರ್ಧಿಸಿದ್ದ ಕೋಟಾ ಶ್ರೀನಿವಾಸ ಪೂಜಾರಿ, ಕಟಪಾಡಿಯ ಖಾಸಗಿ ಕಾಲೇಜುವೊಂದರ ಆವರಣದಲ್ಲಿ 2024ರ ಮಾ.30ರಂದು ಕಾರ್ಯಕ್ರಮ ನಡೆಸಿದ್ದರು. ಈ ವೇಳೆ ಹಲವು ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಮಕ್ಕಳಿಗೆ ಹಲವು ಉಚಿತ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು.
ದರ್ಶನ್ ಭೇಟಿಗೆ ಕುಟುಂಬ ಹೋಗ್ತಿದೆ, ನಾವು ಎಲ್ಲಿಗೆ ಹೋಗ್ಬೇಕು: ರೇಣುಕಾಸ್ವಾಮಿ ತಾಯಿ
ಇದರಿಂದ ಚುನಾವಣಾ ಅಧಿಕಾರಿಗಳ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಿ, ರಾಜಕೀಯ ಭಾಷಣ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಕಾಪು ವಿಧಾನಸಭಾ ಕ್ಷೇತ್ರದ ಚುನಾವಣಾ ಸಂಚಾರ ವಿಚಕ್ಷಣಾ ಅಧಿಕಾರಿ ನಗರದ 42ನೇ ಎಸಿಎಂಎಂ ನ್ಯಾಯಾಲಯಕ್ಕೆ 2024ರ ಏ.4ರಂದು ಖಾಸಗಿ ದೂರು ದಾಖಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ನ್ಯಾಯಾಲಯ,ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಬೇಕು ಎಂದು ಸ್ಥಳೀಯ ಠಾಣಾ ಪೊಲೀಸರಿಗೆ ನೀರ್ದೇಶಿಸಿತ್ತು. ಜೊತೆಗೆ, ಸಂಸದ ಕೋಟ ಶ್ರಿನಿವಾಸ ಪೂಜಾರಿ ಹಾಗೂ ಇತರೆ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿತ್ತು. ಇದರಿಂದ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.