ಎಸ್ಸಿ-ಎಸ್ಟಿ ಕಾಯ್ದೆಯಡಿ ಸುಳ್ಳು ಕೇಸು: ಹೈಕೋರ್ಟ್‌ ಕಿಡಿ

By Kannadaprabha News  |  First Published Aug 9, 2023, 12:42 PM IST

ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ-1989 ಅಡಿ ಸುಳ್ಳು ಕ್ರಿಮಿನಲ್‌ ಪ್ರಕರಣ ದಾಖಲಿಸುವುದರಿಂದ ಅಪರಾಧಿಕ ನ್ಯಾಯದಾನ ವ್ಯವಸ್ಥೆಗೆ ಅಡ್ಡಿ ಉಂಟು ಮಾಡುತ್ತಿದ್ದು, ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ, ಇಂತಹ ಬೆಳವಣಿಗೆಯನ್ನು ತೊಡೆದು ಹಾಕಬೇಕು ಎಂದು ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ. 


ಬೆಂಗಳೂರು (ಆ.09): ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ-1989 ಅಡಿ ಸುಳ್ಳು ಕ್ರಿಮಿನಲ್‌ ಪ್ರಕರಣ ದಾಖಲಿಸುವುದರಿಂದ ಅಪರಾಧಿಕ ನ್ಯಾಯದಾನ ವ್ಯವಸ್ಥೆಗೆ ಅಡ್ಡಿ ಉಂಟು ಮಾಡುತ್ತಿದ್ದು, ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ, ಇಂತಹ ಬೆಳವಣಿಗೆಯನ್ನು ತೊಡೆದು ಹಾಕಬೇಕು ಎಂದು ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ. ಸಿವಿಲ್‌ ವ್ಯಾಜ್ಯದ ಕುರಿತಂತೆ ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ರಾಮಮೂರ್ತಿ ನಗರದ ಸಹೋದರರಾದ ರಸಿಕ್‌ಲಾಲ್‌ ಪಟೇಲ್‌ ಮತ್ತು ಪುರುಷೋತ್ತಮ್‌ ಪಟೇಲ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಜತೆಗೆ, ಅರ್ಜಿದಾರರ ವಿರುದ್ಧದ ಕೆ.ಆರ್‌.ಪುರಂ ನಿವಾಸಿ ಪುರುಷೋತ್ತಮ್‌ ಎಂಬುವರು ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ರಾಮಮೂರ್ತಿ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ. ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಿಸುವುದು ಕಾನೂನಿನ ಪ್ರಕ್ರಿಯೆ ಸ್ಪಷ್ಟದುರುಪಯೋಗವಾಗುತ್ತದೆ. ಇಂತಹ ಬೆಳವಣಿಗೆಯನ್ನು ತೊಡೆದು ಹಾಕದಿದ್ದರೆ ಇಡೀ ಅಪರಾಧಿಕ ನ್ಯಾಯದಾನ ವ್ಯವಸ್ಥೆಗೆ ದೊಡ್ಡ ಹೊರೆಯಾಗಬಹುದು. ಇಂತಹ ಪ್ರಕರಣದಲ್ಲಿ ಸಿಲುಕುವವರಿಗೆ ಕಿರುಕುಳ ಉಂಟಾಗಲಿದ್ದು, ನ್ಯಾಯದಾನ ವ್ಯವಸ್ಥೆ ಹಾದಿ ತಪ್ಪಿಬಹುದು ಎಂದು ನ್ಯಾಯಪೀಠ ಹೇಳಿದೆ.

Tap to resize

Latest Videos

ವಕೀಲರ ಸಮಾವೇಶದಿಂದ ದೂರ ಸರಿದ ಡಿ.ಕೆ.ಶಿವಕುಮಾರ್: ಯಾಕೆ ಗೊತ್ತಾ?

ಪ್ರಕರಣದ ವಿವರ: ರಸಿಕ್‌ಲಾಲ್‌ ಮತ್ತು ಪುರುಷೋತ್ತಮ್‌ ಎಂಬುವರು ತಮ್ಮ ಆಸ್ತಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ತಮಗೆ ನಿರಂತರ ಕಿರುಕುಳ ನೀಡುತ್ತಿದ್ದು, ಮನೆಯ ಜಾಗವನ್ನೂ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಪುರುಷೊತ್ತಮ್‌ ಎಂಬಾತ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ರಾಮಮೂರ್ತಿ ನಗರದ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು, ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಈ ಪ್ರಕರಣ ರದ್ದುಪಡಿಸಲು ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌, ‘ದೂರುದಾರರ ತಂದೆ (ಪುರುಷೋತ್ತಮರ ತಂದೆ) ತಮ್ಮ ಜಮೀನನ್ನು ಅರ್ಜಿದಾರರಿಗೆ (ರಸಿಕ್‌ಲಾಲ್‌, ಪುರುಷೋತ್ತಮ್‌ಗೆ) ಮಾರಾಟ ಮಾಡಿದ್ದಾರೆ. 

ಸಂವಿಧಾನದ ವಿರುದ್ಧ ವರ್ತಿಸಿದರೆ ಕ್ರಮ ಸಹಜ: ಯು.ಟಿ.ಖಾದರ್‌

ಆ ಆಸ್ತಿಯನ್ನು ಅರ್ಜಿದಾರರು ಕಳೆದ 50 ವರ್ಷಗಳಿಂದ ತಮ್ಮಲ್ಲಿ ಉಳಿಸಿಕೊಂಡಿದ್ದಾರೆ. ಈ ಕುರಿತು ಸರ್ಕಾರಿ ದಾಖಲೆಗಳಿವೆ. ಅರ್ಜಿದಾರರು ಜಮೀನ್ನು ಖರೀದಿ ಮಾಡಿದ್ದಾರೆ ವಿನಾ ಒತ್ತುವರಿ ಮಾಡಿಲ್ಲ. ಆದರೂ, ಅರ್ಜಿದಾರರ ವಿರುದ್ಧ ದೂರುದಾರರು ಸುಳ್ಳು ಆರೋಪ ಮಾಡಿ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. ಕಾಯ್ದೆ ದುರ್ಬಳಕೆಯಾಗುತ್ತಿರುವುದಕ್ಕೆ ಈ ಪ್ರಕರಣ ಉತ್ತಮ ಉದಾಹರಣೆಯಾಗಿದೆ. ನೈಜ ಪ್ರಕರಣಗಳಲ್ಲಿ ಕಕ್ಷಿದಾರರು ಸರತಿ ಸಾಲಿನಲ್ಲಿ ನಿಂತು ನ್ಯಾಯಕ್ಕಾಗಿ ಕಾಯುತ್ತಿರುವ ಸಂದರ್ಭದಲ್ಲಿ ನ್ಯಾಯಾಲಯ ಸುಳ್ಳು ಮೊಕದ್ದಮೆಗಳ ಪರ್ವತವನ್ನು ಶೋಧನೆ ಮಾಡುವ ಪರಿಸ್ಥಿತಿ ಸೃಷ್ಟಿಯಾಗಿರುವುದು ಹಾಸ್ಯಾಸ್ಪದವಾಗಿದೆ’ ಎಂದು ಅಭಿಪ್ರಾಯಪಟ್ಟು ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿದೆ.

click me!