ಪ್ರಕರಣ ಸಂಬಂಧ ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಪಿಡಿಒ ಡಿ.ಎಂ.ಪದ್ಮನಾಭ, ಅವರ ಪತ್ನಿ ಭವ್ಯ ಮತ್ತು ಅತ್ತೆ ಲಕ್ಷ್ಮಮ್ಮ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಬೆಂಗಳೂರು(ಮೇ.31): ಆದಾಯ ಮೀರಿ ಶೇ.488ರಷ್ಟು ಅಕ್ರಮ ಆಸ್ತಿ ಗಳಿಕೆ ಮಾಡಿದ ಆರೋಪ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತವರ ಕುಟುಂಬ ಸದಸ್ಯರ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಪಿಡಿಒ ಡಿ.ಎಂ.ಪದ್ಮನಾಭ, ಅವರ ಪತ್ನಿ ಭವ್ಯ ಮತ್ತು ಅತ್ತೆ ಲಕ್ಷ್ಮಮ್ಮ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ವೈದ್ಯ ವಿದ್ಯಾರ್ಥಿಗಳ ಗ್ರಾಮೀಣ ಸೇವೆ ಕಡ್ಡಾಯ ಸರಿ: ಹೈಕೋರ್ಟ್
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲಿಸಿದರೆ, ಅರ್ಜಿದಾರರು ಬಲ್ಲ ಮೂಲದ ಆದಾಯಕ್ಕಿಂತ ಶೇ.488ರಷ್ಟು ಅಧಿಕ ಆಸ್ತಿ ಅಕ್ರಮವಾಗಿ ಗಳಿಸಿರುವುದು ಮೇಲ್ಮೋಟಕ್ಕೆ ತಿಳಿದು ಬರುತ್ತದೆ. ಇದರಿಂದ ಪ್ರಕರಣದ ತನಿಖೆ ಮುಂದುವರಿಯುವ ಅಗತ್ಯವಿದ್ದು, ಅರ್ಜಿದಾರರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ರದ್ದುಪಡಿಸಲಾಗದು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರ ಡಿ.ಎಂ. ಪದ್ಮನಾಭ ಅವರು 2007ರಲ್ಲಿ ಅನುಕಂಪದ ಆಧಾರದ ಮೇಲೆ ಕಾರ್ಯದರ್ಶಿ ಗ್ರೇಡ್-2 ಹುದ್ದೆಗೆ ನೇಮಕಗೊಂಡಿದ್ದರು. 2011ರಲ್ಲಿ ಪಿಡಿಒ ಆಗಿ ಬಡ್ತಿ ಪಡೆದಿದ್ದರು. 2023ರಲ್ಲಿ ಕುಂದಾಣ ಗ್ರಾಮದಲ್ಲಿ ಪಂಚಾಯಿತಿಯಲ್ಲಿ ಪಿಡಿಒ ಆಗಿ ಕೆಲಸ ಮಾಡುವಾಗ ಆದಾಯ ಮೀರಿ ದೊಡ್ಡ ಪ್ರಮಾಣದಲ್ಲಿ ಆಸ್ತಿ ಗಳಿಕೆ ಮಾಡಿದ್ದಾರೆ. ಅದನ್ನು ಪತ್ನಿ ಹಾಗೂ ಅತ್ತೆಯ ಹೆಸರಿನಲ್ಲಿ ಖರೀದಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ್ದ ಬೆಂಗಳೂರು ನಗರ ವಲಯ ಲೋಕಾಯುಕ್ತರು ಪೊಲೀಸರು ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅದನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.