ಸಾವಿರಾರು ಮಹಿಳೆಯರನ್ನು ಅತ್ಯಾಚಾರ ಮಾಡಿದ್ದಾರೆನ್ನಲಾದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣನನ್ನು ಐವರು ಮಹಿಳಾ ಪೊಲೀಸ್ ಅಧಿಕಾರಿಗಳೇ ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.
ಬೆಂಗಳೂರು (ಮೇ 31): ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ 2,900ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಪೆನ್‌ಡ್ರೈವ್ ಮೂಲಕ ವೈರಲ್ ಆಗಿದ್ದು, ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈಗ ಪ್ರಜ್ವಲ್ ವಿರುದ್ಧ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ. ಇದರ ಬೆನ್ನಲ್ಲಿಯೇ 34 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸಿದ ಬೆನ್ನಲ್ಲಿಯೇ ಐವರು ಮಹಿಳಾ ಪೊಲೀಸ್ ಅಧಿಕಾರಿಗಳು ಹೆಡೆಮುರಿಕಟ್ಟಿ ಎಸ್‌ಐಟಿ ಕಚೇರಿಗೆ ಕರೆದು ತಂದಿದ್ದಾರೆ.
ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ಮಾಡಿದ ದಿನವೇ ವಿದೇಶಕ್ಕೆ (ಜರ್ಮನಿಗೆ) ತೆರಳಿದ್ದರು. ಒಂದು ವಾರ ಪ್ರವಾಸಕ್ಕೆಂದು ಪೂರ್ವ ನಿಯೋಜನೆಯಂತೆ ರಾಜತಾಂತ್ರಿಕ ಪಾಸ್‌ಪೋರ್ಟ್ ಆಧಾರದಲ್ಲಿ ಜರ್ಮನಿಗೆ ತೆರಳಿದ್ದ ಪ್ರಜ್ವಲ್, ಅವರ ಮೇಲೆ ಅಶ್ಲೀಲ ವಿಡಿಯೋ ಪ್ರಕರಣದಡಿ ಅತ್ಯಾಚಾರ ಆರೋಪ ಬರುತ್ತಿದ್ದಂತೆಯೇ ಅಲ್ಲಿಯೇ ತಲೆಮರೆಸಿಕೊಂಡಿದ್ದರು. ಏ.26ರಿಂದ ಮೇ 30ರವರೆಗೆ ಜರ್ಮನಿಯಲ್ಲಿದ್ದು ಅಲ್ಲಿನ ಕಾಲಮಾನದ ಪ್ರಕಾರ ಮೇ 30ರ ಮಧ್ಯಾಹ್ನ 12.30ಕ್ಕೆ ಮ್ಯೂನಿಚ್ ನಗರದಿಂದ ಮೇ 30 ಮಧ್ಯರಾತ್ರಿ 12.49ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
Prajwal Revanna Arrest : ಕೊನೆಗೂ 34 ದಿನಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದ ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ
ಈ ವೇಳೆಗಾಗಲೇ ಪ್ರಜ್ವಲ್‌ನನ್ನು ಬಂಧಿಸಲು ಸಿದ್ಧರಾಗಿದ್ದ ಎಸ್‌ಐಟಿ ಪೊಲೀಸರು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಸಿಐಎಸ್‌ಎಫ್ ಪೊಲೀಸರೊಂದಿಗೆ ಚರ್ಚೆ ನಡೆಸಿ ಲುಕ್ಔಟ್ ನೋಟೀಸ್ ಹಾಗೂ ಬ್ಲೂ ಕಾರ್ನರ್ ನೋಟೀಸ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ವಶಕ್ಕೆ ಪೆಡೆದಿದ್ದಾರೆ. ನಂತರ ಐವರು ಮಹಿಳಾ ಪೊಲೀಸರ ನೇತೃತ್ವದಲ್ಲಿ ಪ್ರಜ್ವಲ್‌ನನ್ನು ಬಂಧಿಸಲಾಗಿದೆ. ವಿಮಾನ ನಿಲ್ದಾಣದಿಂದ ಐವರು ಮಹಿಳಾ ಪೊಲೀಸ್ ಸಿಬ್ಬಂದಿಯೇ ಬಂಧಿಸಿ ಜೀಪ್‌ನಲ್ಲಿ ಕೂರಿಸಿಕೊಂಡು ಎಸ್‌ಐಟಿ ವಿಚಾರಣಾ ಸ್ಥಳಕ್ಕೆ ಕರೆದು ತಂದಿದ್ದಾರೆ. ರಾತ್ರಿ ಮಲಗಲು ಅನುಕೂಲ ಮಾಡಿಕೊಡಲಿದ್ದು, ಬೆಳಗ್ಗೆ ವಿಚಾರಣಾ ಪ್ರಕ್ರಿಯೆಗಳು ಆರಂಭವಾಗಲಿವೆ.
ಇಂದಿನಿಂದ ಶುರುವಾಗುತ್ತೆ SIT ಅಸಲಿ ತನಿಖೆ: ಅತ್ಯಾಚಾರ ಆರೋಪದಲ್ಲಿ ಬಂಧನವಾಗಿರುವ ಸಂಸದ ಪ್ರಜ್ವಲ್ ರೇವಣ್ಣನನ್ನು ವಿಮಾನ ನಿಲ್ದಾಣದಿಂದ ಯಾವ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯದೇ ನೇರವಾಗಿ ಎಸ್ಐಟಿ ಕಚೇರಿಗೆ ಕರೆತರಲಾಗಿದೆ. ಎಸ್‌ಐಟಿ ಹಲವು ನೋಟೀಸ್ ಜಾರಿ ಮಾಡಿದರೂ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ತನಿಖೆಯಲ್ಲಿ ಸಾಕಷ್ಟು ಹಿನ್ನೆಡೆ ಉಂಟಾಗಿತ್ತು. ಇಡೀ ಪ್ರಕರಣದ ಮುಖ್ಯ ಆರೋಪಿ ಆಗಿರೋ ಪ್ರಜ್ವಲ್ ರೇವಣ್ಣನನ್ನು ಇಂದು ಬೆಳಗ್ಗೆಯಿಂದ ತೀವ್ರವಾಗಿ ವಿಚಾರಣೆಗೆ ಒಳಪಡಿಸಲಿದ್ದಾರೆ.
ಅತ್ಯಾಚಾರ ಮಾಡಿದ್ದಾರೆ ಎನ್ನಲಾದ ಎಲ್ಲ ಸ್ಥಳಗಳಲ್ಲಿನ ಪ್ರಜ್ವಲ್ ರೇವಣ್ಣನಿಗೆ ಸಂಬಂಧಿಸಿದಂತಹ ಎಲ್ಲ ವಸ್ತುಗಳನ್ನು ಹಾಗೂ ಪ್ರಜ್ವಲ್ ವಿದೇಶದಿಂದ ಬರುವಾಗ ತಂದಿದ್ದ ವಸ್ತುಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಅವರು ಬಳಸ್ತಿದ್ದ ಮೊಬೈಲ್ ಅನ್ನೂ ಎಸ್‌ಐಟಿ ವಶಕ್ಕೆ ಪಡೆದಿದೆ. ನಾಳೆ ಪ್ರಾಥಮಿಕ ಹಂತದ ವಿಚಾರಣೆ ನಡೆಸಲಿದ್ದು, ನಂತರ ಮೆಡಿಕಲ್ ಟೆಸ್ಟ್ ಮಾಡಿಸುವಂತಹ ಸಾಧ್ಯತೆಯಿದೆ. ಈಗಾಗಲೇ ಪ್ರಜ್ವಲ್ ರೇವಣ್ಣರನ್ನ ವಿಚಾರಣೆ ಮಾಡುವ ಬಗ್ಗೆ ಅಧಿಕಾರಿಗಳು ಚರ್ಚೆ ನಡಸಿದ್ದಾರೆ. ಎಸ್‌ಪಿಪಿ ಜಗದೀಶ್ ಹಾಗೂ ತನಿಖಾ ತಂಡವು ಎರಡು ಆಯಾಮಗಳಲ್ಲಿ ಪ್ರಶ್ನೆಗಳನ್ನ ತಯಾರು ಮಾಡಿಕೊಂಡಿದೆ. ಇನ್ನು ತನಿಖಾ ಹಂತದಲ್ಲಿ ತಲೆಮರೆಸಿಕೊಂಡಿದ್ದ ಬಗ್ಗೆಯೂ ಪ್ರಶ್ನೆ ಮಾಡಲಿದ್ದಾರೆ.
ಮಧ್ಯರಾತ್ರಿ ನಿದ್ದೆಗೆಟ್ಟು ಪ್ರಜ್ವಲ್ ರೇವಣ್ಣನ ಮೇಲೆ ಕಣ್ಣಿಟ್ಟ 2,000 ಜನ
ಅತ್ಯಾಚಾರ ಆರೋಪದ ದೂರು ದಾಖಲಾದರೂ ತಲೆ ಮರೆಸಿಕೊಳ್ಳಲು ಯಾರಾದರೂ ನಿಮಗೆ ಸಹಾಯ ಮಾಡಿದ್ದರಾ ಎಂಬ ಬಗ್ಗೆ ಪ್ರಶ್ನೆ ಮಾಡಲಿದ್ದಾರೆ. ಒಂದು ವೇಳೆ ಯಾರಾದರೂ ಸಹಾಯ ಮಾಡಿದ್ದರೆ ಅವರನ್ನೂ ಕೂಡ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತದೆ. ಅಲ್ಲದೇ ಪ್ರಜ್ವಲ್ ರೇವಣ್ಣ ಬಳಸ್ತಿದ್ದ ಮೊಬೈಲ್ ನಾಶ ಮಾಡಿರೋ ಸಾಧ್ಯತೆಯಿದೆ. ಪ್ರಕರಣ ದಾಖಲಾಗ್ತಿದ್ದಂತೆಯೇ ಸಾಕಷ್ಟು ಬೆಳವಣಿಗೆ ಆಗಿತ್ತು. ವಿದೇಶದಲ್ಲಿ ಮೊಬೈಲ್ ಬಿಸಾಕಿ ಸಾಕ್ಷ್ಯ ನಾಶ ಮಾಡಿರುವ ಸಾಧ್ಯತೆಯೂ ಇದ್ದಂತಿದೆ. ಈ ಎಲ್ಲದರ ಬಗ್ಗೆಯೂ ಎಸ್ಐಟಿ ಇಂಟ್ರಾಗೇಷನ್ ಮಾಡಲಿದ್ದಾರೆ.