ವೈದ್ಯ ವಿದ್ಯಾರ್ಥಿಗಳ ಗ್ರಾಮೀಣ ಸೇವೆ ಕಡ್ಡಾಯ ಸರಿ: ಹೈಕೋರ್ಟ್‌

ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸುವಂತೆ ತಮಗೆ ಸೂಚಿಸಿ ವೈದ್ಯಕೀಯ ನಿರ್ದೇಶನಾಲಯ 2022ರಲ್ಲಿ ನೀಡಿದ್ದ ತಿದ್ದೋಲೆಯನ್ನು (ಕೊರಿಜೆಂಡಮ್‌) ಪ್ರಶ್ನಿಸಿ ಬೆಂಗಳೂರಿನ ಡಾ.ಶರಣ್ಯಾ ಮೋಹನ್‌ ಸೇರಿದಂತೆ ಒಟ್ಟು 447 ವೈದ್ಯರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Rural Service of Medical Students is Mandatory Says High Court of Karnataka grg

ಬೆಂಗಳೂರು(ಮೇ.29): ಸರ್ಕಾರಿ ಕೋಟಾದಡಿ ಸರ್ಕಾರಿ ಕಾಲೇಜು ಅಥವಾ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆದ ಎಂಬಿಬಿಎಸ್‌ ವಿದ್ಯಾರ್ಥಿಗಳು ಕಡ್ಡಾಯ ಗ್ರಾಮೀಣ ಸೇವೆ ಅಥವಾ ಸೇವೆ ಸಲ್ಲಿಸದಿದ್ದರೆ 15ರಿಂದ 30 ಲಕ್ಷ ರು.ವರೆಗೆ ದಂಡ ಪಾವತಿಸುವುದಾಗಿ ನೀಡುವ ಬಾಂಡ್‌ಗಳ ಕಠಿಣ ಷರತ್ತುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸುವಂತೆ ತಮಗೆ ಸೂಚಿಸಿ ವೈದ್ಯಕೀಯ ನಿರ್ದೇಶನಾಲಯ 2022ರಲ್ಲಿ ನೀಡಿದ್ದ ತಿದ್ದೋಲೆಯನ್ನು (ಕೊರಿಜೆಂಡಮ್‌) ಪ್ರಶ್ನಿಸಿ ಬೆಂಗಳೂರಿನ ಡಾ.ಶರಣ್ಯಾ ಮೋಹನ್‌ ಸೇರಿದಂತೆ ಒಟ್ಟು 447 ವೈದ್ಯರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ ಇದೇ ವೇಳೆ ಅರ್ಜಿದಾರರಿಗೆ ಸೀಮಿತವಾಗಿ ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ತಿದ್ದೋಲೆ ಅಸಿಂಧುಪಡಿಸಿ ನ್ಯಾಯಪೀಠ ಆದೇಶಿಸಿದೆ.

ಬೆಂಗಳೂರು ಜನ ಸ್ಪಂದನ: ನೂರ್ ಫಾತಿಮಾಗೆ ಎಂಬಿಬಿಎಸ್‌ ಮಾಡಲು 10 ಲಕ್ಷ ರೂ. ಕೊಟ್ಟ ಸಿಎಂ ಸಿದ್ದರಾಮಯ್ಯ!

ಇದರಿಂದ 2015ರಲ್ಲಿ ಸಾಲಿನಲ್ಲಿ ಸರ್ಕಾರಿ ಕೋಟಾದಡಿ ಸೀಟು ಪಡೆದು ಎಂಬಿಬಿಎಸ್ ಗೆ ಪ್ರವೇಶ ಪಡೆದು 2019-20ರಲ್ಲಿ ಪದವಿ ಪೂರ್ಣಗೊಳಿಸಿದ್ದ 447 ಅರ್ಜಿದಾರ ವೈದ್ಯ ವಿದ್ಯಾರ್ಥಿಗಳಿಗೆ ಭಾಗಶಃ ಪರಿಹಾರ ದೊರೆತಂತಾಗಿದೆ.
ರಾಜ್ಯದ ಗ್ರಾಮೀಣ, ಬುಡಕಟ್ಟು ಅಥವಾ ಇನ್ನಿತರ ಕಷ್ಟಕರವಾಗಿರುವ ಪ್ರದೇಶಗಳಲ್ಲಿ ವಾಸ ಮಾಡುವ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎಂಬುದು ಕಡ್ಡಾಯ ಗ್ರಾಮೀಣ ಸೇವೆಯ ಆದೇಶದ ಹಿಂದಿನ ಉದ್ದೇಶ. ಮೇಲ್ನೋಟಕ್ಕೆ ಗಮನಿಸಿದಾಗ ಇಂತಹ ಪ್ರದೇಶಗಳನ್ನು ವಾಸ ಇರುವವರಿಗೆ ಅಗತ್ಯ ಹಾಗೂ ತುರ್ತು ಇದ್ದಾಗ ತಕ್ಷಣವೇ ವೈದ್ಯರನ್ನು ತಲುಪಲು ಸರಳ ಮಾರ್ಗಗಳಿಲ್ಲ. ಹೀಗಾಗಿ, ಸರ್ಕಾರಿ ಕೋಟಾದಡಿ ವೈದ್ಯಕೀಯ ಪದವಿ ಪೂರೈಸಿದವರು ಸರ್ಕಾರದ ಸದಾಶಯದ ಭಾಗವಾಗಬೇಕು. ಗ್ರಾಮೀಣ ವೈದ್ಯಕೀಯ ಸೇವೆ ಸಲ್ಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಎಂಬಿಬಿಎಸ್ ಸೀಟು ಪಡೆಯಲು ಪಿಯುಸಿ ಅಂಕಪಟ್ಟಿ ಪೋರ್ಜರಿ: 44 ವರ್ಷಗಳ ನಂತರ ವೈದ್ಯನಿಗೆ ಜೈಲು

ಸರ್ಕಾರಿ ಕೋಟಾದಡಿ ವೈದ್ಯಕೀಯ ಪದವಿಗೆ ಪ್ರವೇಶ ಪಡೆದ ಅಭ್ಯರ್ಥಿಗಳು ಗ್ರಾಮೀಣ ಭಾಗದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಒಂದು ವರ್ಷ ಕಡ್ಡಾಯ ಸೇವೆ ಮಾಡಬೇಕು. ತಪ್ಪಿದರೆ 15ರಿಂದ 30 ಲಕ್ಷ ರು. ದಂಡವನ್ನು ಪಾವತಿಸುವುದಾಗಿ ಬಾಂಡ್‌ ಪಡೆಯಬೇಕು ಎಂದು 2012ರ ಜು.17ರಂದು ತಿದ್ದುಪಡಿ ನಿಯಮವನ್ನು ರೂಪಿಸಲಾಗಿತ್ತು. ಆದರೆ, ಈ ಸಂಬಂಧ 2022ರ ಜು.22ರಂದು ಅಂದರೆ 10 ವರ್ಷಗಳ ನಂತರ ಸರ್ಕಾರವು ಗೆಜೆಟ್‌ ನೋಟಿಫಿಕೆಷನ್‌ ಹೊರಡಿಸಿದೆ. ಹತ್ತು ವರ್ಷಗಳ ಕಾಲ ಗಾಢ ನಿದ್ರೆಯಲ್ಲಿದ್ದ ಸರ್ಕಾರ ನಂತರ ಎಚ್ಚೆತ್ತು ನೋಟಿಫಿಕೇಷನ್‌ ಹೊರಡಿಸಿದೆ. ಅರ್ಜಿದಾರರು 2015ರಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್‌ ಸೀಟಿಗೆ ಪ್ರವೇಶ ಪಡೆದು ಪದವಿ ಪೂರ್ಣಗೊಳಿಸಿದ್ದಾರೆ. ಹಾಗಾಗಿ ಅವರಿಗೆ 2022ರ ನೋಟಿಫಿಕೆಷನ್‌ ಆಧರಿಸಿ ಅರ್ಜಿದಾರರಿಗೆ ನೀಡಿರುವ ತಿದ್ದೋಲೆಯನ್ನು ಒಪ್ಪಲಾಗದು ಎಂದು ಪೀಠ ಹೇಳಿದೆ.

- ಈ ಷರತ್ತಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ
- ಆದರೆ 10 ವರ್ಷ ನಂತರ ಸರ್ಕರದ ತಿದ್ದೋಲೆ ಸರಿಯಲ್ಲ
- ಹೀಗಾಗಿ 2022ಕ್ಕಿಂತ ಮುಂಚಿನ ವಿದ್ಯಾರ್ಥಿಗಳಿಗೆ ಅನ್ವಯವಿಲ್ಲ
- 2105ರಲ್ಲಿ ಎಂಬಿಬಿಎಸ್‌ ಮಾಡಿದ್ದ 447 ಅಭ್ಯರ್ಥಿಗಳಿಗೆ ರಿಲೀಫ್‌

Latest Videos
Follow Us:
Download App:
  • android
  • ios