
ಬೆಂಗಳೂರು: ಎರಡೂವರೆ ವರ್ಷದ ಮಗಳ ಮೇಲೆ ಸ್ವತಃ ತಂದೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆನ್ನಲಾದ ಪ್ರಕರಣದಲ್ಲಿ ತಾಯಿಯ ಅನುಪಸ್ಥಿತಿಯಲ್ಲಿ ಸಂತ್ರಸ್ತ ಬಾಲಕಿಯ ಸ್ವ-ಇಚ್ಛಾ ಹೇಳಿಕೆ ದಾಖಲಿಸಿಕೊಂಡ ಅಧೀನ ನ್ಯಾಯಾಲಯದ ಕ್ರಮವನ್ನು 'ಮೂರ್ಖತನ' ಎಂದು ಕಟು ಶಬ್ಧದಿಂದ ಖಂಡಿಸಿರುವ ಹೈಕೋರ್ಟ್, ಹೊಸದಾಗಿ ತಾಯಿಯ ಮುಂದೆಯೇ ಬಾಲಕಿಯ ಸ್ವ-ಇಚ್ಛಾ ಹೇಳಿಕೆ ದಾಖಲಿಸಿಕೊಳ್ಳಲು ತಾಕೀತು ಮಾಡಿದೆ.
ಸಂತ್ರಸ್ತ ಬಾಲಕಿಯ ತಾಯಿ ಸಲ್ಲಿಸಿದ್ದ ತಕರಾರು ಅರ್ಜಿಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012ರ 26(1) ಅನ್ವಯ ಸಂತ್ರಸ್ತ ಮಗುವಿನ ಸ್ವ-ಇಚ್ಛಾ ಹೇಳಿಕೆಯನ್ನು ಆಕೆಯ ಪೋಷಕರು ಅಥವಾ ಆಕೆ ವಿಶ್ವಾಸ ಹೊಂದಿರುವ ಯಾವುದೇ ಇತರೆ ವ್ಯಕ್ತಿಯ ಉಪಸ್ಥಿತಿಯಲ್ಲಿ ಮ್ಯಾಜಿಸ್ಟ್ರೇಟ್ ಅಥವಾ ಪೊಲೀಸ್ ಅಧಿಕಾರಿ ದಾಖಲಿಸಿಕೊಳ್ಳುವುದು ಕಡ್ಡಾಯ. ಸೆಕ್ಷನ್ 35(5)ಪ್ರಕಾರ ಸಂತ್ರಸ್ತ ಮಗುವನ್ನು ಪದೇ ಪದೇ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ವಿಚಾರಣೆಗೆ ಒಳ ಪಡಿಸುವುದು ಕಾನೂನು ಬಾಹಿರ. ಒಂದೇ ಬಾರಿಗೆ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಿದೆ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.
ಆದರೆ, ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಂತ್ರಸ್ತ ಬಾಲಕಿಯ ಸ್ವ-ಇಚ್ಛಾ ಹೇಳಿಕೆ ದಾಖಲಾತಿ ಪ್ರತಿ ಪರಿಶೀಲಿಸಿದರೆ, ಬಾಲಕಿಯ ಸ್ವ-ಇಚ್ಛಾ ಹೇಳಿಕೆ ದಾಖಲೆ ವೇಳೆ ತಾಯಿ ಅನುಪಸ್ಥಿತರಿದ್ದರೇ ಅಥವಾ ಉಪಸ್ಥಿತರಿದ್ದರೆ ಎಂಬುದೇ ಅಸ್ಪಷ್ಟವಾಗಿದೆ. ಭವಿಷ್ಯದಲ್ಲಿ ಪ್ರಕರಣ ವಿಚಾರಣೆ ಕಾನೂನುಬಾಹಿರವಾಗಿ ಅಂತ್ಯ ಕಾಣುವುದನ್ನು ತಪ್ಪಿಸಲು, ಈ ವಿವಾದ ಬಗೆಹರಿಸಲು ಸ್ವ ಇಚ್ಛಾ ಹೇಳಿಕೆ ದಾಖಲಿಸಲು ಪುನಃ ಮಗುವನ್ನು ಸಂಬಂಧ ಪಟ್ಟ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ನ್ಯಾಯಾಲಯವು (ಮಾ.28 ರಂದು) ಮಗುವಿನ ಬಾಲಕಿಯ ಸ್ವ-ಇಚ್ಛಾ ಹೇಳಿಕೆಯನ್ನು ತಾಯಿ ಮುಂದೆ ದಾಖಲಿಸಿ ಕೊಳ್ಳಬೇಕು. ಒಂದೊಮ್ಮೆ ನ್ಯಾಯಾಲಯ ದೂರುದಾರರಿಗೆ ಮತ್ತು ಸಂತ್ರಸ್ತ ಮಗುವಿಗೆ ಹಾನಿಕರವಾದ ಯಾವುದೇ ಆದೇಶ ಹೊರಡಿಸಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೈಕೋರ್ಟ್ ಎಚ್ಚರಿಸಿದೆ.
ಪ್ರಕರಣದ ವಿವರ: ಮಗುವಿನ ತಾಯಿಯು ಪೊಲೀಸರಿಗೆ ಸಲ್ಲಿಸಿದ್ದ ದೂರಿನಲ್ಲಿ ತನ್ನ ಮಗುವಿಗೆ ಗಾಯಗಳಾಗಿದ್ದವು. ಆ ಬಗ್ಗೆ ವಿಚಾರಿಸಿ ದಾಗ 'ಡೈಪರ್ ಬದಲಾಯಿಸುವಾಗ ತನ್ನ ಮೇಲೆ ತಂದೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ತಿಳಿಸಿತ್ತು ಎಂದು ಆರೋಪಿಸಿದ್ದರು. ನಂತರ ಪೊಲೀಸರು ಪೋಕ್ಸೋ ವಿಶೇಷ (ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್, ಎಫ್‌ಟಿಎಸ್‌ಸಿ-3) ನ್ಯಾಯಾಲಯಕ್ಕೆ ದೋಷಾ ರೋಪ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ: ಸೈಕಲ್‌ನಲ್ಲಿ ಉದ್ಯಮಿಯ ಫಸ್ಟ್ ಸೈಕಲ್ ರೈಡ್ ಆಯ್ತು ಲಾಸ್ಟ್ ರೈಡ್: ಅಪ್ರಾಪ್ತ ಬಾಲಕ ಚಲಾಯಿಸ್ತಿದ್ದ ಕಾರು ಡಿಕ್ಕಿಯಾಗಿ ಸಾವು
ಹೈಕೋರ್ಟ್ ಮೆಟ್ಟಿಲೇರಿದ್ದ ತಾಯಿ, 2025ರ ನ.5ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ಚೇಂಬರಲ್ಲಿ ಸಂತ್ರಸ್ತೆಯ ಸ್ವ-ಇಚ್ಛಾ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ವೇಳೆ ನ್ಯಾಯಾಧೀಶರು, ಬೆರಳಚ್ಚುಗಾರ್ತಿ ಮತ್ತು ಸಂತ್ರಸ್ತ ಬಾಲಕಿ ಮಾತ್ರ ಇದ್ದರು.
ಬಾಲಕಿ ಹೇಳಿಕೆ ನೀಡುತ್ತೇನೆ ಎಂದಿದ್ದರಿಂದ ಸ್ವ-ಇಚ್ಚಾ ಹೇಳಿಕೆ ಪಡೆದಿರುತ್ತೇನೆ. ನನಗೆ ಏನೂ ಆಗಿಲ್ಲ ಎಂದ ಬಾಲಕಿ ತಾಯಿ ಬೇಕು ಅಂತ ಹೇಳಿ ವಾಪಸ್ ಹೋಗಿದೆ. ಆದ ಕಾರಣ, ತಾಯಿಯ ಸಕ್ಷಮ ಮತ್ತೊಮ್ಮೆ ಹೇಳಿಕೆ ಪಡೆದುಕೊಳ್ಳಲಾಯಿತು. ಮಗುವಿಗೆ ಅರ್ಥವಾಗುವ ಭಾಷೆಯಲ್ಲಿ ಬಾಲಕಿಯ ತಾಯಿಯೇ ಏನಾಯಿತು ಎಂದು ಕೇಳಲಾಗಿ ಬಾಲಕಿ ಯಾವುದೇ ಉತ್ತರ ನೀಡಿಲ್ಲ ಎಂದು ನ್ಯಾಯಾಧೀಶರು ಸ್ವ-ಇಚ್ಚಾ ಹೇಳಿಕೆ ದಾಖಲಾತಿ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ. ಆ ಮೂಲಕ ಪೋಕೋ ಕಾಯ್ದೆ ಸೆಕ್ಷನ್ 26(1)ಕ್ಕೆ ವಿರುದ್ದವಾಗಿ ಬಾಲಕಿಯ ಸ್ವ-ಇಚ್ಛಾ ಹೇಳಿಕೆ ದಾಖಲೆ ಪ್ರಕ್ರಿಯೆ ನಡೆಸಿದ್ದಾರೆ ಎಂದು ಆಕ್ಷೇ ಪಿಸಿದ್ದರು.
ಇದನ್ನೂ ಓದಿ: ಇಬ್ಬರು ಹೆಂಡಿರಿದ್ದರೂ ಪರಸ್ತ್ರೀ ಮೇಲೆ ಕಣ್ಣು : ಕಾಲುವೆಯಲ್ಲಿ ಮೂಟೆಯಲ್ಲಿ ಪತ್ತೆಯಾದ ಮುನ್ನಾ
ಅರ್ಜಿದಾರೆಯ ಪರ ವಕೀಲ ಆರ್.ಎಸ್. ಅಭಯ್ ಮತ್ತು ಆನಂದಿತಾ ರೆಡ್ಡಿ, ಪೋಕೋ ಸೆಕ್ಷನ್ 26(1) ವಿರುದ್ಧವಾಗಿ ಮಗುವಿನ ಸ್ವ-ಇ ಇಚ್ಛಾ ಹೇಳಿಕೆ ದಾಖಲಾತಿ ಪ್ರಕ್ರಿಯೆ ನಡೆಸಲಾಗಿದೆ. ಈ ಅಂಶ ಪರಿಗಣಿಸಿಯೇ ಆರೋಪಿ ತಂದೆಗೆ ಜಾಮೀನು ದೊರೆತಿದೆ ಎಂದು ಹೈಕೋರ್ಟ್ ಗಮನಕ್ಕೆ ತಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ