
ಬೆಂಗಳೂರು (ಜು.05): ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ತೀವ್ರ ಬಿರುಸಾಗಿದ್ದು ನದಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಬಿರುಗಾಳಿ ಮಳೆಯ ಅಬ್ಬರ ಜೋರಾಗಿದ್ದು ಮಳೆ ಸಂಬಂಧಿ ಕಾರಣಗಳಿಗೆ ಬಾಲಕಿ ಸೇರಿದಂತೆ ಇಬ್ಬರು ಮೃತಪಟ್ಟು ಆರು ಮಂದಿ ಗಾಯಗೊಂಡಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಇನ್ನುಳಿದಂತೆ ಧಾರವಾಡ, ಹಾವೇರಿ, ಗದಗ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಹೊಸಪೇಟೆಯಲ್ಲಿ ಸುಪ್ರೀತಾ ಎಂಬ ಬಾಲಕಿ ಶಾಲೆಯಿಂದ ವಾಪಸ್ ಮನೆಗೆ ತೆರಳುವಾಗ ಹಳ್ಳದಲ್ಲಿ ಕೊಚ್ಚಿಹೋಗಿದ್ದಾಳೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಲ್ತೂರಿನಲ್ಲಿ ಕೃಷಿ ಗದ್ದೆಯಲ್ಲಿ ತುಂಬಿದ್ದ ನೀರು ಸರಾಗ ಹರಿಯಲು ಗದ್ದೆಯ ಅಂಚನ್ನು ಕಡಿಯಲೆಂದು ತೆರಳಿದ್ದ ಸಂದರ್ಭ ನೀರು ತುಂಬಿಕೊಂಡ ಗದ್ದೆಗೆ ಆಕಸ್ಮಿಕವಾಗಿ ಬಿದ್ದು ಕೃಷಿಕ ಮಹಿಳೆ ಲಕ್ಷ್ಮೀ ಪೂಜಾರ್ತಿ(66) ಮೃತಪಟ್ಟಿದ್ದಾರೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಳದೀಪುರದಲ್ಲಿ ಮನೆಯೊಂದರ ಮೇಲೆ ಬೃಹತ್ ಮರ ಉರುಳಿಬಿದ್ದು ಮನೆಯಲ್ಲಿದ್ದ ಆರು ಮಂದಿ ಗಾಯಗೊಂಡಿದ್ದಾರೆ.
ಚಿಕ್ಕಮಗಳೂರಲ್ಲಿ ಭಾರೀ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾದ್ಯಂತ ಭಾನುವಾರ ರಾತ್ರಿಯಿಂದೀಚೆಗೆ ಮಳೆ ಬಿರುಸುಗೊಂಡಿದ್ದು ನೇತ್ರಾವತಿ, ಕುಮಾರಧಾರಾ ಸೇರಿದಂತೆ ಎಲ್ಲ ನದಿಗಳಲ್ಲಿ ನೀರಿನ ಮಟ್ಟದಿಢೀರನೆ ಏರಿಕೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿ ಪ್ರವಾಹದ ಮಟ್ಟದಲ್ಲಿ ಹರಿಯುತ್ತಿದ್ದು ಕ್ಷೇತ್ರದ ಸ್ನಾನಘಟ್ಟಮುಳುಗಡೆಯಾಗಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕುಗಳಲ್ಲಿ ಸೋಮವಾರ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ಉತ್ತರ ಕನ್ನಡದಲ್ಲಿ ಗಂಗಾವಳಿ ನದಿಗೆ ಪ್ರವಾಹ ಬಂದಿದ್ದು ಪಣಸಗುಳಿ ಸೇತುವೆ ನೀರಿನಲ್ಲಿ ಮುಳುಗಿದ್ದು ಅಂಕೋಲಾ ತಾಲೂಕಿನ 5 ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಸಿದ್ದಾಪುರ ತಾಲೂಕಿನಲ್ಲಿ ಕಾನಸೂರು ಮಾದ್ನಕಳ ರಸ್ತೆ ಜಲಾವೃತವಾಗಿದ್ದರಿಂದ 10ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.
ಕೊಡಗು ಜಿಲ್ಲೆಯಲ್ಲೂ ಭಾರೀ ಮಳೆ ಮುಂದುವರಿದಿದ್ದು ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟಮತ್ತಷ್ಟುಏರಿಕೆಯಾಗಿದೆ. ಪರಿಣಾಮ ಭಾಗಮಂಡಲ-ನಾಪೋಕ್ಲು ರಸ್ತೆ ಮೇಲೆ ನೀರು ಹರಿಯುತ್ತಿದ್ದು ರಸ್ತೆ ಸಂಚಾರ ಕಡಿತಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿದ್ದು ಶೃಂಗೇರಿ, ಮಾಗುಂಡಿ, ಬಾಳೆಹೊನ್ನೂರುಗಳಲ್ಲಿನ ನದಿಪಾತ್ರಗಳ ತಗ್ಗಿನ ಪ್ರದೇಶಗಳು ಜಲಾವೃತಗೊಂಡಿವೆ. ಶಿವಮೊಗ್ಗ ಜಿಲ್ಲೆಯ ಘಟ್ಟಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ತುಂಗಾ, ಭದ್ರಾ, ಶರಾವತಿ ನದಿಗಳ ಮಟ್ಟದಲ್ಲಿ ಏರಿಕೆ ಕಾಣಿಸಿದೆ.
ದೇಶದಲ್ಲಿ ಜೂನ್‌ನಲ್ಲಿ ಶೇ.8ರಷ್ಟು ಮಳೆ ಕೊರತೆ, ಕಳೆದ 7 ವರ್ಷಗಳಲ್ಲೇ ಕನಿಷ್ಠ!
ಮಡಿಕೇರಿಯಲ್ಲಿ ಮತ್ತೆ 30 ಅಡಿ ಗುಡ್ಡ ಕುಸಿತ: ಕಳೆದ ಕೆಲ ವರ್ಷಗಳಿಂದ ಪ್ರತಿ ಬಾರಿ ಮಳೆಗಾಲದ ಸಂದರ್ಭದಲ್ಲಿ ಹಾನಿಗೊಳಗಾಗುತ್ತಿರುವ ಮಡಿಕೇರಿ-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ, ಈ ಬಾರಿಯೂ ಕುಸಿಯುವ ಆತಂಕ ಎದುರಾಗಿದೆ. ಈಗಾಗಲೇ ಮಡಿಕೇರಿ ಸಮೀಪದ ತಾಳತ್ತಮನೆ ವ್ಯಾಪ್ತಿಯಲ್ಲಿ 30 ಅಡಿ ಎತ್ತರ ಗುಡ ್ಡಕುಸಿತವಾಗಿದ್ದು, ಸಣ್ಣ ಪ್ರಮಾಣದ ಮಣ್ಣು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. 2018ರಲ್ಲಿ ಗುಡ್ಡ ಕುಸಿತವಾದ ಕರ್ತೋಜಿ ಬಳಿ ಮತ್ತೆ ಇದೀಗ ಮಣ್ಣು ಜಾರಿ ರಸ್ತೆಗೆ ಬೀಳುತ್ತಿದೆ. ಇದರ ಪಕ್ಕದಲ್ಲೆ ಭಾರಿ ಪ್ರಮಾಣದ ನೀರು ಕೂಡ ಹರಿಯುತ್ತಿದ್ದು, ಮತ್ತಷ್ಟುಅಪಾಯ ಎದುರಾಗುವ ಸಾಧ್ಯತೆ ಇದೆ. ಏತನ್ಮಧ್ಯೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಹಾಗೂ ಗೋವಾ ಗಡಿಯಾದ ಆನಮೋಡದಲ್ಲಿ ಹೆದ್ದಾರಿ ಮೇಲೆ ಗುಡ್ಡ ಕುಸಿದಿದ್ದರಿಂದ ವಾಹನ ಸಂಚಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆಗೀಡಾದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ