ರಾಮಮಂದಿರ ಸುತ್ತ ರಾಮರಾಜ್ಯ ನಿರ್ಮಾಣ: ಪೇಜಾವರ ಶ್ರೀ ಸಲಹೆ

By Govindaraj SFirst Published Jul 5, 2022, 5:00 AM IST
Highlights

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣವೊಂದೇ ಕನಸಲ್ಲ, ರಾಮರಾಜ್ಯದ ನಿರ್ಮಾಣ ಕಾರ್ಯವೂ ಆಗಬೇಕಾಗಿದೆ. ಅದಕ್ಕಾಗಿ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಲ್ಲಿ ರಾಮರಾಜ್ಯದ ಪರಿಕಲ್ಪನೆಗಳನ್ನು ಸಾಕಾರಗೊಳಿಸುವ ಯೋಜನೆ ಹಮ್ಮಿಕೊಳ್ಳುವಂತೆ ಸಲಹೆ ನೀಡಿರುವುದಾಗಿ ಅಯೋಧ್ಯಾ ಶ್ರೀರಾಮ ಮಂದಿರದ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. 

ಮಂಗಳೂರು (ಜು.05): ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣವೊಂದೇ ಕನಸಲ್ಲ, ರಾಮರಾಜ್ಯದ ನಿರ್ಮಾಣ ಕಾರ್ಯವೂ ಆಗಬೇಕಾಗಿದೆ. ಅದಕ್ಕಾಗಿ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಲ್ಲಿ ರಾಮರಾಜ್ಯದ ಪರಿಕಲ್ಪನೆಗಳನ್ನು ಸಾಕಾರಗೊಳಿಸುವ ಯೋಜನೆ ಹಮ್ಮಿಕೊಳ್ಳುವಂತೆ ಸಲಹೆ ನೀಡಿರುವುದಾಗಿ ಅಯೋಧ್ಯಾ ಶ್ರೀರಾಮ ಮಂದಿರದ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಕಲ್ಕೂರ ಪ್ರತಿಷ್ಠಾನ ನೇತೃತ್ವದಲ್ಲಿ ನಗರದ ‘ಮಂಜುಪ್ರಸಾದ’ ವಾದಿರಾಜ ಮಂಟಪದಲ್ಲಿ ಸೋಮವಾರ, ಹರಿಪಾದಗೈದಿರುವ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗೆ ಗುರುವಂದನೆ ಹಾಗೂ ಪಟ್ಟದ ದೇವರಾದ ಶ್ರೀ ರಾಮವಿಠ್ಠಲ ದೇವರಿಗೆ ತುಲಾಭಾರ ಕಾರ್ಯ ನೆರವೇರಿಸಿ ಅವರು ಮಾತನಾಡಿದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಶತಮಾನಗಳ ಕನಸು. ಅದೀಗ ಈಡೇರುವ ಹಂತದಲ್ಲಿದೆ. ಮಂದಿರ ನಿರ್ಮಾಣವಾದ ಬಳಿಕ ಶ್ರೀರಾಮನ ಹೆಸರಿನಲ್ಲಿ ಗ್ರಾಮಗಳನ್ನು ದತ್ತು ತೆಗೆದುಕೊಂಡು ರಾಮರಾಜ್ಯ ಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ಗೆ ಸಲಹೆ ನೀಡಲಾಗಿದೆ. ಗ್ರಾಮಗಳ ದತ್ತು ಕಾರ್ಯ ನಿರಂತರವಾಗಿ ಮುಂದುವರಿಯಬೇಕಿದೆ ಎಂದು ಸ್ವಾಮೀಜಿ ಆಶಿಸಿದರು. ರಾಮರಾಜ್ಯ ನಿರ್ಮಾಣವಾಗಬೇಕಾದರೆ ಪ್ರಜೆಗಳು ರಾಮರಾಗಬೇಕು. ರಾಮ ಎಂದರೆ ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವುದು ಎಂದರ್ಥ. ಮಾತೃಭೂಮಿಯ ಮೇಲೆ ಗೌರವ ಇರಿಸುವುದೂ ಶ್ರೀರಾಮನ ಗುಣ. 

ರಾಮಮಂದಿರ ನಿರ್ಮಾಣವಾಗಬೇಕೆಂಬ ಭಾರತೀಯರ ಶತಮಾನಗಳ ಕನಸು ಈಗ ನನಸು: ಪೇಜಾವರ ಶ್ರೀ

ಈ ರಾಷ್ಟ್ರಭಕ್ತಿಯನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ. ಸಮಾಜದಲ್ಲಿರುವ ಎಲ್ಲರನ್ನೂ ಪ್ರೀತಿಸುವುದು ಶ್ರೀರಾಮನ ದೇಶಪ್ರೇಮ. ನಮ್ಮನ್ನು ನಾವು ಪ್ರೀತಿಸಿದಂತೆ ಸಮಾಜವನ್ನು ಪ್ರೀತಿಸಬೇಕು ಎಂದು ಕರೆ ನೀಡಿದರು. ನನ್ನಿಂದ ಯಾರಿಗೂ ನೋವಾಗಬಾರದು ಎನ್ನುವ ತತ್ವದಂತೆ ನಡೆಯುವುದೇ ಧರ್ಮ, ಅದೇ ರಾಮನ ಆದರ್ಶ. ಆ ರೀತಿ ನಡೆದುಕೊಂಡರೆ ಅದೇ ರಾಮನ ಆರಾಧನೆಯಾಗುತ್ತದೆ. ಇದರೊಂದಿಗೆ ಸಾಮರ್ಥ್ಯ ಇದ್ದವರು ಸಮಾಜದ ದುರ್ಬಲರ ಏಳಿಗೆಗೆ ಶ್ರಮಿಸಬೇಕು. ಅನೇಕರು ಮನೆಯಿಲ್ಲದೆ ಜೀವನ ಸಾಗಿಸುತ್ತಿದ್ದಾರೆ.

ಅಂಥವರಿಗೆ ಮನೆಗಳನ್ನು ಕಟ್ಟಿಕೊಡುವ ಕಾರ್ಯ ಆಗಬೇಕು. ಇಂಥ ಕಾರ್ಯಗಳ ಮೂಲಕ ರಾಮರಾಜ್ಯದ ಕನಸನ್ನು ನನಸುಗೊಳಿಸಬೇಕಿದೆ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ನಾಗರಿಕ ಸಮಾಜದೊಳಗೆ ಕೆಲವೇ ಕೆಲವು ಅನಾಗರಿಕರಿಂದಾಗಿ ನಾಗರಿಕರ ನೆಮ್ಮದಿ ನಾಶವಾಗುತ್ತಿದೆ. ಅಂಥ ವ್ಯಕ್ತಿಗಳನ್ನು ಸರ್ಕಾರ ನಿಷ್ಪಕ್ಷಪಾತವಾಗಿ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು. ಕಲ್ಕೂರ ಪ್ರತಿಷ್ಠಾನದ ಪ್ರದೀಪ್‌ ಕುಮಾರ್‌ ಕಲ್ಕೂರ, ಮುಖಂಡರಾದ ಹರಿಕೃಷ್ಣ ಪುನರೂರು, ಎಂ.ಬಿ. ಪುರಾಣಿಕ್‌, ಭುವನಾಭಿರಾಮ ಉಡುಪ ಮತ್ತಿತರರು ಇದ್ದರು.

ಅಯೋಧ್ಯಾ ರಾಮಮಂದಿರ-2024 ಜನವರಿಯಿಂದ ಪ್ರತಿಷ್ಠಾ ಕಾರ್ಯ: ಪೇಜಾವರ ಶ್ರೀ

2024 ಸಂಕ್ರಾಂತಿ ವೇಳೆಗೆ ಶ್ರೀರಾಮ ಪ್ರತಿಷ್ಠೆ: ಮುಂದಿನ ವರ್ಷಾಂತ್ಯದೊಳಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡು 2024ರ ಸಂಕ್ರಾಂತಿ ವೇಳೆಗೆ ದೇವರ ಪ್ರತಿಷ್ಠಾ ಕಾರ್ಯ ನೆರವೇರಲಿದೆ ಎಂದು ಪೇಜಾವರ ಸ್ವಾಮೀಜಿ ತಿಳಿಸಿದರು. ರಾಮಮಂದಿರ ನಿರ್ಮಾಣ ಜಾಗದಲ್ಲಿ ಮರಳು ಮಿಶ್ರಿತ ಮಣ್ಣು ಇದ್ದುದರಿಂದ ಸುಮಾರು 40 ಅಡಿಗಳಷ್ಟುಆಳದ ಧೂಳು ಮಣ್ಣು ತೆಗೆದು ಭೂಮಿಯನ್ನು ದೃಢಗೊಳಿಸಿ ಬಲಿಷ್ಠ ಅಡಿಪಾಯ ನಿರ್ಮಾಣವಾಗುತ್ತಿದೆ. ಮಂದಿರ ನಿರ್ಮಾಣದೊಂದಿಗೆ ಭರತಖಂಡದ ಮೊದಲ ಮೋಕ್ಷದಾಯಕ ಕ್ಷೇತ್ರದ ಕನಸು ನನಸಾಗಲಿದೆ ಎಂದರು.

click me!