ಆರೋಗ್ಯ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಮಹತ್ವದ ಘೋಷಣೆ, ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿ

Published : Sep 26, 2025, 07:39 PM IST
Dinesh Gundu rao Heart Attack Report

ಸಾರಾಂಶ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ, ತಾಲೂಕು ಆಸ್ಪತ್ರೆಗಳಲ್ಲಿ 24/7 ಸೇವೆ, ತಜ್ಞ ವೈದ್ಯರ ನೇಮಕಾತಿ, ಗರ್ಭಿಣಿಯರಿಗೆ ವಿಶೇಷ ಆರೈಕೆ ಒದಗಿಸುವಂತಹ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ.

ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ, ತಾಯಿ ಹಾಗೂ ಮಕ್ಕಳ ಆರೋಗ್ಯ ಸೇವೆಗಳನ್ನು ಬಲಪಡಿಸುವುದರ ಕುರಿತು ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು. ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಶೂನ್ಯಕ್ಕೆ ಇಳಿಸುವುದು ತಮ್ಮ ಗುರಿಯಾಗಿದೆ ಎಂದು ಅವರು ಘೋಷಿಸಿದರು.

ತಾಯಿ–ಮಕ್ಕಳ ಆರೋಗ್ಯ: ಸರ್ಕಾರದ ಪ್ರಮುಖ ಆದ್ಯತೆ

ತಾಯಂದಿರ ಹಾಗೂ ಶಿಶುಗಳ ಸಾವನ್ನು ತಡೆಯುವುದು ನಮ್ಮ ಸರ್ಕಾರದ ಮೊದಲ ಆದ್ಯತೆ. ಕಳೆದ ವರ್ಷಕ್ಕೆ ಹೋಲಿಸಿದರೆ ತಾಯಂದಿರ ಮರಣ ಪ್ರಮಾಣ 25% ಇಳಿಕೆಯಾಗಿದೆ. ಆದರೆ ಇನ್ನೂ ದಕ್ಷಿಣ ಭಾರತದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಈ ಪ್ರಮಾಣ ಹೆಚ್ಚು. ಇದನ್ನು ಶೂನ್ಯಕ್ಕೆ ಇಳಿಸಲು ಕ್ರಮ ಕೈಗೊಂಡಿದ್ದೇವೆ” ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 24 ಗಂಟೆಗಳ ಸೇವೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು. ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು ಮತ್ತು ಮಕ್ಕಳ ತಜ್ಞರನ್ನು ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ನೇಮಿಸಲಾಗುವುದು. ಹಿಂದಿನಂತೆ ಒಬ್ಬ ತಜ್ಞ ವೈದ್ಯರ ಮೇಲೆ ಸಂಪೂರ್ಣ ಹೊಣೆಗಾರಿಕೆ ಇರದು. ಇನ್ಮುಂದೆ ಪ್ರತಿ ಆಸ್ಪತ್ರೆಯಲ್ಲಿ ತಜ್ಞರ ತಂಡ ಕಾರ್ಯ ನಿರ್ವಹಿಸಲಿದೆ” ಎಂದರು.

ವೈದ್ಯರ ನೇರ ನೇಮಕಾತಿ

ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಪರಿಹರಿಸಲು 220 ವೈದ್ಯರು ಮತ್ತು 114 ರೇಡಿಯಾಲಜಿಸ್ಟ್‌ಗಳನ್ನು ನೇರ ನೇಮಕಾತಿ ಮಾಡುವ ಯೋಜನೆ ಅಂತಿಮ ಹಂತದಲ್ಲಿದೆ. ತಜ್ಞ ವೈದ್ಯರನ್ನು ಉಳಿಸಿಕೊಳ್ಳಲು ಹಾಗೂ ತಾಲ್ಲೂಕು ಮಟ್ಟದಲ್ಲೇ ತುರ್ತು ಚಿಕಿತ್ಸಾ ವ್ಯವಸ್ಥೆ ಸಿದ್ಧವಾಗಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.

ರಕ್ತದಾನ ಮತ್ತು ಪೋಷಕಾಂಶದ ಬಲವರ್ಧನೆ

ತಾಯಿ–ಮಕ್ಕಳ ಜೀವ ಉಳಿಸಲು ಬ್ಲಡ್ ಪ್ಲಾಸ್ಮಾ ಸ್ಟೋರೇಜ್ ವ್ಯವಸ್ಥೆ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಕಲ್ಪಿಸಲಾಗುವುದು. ರಕ್ತಹೀನತೆಯಿಂದ ಬಳಲುವ ಗರ್ಭಿಣಿಯರಿಗೆ ಐರನ್-ಫೋಲಿಕ್ ಆಮ್ಲ ಹಾಗೂ FCA ಇಂಜೆಕ್ಷನ್‌ಗಳ ಪೂರೈಕೆ ಮಾಡಲಾಗುತ್ತದೆ. “ಪ್ರತಿ ಹಂತದಲ್ಲೂ ತಪಾಸಣೆ ಕಡ್ಡಾಯ. ವಿಶೇಷವಾಗಿ ಹೈ-ರಿಸ್ಕ್ ಗರ್ಭಿಣಿಯರಿಗೆ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಒದಗಿಸಲಾಗುವುದು” ಎಂದು ಸಚಿವರು ತಿಳಿಸಿದರು.

ಆಸ್ಪತ್ರೆಗಳ ಜವಾಬ್ದಾರಿ

ಒಂದು ಕಡೆ ತಪಾಸಣೆ ಮಾಡಿಸಿಕೊಂಡು ಬೇರೆಡೆಗೆ ಹೋಗುವ ಪರಿಸ್ಥಿತಿ ತಪ್ಪಿಸಲು ತಾಲ್ಲೂಕು ಆಸ್ಪತ್ರೆಗಳಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತೇವೆ. ಇದರಿಂದ ಜಿಲ್ಲಾಸ್ಪತ್ರೆಗಳಿಗೆ ಇರುವ ಒತ್ತಡ ಕಡಿಮೆಯಾಗಲಿದೆ ಎಂದು ಅವರು ವಿವರಿಸಿದರು.

ಜಾತಿ ಜನಗಣತಿ–ಮಾಧ್ಯಮಗಳಿಗೆ ಕಟು ಟೀಕೆ

ಸುದ್ದಿಗೋಷ್ಠಿಯ ವೇಳೆ ಮಾಧ್ಯಮಗಳತ್ತ ತಿರುಗಿ ಸಚಿವರು, “ನೀವು ದಿನನಿತ್ಯ ಜಾತಿ ಜನಗಣತಿ ವಿಚಾರವನ್ನು ಮಾತ್ರ ಹೈಲೈಟ್ ಮಾಡ್ತೀರಾ. ಆದರೆ ತಾಯಿ–ಮಕ್ಕಳ ಆರೋಗ್ಯದಂತಹ ಮಹತ್ವದ ಕಾರ್ಯಕ್ರಮಗಳಿಗೆ ಪ್ರಚಾರ ಕೊಡುತ್ತಿಲ್ಲ. ರಾಹುಲ್ ಗಾಂಧಿಯವರು ಜಾತಿ ಜನಗಣತಿ ಕುರಿತಾಗಿ ಹೇಳಿದ್ದೇ ಸರಿ. ಆದರೆ ಜನಪ್ರಿಯತೆಯಲ್ಲಿ ಅದಕ್ಕಿಂತಲೂ ಹೆಚ್ಚು ಪ್ರಚಾರ ಆರೋಗ್ಯ ಕಾರ್ಯಕ್ರಮಗಳಿಗೆ ಸಿಗಬೇಕು” ಎಂದರು.

ರಸ್ತೆ ಗುಂಡಿ ಮತ್ತು ಎಸ್ಐಟಿ ಕುರಿತು ಟೀಕೆ

ನಗರದ ರಸ್ತೆ ಗುಂಡಿ ಸಮಸ್ಯೆಯನ್ನು ಉಲ್ಲೇಖಿಸಿ, “ನಾವು ಗುಂಡಿ ಮುಚ್ಚಿದ ಮೇಲೆ ಬಿಜೆಪಿಯವರು ಅದನ್ನೇ ಡ್ರಾಮಾ ಮಾಡಿ ಮಾತನಾಡುತ್ತಾರೆ. ಇದು ಬರೀ ರಾಜಕೀಯ ಆಟ” ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು. ಇನ್ನೂ ಎಸ್ಐಟಿ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಎಸ್ಐಟಿ ರಚನೆ ಒಳ್ಳೆಯ ಕೆಲಸ. ಹಲವಾರು ಸತ್ಯಗಳು ಹೊರಬಂದಿವೆ. ಇನ್ನೂ ತನಿಖೆ ನಡೆಯುತ್ತಿದೆ. ಮೂಳೆಗಳು ಪತ್ತೆಯಾಗಿರುವ ಘಟನೆಗಳು ಗಂಭೀರ. ಇದು ಸಂಚುನೋ, ಅಪರಾಧವೋ ಎಂದು ಸಂಪೂರ್ಣವಾಗಿ ತನಿಖೆ ಮಾಡಬೇಕಾಗಿದೆ. ಎಸ್ಐಟಿ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದೆ. ಅದನ್ನು ಮುಚ್ಚಬೇಕೆಂಬ ಪ್ರಶ್ನೆ ಇನ್ನೂ ಇಲ್ಲ” ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೈಲಿನಿಂದ ಹೊರಬಂದ ಶಾಸಕ ಪಪ್ಪಿ: ನಟ ದರ್ಶನ್‌ ಭೇಟಿ, ಡಿಕೆ ಶಿವಕುಮಾರ್ ಬಗ್ಗೆ ಹೇಳಿದ್ದೇನು?
Kogilu Layout: ಶೆಡ್‌ ಧ್ವಂಸ ಕುರಿತು ಪಾಕ್‌ಗೆ ಉಗ್ರರಿಂದ ಮಾಹಿತಿ, ಇದು ಸ್ಲೀಪರ್‌ಸೆಲ್‌ಗಳ ಕೆಲಸ: ಆರ್ ಅಶೋಕ್