
ದೆಹಲಿಯ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ ನಿರ್ದೇಶಕನಾಗಿದ್ದ ಸ್ವಾಮಿ ಚೈತನ್ಯಾನಂದ ಸರಸ್ವತಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.
ಸಂಸ್ಥೆಯಲ್ಲಿನ ಹಾಸ್ಟೆಲ್‌ಗಳಲ್ಲಿ ಗುಪ್ತ ಸಿಸಿಟಿವಿ ಕ್ಯಾಮೆರಾಗಳು, ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶಗಳು, ತಡರಾತ್ರಿ ವಾಟ್ಸಾಪ್ ಚಾಟ್‌ಗಳು ಮತ್ತು ವಿದೇಶ ಪ್ರವಾಸದ ಭರವಸೆ ನೀಡಿ ಶೋಷಣೆ ಇಂತಹ ಆಘಾತಕಾರಿ ಆರೋಪಗಳು ಹೊರಬಿದ್ದಿವೆ. 2016ರಲ್ಲಿ ಪ್ರಕರಣ ದಾಖಲಿಸಿದ್ದ ಸಂತ್ರಸ್ತೆಯೊಬ್ಬಳು, “ನಾನು ಸಂಸ್ಥೆಗೆ ಸೇರಿದ ಕೆಲವೇ ದಿನಗಳಲ್ಲಿ ಚೈತನ್ಯಾನಂದರು ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದ್ದರು. ನನ್ನನ್ನು ಬೇಬಿ, ಸ್ವೀಟ್ ಗರ್ಲ್ ಎಂದು ಕರೆಯುತ್ತಿದ್ದರು. ತರಗತಿಗಳ ಬಳಿಕ ಕಚೇರಿಗೆ ಕರೆಯುತ್ತಿದ್ದರು, ದುಬೈ ಪ್ರವಾಸಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡುತ್ತಿದ್ದರು. ನಾನು ನಿರಾಕರಿಸಿದಾಗ, ಅವರ ಸಿಬ್ಬಂದಿ ನಿರಂತರ ಒತ್ತಡ ಹೇರುತ್ತಿದ್ದರು. ಫೋನ್ ವಶಪಡಿಸಿಕೊಂಡು ಹಾಸ್ಟೆಲ್‌ನಲ್ಲಿ ಒಂಟಿಯಾಗಿರಲು ಒತ್ತಾಯಿಸಿದ್ದರು” ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಆರೋಪಗಳ ಪ್ರಕಾರ, ಸಂಜೆ 6.30ಕ್ಕೆ ತರಗತಿಗಳು ಮುಗಿದ ಬಳಿಕ ಚೈತನ್ಯಾನಂದ ವಿದ್ಯಾರ್ಥಿನಿಯರನ್ನು ಕಚೇರಿಗೆ ಕರೆಯುತ್ತಿದ್ದ. ರಾತ್ರಿಯಲ್ಲಿ ಹಾಸ್ಟೆಲ್ ರೂಮಿಗೆ ಕರೆಮಾಡಿ ಕಿರುಕುಳ ನೀಡುತ್ತಿದ್ದ. ವಿದ್ಯಾರ್ಥಿನಿಯರ ಹಾಜರಾತಿ ಕಡಿಮೆ ಮಾಡುವುದು, ಅಂಕ ಕಟ್ ಮಾಡುವುದು, ಪದವಿಯನ್ನು ತಡೆಹಿಡಿಯುವುದು ಮುಂತಾದ ರೀತಿಯಲ್ಲಿ ಒತ್ತಡ ಹೇರಲಾಗುತ್ತಿತ್ತು.
ಆಗಸ್ಟ್ 2025ರಲ್ಲಿ ಒಟ್ಟು 17 ವಿದ್ಯಾರ್ಥಿನಿಯರು ಸಾಮೂಹಿಕವಾಗಿ ಲೈಂಗಿಕ ಕಿರುಕುಳದ ವಿರುದ್ಧ ದೂರು ಸಲ್ಲಿಸಿದ್ದಾರೆ. ಚೈತನ್ಯಾನಂದ ಹಾಸ್ಟೆಲ್‌ನ ಬಹುತೇಕ ಭಾಗಗಳಲ್ಲಿ, ವಿಶೇಷವಾಗಿ ಸ್ನಾನಗೃಹಗಳ ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಈ ದೃಶ್ಯಗಳನ್ನು ದುರುಪಯೋಗ ಮಾಡಲಾಗುತ್ತಿತ್ತು ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ವಿದ್ಯಾರ್ಥಿನಿಯರಿಗೆ ಯಾರಾದರೂ ಲೈಂಗಿಕ ಸಂಪರ್ಕ ಹೊಂದಿದ್ದೀರಾ? ಕಾಂಡೋಮ್ ಬಳಸಿದ್ದೀರಾ?” ಮುಂತಾದ ಅಶ್ಲೀಲ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ಹಲವರು ದೂರಿದ್ದಾರೆ. ವಿರೋಧಿಸಿದವರಿಗೆ ನೇರ ಕಿರುಕುಳ ನೀಡಲಾಗುತ್ತಿತ್ತು. ಪ್ರಕರಣದ ಎಫ್‌ಐಆರ್‌ನಲ್ಲಿ ಅಸೋಸಿಯೇಟ್ ಡೀನ್ ಸೇರಿ ಮೂವರು ಮಹಿಳಾ ಸಿಬ್ಬಂದಿ ಸದಸ್ಯರ ಹೆಸರುಗಳು ಸೇರಿವೆ. ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರಿದುದು, ಸಾಕ್ಷ್ಯ ನಾಶಕ್ಕೆ ಒತ್ತಾಯಿಸಿದುದು ಹಾಗೂ ಗುರುತನ್ನು ಮರೆಮಾಡಲು ವಿದ್ಯಾರ್ಥಿಗಳ ಹೆಸರು ಬದಲಾಯಿಸುವಂತೆ ಒತ್ತಾಯಿಸಿದ ಆರೋಪ ಇವರ ಮೇಲಿದೆ.
ಪ್ರಸ್ತುತ 62 ವರ್ಷದ ಚೈತನ್ಯಾನಂದ ಸರಸ್ವತಿ ತಲೆಮರೆಸಿಕೊಂಡಿದ್ದಾರೆ. ದೆಹಲಿ ಪೊಲೀಸರು ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅವರ ದೇಶತ್ಯಾಗ ತಡೆಯಲು ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ.
2009 ಮತ್ತು 2016ರಲ್ಲಿ ಅವರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿದ್ದರೂ, ತಮ್ಮ ಪ್ರಭಾವ ಬಳಸಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈಗ ಮತ್ತೆ ವಿದ್ಯಾರ್ಥಿನಿಯರು ಬೃಹತ್ ಪ್ರಮಾಣದಲ್ಲಿ ಬಾಯಿಬಿಟ್ಟಿರುವುದರಿಂದ, ಪ್ರಕರಣ ತೀವ್ರಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ