ಹಾಸನಾಂಬ ದರ್ಶನದ ವೇಳೆ ಉಂಟಾಗಿದ್ದ ಕಾಲ್ತುಳಿತದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ವಿವಿಐಪಿ ಶಿಷ್ಟಾಚಾರದ ದರ್ಶನ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.
ಹಾಸನ (ನ.11): ಹಾಸನದ ಹಾಸನಾಂಬ ದರ್ಶನದ ವೇಳೆ ಉಂಟಾಗಿದ್ದ ಕರೆಂಟ್ ಶಾಕ್ ಹಾಗೂ ಕಾಲ್ತುಳಿತದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಗಣ್ಯರ, ಅತಿ ಗಣ್ಯರ (ವಿವಿಐಪಿ) ಶಿಷ್ಟಾಚಾರದ ದರ್ಶನವನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಗುರುವಾರ ಹಾಸನಾಂಬೆ ದೇಗುಲ ಬಳಿ ವಿದ್ಯುತ್ ಅವಘಡದಿಂದ ಕರೆಂಟ್ ಶಾಕ್ ಹೊಡೆದು ನೂಕು ನುಗ್ಗಲು ಆದ ಘಟನೆ ನಡೆದಿತ್ತು. ಘಟನೆ ಬಳಿಕ ಧರ್ಮ ದರ್ಶನ ಸರತಿ ಸಾಲಿನ ಬಳಿ ಮಹಿಳೆಯರ ನರಳಾಟ ನಡೆಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಕೆಲವರಿಗೆ ಕರೆಂಟ್ ಶಾಕ್ ಆಗಿ ಕುಸಿದು ಬಿದ್ದು ಅವಾಂತರ ಸೃಷ್ಟಿಯಾಯ್ತು. ಒಬ್ಬರ ಮೇಲೆ ಒಬ್ಬರು ಬಿದ್ದು ಮಹಿಳೆಯರು ಓಡಿದರು. ಈ ವೇಳೆ ಕೆಲವರನ್ನು ಸ್ಥಳೀಯರು ಹೊರಗೆಳೆದು ತಂದಿದ್ದರು. ಇದಾದ ನಂತರ ಭಕ್ತರಿಗೆ ಸಮಸ್ಯೆಯಾದ ನಂತರ ಜಿಲ್ಲಾಡಳಿತದಿಂದ ಶುಕ್ರವಾರ ಸಂಜೆಯಿಂದ ಅತಿಗಣ್ಯರ (ವಿವಿಐಪಿ) ಶಿಷ್ಟಾಚಾರ ದರ್ಶನವನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.
ಹಾಸನಾಂಬೆ ದೇವಿ ದರ್ಶನಕ್ಕೆ ನಿಂತವರಿಗೆ ಕರೆಂಟ್ ಶಾಕ್, ಕಾಲ್ತುಳಿತ, 17 ಮಂದಿ ಅಸ್ವಸ್ಥ
ವರ್ಷಕ್ಕೊಮ್ಮೆ ತೆರೆವ ಹಾಸನಾಂಬೆ ದೇಗುಲದಲ್ಲಿ ನ.3ರಿಂದ ಸಾರ್ವಜನಿಕರ ದರ್ಶನಕ್ಕೆ ಆರಂಭವಾಗಿದ್ದು, ನ.14 ವರೆಗೆ ದರ್ಶನ ನಡೆಯಲಿದೆ. ಈ ವೇಳೆ 5 ಸಾವಿರಕ್ಕೂ ಅಧಿಕ ಜನರಿಗೆ ವಿಐಪಿ ಹಾಗೂ ವಿವಿಐಪಿಗಳಿಗೆ ದರ್ಶನದ ಟಿಕೆಟ್ ನೀಡಲಾಗಿತ್ತು ಎಂದು ಕೇಳಿಬಂದಿದೆ. ಆದರೆ, ಶಿಷ್ಟಾಚಾರದ ದರ್ಶನದಿಂದಾ ಸಾರ್ವಜನಿಕ ಧರ್ಮದರ್ಶನದಲ್ಲಿ ನಿಂತಿದ್ದವರಿಗೆ ತೀವ್ರ ಸಮಸ್ಯೆ ಎದುರಾಗಿತ್ತು. ಜೊತೆಗೆ, ಕಾಲ್ತುಳಿತವೂ ಸಂಭವಿಸಿದ ಹಿನ್ನೆಲೆಯಲ್ಲಿ ಶಿಷ್ಟಾಚಾರ ದರ್ಶನವನ್ನು ರದ್ದುಗೊಳಿಸಿ ಹಾಸನಾಂಬ ದೇವಾಲಯದ ಆಡಳಿತಾಧಿಕಾರಿಯೂ ಆಗಿರುವ ಹಾಸನ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಆದೇಶ ಉಲ್ಲಂಘಿಸಿ ಹಾಸನಾಂಬ ಗರ್ಭಗುಡಿ ಪ್ರವೇಶ: ಇನ್ನು ಹಾಸನಾಂಬ ದೇಗುಲದಲ್ಲಿ ಭಕ್ತರ ಕಾಲ್ತುಳಿತದ ಹಿನ್ನೆಲೆಯಲ್ಲಿ ವಿವಿಐಪಿ ದರ್ಶನವನ್ನು ರದ್ದುಗೊಳಿಸಿದ್ದರೂ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಆದೇಶ ಉಲ್ಲಂಘನೆ ಮಾಡಿ ಹಾಸನಾಂಬ ದೇಗುಲದ ಗರ್ಭಗುಡಿಗೆ ಪ್ರವೇಶ ಮಾಡಿ ದರ್ಶನ ಪಡೆದಿದ್ದಾರೆ. ತಾನೇ ಹೊರಡಿಸಿದ ಆದೇಶವನ್ನು ಉಲ್ಲಂಘಿಸಿದ ಜಿಲ್ಲಾಡಳಿತವು ಸಚಿವರು ಬಂದಾಕ್ಷಣ ವಿವಿಐಪಿ ಗೇಟ್ ಮೂಲಕ ಪ್ರವೇಶ ನೀಡಲಾಗಿದೆ. ಸಚಿವ ಆರ್.ಬಿ. ತಿಮ್ಮಾಪುರ ಮಾತ್ರವಲ್ಲದೇ ಅವರ ಇಡೀ ಕುಟುಂಬ ಗರ್ಭಗುಡಿಯಲ್ಲಿ ನಿಂತು ತಾಯಿಯ ದರ್ಶನ ಹಾಗೂ ಪೂಜೆ ಮಾಡಿದೆ. ಇದಾದ ನಂತರ ಜನರಿಗೊಂದು ಕಾನೂನು, ಸಚಿವರಿಗೊಂದು ಕಾನೂನು ಎಂದು ಆಕ್ರೋಶ ವ್ಯಕ್ತವಾಗಿತ್ತು. ನಂತರ, ಸಚಿವ ತಿಮ್ಮಾಪುರ ಅವರ ಬೆಂಬಲಿಗರು ಮತ್ತು ಶಾಸಕ ಸಿಮೆಂಟ್ ಮಂಜು ಅವರ ಬೆಂಬಲಿಗರು ವಿವಿಐಪಿ ಗೇಟ್‌ನಲ್ಲಿ ನುಗ್ಗಿ ನಿಯಮ ಉಲ್ಲಂಘಿಸಿ ಸಾರ್ವಜನಿಕರ ಆಕ್ರೋಶ ಮತ್ತಷ್ಟು ಹೆಚ್ಚಾಗಲು ಜಿಲ್ಲಾಡಳಿತವು ಕಾರಣವಾಗಿತ್ತು.
ಹಾಸನಾಂಬ ಉತ್ಸವದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮಾ ದಂಪತಿ ಪೂಜೆ: ಹಕ್ಕುಚ್ಯುತಿ ಮಂಡಿಸಲು ಮುಂದಾದ ಶಾಸಕ ಸ್ವರೂಪ್
ಹಾಸನಾಂಬೆ ದರ್ಶನ ವೇಳೆ ವಿವಿಐಪಿ ಭಕ್ತರ ನೂಕು ನುಗ್ಗಲು ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಶೃತಿ ವಿರುದ್ದ ಜಿಲ್ಲಾಧಿಕಾರಿ ಸತ್ಯಭಾಮಾ ಗರಂ ಆಗಿದ್ದಾರೆ. ನಿಮಗೆ ಗೊತ್ತಾಗಲ್ವೆನ್ರಿ... ಜನ ಇಷ್ಟು ಹೇಗೆ ಗೇಟಲ್ಲಿ ನುಗ್ಗಿ ಬಂದ್ರು ಎಂದಾಗ, ಮಿನಿಸ್ಟರ್ ತಿಮ್ಮಾಪುರ್, ಶಾಸಕ ಸಿಮೆಂಟ್ ಮಂಜು ಕಡೆಯವರು ಒಳನುಗ್ಗಿ ಬಂದ್ರು ಎಂದು ಎಸಿ ಶೃತಿ ಉತ್ತರ ನೀಡಿದರು. ಉತ್ತರಕ್ಕೆ ಸಮಾಧಾನ ವಾಗದೇ ಉಪ ವಿಭಾಗಾಧಿಕಾರಿ ಮೇಲೆ ಜಿಲ್ಲಾಧಿಕಾರಿ ಸತ್ಯಭಾಮಾ ಸಿಟ್ಟಾದರು.
ಕ್ಯೂ ಲೈನ್ ನಿಲ್ಲಿಸಲು ದೇವಸ್ಥಾನದ ಮುಂದೆ ನಿಂತ ಜಿಲ್ಲಾಧಿಕಾರಿ ಸತ್ಯಭಾಮಾ: ಹಾಸನಾಂಬೆ ದೇವಾಲಯದ ಕ್ಯೂ ಲೈನ್ ಗಳನ್ನೂ ವೀಕ್ಷಿಸಿದ ಜಿಲ್ಲಾಧಿಕಾರಿ ಸತ್ಯಭಾಮಾ ಅವರ ವಿರುದ್ಧ ಧರ್ಮದರ್ಶನದ ಜನರು ಆಕ್ರೋಶ ಹೊರ ಹಾಕಿದ್ದಾರೆ. ನಾವು ಬೆಳಗ್ಗೆ 3 ಗಂಟೆಯಿಂದಲೇ ಕ್ಯೂನಲ್ಲಿ ನಿಂತಿದ್ದೇವೆ. ಆದರೆ ಈಗ ಬಂದ ಎಲ್ಲರನ್ನೂ ಬಿಡ್ತಿದ್ದೀರಾ ಅಂತಾ ಆಕ್ರೋಶ ಹೊರ ಹಾಕಿದ್ದಾರೆ. ಎಲ್ಲರೂ ಸಹಕಾರ ನೀಡಿ, ಎಲ್ಲಾ ಲೈನ್ ಗಳನ್ನೂ ಬಿಡಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಜೊತೆಗೆ, ನಾನೂ ಕೂಡಾ ಬೆಳಗ್ಗೆ 3 ಗಂಟೆಯಿಂದಲೇ ನಿರ್ವಹಣೆ ಮಾಡ್ತಾ ಇದ್ದೇನೆ. ಎಲ್ಲರೂ ಸಮಧಾನದಿಂದ ವರ್ತಿಸಬೇಕು ಎಂದು ಹೇಳುತ್ತಾ ಹಾಸನಾಂಬ ದೇಗುಲದ ಮುಂದೆ ಸ್ವತಃ ಜಿಲ್ಲಾಧಿಕಾರಿ ನಿಂತುಕೊಂಡು ನಿರ್ವಹಣೆ ಮಾಡುತ್ತಿದ್ದಾರೆ.