ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ತರ್ಲೆ ಮಾಡೋಕೆ ಬಂದರೆ ಕಠಿಣ ಕ್ರಮ: ಎಡಿಜಿಪಿ ವಾರ್ನಿಂಗ್

By Sathish Kumar KHFirst Published Nov 29, 2022, 8:11 PM IST
Highlights

ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರವಾಗಿ ಎಂಇಎಸ್‌ ಕಾರ್ಯಕರ್ತರ ಮನವಿಗೆ ಸ್ಪಂದಿಸಿ ಡಿ.3ರಂದು ಬೆಳಗಾವಿಗೆ  ಬರುವುದಾಗಿ ಮಹಾರಾಷ್ಟ್ರ ಸಚಿವರು ತಿಳಿಸಿದ್ದಾರೆ. ಆದರೆ, ಬೆಳಗಾವಿಗೆ ಆಗಮಿಸುವ ಸಚಿವರು ಸ್ವತಂತ್ರವಾಗಿ ಬಂದು ಹೋಗಲು ಅಡ್ಡಿಯಿಲ್ಲ. ತರ್ಲೆ ಮಾಡುವುದಕ್ಕಾಗಿಯೇ ಬರುವುದಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಡಿಜಿಪಿ ಅಲೋಕ್‌ ಕುಮಾರ್ ಎಚ್ಚರಿಕೆ ರವಾನಿಸಿದ್ದಾರೆ.

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ನ.29): ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರವಾಗಿ ಎಂಇಎಸ್‌ ಕಾರ್ಯಕರ್ತರ ಮನವಿಗೆ ಸ್ಪಂದಿಸಿ ಡಿ.3ರಂದು ಬೆಳಗಾವಿಗೆ  ಬರುವುದಾಗಿ ಮಹಾರಾಷ್ಟ್ರ ಸಚಿವರು ತಿಳಿಸಿದ್ದಾರೆ. ಆದರೆ, ಬೆಳಗಾವಿಗೆ ಆಗಮಿಸುವ ಸಚಿವರು ಸ್ವತಂತ್ರವಾಗಿ ಬಂದು ಹೋಗಲು ಅಡ್ಡಿಯಿಲ್ಲ. ತರ್ಲೆ ಮಾಡುವುದಕ್ಕಾಗಿಯೇ ಬರುವುದಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಡಿಜಿಪಿ ಅಲೋಕ್‌ ಕುಮಾರ್ ಎಚ್ಚರಿಕೆ ರವಾನಿಸಿದ್ದಾರೆ.

ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಪ್ರಕರಣ ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಈ ಮಧ್ಯೆ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್ ಹಾಗೂ ಶಂಭುರಾಜೇ ದೇಸಾಯಿ ಅವರು ಬೆಳಗಾವಿಗೆ ಅಗಮಿಸಿ ಎಂಇಎಸ್ ಕಾರ್ಯಕರ್ತರ ಜೊತೆ ಚರ್ಚಿಸುವಂತೆ ಪತ್ರ ಬರೆಯಲಾಗಿತ್ತು. ಎಂಇಎಸ್ ಮನವಿಗೆ ಸ್ಪಂದಿಸಿದ ಚಂದ್ರಕಾಂತ ಪಾಟೀಲ್ ಡಿ. 3ರಂದು ಸಚಿವ ಶಂಭುರಾಜೇ ದೇಸಾಯಿ ಅವರೊಂದಿಗೆ ಬೆಳಗಾವಿಗೆ ಆಗಮಿಸುವುದಾಗಿ ಟ್ಚೀಟ್ ಮಾಡಿದ್ದಾರೆ. ಇದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಯಾವುದೇ ಕಾರಣಕ್ಕೂ ಬೆಳಗಾವಿಗೆ ಮಹಾರಾಷ್ಟ್ರದ ಸಚಿವರು ಆಗಮಿಸದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

ದಿಲ್ಲೀಲಿ ವಕೀಲರೊಂದಿಗೆ ಗಡಿ ವಿಚಾರ ಚರ್ಚೆ: ಸಿಎಂ ಬೊಮ್ಮಾಯಿ

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್‌ ಕುಮಾರ್, ಮಹಾರಾಷ್ಟ್ರದಿಂದ ಸಚಿವರು ಮತ್ತು ಇತರೆ ವ್ಯಕ್ತಿಗಳು ಸ್ವತಂತ್ರವಾಗಿ ಬೇರೆ ಬೇರೆ ಸಂದರ್ಭದಲ್ಲಿ ಬೆಳಗಾವಿಗೆ ಬಂದು ಹೋಗುತ್ತಾರೆ. ಆದರೆ, ತರ್ಲೆ ಮಾಡುವುದಕ್ಕಾಗಿಯೇ ಬೆಳಗಾವಿಗೆ ಬಂದರೆ ಖಂಡಿತ ನಾವು ಕ್ರಮ ಕೈಗೊಳ್ಳುತ್ತೇವೆ. ಯಾರ ಜೊತೆಯೋ ಸಮಾಲೋಚನೆ ಮಾಡಲಿಕ್ಕೆ, ಯಾರ ಮನೆಯಲ್ಲೋ ಊಟ ಮಾಡಲಿಕ್ಕೆ, ಯಾರದೋ ಮದುವೆಗೆ ಬಂದರೆ ನಾವೇನೂ ಮಾಡಕ್ಕಾಗಲ್ಲ. ಯಾವ ಉದ್ದೇಶಕ್ಕೆ ಬಂದಿದ್ದಾರೆ ಎಂದು ನೋಡಿಕೊಂಡು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಪ್ರಯತ್ನಿಸೋದು ಕಂಡು ಬಂದರೆ ಅಥವಾ ತರ್ಲೆ ತಂಟೆ ಮಾಡೋಕೆ ಮುಂದಾದಲ್ಲಿ ಖಂಡಿತ ಕ್ರಮ ತಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. 

ಅಧಿವೇಶನದ ಹಿನ್ನೆಲೆ ಸಭೆ: ಡಿ.19ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಹಿನ್ನೆಲೆ ಪೊಲೀಸ್ ಭದ್ರತೆ ಕುರಿತು ಪೊಲೀಸ್ ಭವನದಲ್ಲಿ ಸಭೆ ನಡೆಸಲಾಯಿತು. ಈ ವೇಳೆ ಬೆಳಗಾವಿ ಉತ್ತರ ವಲಯದ ಐಜಿಪಿ ಸತೀಶ್ ಕುಮಾರ್, ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಎಸ್‌ಪಿ ಡಾ.ಸಂಜೀವ್ ಪಾಟೀಲ್, ಎಎಸ್‌ಪಿ ಮಹಾನಿಂಗ ನಂದಗಾವಿ, ಡಿಸಿಪಿಗಳಾದ ರವೀಂದ್ರ ಗಡಾದಿ, ಸ್ನೇಹಾ ಸೇರಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು‌‌‌. ಬೆಳಗಾವಿ ಅಧಿವೇಶನ ವೇಳೆ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಲಾಯಿತು. ಕಳೆದ ಬಾರಿ ಅಧಿವೇಶನ ವೇಳೆ ಎಂಇಎಸ್ ಪುಂಡರಿಂದ ಗಲಾಟೆ ನಡೆದಿತ್ತು. ಈ ವರ್ಷ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ನಾಳೆ ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ವಿಚಾರಣೆ ನಡೆಯಲಿದ್ದು, ಎಲ್ಲ ವಿಚಾರಗಳಿಗೆ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ಬೆಳಗಾವಿಗೆ ಆಗಮಿಸಿ ಮಹಾರಾಷ್ಟ್ರದ ನಿರ್ಲಕ್ಷ್ಯ ಧೋರಣೆ ಎಳೆ ಎಳೆಯಾಗಿ ಬಿಚ್ಚಿಟ್ಟ ಜತ್ತ ಕನ್ನಡಿಗರು

4 ಸಾವಿರ ಪೊಲೀಸರ ನಿಯೋಜನೆ:  ಬೆಳಗಾವಿ ಚಳಿಗಾಲ ಅಧಿವೇಶನದ ವೇಳೆ ಬಹಳಷ್ಟು ಪ್ರತಿಭಟನೆಗಳು ನಡೆಯುತ್ತವೆ. ರೈತರು, ಪಂಚಮಸಾಲಿ, ಮಾದಿಗ ದಂಡೋರ ಸಮಿತಿ ಸೇರಿ ಅನೇಕ ಸಂಸ್ಥೆಗಳು ಮತ್ತು ಸಮುದಾಯದವರು ಪ್ರತಿಭಟನೆ ಮಾಡುತ್ತಾರೆ. ಕಳೆದ ವರ್ಷ ಅಧಿವೇಶನ ಸಂದರ್ಭದಲ್ಲಿ ಕಲ್ಲು ತೂರಾಟ ಆಗಿತ್ತು. ಈ ವರ್ಷ ಅಂತಹ ಘಟನೆ ಮರುಕಳಿಸಬಾರದು‌. ಅಧಿವೇಶನ ವೇಳೆ ಭದ್ರತೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗುವುದು. 8 ಎಸ್‌ಪಿ, 38 ಡಿವೈಎಸ್‌ಪಿ, 80 ಇನ್ಸ್‌ಪೆಕ್ಟರ್ ಸೇರಿ ಸಾಕಷ್ಟು ಜನ ಅಧಿಕಾರಿಗಳ ನಿಯೋಜಿಸಲಾಗುವುದು. ಪೊಲೀಸರಿಗೆ ಟೆಂಟ್ ಹೌಸ್‌ನಲ್ಲಿ ವಸತಿ ವ್ಯವಸ್ಥೆ ಮಾಡುವ ಬಗ್ಗೆ ಪರಿಶೀಲಿಸಲಾಗಿದೆ ಎಂದು ತಿಳಿಸಿದರು‌.

ಇನ್ನು ಎಂಇಎಸ್‌ನವರು ಶಾಂತಿಯುತ ಮಹಾಮೇಳಾವ್ ಮಾಡುವುದಾಗಿ ಅನುಮತಿ ಪಡೆದಿದ್ದಾರೆ. ಶಾಂತಿಯುತ ಪ್ರತಿಭಟನೆ ನಡೆಸಲು ಯಾವುದೇ ಅಡೆ ತಡೆ ಇಲ್ಲ. ಯಾವುದೇ ತರ್ಲೆ ತಂಟೆ ಮಾಡಲು ಹೋದ್ರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಎಂಇಎಸ್‌ ಸೇರಿ ಎಲ್ಲ ಪುಂಡರಿಗೂ ತಂಟೆ ತಕರಾರು ಮಾಡಿದಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‍‌ ವಾರ್ನಿಂಗ್‌ ನೀಡಿದ್ದಾರೆ.

click me!