ಮತದಾರರ ಮಾಹಿತಿ ಕಳ್ಳತನದಲ್ಲಿ ಬಿಬಿಎಂಪಿ ಅಧಿಕಾರಿಗಳ ಪಾತ್ರವಿಲ್ಲ: ಮಾನಸಿಕ ಹಿಂಸೆ ನೀಡಬೇಡಿ

Published : Nov 29, 2022, 01:00 PM ISTUpdated : Nov 29, 2022, 02:01 PM IST
ಮತದಾರರ ಮಾಹಿತಿ ಕಳ್ಳತನದಲ್ಲಿ ಬಿಬಿಎಂಪಿ ಅಧಿಕಾರಿಗಳ ಪಾತ್ರವಿಲ್ಲ: ಮಾನಸಿಕ ಹಿಂಸೆ ನೀಡಬೇಡಿ

ಸಾರಾಂಶ

ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಬಿಬಿಎಂಪಿಗೆ ಕಳಂಕ ಬಂದಿದೆ. ಅದನ್ನ ಹೋಗಲಾಡಿಸಲು ನಾವು ಸಿದ್ಧರಿದ್ದೇವೆ, ತನಿಖೆಗೆ ನಾವು ಸಿದ್ಧವಾಗಿದ್ದೇವೆ. ಚಿಲುಮೆ ಸಂಸ್ಥೆಯವರು ನಮ್ಮ ಅಧಿಕಾರಿಗಳ ಸಹಿ ನಕಲು ಮಾಡಿದ್ದಾರೆ. ನಕಲು ಸಹಿ ಮಾಡಿ ಬಿಎಲ್ಓ ಕಾರ್ಡ್ ಗಳನ್ನ ಸಿದ್ದಪಡಿಸಿಕೊಂಡಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತರಾಜ್‌ ಆರೋಪಿಸಿದ್ದಾರೆ.

ಬೆಂಗಳೂರು (ನ.28): ಕೇಂದ್ರ ಚುನಾವಣಾ ಆಯೋಗದ ನಿಯಮಾವಳಿಯಂತೆಯೇ ಪಾಲಿಕೆ ಅಧಿಕಾರಿಗಳು & ನೌಕರರು ಕೆಲಸ ಮಾಡಿದ್ದಾರೆ. ಮತದಾರರ ಹೆಸರನ್ನು ಪಟ್ಟಿಯಿಂದ ಅಕ್ರಮವಾಗಿ ತೆಗೆದು ಹಾಕಿಲ್ಲ. ಆದರೂ ಚಿಲುಮೆ ಮತದಾನ ದತ್ತಾಂಶ ಕಳವು ಪ್ರಕರಣದಲ್ಲಿ ಬಿಬಿಎಂಪಿ ನೌಕರರು ಮತ್ತು ಅಧಿಕಾರಿಗಳನ್ನು ಪೊಲೀಸರು ವಿಚಾರಣೆ ನೆಪದಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತರಾಜ್‌ ಆರೋಪಿಸಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಬಿಬಿಎಂಪಿಗೆ ಕಳಂಕ ಬಂದಿದೆ. ಅದನ್ನ ಹೋಗಲಾಡಿಸಲು ನಾವು ಸಿದ್ಧರಿದ್ದೇವೆ, ತನಿಖೆಗೆ ನಾವು ಸಿದ್ಧವಾಗಿದ್ದೇವೆ. ಚಿಲುಮೆ ಸಂಸ್ಥೆಯವರು ನಮ್ಮ ಅಧಿಕಾರಿಗಳ ಸಹಿ ನಕಲು ಮಾಡಿದ್ದಾರೆ. ನಕಲು ಸಹಿ ಮಾಡಿ ಬಿಎಲ್ಓ ಕಾರ್ಡ್ ಗಳನ್ನ ಸಿದ್ದಪಡಿಸಿಕೊಂಡಿದ್ದಾರೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಹೆಸರಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಕಿರುಕುಳ ನೀಡುತ್ತಿರುವುದು ಸರಿಯಲ್ಲ. ಮೊದಲನೇದಾಗಿ ಪಾಲಿಕೆ‌ ಅಧಿಕಾರಿಗಳು & ನೌಕರರು ಮತದಾರರ ಹೆಸರನ್ನು ಪಟ್ಟಿಯಿಂದ ಅಕ್ರಮವಾಗಿ ತೆಗೆದು ಹಾಕಿಲ್ಲ.  ಕೇಂದ್ರ ಚುನಾವಣಾ ಆಯೋಗದ ನಿಯಮಾವಳಿಯಂತೆಯೇ ಪಾಲಿಕೆ ಅಧಿಕಾರಿಗಳು ಮತ್ತು ನೌಕರರು ನಡೆದುಕೊಂಡಿದ್ದಾರೆ. ಇನ್ನು ಕೇಂದ್ರ ಚುನಾವಣಾ ಆಯೋಗದ ಆದೇಶದಂತೆ ಒಂದೇ ಮಾದರಿಯ ಫೋಟೋ, ಮಾಹಿತಿ ಇರುವ ಎರಡಕ್ಕಿಂತ ಅಧಿಕ ಮತದಾರರು (PSE - Photo Similar Entries) ಪಟ್ಟಿ ಪರಿಶೀಲನೆ ಮಾಡಿದ್ದಾರೆ ಎಂದು ತಿಳಿಸಿದರು.

ಮತದಾರರ ಮಾಹಿತಿ ಕಳವು: ಚಿಲುಮೆ ಸಂಸ್ಥೆಯ ಮುಖ್ಯಸ್ಥನ ಮನೆ ಮೇಲೆ ಪೊಲೀಸರ ದಾಳಿ

ಮತದಾರರ ಹೆಸರನ್ನು ಖಾಸಗಿ ಸಂಸ್ಥೆಯೊಂದು ಡಿಲೀಟ್ ಮಾಡಲು ಸಾಧ್ಯವಿಲ್ಲ. ಕೇಂದ್ರ ಚುನಾವಣಾ ಆಯೋಗದ ಬಳಿಯೇ ಇಆರ್ ಒ ನೆಟ್ (ERO Net) ಸಾಫ್ಟ್‌ವೇರ್ ಕಂಟ್ರೋಲ್ ಇದೆ. ಹೀಗಾಗಿ, ಪಿಎಸ್‌ಇ (PSE) ಮಾದರಿಯ ಡಿಲೀಷನ್ ಮಾಡುವ ಪ್ರಕ್ರಿಯೆ ಕೇವಲ ಬಿಬಿಎಂಪಿ ವ್ಯಾಪ್ತಿಗೆ ಸಂಬಂಧಪಟ್ಟಿದ್ದಲ್ಲ. ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲೂ ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ. ಹೀಗಾಗಿ ಪ್ರಕರಣದಲ್ಲಿ ಬಿಬಿಎಂಪಿ ಅಧಿಕಾರಿಗಳ ಹಾಗೂ ನೌಕರರಿಗೆ ಯಾವುದೇ ಪಾತ್ರ ಇರುವುದಿಲ್ಲ. ಚಿಲುಮೆ ಹಗರಣಕ್ಕೂ, ನಮ್ಮ ಕಂದಾಯ ಅಧಿಕಾರಿಗಳಿಗೂ ಸಂಬಂಧವಿಲ್ಲ. ನಮ್ಮ 4 ಮಂದಿ ಅಧಿಕಾರಿಗಳನ್ನ ಬಂಧಿಸಲಾಗಿದೆ. ಅವರಿಗೆ ಬೇಲ್ ಕೊಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್‌ ರಾಜ್‌ ತಿಳಿಸಿದರು.

ನೌಕರರ ಕ್ಷೇಮಾಭಿವೃದ್ಧಿ ಸಂಘದ ವಕೀಲ ಶ್ರೀನಿವಾಸ್ ಮಾತನಾಡಿ, ಚಿಲುಮೆ ಹಗರಣದ ಬಗ್ಗೆ ಮೊದಲು ಮಾಹಿತಿ ಕೊಟ್ಟಿದ್ದೇ ಬಿಬಿಎಂಪಿ ಅಧಿಕಾರಿಗಳು. ಆದರೆ, ಬಿಎಲ್‌ಒ ಕಾರ್ಡ್ ಆರೋಪದಲ್ಲಿ ಕಂದಾಯ ಅಧಿಕಾರಿಗಳನ್ನ ಬಂಧಿಸಲಾಗಿದೆ. ಚಿಲುಮೆ ಸಂಸ್ಥೆ ಮಾಡಿರುವ ತಪ್ಪಿಗೆ ಅಧಿಕಾರಿಗಳ ಮೇಲೆ ಯಾಕೆ ಕ್ರಮ ಕೈಗೊಳ್ಳಲಾಗುತ್ತಿದೆ? ಈ ಮೂಲಕ ಅಧಿಕಾರಿ, ನೌಕರರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಚಿಲುಮೆ ವಿರುದ್ಧ  ಯಾರು ಕಂಪ್ಲೇಂಟ್ ಕೊಟ್ಟಿದ್ದರೋ ಅದೇ ಅಧಿಕಾರಿಯನ್ನೇ ಸಸ್ಪೆಂಡ್ ಮಾಡಲಾಗಿದೆ. ಬಿಎಲ್‌ಓ ನೇಮಕವೇ ಆಗಿಲ್ಲ ಎಂದಾಗ ಕಾರ್ಡ್ ಹೇಗೆ ಕೊಡಲು ಬರುತ್ತದೆ. ಬಿಎಲ್‌ಒ ಸಹಿ ಹಾಕಿರುವುದು ಹಾಗೂ ಆರ್‍‌ಓ ಮತ್ತು ಎಆರ್‍‌ಓಗಳು ಎಂಬ ಕಾರಣಕ್ಕೆ ಸಸ್ಪೆಂಡ್ ಮಾಡಲಾಗಿದೆ ಇದು ಯಾವ ನ್ಯಾಯ ಎಂಬುದು ಗೊತ್ತಾಗುತ್ತಿಲ್ಲ. ನಮ್ಮ ಇಲಾಖೆಯ ಅಧಿಕಾರಿಗಳನ್ನು ಬಂಧಿಸಲಾಗಿದೆ. ಆದೆ ಕಾನೂನಿನಡಿ ನೋಡಿದಾಗ ಎಲೆಕ್ಷನ್ ಕಮಿಶನ್ ದೂರು ದಾಖಲಿಸಿಬೇಕು. ಇದ್ಯಾವುದೂ ಆಗಿಯೇ ಇಲ್ಲ‌ದಿರೋವಾಗ ಬಂಧಿಸಿರೋದು ತಪ್ಪು ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಶೇಷ ಆಯುಕ್ತ ದೀಪಕ್ ವಿರುದ್ದ ಆರೋಪ:  ಚುನಾವಣಾ ಆಯೋಗದ ಕೆಲಸವಾದ ಆರ್‍‌ಓ ಮತ್ತು ಎಆರ್‍‌ಓ ಕೆಲಸದ ಜೊತೆಗೆ ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಿಸಲು ವಿಶೇಷ ಆಯುಕ್ತ ದೀಪಕ್‌ ಒತ್ತಡ ಹೇರುತ್ತಿದ್ದರು. ಬಿಎಲ್‌ಒ ಚುನಾವಣಾ ಆಯೋಗವೇ ನೇಮಿಸಲಿ ಎಂದು ಈ ಹಿಂದೆ ಇದ್ದ ಮುಖ್ಯ ಆಯುಕ್ತರು ಚಿಲುಮೆಗೆ ಆದೇಶ‌ ನೀಡಿದ್ದರು. ಆದರೆ, ಬಿಎಲ್‌ಒ ನೇಮಕವೇ ಆಗಿಲ್ಲ. ಇದರ ಬಗ್ಗೆ ನಾವು ಹೇಗೆ ಮಾತನಾಡಲಿಕ್ಕೆ ಆಗುತ್ತದೆ. ಮಹಿಳಾ‌‌ ಅಧಿಕಾರಿಗಳನ್ನು ‌ರಾತ್ರಿ 9.30ರವರೆಗೂ ಠಾಣೆಯಲ್ಲಿ ಇರಿಸಿಕೊಳ್ಳಲಾಗಿದೆ. ಒಂದು ಕಡೆ ವಿಚಾರಣೆ ನಡೆಸಲಿ ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ಆದರೆ, ತಡರಾತ್ರಿವರೆಗೆ ಅಧಿಕಾರಿಗಳನ್ನು ಇಟ್ಟುಕೊಂಡರೆ ಮಾನಸಿಕ ಹಿಂಸೆಯಾಗುತ್ತದೆ. ಒಬ್ಬ ಬಿಎಲ್‌ಓಗೆ ವರ್ಷಕ್ಕೆ 7500 ಗೌರವಧನ ಕೊಡಲಾಗುತ್ತದೆ. ಇದಕ್ಕೆ ಶಿಕ್ಷಕರನ್ನೇ ನೇಮಕ ಮಾಡಿಕೊಳ್ಳಲು ಪ್ರಯತ್ನ ಮಾಡಿದರೂ, ಅಲ್ಲಿ ಕೂಡ ಶಿಕ್ಷಕರ ಕೊರತೆಯಿದೆ ಎಂದು ನೌಕರರ ಸಂಘದ ಅಧ್ಯಕ್ಷ ಅಮೃತ್‌ರಾಜ್‌ ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ