Haveri: ಕನ್ನಡದ ಕಟ್ಟಾಳು ಪಾಟೀಲ್‌ ಪುಟ್ಟಪ್ಪ ಸಮಾಧಿ ಕಾಯಕಲ್ಪ ಮರೆತ ಸರ್ಕಾರ

By Sathish Kumar KH  |  First Published Nov 29, 2022, 1:51 PM IST

ಹಾವೇರಿ ಜಿಲ್ಲೆಯಲ್ಲಿ ಬರೋಬ್ಬರಿ 20 ಕೋಟಿ ರೂ. ಖರ್ಚು ಮಾಡಿ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತಿರುವ ರಾಜ್ಯ ಸರ್ಕಾರ, ಕನ್ನಡದ ಕಟ್ಟಾಳು, ಕನ್ನಡಪರ ಹೋರಾಟ ಮತ್ತು ಕನ್ನಡ ಸಾಹಿತ್ಯಕ್ಕಾಗಿಯೇ ದುಡಿದು ಖಾಲಿ ಕೈಯಲ್ಲಿ ಸಾವನ್ನಪ್ಪಿದ ನಾಡೋಜ ಪಾಟೀಲ್‌ ಪುಟ್ಟಪ್ಪ ಅವರ ಸಮಾಧಿಗೆ ಸರ್ಕಾರದ ಕಾಯಕಲ್ಪ ಕಲ್ಪಿಸುವುದನ್ನೇ ಮರೆತುಬಿಟ್ಟಿದೆ.


ವರದಿ- ಪವನ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಹಾವೇರಿ (ನ.29): ಮಧ್ಯ ಕರ್ನಾಟಕದಲ್ಲಿರುವ ಹಾವೇರಿ ಜಿಲ್ಲೆಯನ್ನು ಸಂತ - ಶರಣರ ನಾಡು, ಸಾಹಿತಿಗಳ ತವರೂರು ಎಂದು ಕರೆಯಲಾಗುತ್ತದೆ. ಈ ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೂಡಾ ಹಾವೇರಿಯಲ್ಲಿಯೇ ನಡೆಯುತ್ತಿದೆ. ಆದರೆ 20 ಕೋಟಿ ರೂ. ಖರ್ಚು ಮಾಡಿ ಸಮ್ಮೇಳನ ಮಾಡುತ್ತಿರುವ ಸರ್ಕಾರ ಕನ್ನಡದ ಧೀಮಂತ ಸಾಹಿತಿಯ ಸಮಾಧಿಯ ಅಭಿವೃದ್ಧಿ ಮಾಡುವುದನ್ನೇ ನಿರ್ಲಕ್ಷ್ಯ ಮಾಡಿದೆ. ಕನ್ನಡಕ್ಕಾಗಿಯೇ ಬದುಕಿದ ಆ ಧೀಮಂತ ಸಾಹಿತಿಯ ಸಮಾಧಿ ಈಗ ಕಸ ಕಡ್ಡಿ ಬಿದ್ದಿದ್ದು ಸುತ್ತಲೂ ಗಿಡಿ-ಗಂಟಿಗಳು ಬೆಳೆದುಕೊಂಡಿವೆ.

Tap to resize

Latest Videos

undefined

ಹಾವೇರಿ ಜಿಲ್ಲೆ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಸಂತ - ಶರಣರು ನಡೆದಾಡಿದ ಪುಣ್ಯ ಭೂಮಿ. ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಜಿಲ್ಲೆಯಲ್ಲಿಯೇ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವ ತೀರ್ಮಾನ ಮಾಡಿ 20 ಕೋಟಿ ರೂಪಾಯಿ ಹಣ ಕೂಡಾ ಬಿಡುಗಡೆ ಮಾಡಿದ್ದಾರೆ. ಆದರೆ ಕೋಟ್ಯಾಂತರ ರೂ. ಖರ್ಚು ಮಾಡಿ ಸಮ್ಮೇಳನ ನಡೆಸುತ್ತಿರುವ ಸರ್ಕಾರ ಬೆರಳೆಣಿಕೆಯಷ್ಟು ಕಾಸು ಖರ್ಚು ಮಾಡಿ ಕನ್ನಡದ ಧೀಮಂತನ ಸಮಾಧಿಗೆ ಕಾಯಕಲ್ಪ ನೀಡುತ್ತಿಲ್ಲ. ಕನ್ನಡ ಸಾಹಿತ್ಯದ ಪಾಪು ಎಂದೇ ಪ್ರಸಿದ್ಧವಾಗಿರುವ ಕನ್ನಡದ ಕಟ್ಟಾಳು 'ಪಾಟೀಲ್ ಪುಟ್ಟಪ್ಪ'ನವರ ಸಮಾಧಿಯ ಸ್ಥಿತಿ ನೋಡಿದರೆ ಎಂಥವರಿಗೂ ಮರುಕ ಹುಟ್ಟುತ್ತದೆ. ಸಂತ ಶರಣರ, ಸಾಹಿತಿಗಳ ಜಿಲ್ಲೆ ಹಾವೇರಿ ಜಿಲ್ಲೆಯಲ್ಲೇ ಕನ್ನಡದ ಕಟ್ಟಾಳುವಿಗೆ ಸರ್ಕಾರ ಅವಮಾನ ಮಾಡುತ್ತಿದೆ. ಕನ್ನಡದ ಧೀಮಂತ ಸಾಹಿತಿ, ನಾಡೋಜ ಪಾಟೀಲ್ ಪುಟ್ಟಪ್ಪ ಸಮಾಧಿಗೆ ಕಾಯಕಲ್ಪ ನೀಡದೇ  ಸರ್ಕಾರದ ನಿರ್ಲಕ್ಷ್ಯ ಮಾಡಿರುವುದು ಕಂಡುಬರುತ್ತಿದೆ.

ಪಾಪು ಅಂತಿಮ ದರ್ಶನಕ್ಕೆ ಜನಸಾಗರ: ಅಂತಿಮ ಯಾತ್ರೆಯ ಫೋಟೋಸ್

ಪಾಪು ಅವರ ಹೆಸರಲ್ಲಿ ಒಂದಿಂಚು ಜಮೀನಿಲ್ಲ: 2020 ಮಾರ್ಚ್ 16 ಪಾಟೀಲ್ ಪುಟ್ಟಪ್ಪನವರು ವಿಧಿವಶರಾಗಿದ್ದರು. ಪಾಪು ಸಾವನ್ನಪ್ಪಿ 3 ವರ್ಷ ಕಳೆದರೂ ಸಮಾಧಿಗೆ ಸರ್ಕಾರ ಕಾಯಕಲ್ಪ ನೀಡೇ ಇಲ್ಲ. ಪಾಟೀಲ್ ಪುಟ್ಟಪ್ಪನವರ ಸಮಾಧಿಯನ್ನು ಸ್ಮಾರಕ ಮಾಡುವುದಾಗಿ ಅಂದು ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಯವರೇ ಹೇಳಿದ್ದರು. ಈಗ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದು, ಸಾಹಿತಿ ಪಾಟೀಲ್ ಪುಟ್ಟಪ್ಪನವರ ತವರು ಜಿಲ್ಲೆಯಲ್ಲಿಯೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಆದರೆ, ಹಾವೇರಿ ಜಿಲ್ಲೆಯ ಹೆಮ್ಮೆಯ ಮಗನ ಸಮಾಧಿ ಮಾತ್ರ ಅಧೋಗತಿಯಲ್ಲಿದೆ. ನಾಡೋಜ ಪಾಟೀಲ್‌ ಪುಟ್ಟಪ್ಪನವರು ಹಾವೇರಿ ತಾಲೂಕು ಕುರುಬಗೊಂಡ ಗ್ರಾಮದಲ್ಲಿ ಜನಿಸಿದ್ದರು. ಆದರೆ ಪಾಪು ಅವರ ಸಮಾಧಿ ರಾಣೆಬೆನ್ನೂರು ತಾಲೂಕು ಹಲಗೇರಿ ಗ್ರಾಮದಲ್ಲಿದೆ. ಪಾಟೀಲ್ ಪುಟ್ಟಪ್ಪನವರ ಹೆಸರಿಗೆ ಯಾವುದೇ ಜಮೀನಿಲ್ಲ. ಖಾಲಿ ಕೈ ಯಲ್ಲೇ ಬದುಕಿ ಕನ್ನಡಕ್ಕಾಗಿ ದುಡಿದು ಮಡಿದವರು. ಹೀಗಾಗಿ ಅವರ ಪುತ್ರ ಅಶೋಕ್ ಪಾಟೀಲ್ ಮನವಿಯಂತೆ ಹಲಗೇರಿ ಗ್ರಾಮದ ಸಂಬಂಧಿಕರ ತೋಟದಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗಿತ್ತು.

ಸ್ಮಾರಕಕ್ಕೆ ಜಮೀನು ನೀಡಿದರೆ ಜೀವನ ನಿರ್ವಹಣೆ ಕಷ್ಟ: ಪಾಟೀಲ್ ಪುಟ್ಟಪ್ಪನವರ ಸಹೋದರ ಶಿವನಗೌಡ ಪಾಟೀಲ್ ಅವರ ಪುತ್ರ ಮಲ್ಲನಗೌಡ ಅವರ ತೆಂಗಿನ ತೋಟದಲ್ಲಿ ಸಮಾಧಿ ಮಾಡಲಾಗಿದೆ. ಸಮಾಧಿ ಜಾಗ ಸ್ಮಾರಕ ಮಾಡಲು ಸರ್ಕಾರ  ಜಮೀನನನ್ನು ಉಚಿತವಾಗಿ ಕೊಡಿ ಅಂತಿದೆ. ಆದರೆ ಇರುವ 2 ಎಕರೆ ಜಮೀನಿನಲ್ಲಿ ಉಚಿತವಾಗಿ ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡಿದರೆ ಜೀವನ ನಡೆಸೋದೇ ಕಷ್ಟ ಅಂತ ಪಾಪು ಕುಟುಂಬಸ್ಥರು ಹೇಳುತ್ತಿದ್ದಾರೆ. ಈ ಕುರಿತು ಗಮನ ಹರಿಸಿ ಶೀಘ್ರವಾಗಿ ಸಮಾಧಿಗೆ ಕಾಯಕಲ್ಪ ನೀಡಬೇಕು. ಆದರೆ  ಸ್ಮಾರಕ ನಿರ್ಮಿಸುವಂತೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನ ನಡೆಯೋ ಈ ಸಂದರ್ಭದಲ್ಲಾದರೂ ಸರ್ಕಾರ ಗಮನ ಹರೆಸಲಿ ಅಂತ ಕುಟುಂಬಸ್ಥರ ಮನವಿ ಮಾಡಿಕೊಂಡಿದ್ದಾರೆ. 

ಸರ್ಕಾರಕ್ಕೆ ಷರತ್ತು ವಿಧಿಸಿದ್ದ ಪಾಪು: ಬಸವ ಪುರಸ್ಕಾರ ಸ್ವೀಕರಿಸದೆ ಹಠ ಸಾಧಿಸಿದ ಪಾಟೀಲ ಪುಟ್ಟಪ್ಪ!

ಕನ್ನಡ ಸಾಹಿತಿಗೆ ಮಾಡುತ್ತಿರುವ ಅವಮಾನ: ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪಾಟೀಲ್‌ ಪುಟ್ಟಪ್ಪನವರು ಸಕ್ರಿಯವಾಗಿ ಭಾಗವಹಿಸಿದ್ದರು. ಇನ್ನು 1982ರಲ್ಲಿ ಗೋಕಾಕ ಹೋರಾಟದಲ್ಲಿ ನಾಯಕತ್ವ ವಹಿಸಿ ರಾಜ್ಯವ್ಯಾಪಿ ಹೋರಾಟ ಮಾಡಿದರು. ಆಂದೋಲನ, ಸಂಘಟನೆಯಿಂದ ಸರಕಾರ ಗೋಕಾಕ ವರದಿಯನ್ನು ಒಪ್ಪುವಂತೆ ಮಾಡಿದರು. 1985ರಲ್ಲಿ ಕರ್ನಾಟಕ ಸರಕಾರ ಕನ್ನಡ ಕಾವಲು ಹಾಗೂ ಗಡಿ ಸಲಹಾ ಸಮಿತಿ ರಚಿಸಿ, ಅಧ್ಯಕ್ಷರನ್ನಾಗಿ ಮಾಡಿದರು. ಇದರಿಂದ ಕಚೇರಿಗಳಲ್ಲಿ ಕನ್ನಡ ತರುವ ಪ್ರಯತ್ನಕ್ಕೆ ಭಾರೀ ಯಶಸ್ಸು ಸಿಕ್ಕಿತು. ಇಷ್ಟೇ ಅಲ್ಲದೆ ವಿದ್ಯಾರ್ಥಿಯಾಗಿದ್ದಾಗಲೇ 1942ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಕರ್ನಾಟಕ ಕಾಲೇಜಿನ ಮುಖಂಡರಾಗಿ ಬ್ರಿಟಿಷ್ ಅಧ್ಯಾಪಕರಿಗೆ ಬಲವಂತವಾಗಿ ಗಾಂಧೀ ಟೋಪಿ ಹಾಕಿ ಆ ಕಾರಣಕ್ಕೆ ಕಾಲೇಜಿನಿಂದ ಹೊರಹಾಕಲ್ಪಟ್ಟಿದ್ದರು. ಪತ್ರಿಕೋದ್ಯಮಕ್ಕೂ ಅಪಾರ ಸೇವೆ ಸಲ್ಲಿಸಿರೋ ಪಾಟೀಲ್ ಪುಟ್ಟಪ್ಪನವರ ಸಮಾಧಿ ಹೀಗಿರುವುದು ದುರುಂತವಾಗಿದೆ ಎಂದು ಪಾಪು ಅವರ ಸಂಬಂಧಿ ಮಲ್ಲನಗೌಡ ಪಾಟೀಲ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

click me!