School, College Teachers: ಶಾಲಾ, ಕಾಲೇಜು ಬಹಿಷ್ಕಾರ, ಸರ್ಕಾರಕ್ಕೆ ಶಿಕ್ಷಕರ ಎಚ್ಚರಿಕೆ

By Suvarna News  |  First Published Nov 8, 2021, 1:06 AM IST

* ಬೋಧಕರ ಸಂಘಟನೆಗಳ ಸಭೆ
* ಶಾಲಾ, ಕಾಲೇಜು ಬಹಿಷ್ಕಾರ: ಶಿಕ್ಷಕರ ಎಚ್ಚರಿಕೆ
* ವರ್ಗಾವಣೆ, ಬಡ್ತಿ ಸಮಸ್ಯೆ, ವೇತನ ತಾರತಮ್ಯ ನಿವಾರಣೆಗೆ ಪಟ್ಟು
 


ಬೆಂಗಳೂರು, (ನ.08): ವರ್ಗಾವಣೆ, ಬಡ್ತಿ ಸಮಸ್ಯೆ, ವೇತನ ತಾರತಮ್ಯ ಸೇರಿದಂತೆ ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರು (School Teachers) ಮತ್ತು ಪಿಯು ಉಪನ್ಯಾಸಕರು (PUC Lecturers) ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಹಾಗೂ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮುಂದಿನ 21 ದಿನಗಳಲ್ಲಿ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳನ್ನು ಬಹಿಷ್ಕರಿಸಿ ಹೋರಾಟಕ್ಕಿಳಿಯಲು( Protest) ಶಿಕ್ಷಕರು ಮತ್ತು ಉಪನ್ಯಾಸಕರ ಸಂಘಟನೆಗಳು ನಿರ್ಣಯಿಸಿವೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ಭಾನುವಾರ ನಗರದ ಎನ್‌ಜಿಒ ಹಾಲ್‌ನಲ್ಲಿ ನಡೆದ ಶಿಕ್ಷಕರು ಮತ್ತು ಪಿಯು ಉಪನ್ಯಾಸಕರ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ಈ ಸಂಬಂಧ ಒಕ್ಕೊರಲ ನಿರ್ಣಯ ಕೈಗೊಂಡಿದ್ದು, ಸುಮಾರು 10 ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.

Tap to resize

Latest Videos

undefined

ಬೇಡಿಕೆಗಳೇನು?:
ಪ್ರಮುಖವಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ (Government School) ಕಾರ್ಯನಿರ್ವಹಿಸುತ್ತಿರುವ ಸುಮಾರು 75 ಸಾವಿರ ಪದವೀಧರ ಪ್ರಾಥಮಿಕ ಶಾಲಾ (1ರಿಂದ 5ನೇ ತರಗತಿ) ಶಿಕ್ಷಕರ ಹಿಂದಿನ ಸೇವಾ ಜ್ಯೇಷ್ಠತೆ ಪರಿಗಣಿಸಿ 6ರಿಂದ 8ನೇ ತರಗತಿಗೆ ಬೋಧನೆ ಮಾಡಲು ಮೇಲ್ದರ್ಜೆ ಅಥವಾ ವಿಲೀನಗೊಳಿಸಲು ಆದೇಶಿಸಬೇಕು. 

1998-1999ರಲ್ಲಿ ಸೇವೆಗೆ ಸೇರಿ ನಂತರ ಸುಪ್ರೀಂ ಕೋರ್ಟ್‌ ಆದೇಶದಿಂದ ಸೇವೆಯಿಂದ ವಜಾಗೊಂಡಿದ್ದ 4000 ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು 2003ರಲ್ಲಿ ಮರು ನೇಮಕಗೊಂಡಿದ್ದು, ಅವರೆಲ್ಲರಿಗೂ ಹಿಂದಿನ ಸೇವೆಯನ್ನು ಪರಿಗಣಿಸಿ ಕಾಲ್ಪನಿಕ ವೇತನ ನಿಗದಿಪಡಿಸಬೇಕು. 

ಪದೋನ್ನತಿ ಪಡೆದ ಕಾರಣಕ್ಕೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಪ್ರೌಢ ಶಾಲಾ ಶಿಕ್ಷಕರು ಮತ್ತು ಉಪನ್ಯಾಸಕರು 10ರಿಂದ 30 ವರ್ಷಗಳಿಂದ ಬಡ್ತಿ ಸೌಲಭ್ಯಗಳಿಂದ ವಂಚಿತರಾಗಿ ಬಡ್ತಿ ಪಡೆಯದ ಶಿಕ್ಷಕರಿಗಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ. ಈ ವೇತನ ತಾರತಮ್ಯ ಸರಿಪಡಿಸಬೇಕು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ನೀತಿ ಜಾರಿಗೊಳಿಸಬೇಕು. ಅಂತರ ಜಿಲ್ಲಾ ವರ್ಗಾವಣೆಗೆ ಒಂದು ಬಾರಿ ಅವಕಾಶ ಕಲ್ಪಿಸಬೇಕು ಎಂದು ಸಭೆ ಒತ್ತಾಯಿಸಿತು.

ಬಿಡುವಿನ ದಿನಗಳಲ್ಲಿ ಕರ್ತವ್ಯ ನಿರ್ವಹಿಸಿದವರಿಗೆ ಗಳಿಕೆ ರಜೆ ನೀಡಬೇಕು. 40 ವರ್ಷಗಳಿಂದ ಪರಿಷ್ಕರಣೆಗೊಳ್ಳದೆ ಬಾಕಿ ಇರುವ ಶಿಕ್ಷಣ ಇಲಾಖೆಯ ಸಮಗ್ರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಕಾಲಮಿತಿಯಲ್ಲಿ ರೂಪಿಸಬೇಕು. 2008ರ ಆಗಸ್ಟ್‌ ನಂತರ ನೇಮಕಗೊಂಡ 2008, 2010 ಮತ್ತು 2013ರ ಬ್ಯಾಚ್‌ನ ಪ್ರೌಢ ಶಾಲಾ ಶಿಕ್ಷಕರಿಗೆ ಒಂದು ವಾರ್ಷಿಕ ವೇತನ ಬಡ್ತಿ ನೀಡಬೇಕು. ಪಿಯು ಉಪನ್ಯಾಸಕರ ವರ್ಗಾವಣೆ ಕಾಯ್ದೆ ಜಾರಿಗೆ ತರಬೇಕು. ಜೇಷ್ಠತೆ ಪಟ್ಟಿಗೆ ಅನುಗುಣವಾಗಿ ಪ್ರೌಢ ಶಾಲಾ ಶಿಕ್ಷಕರಿಗೆ ಪಿಯು ಕಾಲೇಜು ಉಪನ್ಯಾಸಕ ಹುದ್ದೆಗೆ ಬಡ್ತಿ ನೀಡಬೇಕು ಎಂದು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.

ಸರ್ಕಾರಿ ಶಾಲಾ ಪಿಯು ಕಾಲೇಜು ಉಪನ್ಯಾಸಕರ ಜ್ವಲಂತ ಸಮಸ್ಯೆಗಳನ್ನು ಈಡೇರಿಸಲು ಸರ್ಕಾರ 21 ದಿನಗಳಲ್ಲಿ ಸ್ಪಂದಿಸದಿದ್ದರೆ ಇಂದಿನ ಸಭೆಯಲ್ಲಿ ಕೈಗೊಂಡಿರುವ ನಿರ್ಣಯದಂತೆ ಶಾಲಾ ಕಾಲೇಜು ಬಹಿಷ್ಕರಿಸಲು ನಿರ್ಣಯ ಕೈಗೊಳ್ಳಲಾಗಿದೆ. ಶಿಕ್ಷಕರು, ಉಪನ್ಯಾಸಕರ ಹೋರಾಟಕ್ಕೆ ಸರ್ಕಾರಿ ನೌಕರರ ಸಂಘ ಸದಾ ಬೆಂಬಲವಾಗಿ ನಿಲ್ಲುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಕ್ಷರಿ ಸ್ಪಷ್ಟಪಡಿಸಿದ್ದಾರೆ.

click me!