Karnataka budget 2025 | 'ಹಲಾಲ್‌ ಬಜೆಟ್‌' ಎನ್ನುವ ಬಿಜೆಪಿಯದ್ದು ಕೊಳಕು ಮನಃಸ್ಥಿತಿ: ಸಿಎಂ ಸಿದ್ದರಾಮಯ್ಯ ಕಿಡಿ!

Published : Mar 08, 2025, 11:23 AM ISTUpdated : Mar 08, 2025, 12:40 PM IST
Karnataka budget 2025 | 'ಹಲಾಲ್‌ ಬಜೆಟ್‌' ಎನ್ನುವ ಬಿಜೆಪಿಯದ್ದು ಕೊಳಕು ಮನಃಸ್ಥಿತಿ: ಸಿಎಂ ಸಿದ್ದರಾಮಯ್ಯ ಕಿಡಿ!

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಕಡಿಮೆ ಅನುದಾನ ನೀಡಲಾಗಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯ 'ಹಲಾಲ್ ಬಜೆಟ್' ಟೀಕೆಗೆ ಕಿಡಿಕಾರಿ, ರಾಜ್ಯದ ಆರ್ಥಿಕ ಸ್ಥಿತಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು (ಮಾ.8): 2025-26ನೇ ಸಾಲಿನ ಬಜೆಟ್ ಗಾತ್ರ 4 ಲಕ್ಷ ಕೋಟಿ ರು.ಗೂ ಹೆಚ್ಚು. ಬಜೆಟ್‌ನಲ್ಲಿ ಎಲ್ಲ ಅಲ್ಪಸಂಖ್ಯಾತರಿಗೆ ಕೇವಲ 4,500 ಕೋಟಿ ರು. (ಶೇ.1) ಅನುದಾನ ನೀಡಲಾಗಿದೆ. ಎಸ್ಸಿ,ಎಸ್ಟಿಗೆ 42,000 ಕೋಟಿ ರು. ನೀಡಿದ್ದೇವೆ. ಹೀಗಿದ್ದರೂ ಇದನ್ನು ''ಹಲಾಲ್‌ ಬಜೆಟ್‌'' ಎನ್ನುತ್ತಿರುವುದು ಬಿಜೆಪಿಯ ಕೊಳಕು ಮನಃಸ್ಥಿತಿ ತೋರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

 ಬಿಜೆಪಿಯವರ ಟೀಕೆಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು 1994-95ರಲ್ಲಿ ಕೇವಲ 13,000 ಕೋಟಿ ರು. ಗಾತ್ರದ ಬಜೆಟ್ ಮಂಡಿಸಿದ್ದೆ. ಈಗ ರಾಜ್ಯದ ಆಯವ್ಯಯ ಗಾತ್ರ 4 ಲಕ್ಷ ಕೋಟಿ ರು. ಗಡಿ ದಾಟಿರುವುದು ಒಂದು ಹೊಸ ಮೈಲಿಗಲ್ಲು. 4 ಲಕ್ಷ ಕೋಟಿ ರು.ಗೂ ಹೆಚ್ಚು ಗಾತ್ರದ ಆಯವ್ಯಯದ ಬಜೆಟ್‌ ಮಂಡಿಸಿರುವುದು ನನಗೆ ಅತೀವ ಹೆಮ್ಮೆ ತರುತ್ತಿದೆ ಎಂದು ಹೇಳಿದ್ದಾರೆ.

ಬಜೆಟ್‌ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ 3,71,121 ಕೋಟಿ ರು. ಬಜೆಟ್ ಮಂಡಿಸಿದ್ದೆ. ಈ ಬಾರಿ ಗಾತ್ರ 4,09,549 ರು.ಗೆ ಹೆಚ್ಚಾಗಿದೆ. ಕಳೆದ ಬಾರಿಗಿಂತ 38166 ಕೋಟಿ ರು. ಹೆಚ್ಚಾಗಿದ್ದು ಬಜೆಟ್ ಬೆಳವಣಿಗೆಯ ದರ ಶೇ. 10.3 ರಷ್ಟು ಇದೆ. ಇನ್ನು ಕಳೆದ ವರ್ಷ 2,63,178 ಕೋಟಿ ರು. ಇದ್ದ ಸ್ವೀಕೃತಿ 2025-26ರಲ್ಲಿ 2,92,477 ಕೋಟಿ ರು.ಗೆ ತಲುಪುವ ನಿರೀಕ್ಷೆ ಇದೆ. ಸ್ವೀಕೃತಿಗಳ ದರ ಶೇ.11ರಷ್ಟು ಹೆಚ್ಚಾಗಿದ್ದು, ಇನ್ನು ಕಳೆದ ವರ್ಷ 26,127 ಕೋಟಿ ರು.ಇದ್ದ ರಾಜಸ್ವ ಕೊರತೆ 19,262 ಕೋಟಿ ರು.ಗೆ ಇಳಿದಿದೆ. ಮುಂದಿನ ವರ್ಷಕ್ಕೆ ಕೊರತೆ ಇಲ್ಲದ ಬಜೆಟ್ ಮಂಡನೆ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.

ಇದನ್ನೂ ಓದಿ: ಮುಸ್ಲಿಂ, ಪಾಕಿಸ್ತಾನ ಎರಡೂ ಬಿಜೆಪಿಯವರಿಗೆ ಸಂಜೀವಿನಿ ಇದ್ದಂತೆ, ಪಾಕ್ ಬಜೆಟ್ ಎಂದ ಬಿಜೆಪಿಗರಿಗೆ ಸಾಹುಕಾರ ತಿರುಗೇಟು!

ಗ್ಯಾರಂಟಿಗಳನ್ನು ಮದ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳಿಗೆ ಡಿಬಿಟಿ ಮಾಡಲಾಗುತ್ತಿದ್ದು, 52,000 ಕೋಟಿ ರು. ಜನರಿಗೆ ತಲುಪಿಸಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 232 ಕೋಟಿ ರು. ತಲುಪಿದೆ. ಜನರಿಗೆ ಆರ್ಥಿಕ ಬಲ ತುಂಬಿದರೆ, ಅವರ ಖರೀದಿ ಶಕ್ತಿಯೂ ಹೆಚ್ಚಿ, ರಾಜ್ಯದ ಆರ್ಥಿಕತೆಯೂ ಬೆಳೆಯುತ್ತದೆ ಎಂದರು. ಬಿಜೆಪಿಯ ಕೊಳಕು ಮನಃಸ್ಥಿತಿ: ಎಸ್ಸಿ-ಎಸ್ಟಿಗೆ ಎಸ್ಸಿಪಿ/ಟಿಎಸ್‌ಪಿ ಅಡಿ 42,000 ಕೋಟಿ ರು. ನೀಡಿದ್ದೇವೆ. ಅಲ್ಪಸಂಖ್ಯಾತರು, ಎಸ್ಸಿ,ಎಸ್ಟಿ, ಒಬಿಸಿ ಎಲ್ಲರಿಗೂ ಅನುದಾನ ನೀಡಿದ್ದೇವೆ. ಬೌದ್ಧರು, ಜೈನರು, ಕ್ರಿಶ್ಚಿಯನ್ನರು, ಮುಸಲ್ಮಾನರರು ಹೀಗೆ ಎಲ್ಲ ಅಲ್ಪಸಂಖ್ಯಾತರಿಗೆ ಒಟ್ಟಾರೆ 4,500 ಕೋಟಿ ರು. ಅನುದಾನ ನೀಡಲಾಗಿದೆ. ಇದು ಮುಖ್ಯವಾಗಿ ಶಿಕ್ಷಣಕ್ಕೆ ನೀಡಿದ್ದು. ಅವರ ಸಾಕ್ಷರತಾ ಪ್ರಮಾಣವೂ ಎಷ್ಟಿದೆ ಎಂಬುದನ್ನು ನೋಡಬೇಕಲ್ಲವೇ? ಹೀಗಿದ್ದರೂ ಇದನ್ನು ಹಲಾಲ್‌ ಬಜೆಟ್‌ ಎನ್ನುವ ಬಿಜೆಪಿಯದ್ದು, ಕೊಳಕು ಮನಃಸ್ಥಿತಿ ಎಂದು ಕಿಡಿ ಕಾರಿದರು.

ಕೆಐಎಡಿಬಿ ನಿವೇಶನಗಳಲ್ಲಿ ಮೀಸಲಾತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, 2 ಎ, ಎಸ್‌ಸಿ, ಎಸ್‌ಟಿ, ಪ್ರವರ್ಗ 1 ಕೊಟ್ಟಿಲ್ಲವೇ? ಕೇವಲ ಮುಸ್ಲಿಮರದ್ದು ಮಾತ್ರ ಯಾಕೆ ಹೇಳುತ್ತೀರಿ ಎಂದು ಪ್ರಶ್ನಿಸಿದರು.

ಬಿಜೆಪಿಗೆ ದಿವಾಳಿ ಪದದ ಅರ್ಥ ಗೊತ್ತೇ? 2024-25 ರಲ್ಲಿ ಸಾಲ 1,05,246 ಕೋಟಿ, ಈ ವರ್ಷ ಸಾಲ 1,16,000 ಕೋಟಿ ರು. ಪ್ರಸ್ತಾಪಿಸಲಾಗಿದೆ. ಇಷ್ಟಾದರೂ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡದಂತೆ ಸಾಲದ ಮೊತ್ತ ಜಿಎಸ್‌ಡಿಪಿಯ ಶೇ.25ಕ್ಕಿಂತ (ಶೇ.24.91) ಕಡಿಮೆಯೇ ಇರಲಿದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ದಿವಾಳಿ ಪದದ ಅರ್ಥ ಗೊತ್ತಿಲ್ಲ. ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಶೇ. 4.61 ರಷ್ಟಿದೆ. ಆದರೆ ರಾಜ್ಯದ ವಿತ್ತೀಯ ಕೊರತೆ ಶೇ.2.95 ರಷ್ಟಿದೆ. ಕೇಂದ್ರ ಸರ್ಕಾರದ ಬಜೆಟ್ ಗಾತ್ರ 50 ಲಕ್ಷ ಕೋಟಿಯಲ್ಲಿ 15.66 ಲಕ್ಷ ಕೋಟಿ ಸಾಲ ಪಡೆದಿದೆ. ಕೇಂದ್ರದ ಸಾಲ 2 ಲಕ್ಷ ಕೋಟಿ ರು.ಗೆ ತಲುಪಿದೆ. ರಾಜ್ಯವನ್ನು ದಿವಾಳಿ ಆಗಿದೆ ಎನ್ನುವ ಬಿಜೆಪಿಯವರು ಕೇಂದ್ರವನ್ನು ಪ್ರಶ್ನಿಸಲಿ. ಇವರಿಗೆ ನಮ್ಮನ್ನು ಪ್ರಶ್ನಿಸುವ ನೈತಿಕತೆ ಎಲ್ಲಿದೆ? ಎಂದು ಕಿಡಿಕಾರಿದರು. 

ಇದನ್ನೂ ಓದಿ:  Karnataka Budget 2025 | ಹೊಸ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲವೇ? ಇಲ್ಲಿದೆ ಸಂಪೂರ್ಣ ವಿವರ, ಸೇವ್ ಮಾಡಿಟ್ಕೊಳ್ಳಿ!

ಶಾಸಕರ ಅನುದಾನಕ್ಕೆ 8,000 ಕೋಟಿ ರು. ಬಿಜೆಪಿ, ಜೆಡಿಎಸ್ ಶಾಸಕರ ಅನುದಾನದ ಬೇಡಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, 8000 ಕೋಟಿ ವಿಶೇಷ ಅನುದಾನ ಮೀಸಲಿಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ಎಲ್ಲಾ ಕ್ಷೇತ್ರಗಳ ಶಾಸಕರಿಗೂ ಅನುದಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌