
Karnataka Budget 2025 Highlights: ಸರ್ಕಾರಿ ಶಾಲಾ ಮಕ್ಕಳ ಹಾಜರಾತಿಗೆ ಫೇಸ್ ರೆಕಗ್ನಿಷನ್, ಮತ್ತೆ 550 ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆ, ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನ 2000 ರು ಹೆಚ್ಚಳ, ಬಿಸಿಯೂಟ ನೌಕರರ ಗೌರವಧನ 1000 ರು. ಏರಿಕೆ, 10,267 ಶಾಲಾ ಶಿಕ್ಷಕರ ನೇಮಕ, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕೋಡಿಂಗ್ ಕಲಿಕೆಗೆ ಅಗಸ್ತ್ಯ ಫೌಂಡೇಶನ್ ಸಹಯೋಗದೊಂದಿಗೆ ಐ-ಕೋಡ್ ಲ್ಯಾಬ್ ಸ್ಥಾಪನೆ.
ಇವು ಈ ಬಾರಿಯ ಬಜೆಟ್‌ನಲ್ಲಿ ಶಾಲಾ ಶಿಕ್ಷಣ ಇಲಾಖೆಯಡಿಯ ಘೋಷಣೆಗಳು. ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕೆ ಒಟ್ಟಾರೆ 45,286 ಕೋಟಿ ರು.ಅನುದಾನ ಒದಗಿಸಲಾಗಿದ್ದು, ಇದು ಒಟ್ಟು ಬಜೆಟ್ ಗಾತ್ರದ ಶೇ.10ರಷ್ಟಾಗಿದೆ. ಕಳೆದ ಬಜೆಟ್‌ಗೆ ಹೋಲಿಸಿದರೆ ಶಿಕ್ಷಣಕ್ಕೆ ಶೇ.2ರಷ್ಟು ಅನುದಾನ ಕಡಿಮೆಯಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಖಚಿತಪಡಿಸಲು ‘ನಿರಂತರʼ ಕಾರ್ಯಕ್ರಮದಡಿ ಫೇಸ್ ರೆಕಗ್ನಿಷನ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಪ್ರೌಢಶಾಲಾ, ಪಿಯು ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಗೆ ‘ಸ್ಕಿಲ್ ಅಟ್ ಸ್ಕೂಲ್’ ಕಾರ್ಯಕ್ರಮ ರೂಪಿಸಲಾಗಿದೆ. ಇದರಡಿ, ಆಯ್ದ 7,500 ವಿದ್ಯಾರ್ಥಿಗಳಿಗೆ ಉನ್ನತೀಕರಿಸಿದ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5,267 ಶಿಕ್ಷಕರ ಹುದ್ದೆ, ಇಲಾಖೆಯಲ್ಲಿ ಖಾಲಿ ಇರುವ ಇತರೆ ಶಿಕ್ಷಕರ ಹುದ್ದೆಗಳನ್ನು ತರ್ಕಬದ್ಧಗೊಳಿಸಿ 5,000 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುವುದು.
ಇದನ್ನೂ ಓದಿ: Karnataka Budget 2025 | ಪ್ರವಾಸಿಗರಿಗೆ ಗುಡ್‌ನ್ಯೂಸ್, ಟೂರಿಸ್ಟ್ ಸುರಕ್ಷತೆಗಾಗಿ 24*7 ಸಹಾಯವಾಣಿ ಆರಂಭ
ಪ್ರೌಢಶಾಲೆಯಾಗಿ ಮೇಲ್ದರ್ಜೆಗೆ: ಈಗಾಗಲೇ ರಾಜ್ಯದಲ್ಲಿರುವ 279 ಕರ್ನಾಟಕ ಪಬ್ಲಿಕ್ ಶಾಲೆಗಳ ಜೊತೆಗೆ ಈ ವರ್ಷ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ನೆರವಿನಲ್ಲಿ 2,500 ಕೋಟಿ ರು. ವೆಚ್ಚದಲ್ಲಿ ಇನ್ನೂ 500 ಹೊಸ ಕೆಪಿಎಸ್‌ಗಳು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಆವಿಷ್ಕಾರ ಯೋಜನೆಯಡಿ 200 ಕೋಟಿ ರು. ವೆಚ್ಚದಲ್ಲಿ ಆಯ್ದ 50 ಶಾಲೆಗಳನ್ನು ಸುಸಜ್ಜಿತ ಕೆಪಿಎಸ್‌ಗಳಾಗಿ ಉನ್ನತೀಕರಿಸಲಾಗವುದು. ಅರ್ಹ 100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ, 50 ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸುವುದಾಗಿ ಘೋಷಿಸಲಾಗಿದೆ.
ಸರ್ಕಾರ ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಯೋಗದೊಂದಿಗೆ 1,500 ಕೋಟಿ ರು. ವೆಚ್ಚದಲ್ಲಿ ಸರ್ಕಾರಿ ಶಾಲೆಗಳ 53 ಲಕ್ಷ ಮಕ್ಕಳಿಗೆ ವಾರದಲ್ಲಿ ಆರು ದಿನ ನೀಡುತ್ತಿರುವ ಮೊಟ್ಟೆ/ಬಾಳೆಹಣ್ಣು ಯೋಜನೆ 2025-26ನೇ ಸಾಲಿನಲ್ಲೂ ಮುಂದುವರಿಕೆ, ಕ್ಷೀರಭಾಗ್ಯ ಯೋಜನೆಯಡಿ ಬಿಸಿ ಹಾಲಿಗೆ ಪ್ರಸ್ತುತ ವಾರದಲ್ಲಿ ಮೂರು ದಿನ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ಮಿಶ್ರಣ ಮಾಡಿ ನೀಡುತ್ತಿರುವುದನ್ನು ಐದು ದಿನಗಳಿಗೆ ವಿಸ್ತರಣೆ ಮಾಡಲಾಗುವುದು. 100 ಕೋಟಿ ರು. ವೆಚ್ಚದ ಈ ಯೋಜನೆಯ ಶೇ.25ರಷ್ಟು ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.
ಗೌರವಧನ ಹೆಚ್ಚಳ: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರು ಮತ್ತು ಸರ್ಕಾರಿ ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರ ಮಾಸಿಕ ಗೌರವಧನ ತಲಾ 2,000 ರು., ಬಿಸಿಯೂಟ ತಯಾರಿಕಾ ಸಿಬ್ಬಂದಿಯ ಮಾಸಿಕ ಗೌರವಧನವನ್ನು ತಲಾ 1,000 ರು. ಹೆಚ್ಚಿಸಲಾಗುವುದು. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕೋಡಿಂಗ್ ಕಲಿಕೆಗೆ ಅಗಸ್ತ್ಯ ಫೌಂಡೇಶನ್ ಸಹಯೋಗದೊಂದಿಗೆ ಐ-ಕೋಡ್ ಲ್ಯಾಬ್ ಸ್ಥಾಪಿಸಿ ಪ್ರಸಕ್ತ ವರ್ಷ ಐಸಿಟಿ ಸೌಲಭ್ಯವಿರುವ ಆಯ್ದ 63 ಶಾಲೆಗಳನ್ನು ಹಬ್‌ಗಳೆಂದು ಪರಿಗಣಿಸಿ 756 ಸ್ಪೋಕ್ ಶಾಲೆಗಳಿಗೆ ಅನುಕೂಲ ಕಲ್ಪಿಸುವುದಾಗಿ ಪ್ರಕಟಿಸಿದ್ದಾರೆ.
5000 ಶಾಲೆಗಳಿಗೆ ಎಲ್‌ಕೆಜಿ ಯುಕೆಜಿ ವಿಸ್ತರಣೆ:
ಪ್ರಸ್ತುತ 2619 ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ತರಗತಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 90,195 ಮಕ್ಕಳು ಕಲಿಯುತ್ತಿದ್ದಾರೆ. ಇದನ್ನು 70 ಕೋಟಿ ರು.ವೆಚ್ಚದಲ್ಲಿ ಒಟ್ಟಾರೆ 5000 ಶಾಲೆಗಳಿಗೆ ವಿಸ್ತರಿಸಲಾಗುವುದು. ʻಗಣಿತ ಗಣಕʼ ಕಾರ್ಯಕ್ರಮದಡಿ 3 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಫೋನ್ ಮೂಲಕ ಬೋಧನೆಗೆ ಬುನಾದಿ ಗಣಿತ ಕೌಶಲ್ಯ ಕಾರ್ಯಕ್ರಮ ರಾಜ್ಯಾದ್ಯಂತ ವಿಸ್ತರಣೆ. ʻಓದು ಕರ್ನಾಟಕʼ ಯೋಜನೆಯಡಿ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನದ ಕೌಶಲ್ಯಗಳ ಅಭಿವೃದ್ಧಿ. 6 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ʻಮರುಸಿಂಚನʼ ಕಾರ್ಯಕ್ರಮ ರಾಜ್ಯಾದ್ಯಂತ ವಿಸ್ತರಣೆ. ಕನ್ನಡ ಮತ್ತು ಆಂಗ್ಲ ಭಾಷೆಯನ್ನು ಆತ್ಮವಿಶ್ವಾಸದಿಂದ ಓದಲು ಹಾಗೂ ಗಣಿತದ ಆರಂಭಿಕ ಸಾಮರ್ಥ್ಯಗಳನ್ನು ಪರಿಹರಿಸಲು ಇಕೆ-ಸ್ಟೆಪ್ ಸಂಸ್ಥೆಯ ಸಹಯೋಗದೊಂದಿಗೆ ಎಐ ಆಧಾರಿತ ʻಕಲಿಕಾದೀಪʼ ಕಾರ್ಯಕ್ರಮವನ್ನು 2,000 ಶಾಲೆಗಳಿಗೆ ವಿಸ್ತರಿಸಲಾಗುವುದು.
ʻಜ್ಞಾನಸೇತುʼ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನಾ ವಿಧಾನದಲ್ಲಿ ನಾವೀನ್ಯತೆಗೆ ಖಾನ್ ಅಕಾಡೆಮಿ ಸಹಯೋಗದಲ್ಲಿ ಯೋಜನೆ. ಇದರಿಂದ ರಾಜ್ಯದ 5000 ಸರ್ಕಾರಿ ಶಾಲೆಗಳ 20 ಲಕ್ಷ ವಿದ್ಯಾರ್ಥಿಗಳು ಹಾಗೂ 15,000 ಶಿಕ್ಷಕರಿಗೆ ಪ್ರಯೋಜನವಾಗಲಿದೆ.
ಸಿಇಟಿ, ನೀಟ್, ಜೆಇಇ ತರಬೇತಿ:
‘ವಿದ್ಯಾವಿಜೇತʼ ಕಾರ್ಯಕ್ರಮದಡಿ ಸರ್ಕಾರಿ ಪಿಯು ಕಾಲೇಜುಗಳ 25,000 ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ/ನೀಟ್, ಜೆಇಇ ತರಬೇತಿ ಕಾರ್ಯಕ್ರಮ ಮುಂದುವರೆಸಲು 5 ಕೋಟಿ ರು. ಅನುದಾನ. ವಿದ್ಯಾರ್ಥಿಗಳಲ್ಲಿ ಆಂಗ್ಲಭಾಷೆಯ ಕೌಶಲ್ಯ ಬೆಳೆಸಲು ರಾಜ್ಯದ ಇನ್ನೂ 4,000 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ವಿಭಾಗ ಪ್ರಾರಂಭ. ಪ್ರಸಕ್ತ ಸಾಲಿನಲ್ಲಿ ಇನ್ನೂ 500 ಶಾಲೆಗಳಲ್ಲಿ ಕಂಪ್ಯೂಟರ್ ಮತ್ತು ವಿಜ್ಞಾನ ಪ್ರಯೋಗಾಲಯ ಆರಂಭ.
ಕೊಠಡಿ, ಶೌಚಾಲಯ ನಿರ್ಮಾಣಕ್ಕೆ 725 ಕೋಟಿ: ಸರ್ಕಾರಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿ, ಶೌಚಾಲಯಗಳ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳಿಗೆ 725 ಕೋಟಿ ರು. ಹಾಗೂ ಅಗತ್ಯ ಪೀಠೋಪಕರಣ ಒದಗಿಸಲು 50 ಕೋಟಿ ರು, ರಾಜ್ಯದ 16,347 ಶಾಲೆಗಳ ಬಿಸಿಯೂಟದ ಅಡುಗೆಮನೆ ಆಧುನೀಕರಣ ಮತ್ತು ಹೊಸ ಪಾತ್ರೆ ಪರಿಕರ ಒದಗಿಸಲು 46 ಕೋಟಿ ರು. ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಯುವಕರ ತರಬೇತಿ ಕೇಂದ್ರ ಅಭಿವೃದ್ಧಿಗಾಗಿ ಎರಡು ಕೋಟಿ ರು.ಒದಗಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಇದನ್ನೂ ಓದಿ: Karnataka Budget 2025 | ಹೊಸ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲವೇ? ಇಲ್ಲಿದೆ ಸಂಪೂರ್ಣ ವಿವರ, ಸೇವ್ ಮಾಡಿಟ್ಕೊಳ್ಳಿ!
ಗೌರವಧನ ಹೆಚ್ಚಳ ಸ್ವಾಗತಾರ್ಹ
ಒಟ್ಟಾರೆ ಬಜೆಟ್ ಗಾತ್ರಕ್ಕೆ ಹೋಲಿಸಿದರೆ ಈ ಬಾರಿ ಶಿಕ್ಷಣಕ್ಕೆ ಮೀಸಲಿಟ್ಟಿರುವ ಶೇಕಡಾವಾರು ಅನುದಾನ ಶೇ.2ರಷ್ಟು ಕಡಿಮೆಯಾಗಿದೆ. ಆದರೆ, ಮೊತ್ತವಾರು ನೋಡಿದಾಗ ಕಳೆದ ಬಾರಿಗಿಂತ 864 ಕೋಟಿ ರು.(ಶೇ.2) ಏರಿಕೆಯಾಗಿದೆ. ಇದರ ನಡುವೆಯೂ 550 ಹೊಸ ಕೆಪಿಎಸ್ ಶಾಲೆ ಸ್ಥಾಪನೆ, ಮಕ್ಕಳ ಹಾಜರಾತಿಗೆ ಫೇಸ್ ರೆಕಗ್ನಿಷನ್ ಜಾರಿ, 10 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕ, ಅತಿಥಿ ಶಿಕ್ಷಕರು, ಉಪನ್ಯಾಸಕರು, ಬಿಸಿಯೂಟ ನೌಕರರ ಗೌರವಧನ ಹೆಚ್ಚಳದಂಥ ಹಲವು ಉತ್ತಮ ಅಂಶಗಳನ್ನು ಪ್ರಕಟಿಸಿರುವುದು ಅಭಿನಂದನಾರ್ಹ-ವಿ.ಪಿ.ನಿರಂಜನಾರಾಧ್ಯ, ಅಭಿವೃದ್ಧಿ ಶಿಕ್ಷಣ ತಜ್ಞ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ