Guest Lecturers: ಅತಿಥಿ ಉಪನ್ಯಾಸಕರ ಸೇವೆ ಕಾಯಂ ಮಾಡಲು ಸಾಧ್ಯವಿಲ್ಲ: ಸಚಿವ ಅಶ್ವತ್ಥ್

Kannadaprabha News   | Asianet News
Published : Jan 17, 2022, 03:50 AM IST
Guest Lecturers: ಅತಿಥಿ ಉಪನ್ಯಾಸಕರ ಸೇವೆ ಕಾಯಂ ಮಾಡಲು ಸಾಧ್ಯವಿಲ್ಲ: ಸಚಿವ ಅಶ್ವತ್ಥ್

ಸಾರಾಂಶ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಲು ಸಾಧ್ಯವಿಲ್ಲ. ಅತಿಥಿ ಉಪನ್ಯಾಸಕರ ಪ್ರತಿಭಟನೆಯ ಹಿಂದಿರುವ ರಾಜಕೀಯಕ್ಕೆ ಸರ್ಕಾರ ಮಣಿಯುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಜ. 17):  ಅತಿಥಿ ಉಪನ್ಯಾಸಕರಿಗೆ (Guest Lecture) ಸೇವಾ ಭದ್ರತೆ ನೀಡಲು ಸಾಧ್ಯವಿಲ್ಲ. ಅತಿಥಿ ಉಪನ್ಯಾಸಕರ ಪ್ರತಿಭಟನೆಯ ಹಿಂದಿರುವ ರಾಜಕೀಯಕ್ಕೆ ಸರ್ಕಾರ ಮಣಿಯುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥನಾರಾಯಣ (CN Ashwath Narayan) ಸ್ಪಷ್ಟಪಡಿಸಿದ್ದಾರೆ. ಭಾನುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅರ್ಹ ಅತಿಥಿ ಉಪನ್ಯಾಸಕರ ಸಂಬಳವನ್ನು ಎರಡರಿಂದ ಮೂರು ಪಟ್ಟು ಏರಿಕೆ ಮಾಡಿದ್ದೇವೆ. 11 ರಿಂದ 13 ಸಾವಿರ ರೂ. ಸಂಬಳ ಪಡೆಯುತ್ತಿದ್ದ ಅತಿಥಿ ಉಪನ್ಯಾಸಕರು ಇನ್ನು ಮುಂದೆ 32 ಸಾವಿರ ರೂ.ವರೆಗೆ ಸಂಬಳ ಪಡೆಯಲಿದ್ದಾರೆ. ಇನ್ನೂ ಸಮಾಧಾನ ಆಗಿಲ್ಲ ಎಂದರೆ ಹೇಗೆ ಎಂದು ಬೇಸರದಿಂದ ಪ್ರಶ್ನಿಸಿದರು.

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಲು ಸಾಧ್ಯವಿಲ್ಲ. ನೇರ ನೇಮಕಾತಿಯಾದ ಉಪನ್ಯಾಸಕರಿಗೆ ಮಾತ್ರ ಸೇವಾ ಭದ್ರತೆ ಇರಲಿದೆ. 8 ಗಂಟೆ ಮಾತ್ರ ಪಾಠ ಮಾಡುತ್ತಿದ್ದ ಉಪನ್ಯಾಸಕರಿಗೆ ಇನ್ನಷ್ಟುಪಾಠ ಮಾಡಲು ಅವಕಾಶ ಮಾಡಿಕೊಡುತ್ತಿದ್ದೇವೆ. 13 ಸಾವಿರ ಅತಿಥಿ ಉಪನ್ಯಾಸಕರಲ್ಲಿ ಕೇವಲ ನಾಲ್ಕೂವರೆ ಸಾವಿರ ಮಂದಿ ಮಾತ್ರ ಯುಜಿಸಿ ಪ್ರಕಾರ ಅರ್ಹತೆ ಹೊಂದಿದ್ದಾರೆ. 9 ಸಾವಿರ ಮಂದಿ ಅರ್ಹತೆ ಇರುವವರು ಮತ್ತು 5 ಸಾವಿರ ಮಂದಿ ಅರ್ಹತೆ ಇಲ್ಲದವರು ಕೂಡ ನೇಮಕ ಆಗಲಿದ್ದಾರೆ ಎಂದು ಸಚಿವರು ಹೇಳಿದರು.

Guest Lecturers ಮತ್ತೆ ಸಿಡಿದೆದ್ದ ಅತಿಥಿ ಉಪನ್ಯಾಸಕರು, ಅಶ್ವತ್ಥ್ ನಾರಾಯಣ ಗರಂ

ಕೆಲಸ ಮಾಡುವವರಿಗೆ ಕೈ ತುಂಬಾ ಸಂಬಳ ಸಿಗಬೇಕು, ಅವರು ಉತ್ತಮವಾಗಿ ಬದುಕು ಸಾಗಿಸುವಂತೆ ಆಗಬೇಕು ಎಂಬ ಉದ್ದೇಶದಿಂದ ವೇತನ ಹೆಚ್ಚಿಸಿದ್ದೇವೆ. ಎಲ್ಲರಿಗೂ ಹೆಚ್ಚು ಕೆಲಸ ನೀಡಲು ಸಾಧ್ಯವಿಲ್ಲ. ಸರ್ಕಾರ ಅತಿಥಿ ಉಪನ್ಯಾಸಕರಿಗೆ ನೆರವಿನ ಹಸ್ತ ಚಾಚಿದೆ. ಮುಖ್ಯ ಕಾರ್ಯದರ್ಶಿಗಿಂತ ಹೆಚ್ಚು ಸಂಬಳ ನೀಡುವುದು ಉತ್ತಮ ಗುಣಮಟ್ಟದ ಶಿಕ್ಷಕರು ಬರಬೇಕು ಎಂಬ ಕಾರಣಕ್ಕೆ. ಕಾಲಕಾಲಕ್ಕೆ ಉಪನ್ಯಾಸಕರ ನೇಮಕಾತಿ ನಡೆಯದಿರುವ ಕಾರಣಕ್ಕೆ ತಾತ್ಕಾಲಿಕ ಕ್ರಮವಾಗಿ ಅತಿಥಿ ಉಪನ್ಯಾಸಕರ ಸೇವೆ ಪಡೆಯಲಾಗುತ್ತದೆ. ಆದರೂ ಉತ್ತಮ ಸಂಬಳ ನೀಡಿದ್ದೇವೆ ಎಂದು ತಿಳಿಸಿದರು. ಸೋಮವಾರದಿಂದ ಪೊರ್ಟಲ್‌ ಓಪನ್‌ ಆಗುತ್ತದೆ. ಅತಿಥಿ ಉಪನ್ಯಾಸಕರು ಅರ್ಜಿ ಹಾಕಬಹುದು ಎಂದೂ ಇದೇ ವೇಳೆ ಸಚಿವರು ಮಾಹಿತಿ ನೀಡಿದರು.

ಅಶ್ವತ್ಥ್ ನಾರಾಯಣ ಗರಂ: ಅತಿಥಿ ಉಪನ್ಯಾಸಕರ  ಸಮಸ್ಯೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಅವರ ವೇತವನ್ನು ಎರಡು ಪಟ್ಟಿಗಿಂತಲೂ ಹೆಚ್ಚು ಏರಿಸಿರುವುದರಿಂದ ಎಲ್ಲರೂ ಮುಷ್ಕರ ಕೈಬಿಟ್ಟು ತಕ್ಷಣ ಬೋಧನಾ ಕಾರ್ಯಕ್ಕೆ ಹಿಂದಿರುಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ  ಮನವಿ ಮಾಡಿದ್ದಾರೆ. 2022-23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಆನ್‌ಲೈನ್‌ ಮೂಲಕ ಅತಿಥಿ ಉಪನ್ಯಾಸಕರನ್ನು ನೇಮಕ (Recruitment) ಮಾಡಿಕೊಳ್ಳುವ ಪ್ರಕ್ರಿಯೆ ಸೋಮವಾರದಿಂದ (ಜ.17) ಆರಂಭವಾಗಲಿದ್ದು, ಮುಷ್ಕರ ಬಿಟ್ಟು ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸಚಿವರು ಅತಿಥಿ ಉಪನ್ಯಾಸಕರಿಗೆ ಸೂಚನೆ ನೀಡಿದ್ದಾರೆ.

Guest Lecturer ಸಂಕ್ರಾಂತಿ ಕೊಡುಗೆ ಶುದ್ಧ ಸುಳ್ಳು, ಸರ್ಕಾರದ ತೀರ್ಮಾನಕ್ಕೆ ಅತಿಥಿ ಉಪನ್ಯಾಸಕರ ಆಕ್ರೋಶ

‘ಸರ್ಕಾರ ಘೋಷಿಸಿರುವ ವೇತನ ಹೆಚ್ಚಳದ ಪ್ಯಾಕೇಜ್‌ನಿಂದ ಸಮಾಧಾನವಾಗಿಲ್ಲ. ನಾವು ಕೇಳಿರುವುದು ಸೇವಾ ಭದ್ರತೆ, ಅದು ಈಡೇರುವವರೆಗೂ ನಮ್ಮ ಹೋರಾಟ ಮುಂದುವರೆಸುತ್ತೇವೆ’ ಎಂದು ಕೆಲ ಅತಿಥಿ ಉಪನ್ಯಾಸಕರ ಸಂಘಟನೆಗಳು ಹೇಳಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ಸಚಿವರು ಪತ್ರಿಕಾ ಪ್ರಕಟಣೆ ಮೂಲಕ ಈ ಮನವಿ ಮಾಡಿದ್ದಾರೆ. ‘ಅತಿಥಿ ಉಪನ್ಯಾಸಕರಿಗೆ ನಮ್ಮ ಸರ್ಕಾರ ಅತ್ಯುತ್ತಮವಾದ ಪ್ಯಾಕೇಜ್‌ ನೀಡಿದೆ. ಇದುವರೆಗೂ ಯುಜಿಸಿ ಅರ್ಹತೆ ಇಲ್ಲದವರು ಕೇವಲ 11 ಸಾವಿರ ರು., ಯುಜಿಸಿ ಅರ್ಹತೆ ಇರುವವರಿಗೆ 13 ಸಾವಿರ ಅಷ್ಟೇ ಮಾಸಿಕ ವೇತನ ಇತ್ತು. ಅದನ್ನು ನಮ್ಮ ಸರ್ಕಾರ ಒಮ್ಮೆಲೇ ಕ್ರಮವಾಗಿ 28 ಸಾವಿರ ರು. ಮತ್ತು 32 ಸಾವಿರ ರು.ಗಳಿಗೆ ಹೆಚ್ಚಳ ಮಾಡಿದೆ. ಆದರೂ, ಇದು ಸಮಾಧಾನ ಇಲ್ಲ ಎಂದು ಹೇಳಿ ಮುಷ್ಕರ ಮುಂದುವರೆಸಿರುವುದು ಸರಿಯಲ್ಲ. ಕೂಡಲೇ ಕರ್ತವ್ಯಕ್ಕೆ ಹಾಜರಾಗಿ’ ಎಂದು ಅವರು ಕೋರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ