Karnataka High Court: ರೇಪ್‌ ಸಂತ್ರಸ್ತೆ ವಯಸ್ಸು ಸಾಬೀತು ಹೊಣೆ ಪ್ರಾಸಿಕ್ಯೂಷನ್‌ದು

Kannadaprabha News   | Asianet News
Published : Jan 17, 2022, 01:45 AM IST
Karnataka High Court: ರೇಪ್‌ ಸಂತ್ರಸ್ತೆ ವಯಸ್ಸು ಸಾಬೀತು ಹೊಣೆ ಪ್ರಾಸಿಕ್ಯೂಷನ್‌ದು

ಸಾರಾಂಶ

ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಅಪ್ರಾಪ್ತಳಲ್ಲ ಎಂದು ಆರೋಪಿ ಅಲ್ಲಗಳೆದರೆ, ಸಂತ್ರಸ್ತೆಯ ನಿಜ ವಯಸ್ಸು ಸಾಬೀತುಪಡಿಸುವ ದೊಡ್ಡ ಹೊಣೆ ಅಭಿಯೋಜನೆ (ಪ್ರಾಸಿಕ್ಯೂಷನ್‌) ಮೇಲಿರುತ್ತದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಬೆಂಗಳೂರು (ಜ. 17): ಅತ್ಯಾಚಾರ ಪ್ರಕರಣದ ಸಂತ್ರಸ್ತೆ (Rape Victim) ಅಪ್ರಾಪ್ತಳಲ್ಲ ಎಂದು ಆರೋಪಿ ಅಲ್ಲಗಳೆದರೆ, ಸಂತ್ರಸ್ತೆಯ ನಿಜ ವಯಸ್ಸು ಸಾಬೀತುಪಡಿಸುವ ದೊಡ್ಡ ಹೊಣೆ ಅಭಿಯೋಜನೆ (ಪ್ರಾಸಿಕ್ಯೂಷನ್‌) ಮೇಲಿರುತ್ತದೆ ಎಂದು ಹೈಕೋರ್ಟ್‌ (High Court) ಅಭಿಪ್ರಾಯಪಟ್ಟಿದೆ. 

ಪೋಕ್ಸೋ ಪ್ರಕರಣವೊಂದರಲ್ಲಿ (Pocso Case) ಸಂತ್ರಸ್ತೆಯ ವಯಸ್ಸು ಸಾಬೀತಾಗದಿದ್ದರೂ ತನಗೆ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮುಧೋಳದ ಯುವಕನೊಬ್ಬ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ಏಕ ಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಪ್ರಾಪ್ತೆಯೊಂದಿಗೆ ಅಕ್ರಮವಾಗಿ ದೈಹಿಕ ಸಂಪರ್ಕ ಬೆಳೆಸಿದ ಹಾಗೂ ಅತ್ಯಾಚಾರ ನಡೆಸಿದ ಆರೋಪ ಸಂಬಂಧ ಅರ್ಜಿದಾರನಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಎರಡು ಸಾವಿರ ರು. ದಂಡ ವಿಧಿಸಿದ ಜಮಖಂಡಿಯ ತ್ವರಿತಗತಿ ನ್ಯಾಯಾಲಯದ ಆದೇಶ ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ.

ನಿಜ ವಯಸ್ಸು ಪತ್ತೆ ಹಚ್ಚಬೇಕು: ಅಪ್ರಾಪ್ತೆಯನ್ನು ಜತೆಗಿರಿಸಿಕೊಂಡು ಅಕ್ರಮವಾಗಿ ದೈಹಿಕ ಸಂಪರ್ಕ ಬೆಳೆಸಿದ (ಐಪಿಸಿ ಸೆಕ್ಷನ್‌ 366ಎ) ಆರೋಪ ಅರ್ಜಿದಾರನ ವಿರುದ್ಧ ಇದೆ. ಇಂತಹ ಸನ್ನಿವೇಶದಲ್ಲಿ ಸಂತ್ರಸ್ತೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳು ಹಾಗೂ ಆಕೆಯನ್ನು ಅಕ್ರಮ ದೈಹಿಕ ಸಂಪರ್ಕ ಬೆಳೆಸುವ ಉದ್ದೇಶದಿಂದ ಬಲವಂತವಾಗಿ ಅಥವಾ ಯಾವುದೇ ರೀತಿಯ ವ್ಯಾಮೋಹ ತೋರಿಸಿ ಕರೆದುಕೊಂಡು ಹೋಗಿರುವುದನ್ನು ಸಾಬೀತುಪಡಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

Karnataka High Court: ನ್ಯಾಯಬೆಲೆ ಅಂಗಡಿ ಲೈಸನ್ಸ್‌ಗೆ ಷರತ್ತು: ಹೈಕೋರ್ಟ್‌ ಆದೇಶ

ಈ ಪ್ರಕರಣದಲ್ಲಿ ಸಂತ್ರಸ್ತೆಯ ಶಾಲಾ ದಾಖಲಾತಿಯಲ್ಲಿ ಜನ್ಮ ದಿನಾಂಕ 1995ರ ಜೂ.2 ಎಂದು ಹೇಳಲಾಗಿದೆಯಾದರೂ ಯಾವ ಆಧಾರದಲ್ಲಿ ಆ ಜನ್ಮ ದಿನಾಂಕ ನಮೂದಿಸಲಾಗಿದೆ. ಬಾಲಕಿ ಒಂದರಿಂದ ಏಳನೇ ತರಗತಿಯವರೆಗೆ ಯಾವ ಶಾಲೆಯಲ್ಲಿ ಓದಿದ್ದಾಳೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಈ ಪ್ರಕರಣದ ವೈದ್ಯಕೀಯ ವರದಿಯಲ್ಲಿ ಸಂತ್ರಸ್ತೆಯ ಕನ್ಯಾಪೊರೆ ಹರಿದಿದೆ. ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ ಎಂದು ಹೇಳಲಾಗಿದೆ. ಬಲವಂತವಾಗಿ ಅತ್ಯಾಚಾರವೆಸಗಿದ್ದರೆ ದೇಹದ ಮೇಲೆ ಗಾಯಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಪಾಸಣೆ ನಡೆಸಿದ ವೈದ್ಯರೂ ಒಪ್ಪಿಕೊಂಡಿದ್ದಾರೆ. ಇಷ್ಟನ್ನು ಹೊರತುಪಡಿಸಿ ಸಂತ್ರಸ್ತೆಯ ವಯಸ್ಸು ಗುರುತಿಸಿಲ್ಲ. ಅದಕ್ಕಾಗಿ ಪರೀಕ್ಷೆ ನಡೆಸಿಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಅಂತಿಮವಾಗಿ ಸಂತ್ರಸ್ತೆ ಅಪ್ರಾಪ್ತಳಲ್ಲ ಎಂಬುದಾಗಿ ಆರೋಪಿ ವಾದಿಸಿದಾಗ ಸಂತ್ರಸ್ತೆಯ ನಿಜವಾದ ವಯಸ್ಸು ಸಾಬೀತುಪಡಿಸುವ ಮಹತ್ತರ ಜವಾಬ್ದಾರಿ ಪ್ರಾಸಿಕ್ಯೂಷನ್‌ ಮೇಲಿರುತ್ತದೆ. ಆದರೆ, ವಯಸ್ಸು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ಯಾವುದೇ ಗಂಭೀರ ಪ್ರಯತ್ನ ಮಾಡಿಲ್ಲ. ಕೇವಲ ಸಂತ್ರಸ್ತೆ 8-10ನೇ ತರಗತಿವರೆಗೆ ಓದಿದ ಶಾಲೆಯ ಮುಖ್ಯ ಶಿಕ್ಷಕರ ಒದಗಿಸಿರುವ ದಾಖಲಾತಿ ಪ್ರಮಾಣಪತ್ರ ಹಾಗೂ ವೈದ್ಯರ ವರದಿ ಪರಿಗಣಿಸಿ ಆರೋಪಿಗೆ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಸರಿಯಿಲ್ಲ ಎಂದು ಹೈಕೋರ್ಟ್‌ ತೀರ್ಮಾನಿಸಿದೆ.

ಒಂದೇ ಮನೆಯಲ್ಲಿ ಇಲ್ಲದ ವ್ಯಕ್ತಿಗಳ ಮೇಲೆ ‘ನೊಂದ ಮಹಿಳೆ’ ಕೇಸು ಹಾಕುವಂತಿಲ್ಲ

ವಯಸ್ಸು ನಿರ್ಧಾರ ಹೇಗೆ?: ಅಪ್ರಾಪ್ತ ಸಂತ್ರಸ್ತರ ವಯಸ್ಸು ನಿರ್ಧರಿಸಲು ಪ್ರಮುಖವಾಗಿ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ತರಗತಿಯ ಪ್ರಮಾಣಪತ್ರ ಪರಿಗಣಿಸಬೇಕಾಗುತ್ತದೆ. ಅಂತಹ ಪ್ರಮಾಣಪತ್ರ ಲಭ್ಯವಿದ್ದರೆ ಬೇರಾವುದೇ ಸಾಕ್ಷ್ಯಾಧಾರಗಳ ಅಗತ್ಯವಿರುವುದಿಲ್ಲ. ಅದು ಅಲಭ್ಯವಾದರೆ, ಸಂತ್ರಸ್ತ ಮಗು ದಾಖಲಾದ ಮೊದಲ ಶಾಲೆಯಲ್ಲಿ ನಮೂದಿಸಲಾದ ಜನ್ಮ ದಿನಾಂಕವನ್ನು ಪರಿಗಣಿಸಬೇಕಾಗುತ್ತದೆ ಹಾಗೂ ಅದೇ ಅಂತಿಮವಾಗುತ್ತದೆ ಎಂದು ನ್ಯಾಯಪೀಠ ತೀರ್ಮಾನಿಸಿದೆ.

ಒಂದು ವೇಳೆ ಅದೂ ಲಭ್ಯವಾಗದೆ ಹೋದರೆ ನಗರ ಪಾಲಿಕೆ, ಪೌರಾಡಳಿತ ಪ್ರಾಧಿಕಾರ ಅಥವಾ ಪಂಚಾಯಿತಿ ವತಿಯಿಂದ ವಿತರಿಸಲಾದ ಜನನ ಪ್ರಮಾಣಪತ್ರ ಪರಿಗಣಿಸಬಹುದಾಗಿದೆ. ಈ ಯಾವ ದಾಖಲೆಗಳೂ ಲಭ್ಯವಿಲ್ಲದಿದ್ದಾಗ ಮಾತ್ರ ವೈದ್ಯಕೀಯ ಸಲಹೆ ಮೇರೆಗೆ ಮಗುವಿನ ವಯಸ್ಸು ನಿರ್ಧರಿಸಬಹುದಾಗಿದೆ ಎಂದು ಹೈಕೋರ್ಟ್‌ ಆದೇಶದಲ್ಲಿ ವಿವರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ - ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!