ರೇಶನ್‌ ಕಾರ್ಡಲ್ಲಿ ಹೆಸರಿರುವ ಒಡತಿಗೆ ಗೃಹಲಕ್ಷ್ಮಿ, ಅನ್ನಭಾಗ್ಯ ಹಣ: ಸಂಪುಟ ಸಭೆ ತೀರ್ಮಾನ

By Kannadaprabha NewsFirst Published Nov 24, 2023, 7:10 AM IST
Highlights

ವಿವಿಧ ಕಾರಣಗಳಿಂದಾಗಿ ಇದುವರೆಗೂ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳ ಹಣ ಸಂದಾಯವಾಗದ ಕುಟುಂಬಗಳಿಗೆ ಇನ್ನುಮುಂದೆ ಆ ಕುಟುಂಬದ ಹಿರಿಯ ಮಹಿಳಾ ಸದಸ್ಯರ ಬ್ಯಾಂಕ್‌ ಖಾತೆಗೆ ಹಣವನ್ನು ನೇರ ನಗದು ವರ್ಗಾವಣೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಬೆಂಗಳೂರು (ನ.24) : ವಿವಿಧ ಕಾರಣಗಳಿಂದಾಗಿ ಇದುವರೆಗೂ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳ ಹಣ ಸಂದಾಯವಾಗದ ಕುಟುಂಬಗಳಿಗೆ ಇನ್ನುಮುಂದೆ ಆ ಕುಟುಂಬದ ಹಿರಿಯ ಮಹಿಳಾ ಸದಸ್ಯರ ಬ್ಯಾಂಕ್‌ ಖಾತೆಗೆ ಹಣವನ್ನು ನೇರ ನಗದು ವರ್ಗಾವಣೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಮನೆಯ ಯಜಮಾನಿ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000 ರು. ಮತ್ತು ಅನ್ನ ಭಾಗ್ಯ ಯೋಜನೆಯಡಿ ಕುಟುಂಬದ ಪ್ರತಿ ಸದಸ್ಯನಿಗೆ ಐದು ಕೆಜಿ ಅಕ್ಕಿ ಬದಲು ಕೆಜಿಗೆ 34 ರು.ನಂತೆ 170 ರು. ಹಣ ನೀಡಲಾಗುತ್ತಿದೆ. ಆದರೆ, ಮನೆಯೊಡತಿ ಘೋಷಣೆ ಮಾಡದ ಕಾರಣ, ಬ್ಯಾಂಕ್‌ ಖಾತೆ ಮತ್ತು ಆಧಾರ್‌ ಲಿಂಕ್‌ ಆಗದಿರುವುದು ಸೇರಿ ವಿವಿಧ ಕಾರಣಗಳಿಂದ 9 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಇನ್ನೂ ಗೃಹಲಕ್ಷ್ಮಿ ಯೋಜನೆ ತಲುಪಿಲ್ಲ.

Latest Videos

ಗೃಹಲಕ್ಷ್ಮೀ ಯೋಜನೆ: ನಾಡದೇವತೆ ಚಾಮುಂಡೇಶ್ವರಿಗೂ ಪ್ರತಿತಿಂಗಳ ₹2000 ನೀಡಲು ಸರ್ಕಾರ ಅಸ್ತು

ಅದೇ ರೀತಿ 7.67 ಲಕ್ಷ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯ ಹಣ ಸಂದಾಯ ಮಾಡಲಾಗಿರಲಿಲ್ಲ. ಅಂತಹ ಕುಟುಂಬಗಳಿಗೂ ಯೋಜನೆ ತಲುಪಿಸುವ ದೃಷ್ಟಿಯಿಂದ ಆ ಎಲ್ಲಾ ಕುಟುಂಬಗಳ ಪಡಿತರ ಚೀಟಿಯಲ್ಲಿರುವ ಹಿರಿಯ ಮಹಿಳಾ ಸದಸ್ಯೆ ಖಾತೆಗೆ ಇನ್ಮುಂದೆ ನೇರ ನಗದು ವರ್ಗಾವಣೆ ಮೂಲಕ ಎರಡೂ ಯೋಜನೆಗಳ ಹಣ ಸಂದಾಯ ಮಾಡಲು ಸಂಪುಟ ನಿರ್ಣಯಿಸಿದೆ ಎಂದು ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಮಾಹಿತಿ ನೀಡಿದರು.

53 ನಗರಗಳಲ್ಲಿ 1518 ಕೋಟಿ ಕಾಮಗಾರಿಗೆ ಅನುಮೋದನೆ:

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪರಿಸರ ಪರಿಹಾರ ನಿಧಿಯ ಅಡಿಯಲ್ಲಿ ಎನ್‌ಜಿಟಿ ಸೂಚನೆಗಳನ್ನು ತ್ವರಿತವಾಗಿ ಕೈಗೊಳ್ಳಲು 2ನೇ ಹಂತದ 53 ಆದ್ಯತೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 1518 ಕೋಟಿ ರು. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಾಣ, ಉನ್ನತೀಕರಣ ಕಾಮಗಾರಿಗಳನ್ನು ಕೈಗೊಳ್ಳಲು ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

ಅಲ್ಲದೆ, ನಗರಾಭಿವೃದ್ಧಿ ಇಲಾಖೆಯಿಂದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಕೆರೂರು ಪಟ್ಟಣಗಳು ಹಾಗೂ ಮಾರ್ಗ ಮಧ್ಯದ 18 ಗ್ರಾಮಗಳಿಗೆ ಆಲಮಟ್ಟಿ ಜಲಾಶಯದ ಹಿನ್ನೀರು ಮೂಲದಿಂದ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯ 250.36 ಕೋಟಿ ರು.ಗಳ ಪರಿಷ್ಕೃತ ಅಂದಾಜಿಗೆ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ದೊರಕಿದೆ.

24 ಸಾವಿರ ಶಾಲೆಗಳಿಗೆ ಪುಸ್ತಕ ಪೂರೈಕೆಗೆ 20 ಕೋಟಿ:

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ 2023-24ರ ಶೈಕ್ಷಣಿಕ ವರ್ಷದಲ್ಲಿ 17 ಜಿಲ್ಲೆಗಳ 93 ತಾಲ್ಲೂಕುಗಳಲ್ಲಿ 24,347 ಶಾಲೆಗಳಿಗೆ 20 ಕೋಟಿ ರು. ವೆಚ್ಚದಲ್ಲಿ ಗ್ರಂಥಾಲಯಗಳು, ರೀಡಿಂಗ್‌ ಕಾರ್ನರ್‌ಗಳನ್ನು ಸ್ಥಾಪಿಸಿ ವ್ಯಾಸಂಗಕ್ಕೆ ಅಗತ್ಯವಾದ ಹಾಗೂ ಸಾಮಾನ್ಯಜ್ಞಾನ, ಪ್ರಚಲಿತ ವಿದ್ಯಮಾನ, ಇತಿಹಾಸ, ಸಂಸ್ಕೃತಿ, ಕ್ರೀಡೆ ಸೇರಿದಂತೆ ಪಠ್ಯಪೂರಕ ಪುಸ್ತಕಗಳು ಮತ್ತು ನಿಯತಕಾಲಿಕೆಗಳನ್ನು ಖರೀದಿಸಲು ಸಭೆಯಲ್ಲಿ ಅನುಮೋದನೆ ದೊರಕಿದೆ.

ಸರ್ಕಾರಿ ಕಚೇರಿಯಲ್ಲಿ ಥಂಬ್ ಕೊಡುವ ಮುನ್ನ ಎಚ್ಚರ! ಫಿಂಗರ್ ಪ್ರಿಂಟ್ ಕೊಟ್ಟು ಹಣ ಕಳೆದುಕೊಂಡ ಜನ !

ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಅನುಗುಣವಾಗಿ ರಾಜ್ಯ ಸಿವಿಲ್‌ ಸೇವೆಗಳಲ್ಲಿನ ಹುದ್ದೆಗಳಿಗೆ ನೀಡುವ ಮುಂಬಡ್ತಿಯಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಲು ಹೆಚ್ಚುವರಿ ಬಿಂದುಗಳನ್ನು ಗುರುತಿಸಲು ಮತ್ತು ಎದ್ದುಕಾಣುವ ವಿಕಲಚೇತನರ ಮೀಸಲಾತಿಯನ್ನೊಳಗೊಂಡ ಒಂದೇ ರೋಸ್ಟರ್‌ ಸಿದ್ಧಪಡಿಸಲು ಒಪ್ಪಿಗೆ ದೊರಕಿದೆ.

click me!