ಗೃಹಜ್ಯೋತಿ ಯೋಜನೆ: ಒಂದು ಬಲ್ಬ್ ಇರುವ ಮನೆಗಳಿಗೆ 23 ಸಾವಿರ ರೂ. ವಿದ್ಯುತ್ ಬಿಲ್‌

By Sathish Kumar KH  |  First Published Jul 19, 2023, 6:18 PM IST

ರಾಜ್ಯದಲ್ಲಿ ಉಚಿತ ವಿದ್ಯುತ್‌ ನೀಡುವುದಾಗಿ ಸರ್ಕಾರ ಹೇಳುತ್ತಿದ್ದರೆ, ಮತ್ತೊಂದೆಡೆ ವಿದ್ಯುತ್‌ ಸರಬರಾಜು ಕಂಪನಿಗಳು ಒಂದು ಬಲ್ಪ್‌ ಇರುವ ಮನೆಗೆ 23,000 ಸಾವಿರ ವಿದ್ಯುತ್‌ ಬಿಲ್‌ ನೀಡಿದ್ದಾರೆ.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 
ಕೊಡಗು (ಜು.19): ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಸರ್ಕಾರ ಈಗಾಗಲೇ ಗೃಹ ಜ್ಯೋತಿ ಯೋಜನೆಗೆ ನೋಂದಣಿಯನ್ನು ಮಾಡಿಸಿಕೊಂಡಿದೆ. ಆದರೆ ಜನರಿಗೆ ಈ ಯೋಜನೆಯ ಪ್ರಯೋಜನ ಸಿಗುವ ಮೊದಲೇ ಕೆಇಬಿ ಈ ಗ್ರಾಮದ ಹಲವು ಕುಟುಂಬಗಳಿಗೆ 10 ರಿಂದ 25 ಸಾವಿರ ರೂ.ವರೆಗೆ ವಿದ್ಯುತ್ ಬಿಲ್‌ ನೀಡುವ ಮೂಲಕ ಸಾರ್ವಜನಿಕರಿಗೆ ಶಾಕ್ ನೀಡಿದೆ.

ಹೌದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮಾದಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಜಂಬೂರಿನ ಪುನರ್ವಸತಿ ಕಾರ್ಯಪ್ಪ ಬಡಾವಣೆಯಲ್ಲಿ ಹತ್ತಾರು ಕುಟುಂಬಗಳ ವಿದ್ಯುತ್ ಬಿಲ್ಲು ಸಾವಿರಾರು ರೂಪಾಯಿಯಲ್ಲಿ ಬಂದಿರುವುದು ಜನರು ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಕಳೆದ ಎರಡು ತಿಂಗಳತನಕ ಕೇವಲ 250 ರಿಂದ 300 ಅಥವಾ ತೀರಾ ಅತ್ಯಧಿಕ ಯುನಿಟ್ ವಿದ್ಯುತ್ ಬಳಸಿದ್ದೇವೆ ಎಂದರೂ 400 ರೂಪಾಯಿಯವರೆಗೆ ವಿದ್ಯುತ್ ಬಿಲ್ಲು ಬರುತಿತ್ತು. ಆದರೆ ಕಳೆದ ಎರಡು ತಿಂಗಳಿನಿಂದ 1300 ರಿಂದ 1500 ರೂಪಾಯಿವರೆಗೆ ಬರುತ್ತಿದ್ದ ವಿದ್ಯುತ್ ಬಿಲ್ಲು ಈ ತಿಂಗಳು ಬರೋಬ್ಬರಿ 9 ಸಾವಿರದಿಂದ ಶುರುವಾಗಿ ಕೆಲವರಿಗೆ 25,000 ರೂ. ತನಕ ವಿದ್ಯುತ್ ಬಿಲ್ಲು ಬಂದಿದೆ.

Latest Videos

undefined

 ಗೃಹಲಕ್ಷ್ಮಿ ಯೋಜನೆ 2000 ರೂ. ಪಡೆಯಲು ಯಾವೆಲ್ಲ ದಾಖಲೆಗಳು ಅಗತ್ಯ: ಯಾರು ಅರ್ಜಿ ಸಲ್ಲಿಸಬಹುದು?

300ಕ್ಕೂ ಅಧಿಕ ಮನೆಗಳಿಗೆ ದುಬಾರಿ ಬಿಲ್‌: ಈ ವಿದ್ಯುತ್ ಬಿಲ್ಲು ನೋಡಿದ ಗ್ರಾಹಕರು ನಿಜವಾಗಿ ವಿದ್ಯುತ್ ಶಾಕ್ ಹೊಡೆದವರಂತೆ ಕಂಗಾಲಾಗಿದ್ದಾರೆ. ವಿದ್ಯುತ್ ಮೀಟರ್ ಬೋರ್ಡ್ ಸಮಸ್ಯೆಯಿಂದಾಗಿ ಒಂದಿಬ್ಬರ ಮನೆಗೆ ಈ ರೀತಿ ಯದ್ವತದ್ವಾ ವಿದ್ಯುತ್ ಬಿಲ್ಲು ಬಂದಿರುವುದಲ್ಲ. ಬದಲಾಗಿ ಈ ಪುನರ್ವಸತಿಯ ಬಡಾವಣೆಯಾಗಿರುವ ಕಾರ್ಯಪ್ಪ ಬಡಾವಣೆಯಲ್ಲಿ ಇರುವ 300 ಕ್ಕೂ ಹೆಚ್ಚು ಮನೆಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಜನರಿಗೆ ಈ ರೀತಿ ಸಾವಿರಗಟ್ಟಲೆ ವಿದ್ಯುತ್ ಬಿಲ್ಲು ನೀಡಲಾಗಿದೆ. 

700 ರೂ. ಬಂದಿದ್ದ ಮನೆಗೆ 23 ಸಾವಿರ ರೂ.: ಇನ್ನು ಕೊಡಗಿನ ಜಂಬೂರಿನ ಕಾರ್ಯಪ್ಪ ಬಡಾವಣೆಯ ರೇಖಾ ಎಂಬುವರ ಮನೆಗೆ ಇದುವರೆಗೆ 300 ರಿಂದ 400 ರೂಪಾಯಿ ಬರುತ್ತಿದ್ದ ವಿದ್ಯುತ್ ಬಿಲ್ಲು ಈಗ ಬರೋಬ್ಬರಿ 12,000 ಬಂದಿದೆ. ರಮ್ಯ ಎಂಬುವರ ಮನೆಗೆ ಬರೋಬ್ಬರಿ 14,000 ಬಂದಿದ್ದರೆ, ರೇಷ್ಮಾ ಎಂಬುವರ ಮನೆಗೆ 11,000 ವಿದ್ಯುತ್ ಬಿಲ್ಲು ಬಂದಿದೆ. ಇವರೆಲ್ಲರಿಗಿಂತ ಅತೀ ಹೆಚ್ಚು ಬಿಲ್‌ ಯಮುನಾ ಎಂಬುವವರ ಮನೆಗೆ ಬಂದಿದ್ದು, ಬರೋಬ್ಬರಿ 23,424 ರೂಪಾಯಿ ವಿದ್ಯುತ್ ಬಿಲ್ಲು ಬಂದಿದೆ. ಕಳೆದ ಎರಡು ತಿಂಗಳ ಹಿಂದಿನ ತನಕ 250 ರೂಪಾಯಿ ಬರುತ್ತಿದ್ದ ಶುಲ್ಕ, ಕಳೆದ ಎರಡು ತಿಂಗಳಿನಿಂದ 700 ರೂಪಾಯಿಗೆ ಏರಿಕೆಯಾಗಿತ್ತು. ಆದರೆ ಈ ತಿಂಗಳು 23,424 ರೂಪಾಯಿ ವಿದ್ಯುತ್ ಬಿಲ್ಲು ಬಂದಿದೆ. ಕೂಲಿ ಕೆಲಸ ಮಾಡಿ ಬದುಕುತ್ತಿರುವ ಈ ಬಡಕುಟುಂಬವನ್ನು ಕಂಗಾಲಾಗುವಂತೆ ಮಾಡಿದೆ. ಹೀಗಾಗಿ ಈ ಕುಟುಂಬ ನಾವು ಸತ್ತರೂ ವಿದ್ಯುತ್ ಬಿಲ್ಲು ಕಟ್ಟುವುದಿಲ್ಲ ಎನ್ನುತ್ತಿದ್ದಾರೆ. 

ಗೃಹಲಕ್ಷ್ಮಿ ಯೋಜನೆಗೆ 10 ನಕಲಿ ಆ್ಯಪ್‌ಗಳ ಹಾವಳಿ: ಡೌನ್ಲೋಡ್‌ ಮಾಡಿದ್ರೆ ಹಣ ಖೋತಾ

ಈ ಬಿಲ್‌ ಕಟ್ಟದಿದ್ದರೆ ಗೃಹಜ್ಯೋತಿ ಯೋಜನೆ ಲಾಭ ಸಿಗೊಲ್ಲ: ಈ ಕುರಿತು ಕೆಇಬಿ ಅಧಿಕಾರಿಗಳನ್ನು ಕೇಳಿದರೆ ನೀವು ಹೆಚ್ಚು ಯುನಿಟ್ ವಿದ್ಯುತ್ ಬಳಕೆ ಮಾಡುತ್ತಿದ್ದೀರಿ. ಅದಕ್ಕಾಗಿ ಇಷ್ಟು ವಿದ್ಯುತ್ ಬಿಲ್ಲು ಬಂದಿದೆ ಎನ್ನುತ್ತಿದ್ದಾರಂತೆ. ಜ್ಯೂನಿಯರ್ ಎಂಜಿನಿಯರ್ ಅವರನ್ನು ಕೇಳಿದರೆ, ಬಂದಿರುವ ವಿದ್ಯುತ್ ಬಿಲ್ಲನ್ನು ಕಟ್ಟಲೇಬೇಕು ಎನ್ನುತ್ತಿದ್ದಾರಂತೆ. ಒಟ್ಟಿನಲ್ಲಿ ಕೇವಲ 100 ರಿಂದ 150 ರೂಪಾಯಿ ವಿದ್ಯುತ್ ಶುಲ್ಕ ಬರುತ್ತಿದ್ದ ಗ್ರಾಹಕರಿಗೆ ಬರೋಬ್ಬರಿ 1500 ರಿಂದ 2000 ತನಕ ವಿದ್ಯುತ್ ಬಂದಿದ್ದರೆ, ಇದವರೆಗೆ 700 ರಿಂದ 800 ರೂಪಾಯಿ ವಿದ್ಯುತ್  ಬಿಲ್ಲು ಕಟ್ಟುತ್ತಿದ್ದವರಿಗೆ 9, 11, 12, 14 ಮತ್ತು 23 ಸಾವಿರದವರೆಗೆ ವಿದ್ಯುತ್ ಬಿಲ್ಲು ಬಂದಿರುವುದು ಗ್ರಾಮದ ಜನರು ಕೆಇಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೂಡಲೇ ನಮ್ಮ ಮೀಟರ್ ಗಳನ್ನು ಪರಿಶೀಲಿಸಿ ಇಷ್ಟೊಂದು ವಿದ್ಯುತ್ ಬಿಲ್ಲು ಬರುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

click me!