ವಿಧಾನಸೌಧ ಸ್ಪೀಕರ್ ಕಚೇರಿ ಬಳಿ ಬಿಜಪಿ ಸದಸ್ಯರು ಪ್ರತಿಭಟನೆ ಮಾಡುವಾಗ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ರಕ್ತದೊತ್ತಡ (ಬಿಪಿ) ಹೆಚ್ಚಾಗಿ ಅಸ್ವಸ್ಥಗೊಂಡು ಬಿದ್ದಿದ್ದಾರೆ.
ಬೆಂಗಳೂರು (ಜು.19): ವಿಧಾನಸಭಾ ಅಧಿವೇಶನದ ವೇಳೆ ಬಿಜೆಪಿ 10 ಶಾಸಕರನ್ನು ಅಮಾನತು ಮಾಡಲಾಗಿತ್ತು. ಈ ವೇಳೆ ಬಿಜೆಪಿಯ ಶಾಸಕರು ಸ್ಪೀಕರ್ ಕಚೇರಿ ಬಳಿ ಪ್ರತಿಭಟನೆ ಮಾಡುವಾಗ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ತಳ್ಳಾಟ, ನೂಕಾಟದ ವೇಳೆ ರಕ್ತದೊತ್ತಡ (ಬಿಪಿ) ಹೆಚ್ಚಾಗಿ ಅಸ್ವಸ್ಥಗೊಂಡು ಬಿದ್ದಿದ್ದಾರೆ. ಈ ವೇಳೆ ಅವರನ್ನು ಪ್ರಾಥಮಿಕ ಚಿಕಿತ್ಸೆ ನೀಡಿ ಪೋರ್ಟಿಸ್ ಆಸ್ಪತ್ರೆಗೆ ರವಾನಿಸಲಾಯಿತು.
ಶಾಸಕ ಆರ್. ಅಶೋಕ್ ಕೂಡ ಅಸ್ವಸ್ಥ: ಮತ್ತೊಂದೆಡೆ ಶಾಸಕ ಆರ್. ಅಶೋಕ್ ಕೂಡ ಲೋಬಿಪಿಯಿಂದಾಗಿ ಅಸ್ವಸ್ಥರಾಗಿ ಕುಳಿತಿದ್ದಾರೆ. ಇನ್ನು ಅವರಿಗೆ ಪ್ರತಿಭಟನೆಯ ವೇಳೆಯೇ ಇತರೆ ಶಾಸಕರು ಅವರಿಗೆ ಗಾಳಿಯನ್ನು ಬೀಸಿ, ನೀರನ್ನು ಕುಡಿಸಿದ ಆರೈಕೆ ಮಾಡಿದ್ದಾರೆ. ಇನ್ನು ವಿಧಾನಸಭಾ ಅಧಿವೇಶನದ ವೈದ್ಯರು ಸ್ಥಳಕ್ಕೆ ಬಂದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಇನ್ನು ಅವರ ಆರೋಗ್ಯ ಸ್ಥಿರವಾಗಿದ್ದು, ಕಾಂಗ್ರೆಸ್ ಸರ್ಕಾರದ ನಡೆಯ ಕುರಿತು ಪ್ರತಿಭಟನೆ ಮಾಡುವ ಸ್ಥಲದಲ್ಲಿಯೇ ಕುಳಿತುಕೊಂಡು ಬೆಂಬಲ ನೀಡುತ್ತಿದ್ದಾರೆ.
Breaking: ಕರ್ನಾಟಕ ವಿಧಾನಸಭೆಯಿಂದ ಬಿಜೆಪಿಯ 10 ಶಾಸಕರು ಅಮಾನತು
ಪೋರ್ಟಿಸ್ ಆಸ್ಪತ್ರೆಗೆ ಯತ್ನಾಳ್ ರವಾನೆ: ಇನ್ನು ಶಾಸಕ ಬಸವನಗೌಡ ಪಾಟೀಲ್ ಅವರನ್ನು ಕೂಡಲೇ ವಿಧಾನಸೌಧದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಾದ ಪೋರ್ಟಿಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇನ್ನು ನೂಕು ನುಗ್ಗಲು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ರಕ್ತದೊತ್ತಡ ಹೆಚ್ಚಳ ಆಗುತ್ತಿದ್ದರಿಂದ ಗಾಳಿಯನ್ನು ಬೀಸುತ್ತಾ ಆಸ್ಪತ್ರೆಗೆ ರವಾನಿಸಿದ್ದು, ತಪಾಸಣೆ ಮಾಡಿದ ಬಳಿಕ ಆಸ್ಪತ್ರೆ ಸಿಬ್ಬಂದಿ ವರದಿ ಬಿಡುಗಡೆ ಮಾಡಲಿದ್ದಾರೆ.
ಬೊಮ್ಮಾಯಿ ಗಂಭೀರ ಆರೋಪ: ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ ಬಿಜೆಪಿಯ ಶಾಸಕರನ್ನು ಅಮಾನತ್ತು ಮಾಡಿದ್ದಲ್ಲದೇ ಅವರನ್ನು ವಾಪಸ್ ಕಳಿಸುವಾಗ ಎತ್ತಿಕೊಂಡು ಹೋಗಿ ಹೊರಹಾಕಿದ್ದಾರೆ. ಇನ್ನು ಪ್ರತಿಭಟನೆ ಮಾಡಲು ಮುಂದಾದಾಗ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಮಾರ್ಷಲ್ ತಳ್ಳಿದ್ದಾರೆ. ಇದರ ಪರಿಣಾಮ ಅವರು ಕುಸಿದು ಬಿದ್ದಿದ್ದಾರೆ. ಮಾರ್ಷಲ್ ಮುಂದಿಟ್ಟುಕೊಂಡು ಇವರು ಸರ್ಕಾರ ಮಾಡ್ತಿದ್ದಾರೆ. ಇದನ್ನು ನೋಡಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮ್ಮನಿದ್ದಾರೆ. ಅವರಿಗೆ ಇದು ತಪ್ಪು ಎನ್ನೋದು ಗೊತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪ ಮಾಡಿದರು.
ವಿಧಾನಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಶಾಸಕರ ಆಗ್ರಹ: ಕಾರ್ಯದರ್ಶಿಗೆ ನೋಟಿಸ್
ಮಾರ್ಷಲ್ ನನ್ನನ್ನು ತಳ್ಳಿದರು:
ಈಗಾಗಲೇ ನನಗೆ ಎದೆ ನೋವಿದೆ. ಸ್ಪೀಕರ್ ಅಮಾನತು ಮಾಡಿದ ಬೆನ್ನಲ್ಲೇ ವಿಧಾನಸಭೆಯಿಂದ ನನ್ನನ್ನು ಹೊರಹಾಕಲು ಸ್ಪೀಕರ್ ತಿಳಿಸಿದ್ದಾರೆ. ಈ ವೇಳೆ ಮಾರ್ಷಲ್ ನನ್ನನ್ನು ತಳ್ಳಿದ್ದರಿಂದ, ಎದೆ ನೋವು ಶುರು ಆಯಿತು. ಈಗ ಸ್ವಲ್ಪ ತಲೆ ಸುತ್ತು ಇದೆ. ಸುಧಾರಿಸಿಕೊಳ್ತಾ ಇದ್ದೇನೆ.
- ಆರ್. ಅಶೋಕ್, ಶಾಸಕ