ಸರ್ಕಾರಿ ಸೇವೆ ಕಾಯಂ ಆಗುವ ಮುನ್ನ ನೌಕರ ದಿನದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಿದ್ದರೆ, ಗುತ್ತಿಗೆ ಅವಧಿಗೂ ಸರ್ಕಾರ ಗ್ರ್ಯಾಚ್ಯುಟಿ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕ ಬಸವೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಬೆಂಗಳೂರು (ಜ.2) ಸರ್ಕಾರಿ ಸೇವೆ ಕಾಯಂ ಆಗುವ ಮುನ್ನ ನೌಕರ ದಿನದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಿದ್ದರೆ, ಗುತ್ತಿಗೆ ಅವಧಿಗೂ ಸರ್ಕಾರ ಗ್ರ್ಯಾಚ್ಯುಟಿ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕ ಬಸವೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಗ್ರ್ಯಾಚ್ಯುಟಿ ಪಾವತಿ ಕಾಯ್ದೆ-1972ರ ನಿಯಮಗಳು ಗ್ರ್ಯಾಚ್ಯುಟಿ ಪಾವತಿ ವಿಚಾರದಲ್ಲಿ ಕಾಯಂ ಸರ್ಕಾರಿ ನೌಕರ ಮತ್ತು ಗುತ್ತಿಗೆ ನೌಕರರ ನಡುವೆ ಯಾವುದೇ ವ್ಯತ್ಯಾಸವನ್ನು ಮಾಡುವುದಿಲ್ಲ. ಹಾಗಾಗಿ 75 ವರ್ಷದ ನಿವೃತ್ತ ಸರ್ಕಾರಿ ನೌಕರರಾಗಿರುವ ಅರ್ಜಿದಾರರಿಗೆ, ಅವರು ದಿನ ಗುತ್ತಿಗೆ ನೌಕರನಾಗಿ ದುಡಿದ 19 ವರ್ಷಗಳ ಅವಧಿಗೆ ಗ್ರ್ಯಾಚ್ಯುಟಿ ಹಣವನ್ನು ನಾಲ್ಕು ವಾರದಲ್ಲಿ ಪಾವತಿಸಬೇಕು. ನಾಲ್ಕು ವಾರದಲ್ಲಿ ಪಾವತಿಸದಿದ್ದರೆ ವಿಳಂಬ ಮಾಡಿದ ಪ್ರತಿ ದಿನಕ್ಕೆ ಒಂದು ಸಾವಿರ ರು. ದಂಡ ಪಾವತಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.
ಇಂಥದ್ದೇ ಸ್ಥಳಕ್ಕೆ ವರ್ಗಾವಣೆ ಕೇಳುವ ಹಕ್ಕು ನೌಕರರಿಗಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು !
ಪ್ರಕರಣದ ವಿವರ:
ಅರ್ಜಿದಾರರು ಮಂಡ್ಯ ಜಿಲ್ಲೆಯ ಜಿ.ಮಲ್ಲಿಗೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಡಿ ದರ್ಜೆ ಉದ್ಯೋಗಿಯಾಗಿ ದಿನ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದರು. ಅವರ ಸೇವೆಯನ್ನು ಸರ್ಕಾರ 1990ರಲ್ಲಿ ಕಾಯಂಗೊಳಿಸಿ ಶಿಕ್ಷಕರ ಹುದ್ದೆ ನೀಡಿತ್ತು. ಅವರು 2013ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ಆದರೆ, ಸರ್ಕಾರ ಮಾತ್ರ ಸೇವೆ ಕಾಯಂ ಆದ ದಿನದಿಂದ ಅಂದರೆ 1990ರಿಂದ 2013ರ ನಡುವಿನ ಅವಧಿಗೆ ಲೆಕ್ಕ ಹಾಕಿ 1.92 ಲಕ್ಷ ರು. ಗ್ರ್ಯಾಚ್ಯುಟಿ ಪಾವತಿಸಿತ್ತು. ದಿನದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದ್ದ 19 ವರ್ಷಕ್ಕೆ ಗ್ರ್ಯಾಚ್ಯುಟಿ ಪಾವತಿಸಲು ನಿರಾಕರಿಸಿತ್ತು.
ಪರಿಶಿಷ್ಟ ಪಂಗಡಗಳ ಪಟ್ಟಿಯಿಂದ ನಾಯಕ, ವಾಲ್ಮೀಕಿ ಸಮುದಾಯ ಕೈಬಿಡಲು ಹೈಕೋರ್ಟ್ ಕೋರ್ಟ್ ನಕಾರ
ಇದರಿಂದ ಅರ್ಜಿದಾರರು ನೀಡಿದ ದೂರು ಆಧರಿಸಿದ್ದ ಸಿಎಜಿ, ಅರ್ಜಿದಾರರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಅವಧಿಯೂ ಸೇರಿ ಒಟ್ಟಾರೆ 2.44 ಲಕ್ಷ ರು. ಗ್ರ್ಯಾಚ್ಯುಟಿ ಪಾವತಿಸಬೇಕು ಎಂದು ಸರ್ಕಾರಕ್ಕೆ 2015ರಲ್ಲಿ ಆದೇಶಿಸಿತ್ತು. ಆದರೂ ಸರ್ಕಾರ ಸಿಎಜಿ ಆದೇಶ ಪಾಲಿಸದ ಕಾರಣ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್, ಅರ್ಜಿದಾರರಿಗೆ 50 ಸಾವಿರ ರು. ವ್ಯಾಜ್ಯ ವೆಚ್ಚ ಸೇರಿದಂತೆ ಒಟ್ಟು 2.44 ಲಕ್ಷ ರು. ಗ್ರ್ಯಾಚ್ಯುಟಿ ಪಾವತಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.